ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಹುಲಿ-ಜೀರುಂಡೆಗಳ ವಿಸ್ಮಯ ಲೋಕ – 2

ಕಡಲ ತೀರದಿಂದ ಕಾಡಿನ ಹಾದಿಯವರೆಗೆ ಕ್ಷಿಪ್ರವೇಗದಲ್ಲಿ ಸಂಚರಿಸುವ ಹುಲಿ ಜೀರುಂಡೆಗಳ ಸರಣಿಯ ಎರಡನೇ ಭಾಗ. ಈ ಬಾರಿ ಗಮನ ಸೆಳೆಯುವುದು ಅವುಗಳ ವಿಚಿತ್ರ ಮರಿಗಳ ಲೋಕ - ನೆಲದೊಳಗಿನ ಬಿಲ, ಸಾವಧಾನದ ಬೇಟೆ, ಮತ್ತು ಪರಾವಲಂಬಿ ಕಣಜ, ನೊಣಗಳ ವಿರುದ್ಧದ ಜೀವನ್ಮರಣ ಹೋರಾಟ. ಹರೀಶ ಎ. ಎಸ್. ಅವರ ಸಚಿತ್ರ ಲೇಖನ.
ಬಿಲದ ದ್ವಾರದಲ್ಲಿ ಹುಲಿ ಜೀರುಂಡೆ ಮರಿಗಳ ವಿಚಿತ್ರ ಮುಖ - ಜಿತೇಶ್ ಪೈ

    © ಜಿತೇಶ್ ಪೈ

ಮೊದಲ ಭಾಗದಿಂದ

ಒಮ್ಮೆ ಈ ಚಿತ್ರಗಳ ಮೇಲೆ ಕಣ್ಣಾಡಿಸಿ…

ನೋಡಿದ್ರ? ಏನನಿಸಿತು? ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುವ ಯಾವುದೋ ಅಂತರಿಕ್ಷ ಜೀವಿ (Alien) ಎಂದನಿಸಿತೇ?  

ಈ ಚಿತ್ರಗಳಲ್ಲಿ ನೀವು ನೋಡಿದ್ದು ಹುಲಿ ಜೀರುಂಡೆಯ ಮರಿಯ ಮುಖ, ಉಳಿದಂತೆ ಇಡೀ ದೇಹವು ನಮ್ಮ ರೇಷ್ಮೆ ಹುಳುವಿನ ದೇಹದಂತೆ ಬಿಳಿಯಾಗಿದ್ದು, ಸಣ್ಣಗೆ ಉದ್ದವಾಗಿರುತ್ತದೆ. ಅದು ಸದಾ ಸಣ್ಣ ಬಿಲ ಅಥವಾ ರಂಧ್ರದಲ್ಲಿ ಕುಳಿತಿರುವುದರಿಂದ ಪೂರ್ತಿ ದೇಹ ಕಾಣುವುದು ಅಪರೂಪ. 

ವಯಸ್ಕ ಹುಲಿ ಜೀರುಂಡೆಗಳು ಮಿಲನವಾದ ನಂತರ ಹೆಣ್ಣು ಜೀರುಂಡೆ ತನ್ನ ಚೂಪಾದ ಅಂಡಾಣುಗಳನ್ನು ಬಳಸಿ ಸಣ್ಣ ರಂಧ್ರವನ್ನು ಕೊರೆಯುತ್ತದೆ. ಮಣ್ಣಿನ ಮೇಲ್ಮೈ ಕೆಳಗೆ ಒಂದೇ ಮೊಟ್ಟೆಯನ್ನು ಇಟ್ಟು ಮುಚ್ಚುತ್ತದೆ. ಪರಭಕ್ಷಕಗಳಿಂದ ಮುಖ್ಯವಾಗಿ ಪರಾವಲಂಬಿ ಕಣಜಗಳಿಂದ ತಪ್ಪಿಸಿಕೊಳ್ಳಲು ಆ ರೀತಿ ಮಾಡುತ್ತವೆ. ಇವು ತಮ್ಮ ಮೊಟ್ಟೆಗಳನ್ನು ಇಡಲು ನಿರ್ದಿಷ್ಟ ಸೂಕ್ಷ್ಮ ಆವಾಸಸ್ಥಾನಗಳನ್ನು ಎಚ್ಚರಿಕೆಯಿಂದ ಆಯ್ಕೆಮಾಡುತ್ತವೆ.

Cicindela goyi ಹೆಣ್ಣು ಹುಲಿ ಜೀರುಂಡೆ ಮೊಟ್ಟೆ ಇಡುತ್ತಿರುವುದು
Cicindella goyi ಹೆಣ್ಣು ಹುಲಿ ಜೀರುಂಡೆ 1 cm ಒಳಗೆ ಮೊಟ್ಟೆ ಇಡುತ್ತಿರುವುದು”     © ಜಿತೇಶ್ ಪೈ

ಅವು ಮೊಟ್ಟೆಯನ್ನಿಡಲು ಸಡಿಲವಾದ ಮರಳು, ತೇವಾಂಶವುಳ್ಳ ಮಣ್ಣನ್ನು ಬಯಸುತ್ತವೆ, ಸಾಮಾನ್ಯವಾಗಿ ಹೆಚ್ಚು ಗಿಡಗಂಟಿಗಳಿರುವ ಸ್ಥಳವನ್ನು ತಪ್ಪಿಸುತ್ತವೆ. ಮೊಟ್ಟೆ ಇಡುವ ಸ್ಥಳಗಳೆಂದರೆ ಕೆರೆ ಸರೋವರಗಳು, ನದಿ ದಂಡೆಗಳು ಮತ್ತು ಸಾಗರ ಕಡಲತೀರಗಳಂತಹ ಜಲಚರ ಪರಿಸರಗಳ ಬಳಿ ಅಥವಾ ಸೂರ್ಯನ ಬೆಳಕು ಇರುವ ತೆರೆದಪ್ರದೇಶದಲ್ಲಿ ಮತ್ತು ಮಣ್ಣಿನ ಕಾಲುದಾರಿಯನ್ನು ಆಯ್ಕೆಮಾಡಿಕೊಳ್ಳುತ್ತವೆ. ಏಕೆಂದರೆ ಹಿಡಿದು ತಿನ್ನಲು ವಿಶಾಲವಾದ ಜಾಗಬೇಕಲ್ಲವೇ?   

ಮೊಟ್ಟೆಯೊಡೆದ ಮರಿಗಳು ಮೊಟ್ಟೆ ಇಟ್ಟ ನಿಖರವಾದ ಸ್ಥಳದಲ್ಲಿ ತಮ್ಮ ಶಾಶ್ವತ ಬೇಟೆಯ ಬಿಲಗಳನ್ನು ನಿರ್ಮಿಸಿಕೊಳ್ಳುತ್ತವೆ. ಬಿಲವು ನೇರವಾಗಿ ಭೂಮಿಯ ಒಳಗೆ ಹೋಗಿದ್ದು, ಕೆಲವೊಮ್ಮೆ ಕೆಲವು ಸೆಂಟಿಮೀಟರ್ ನಿಂದ ಕೆಲ ಅಡಿಗಳವರೆಗೆ ಇರುತ್ತದೆ. ಹೆಣ್ಣು ಹುಲಿ ಜೀರುಂಡೆ ಪ್ರತಿ ಬಿಲಕ್ಕೆ ಕೇವಲ ಒಂದು ಮೊಟ್ಟೆಯನ್ನು ಇಡುತ್ತದೆ ಮತ್ತು ಜೀವಿತಾವಧಿ ಪೂರ್ಣಗೊಳ್ಳುವ ಮುನ್ನ ಒಟ್ಟು 50 ರಿಂದ 100 ಮೊಟ್ಟೆಗಳನ್ನು ಇಡಬಲ್ಲವು.

ಹುಲಿ ಜೀರುಂಡೆ ಮರಿಯ ಪೂರ್ತಿ ದೇಹ ರಚನೆ
    ಹುಲಿ ಜೀರುಂಡೆ ಮರಿಯ ಪೂರ್ತಿ ದೇಹ. ಕೇವಲ ಮುಖ ನೋಡುವುದಕ್ಕೂ ಪೂರ್ತಿ ದೇಹಕ್ಕೂ ಅಜಗಜಾಂತರ ವ್ಯತ್ಯಾಸ” © ಜಿತೇಶ್ ಪೈ

ವಯಸ್ಕ ಹಂತದಲ್ಲಿ ಹುಲಿ ಜೀರುಂಡೆಗಳು ತನ್ನ ಬೇಟೆಯನ್ನು ಶರವೇಗದಲ್ಲಿ ಬೆನ್ನಟ್ಟಿ ಹಿಡಿದು ಕೊಂದು ತಿಂದರೆ, ಹುಳು ಹಂತದಲ್ಲಿ ಅದು ತದ್ವಿರುದ್ಧವಾಗಿ ಒಂದೇ ಕಡೆ ಸಾವಧಾನದಿಂದ ಕಾದು ಕುಳಿತು ತನ್ನತ್ತ ಬಂದ ಬೇಟೆಯನ್ನಷ್ಟೇ ಬೇಟೆಯಾಡುತ್ತವೆ. ಅವು ತಮ್ಮ ಬಿಲಗಳ ದ್ವಾರದಲ್ಲಿ ಕಾದು ಕುಳಿತಿರುವಾಗ ಅವುಗಳ ಮುಖಭಾಗವು ಥೇಟ್ ಕಲ್ಲಿನ ಚೂರಿನಂತೆ ಇದ್ದು ಮರೆಯಾಗಿರುತ್ತವೆ. ಅವು ಬಿಲದ ಒಳಗೆ ಹೋದಾಗಲೇ ನಮಗೆ ತಿಳಿಯುವುದು ಅಲ್ಲಿ ರಂಧ್ರವಿದೆ ಎಂದು! ಅಷ್ಟು ನಾಜೂಕಾಗಿ ಮರೆಮಾಚಿರುತ್ತವೆ.

  ಈ ಹುಲಿ ಜೀರುಂಡೆಗಳು ತನ್ನ ರಂಧ್ರದಲ್ಲಿ ಹಿಡಿಯುವಂತಹ ಯಾವುದೇ ಜೀವಿಗಳು ತನ್ನ ಬಳಿಗೆ ಬಂದರೆ ವೇಗವಾಗಿ ದಾಳಿಮಾಡಿ ತನ್ನ ಗಟ್ಟಿಯಾದ ಕೋರೆಗಳಿಂದ ಹಿಡಿದು ಒಳಗೆ ಎಳೆದುಕೊಂಡು ಹೋಗಿ ತಿನ್ನುತ್ತವೆ. ಸಾಮಾನ್ಯವಾಗಿ ಇರುವೆಗಳೇ ಇವುಗಳ ಮುಖ್ಯ ಆಹಾರ. ಇರುವೆಗಳ ಜೊತೆಗೆ ಜೇಡಗಳು, ಸಣ್ಣ ಹುಳುಗಳು, ಕೆಲವೊಮ್ಮೆ ಸಣ್ಣ ಕಪ್ಪೆ, ಮರಿ ಹಲ್ಲಿಯನ್ನು ಸಹ ತಿನ್ನುವ ಅವಕಾಶವಾದಿಗಳು. 

ಈಗಾಗಲೇ ಹೇಳಿದಂತೆ ಸಮುದ್ರದ ದಡ, ಕೆರೆ- ಸರೋವರ, ನದಿ ದಡಗಳಲ್ಲಿ ಮೊಟ್ಟೆ ಇಡುತ್ತವೆ. ಒಂದು ವೇಳೆ ಪ್ರವಾಹದಿಂದ ಅಥವಾ ಹೆಚ್ಚು ಮಳೆಯ ಕಾರಣದಿಂದ ಮರಿಗಳ ಬಿಲಗಳು ಮುಚ್ಚಲ್ಪಟ್ಟರೆ, ಈ ಹುಲಿ ಜೀರುಂಡೆಯ ಮರಿಗಳು ಜೀವಕೋಶಗಳ ಜೀವರಾಸಾಯನಿಕ ಕ್ರಿಯೆಯನ್ನು ಶೇಕಡಾ 90ರಷ್ಟು ಕಡಿಮೆ ಮಾಡಿಕೊಂಡು 10-12 ದಿನಗಳ ಕಾಲ ಬದುಕಬಲ್ಲವು. ಇದಲ್ಲದೆ ಬೇಸಿಗೆ ಸಮಯದಲ್ಲಿಉಷ್ಣಾಂಶ ತೀರಾ ಹೆಚ್ಚಾದಾಗ ಮತ್ತು ಆಹಾರದ ಲಭ್ಯತೆ ಇಲ್ಲದಿದ್ದಾಗ ದ್ವಾರವನ್ನು ಮುಚ್ಚಿ ಅವು ಬಿಲದ ಕೆಳಗೆ ಹೋಗಿ ಕೆಲ ತಿಂಗಳುಗಳ ಕಾಲ ನಿದ್ರೆಗೆ ಜಾರಬಲ್ಲವು, ಅನುಕೂಲಕರ ವಾತಾವರಣ ಮರಳಿದಾಗ ಮತ್ತೆ ಎಂದಿನಂತೆ ಬಿಲದ ದ್ವಾರಕ್ಕೆ ಬಂದು ಬೇಟೆಯಲ್ಲಿ ನಿರತವಾಗುತ್ತವೆ. 

ಹುಲಿ ಜೀರುಂಡೆ ಮರಿಯ ಪರಭಕ್ಷಕ ಇರುವೆಗಳ ದಾಳಿ
    © ದಿನೇಶ್ ಹೆಗ್ಡೆ

ಮರಿ ಹುಲಿ ಜೀರುಂಡೆಗಳ ಆಹಾರ ಮುಖ್ಯವಾಗಿ ಇರುವೆಗಳೇ ಆದರೂ ಕೆಲವೊಮ್ಮೆ ಈ ಇರುವೆಗಳು ಗುಂಪಾಗಿ ಸೇರಿ ಈ ಹುಲಿ ಜೀರುಂಡೆ ಮರಿಗಳನ್ನೇ ತಮ್ಮ ಆಹಾರವನ್ನಾಗಿಸಿಕೊಳ್ಳುತ್ತವೆ. ಈ ಇರುವೆಗಳ ಜೊತೆಗೆ ಕೆಲ ಹಕ್ಕಿಗಳು, ಚೇಳು, ಪರಾವಲಂಬಿ ಕಣಜಗಳು, ಕೆಲ ಪ್ರಭೇದದ ನೊಣಗಳಿಗೂ ಹುಲಿ ಜೀರುಂಡೆಗಳು ಆಹಾರವಾಗಿವೆ.

ಹುಲಿ ಜೀರುಂಡೆ ಮರಿಯ ಮೇಲೆ ಪರಾವಲಂಬಿ ಕಣಜದ ದಾಳಿ
    © ದಿನೇಶ್ ಹೆಗ್ಡೆ

Tiphiidae ಕುಟುಂಬದ Methoca and Pteromborus) ಗುಂಪಿಗೆ ಸೇರಿದ ಕಣಜಗಳು ಮರಿಯನ್ನು ನಿಷ್ಕ್ರಿಯಗೊಳಿಸಿ ಹುಲಿ ಜೀರುಂಡೆಗಳ ದೇಹದೊಳಗೆ ಮೊಟ್ಟೆಯಿಟ್ಟು ರಂಧ್ರವನ್ನು ಮುಚ್ಚುತ್ತವೆ. ಕೆಲವೇ ದಿನಗಳಲ್ಲಿ ಜೀರುಂಡೆಯ ದೇಹವನ್ನು ಸೀಳಿಕೊಂಡು ಹೊರಬಂದು ಆ ಕಣಜ ಮರಿಗಳು ಹುಲಿ ಜೀರುಂಡೆ ದೇಹದ ಮೇಲೆ ಗೂಡು ಕಟ್ಟಿಕೊಳ್ಳುತ್ತವೆ. ಇನ್ನು, ಈ ಹುಲಿ ಜೀರುಂಡೆಗಳ ಮರಿಗಳ ಮೇಲೆ ಜೀವಿಸುವ ಇನ್ನೊಂದು ವಿಶೇಷ ನೊಣವಿದೆ ಇದನ್ನು ಇಂಗ್ಲೀಷ್ ನಲ್ಲಿ Bee-Fly ಎಂದು ಕರೆಯುತ್ತಾರೆ Anthrax ಜಾತಿಯ ಈ ನೊಣ Bombyliidae ಕುಟುಂಬಕ್ಕೆ ಸೇರಿದೆ. ಈ ನೊಣವು ಜೀರುಂಡೆಯ ಬಿಲದ ಬಳಿ ಜೀರುಂಡೆಯ ಮುಖದ ಮೇಲೆ ದಾಳಿಮಾಡುತ್ತಾ ಅದಕ್ಕೆ ತಿಳಿಯದಂತೆ ಬಿಲದ ಒಳಗಡೆಗೆ ತನ್ನ ಮೊಟ್ಟೆಗಳನ್ನು ಜಾರಿಸಿ ಬಿಡುತ್ತದೆ; ಒಳ ಸೇರಿದ ಮೊಟ್ಟೆಗಳು ಮರಿಗಳಾಗಿ ಹುಕ್ಕಿನಂತಹ ಕಾಲುಗಳಿಂದ ತೆವಳಿ ಬಂದು ಮರಿ ಜೀರುಂಡೆಯ ಮೇಲೇರಿ ಅದನ್ನು ತಿನ್ನಲು ಶುರು ಮಾಡುತ್ತದೆ.

ಈ ಮರಿ ಜೀರುಂಡೆಗಳ ಜೀವನ ವಿಧಾನ ಬಹಳ ಕುತೂಹಲಕಾರಿಯಾಗಿದ್ದರೂ ಇವು ಸಾಕಷ್ಟು ಪರಭಕ್ಷಕಗಳು, ಪರಾವಲಂಬಿ ಜೀವಿಗಳು, ಕಠಿಣ ವಾತಾವರಣದ ಜೊತೆಗೆ ಹೋರಾಡುತ್ತಲೇ ತನ್ನ ಜೀವವನ್ನು ಸಂತತಿಯನ್ನು ಮುಂದುವರೆಸಬೇಕು, ಇದುವೇ ಅಲ್ಲವೇ ಜೀವನ.

ಲೇಖನ: ಹರೀಶ ಎ. ಎಸ್.
                     ಉರ್ವಿ ನೇಚರ್ ಫೌಂಡೇಶನ್,
ಬೆಂಗಳೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.