ಪ್ರಧಾನ ಸಂಪಾದಕರು

ಅಶ್ವಥ ಕೆ. ಎನ್.
ತೇಜಸ್ವಿಯವರ ಪುಸ್ತಕಗಳು ನನ್ನನ್ನು ಅದ್ಯಾವುದೋ ಹೊಸ ಜಗತ್ತಿಗೆ ಕರೆದೊಯ್ದು ಇಂದು ಕೂಡ ಅದರ ಗುಂಗಿಗುಂಗಿನಲ್ಲಿಯೇ ಇರುವಂತೆ ಮಾಡಿವೆ. ಪುಸ್ತಕ, ಬರವಣಿಗೆ, ಸಾಹಿತ್ಯ, ಕಾಡು ಮೇಡು ಸುತ್ತುವುದು ನನ್ನ ಹವ್ಯಾಸಗಳಾಗಿವೆ. ನಾನು ಹುಟ್ಟಿ ಬೆಳೆದದ್ದು ಕಾಡಂಚಿನ ಒಂದು ಪುಟ್ಟ ಹಳ್ಳಿಯಲ್ಲಿ. ಆ ಹಳ್ಳಿ ಕುರಿತ ಕೆಲ ಕಥೆಗಳನ್ನು ಕಾನನದಲ್ಲಿ ಬರೆದಿದ್ದೇನೆ, ಅಲ್ಲಿರುವ ಕೆಲ ಸಜೀವ-ನಿರ್ಜೀವ ಪಾತ್ರಗಳ ಜೊತೆ ನಾನು ಕೂಡ ಬದುಕುತ್ತಿದ್ದೇನೆ. ಕರ್ನಾಟಕದ ಹುಲ್ಲುಗಾವಲುಗಳ ಬಗ್ಗೆ ಸಂಶೋಧನೆ ಮಾಡಿ ಪಿ. ಹೆಚ್ ಡಿ ಪದವಿ ಪಡೆದಿರುವ ನಾನು ಸದ್ಯಕ್ಕೆ ಡಬ್ಲ್ಯೂ ಸಿ ಜಿ ತಂಡದ ಒಂದು ಪ್ರಾಜೆಕ್ಟ್ ನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.. ಡಬ್ಲ್ಯೂ.ಸಿ.ಜಿ, ಕಾನನ, ಸಂಶೋಧನೆ ಮತ್ತು ನನ್ನ ಬದುಕನ್ನು ಕೂಡ ನನ್ನ ಕನಸಿನಂತೆ ದೊಡ್ಡದಾಗಿ ಬೆಳೆಸಬೇಕು ಎಂಬ ಹಂಬಲ ಪದೆಪದೆ ನನ್ನನ್ನು ಇನ್ನೂ ಆಸಕ್ತಿದಾಯಕವಾಗಿ ಬದುಕಲು ಪ್ರೇರೇಪಿಸುತ್ತಿವೆ.
ಮುಖ್ಯ ಸಂಪಾದಕರು

ನಾಗೇಶ್ ಒ. ಎಸ್.
ವೃತ್ತಿಯಲ್ಲಿ ಗಣಿತ ಶಿಕ್ಷಕನಾಗಿರುವ ನಾನು ಹುಟ್ಟಿ ಬೆಳೆದದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಧ್ಯ ಇರುವ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಊರಿನ ಸುತ್ತ ಕಾಡಿರುವ ಕಾರಣವೋ ಏನೋ ಚಿಕ್ಕಂದಿನಿಂದಲೂ ಕಾಡು, ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ . ನನ್ನೀ ಆಸಕ್ತಿಗೆ ಪುಷ್ಠಿ ನೀಡಿದ್ದು ಹಾಗೂ ಪರಿಸರದ ಬಗ್ಗೆ ನನಗೆ ತಿಳಿದದ್ದನ್ನು ಸುತ್ತಲಿನ ಹಳ್ಳಿ ಮಕ್ಕಳಿಗೆ ತಿಳಿಸಿಕೊಡಲು ಅವಕಾಶ ಕಲ್ಪಿಸಿಕೊಟ್ಟಿದ್ದು ಡಬ್ಲ್ಯೂ.ಸಿ.ಜಿ. ಕನ್ನಡ ಸಾಹಿತ್ಯಕ್ಕೆ ನನ್ನನ್ನು ಎಳೆತಂದದ್ದು ಕೆ. ಪಿ. ಪೂರ್ಣಚಂದ್ರ ತೇಜಸ್ವಿ ರವರ ಪುಸ್ತಕಗಳು. ಇವರ ಪುಸ್ತಕಗಳಿಂದ ಪ್ರಭಾವಿತನಾಗಿ ಕನ್ನಡ ಸಾಹಿತ್ಯದ ಕೆಲವು ಶ್ರೇಷ್ಠ ಸಾಹಿತಿಗಳ ಕೃತಿಗಳನ್ನು ಓದಿದ ಮೇಲೆ ಕನ್ನಡ ಭಾಷೆಗೆ, ಕನ್ನಡ ನಾಡಿಗೆ ನನ್ನ ಕೈಲಾದಷ್ಟು ಸೇವೆ ಸಲ್ಲಿಸಬೇಕೆಂಬುದು ನೆಲೆಯೂರಿತು. ಈ ಕನಸು ನನಸಾಗಲು ಅವಕಾಶ ಕಲ್ಪಿಸಿಕೊಟ್ಟಿದ್ದು ಕಾನನ ಇ-ಮಾಸ ಪತ್ರಿಕೆ. ಛಾಯಾಗ್ರಹಣ, ಪಕ್ಷಿ ವೀಕ್ಷಣೆ, ಚಾರಣ , ಪುಸ್ತಕ ಓದುವುದು ನನ್ನ ಕೆಲವು ಹವ್ಯಾಸಗಳು.
ಸಹ ಸಂಪಾದಕರು

ಧನರಾಜ್ ಎಂ.
ಪಕ್ಷಿವೀಕ್ಷಣೆ, ಪರ್ವತಾರೋಹಣ, ನಿಸರ್ಗದ ಸ್ಥಳಗಳಿಗೆ ದೂರದ ಪಯಣ, ಲೇಖನ ಹಾಗು ಕವನಗಳ ರಚನೆ ನನ್ನ ಕೆಲವು ಹವ್ಯಾಸಗಳು. ಇದರೊಟ್ಟಿಗೆ ಪುಸ್ತಕ ಓದುವುದುವಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ ಮತ್ತು ಹೊಸ ವಿಷಯಗಳನ್ನು ಕಲಿಯಲು ಆಸಕ್ತನಾಗಿದ್ದೇನೆ. ಡಬ್ಲ್ಯೂ.ಸಿ.ಜಿ ತಂಡದ ಖಜಾಂಜಿ ಆಗಿರುವ ನಾನು, ಪರಿಸರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಡಬ್ಲ್ಯೂ.ಸಿ.ಜಿ ಮುಖಾಂತರ ಆಯೋಜಿಸುತ್ತಿದ್ದೇನೆ ಹಾಗೂ ಸುಮಾರು 7 ವರ್ಷಗಳಿಂದ ಕಾನನ ಮಾಸ ಪತ್ರಿಕೆಯ ವಿನ್ಯಾಸವನ್ನು ಸಹ ಮಾಡುತ್ತಿದ್ದೇನೆ.
ಮಹದೇವ ಕೆ. ಸಿ.

ಪ್ರಸ್ತುತ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪಬ್ಲಿಕ್ ರಿಲೇಷನ್ಶಿಪ್ ಆಫೀಸರ್ (PRO) ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಯ ಗೀಳು ನನ್ನಲ್ಲಿ ಮೂಡಲು ಕಾಡಂಚಿನಲ್ಲೇ ನನ್ನೂರು ಕಾರಣ. ಕಳೆದ ಒಂದು ದಶಕಗಳಿಂದ ಕಾಡು-ಮೇಡು ಸುತ್ತುತ್ತಾ ಪಕ್ಷಿವೀಕ್ಷಣೆ ಮೊದಲಾದ ಚಟುವಟಿಕೆಗಳನ್ನ ಮಾಡುತ್ತಾ ಈ ಸುತ್ತಾಟದಲ್ಲಿ ಕಂಡ ಕೆಲ ಆಸಕ್ತಿದಾಯಕ ವಿಷಯಗಳನ್ನ ವೈಜ್ಙಾನಿಕವಾಗಿ ಲೇಖನಗಳ ರೂಪಕ್ಕೆ ತರಲು ಹುರಿದುಂಬಿಸಿದ್ದು ಪೂರ್ಣಚಂದ್ರ ತೇಜಸ್ವಿರವರ ಬರಹಗಳು. ಹೀಗಾಗಿ ಆಗಾಗ ನಾನು ನೋಡಿ ಕಲಿತು ಅಕ್ಷರಕ್ಕಿಳಿಸಿದ್ದನ್ನ ನಮ್ಮ ಕಾನನ ಮಾಸಿಕದಲ್ಲಿ ಪ್ರಕಟಿಸಿತ್ತಿದ್ದೇನೆ.
ಸಂಪಾದಕೀಯ ತಂಡ

ಮುರಳಿ ಎಸ್.
ಬನ್ನೇರುಘಟ್ಟ ಕಾಡಂಚಿನ ಹಳ್ಳಿಯಲ್ಲಿ ವಾಸ. ಕಂಪ್ಯೂಟರ್ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ಸಾಹಿತ್ಯದಲ್ಲಿ ಆಸಕ್ತಿ, ಮಕ್ಕಳಲ್ಲಿ ವಿಜ್ಞಾನ ಮತ್ತು ಪರಿಸರವನ್ನು ತುಂಬುವ ಹಂಬಲ, ಸಧ್ಯಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಲ್ಲಿನ ಸರ್ಕಾರಿ ಶಾಲೆಗಳಲ್ಲಿ “ಪ್ರಾಜೆಕ್ಟ್ ಮಾಡೂ” ಯೋಜನೆಯ ಮುಖಾಂತರ ಮಕ್ಕಳಿಗೆ ವಿಜ್ಞಾನದ ಪ್ರಯೋಗಗಳು ಮಾಡಿಸುವುದರ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆಯ ಮಕ್ಕಳ “ಚಿಣ್ಣರ ವನ ದರ್ಶನ” ಕಾರ್ಯಕ್ರಮದಂತಹ ಪರಿಸರದ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದು, ಪ್ರಸ್ತುತ ರಾಮಕೃಷ್ಣ ಮಿಷನ್, ಶಿವನಹಳ್ಳಿಯ ಶ್ರೀ ಶಾರದಾ ದೇವಿ ವಿದ್ಯಾ ಕೇಂದ್ರ ಶಾಲೆಯ ನಿರ್ವಾಹಕ (Admin).

ಹುಸೇನ್ ನೇಣಿಕೆ
ನಾನು ಮೂಲತಃ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯವನಾಗಿದ್ದು, ಬೆಳೆದದ್ದು ಕರ್ನಾಟಕದಲ್ಲಿ. ನನ್ನ ಪ್ರಾಥಮಿಕ ಶಿಕ್ಷಣವನ್ನು ಬಳ್ಳಾರಿ ಜಿಲ್ಲೆಯಲ್ಲಿ ಮುಗಿಸಿ ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಶ್ರೀ ಸಿದ್ದಗಂಗಾ ಮಠ, ತುಮಕೂರು ನಲ್ಲಿ ಮುಗಿಸಿರುತ್ತೇನೆ. ತುಮಕೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ರಾಮಕೃಷ್ಣ ಮಿಷನ್, ಶಿವನಹಳ್ಳಿ ಆಯೋಜಿತ “ಮಾಡೂ ಯೋಜನೆ” ಅಡಿಯಲ್ಲಿ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಚಟುವಟಿಕೆಯಾಧಾರಿತ ಬೋಧನೆ ಮಾಡುತ್ತಿದ್ದೇನೆ. ಚಿಕ್ಕಂದಿನಿಂದಲೂ ಕನ್ನಡದ ಬಗ್ಗೆ ಮೂಡಿದ ಒಲವು ಇಂದು ಕಾನನ ಇ – ಮಾಸಪತ್ರಿಕೆಯ ವರೆಗೂ ನನ್ನನ್ನು ಕರೆದುಕೊಂಡು ಬಂದಿದೆ. ಕಾಡು ಮೇಡು ಸುತ್ತಿಕೊಂಡು ಅಲ್ಲಿ ಕಂಡಂತಹ ಗಿಡ, ಮರ, ಹೂವು, ಬಳ್ಳಿ, ಪ್ರಾಣಿ, ಪಕ್ಷಿಗಳ ಜೊತೆಗೆ ಸುತ್ತಲಿನ ಪರಿಸರದ ಬಗ್ಗೆ ಕನ್ನಡದ ಕಿರು ಕವನಗಳನ್ನು ಬರೆಯುವ ಹವ್ಯಾಸ.
ಉದ್ಯೋಗ:- ಶಿಕ್ಷಕ, ಮಾಡೂ ಯೋಜನೆ.

ಸಂಗಮನಾಥ ಪಿ ಸಜ್ಜನ
ಬಿ.ಎಡ್ ಮತ್ತು ಎಂ.ಎ (ಕನ್ನಡ) ಸ್ನಾತಕೋತ್ತರ ಪದವೀಧರನಾದ ನಾನು ಮೂಲತಃ ಕಲ್ಯಾಣ ಕರ್ನಾಟಕದ ಕಲಬುರಗಿಯವರು. ಈಗ ಬೆಂಗಳೂರಿನ ಕ್ರೈಸ್ಟ್ ಶಾಲೆ (ಐಸಿಎಸ್ಇ) ಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಮತ್ತು ಪ್ರಾಥಮಿಕ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಸಾಹಿತ್ಯ ಕೃಷಿಯಲ್ಲಿ ಅನೇಕ ಕವನಗಳನ್ನು ರಚಿಸಿದ್ದು, ಬಹುತೇಕ ಕವನಗಳು ಆಕಾಶವಾಣಿ (ಆಲ್ ಇಂಡಿಯಾ ರೇಡಿಯೋ) ಸಂಯುಕ್ತ ಕರ್ನಾಟಕ, ಯಾದಗಿರಿ ಟೈಮ್ಸ್, ಗಾಣಿಗ ಧ್ವನಿ, ಬಸವ ಕ್ರಾಂತಿ, ಅಗ್ನಿಪತ್ರಿಕೆ ಹಾಗೂ ಮುಂತಾದ ದಿನಪತ್ರಿಕೆಗಳಲ್ಲಿ ಮತ್ತು ಶಾಲೆಯ ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. 18ನೇ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಲ್ಲದೆ ಇನ್ನಿತರ ಕವಿಗೋಷ್ಠಿ, ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುತ್ತೇನೆ.
“ಅಕ್ಷರ ವೈಭವ” (ನುಡಿಸಿರಿ ಪುಸ್ತಕ ಪ್ರಶಸ್ತಿ 2023) ಕವನ ಸಂಕಲನ, ಜೇನುಗೂಡು (ಮಕ್ಕಳ ಕವನ ಸಂಕಲನ) ಪ್ರಕಟಿಸಿದ್ದು ಭಾವ ಸಂಗಮ (ಪ್ರೇಮ ಕವಿತೆಗಳ ಸಂಕಲನ) ಮುದ್ರಣ ಹಂತದಲ್ಲಿದ್ದು, ಇದು ಮೂರನೆಯ ಕೃತಿಯಾಗಿದೆ.
ಶಿಕ್ಷಣ ಮತ್ತು ಸಾಹಿತ್ಯ ಸೇವೆಗೆ ಸುವರ್ಣ ಸಂಘಟನಾ ಶಿಕ್ಷಕ ಪ್ರಶಸ್ತಿ, ಅಕ್ಷರನಾದ ಸಾಹಿತ್ಯ ಪ್ರಶಸ್ತಿ, ಕಾವ್ಯ ಚೇತನ ಪ್ರಶಸ್ತಿ, ಸದ್ಗುರು ಯೋಗಿ ನಾರೇಯಣ ಸದ್ಭಾವನಾ ಪ್ರಶಸ್ತಿ, ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ, 2025 ಕಂಚ್ಯಾಣಿ ಶರಣಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿ ಮತ್ತು ಸಿದ್ದವಹಳ್ಳಿ ಶ್ರೀ ಪದ್ಮಮ್ಮ ಸಿದ್ದೇಗೌಡ ದತ್ತಿ ಸ್ಮಾರಕ ಪ್ರಶಸ್ತಿಗಳು ದೊರೆತಿವೆ. ಅನೇಕ ಕವನ ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಮತ್ತು ಉತ್ತಮ ಎಂಬ ಪ್ರಶಂಸಾ ಪತ್ರಗಳು ಸಹ ಒಲಿದು ಬಂದಿವೆ.

ಸುಕನ್ಯ
ಓದಿದ್ದು ವಿಜ್ಞಾನ; ೮ ವರ್ಷಗಳ ಕಾಲ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸದ ನಂತರ ಸ್ವಲ್ಪ ವಿರಾಮ. ತದನಂತರ ಆಯ್ಕೆ ಮಾಡಿಕೊಂಡಿದ್ದು ಶಿಕ್ಷಣ ವೃತ್ತಿಯನ್ನು. ಅದಕ್ಕೆ ಬೇಕಾದ ಪದವಿ ಮತ್ತು ಸ್ನಾತಕೋತ್ತರ ಪದವಿ ಬಿ. ಎಡ್ ಮತ್ತು ಎಂ. ಎ ಕನ್ನಡಗಳನ್ನು ಪೂರೈಸಿ, ಮಕ್ಕಳಿಗೆ ಕನ್ನಡ ಭಾಷೆ, ಅದರ ಸವಿಯನ್ನು ಉಣಿಸುತ್ತಾ ಹತ್ತು ವರುಷಗಳು ಹೇಗೆ ಕಳೆದವು ಎಂದು ತಿಳಿಯಲಿಲ್ಲ. ಓದುವುದು, ವಿಶ್ಲೇಷಿಸುವುದು, ಕಸೂತಿ-ಹೊಲಿಗೆಗಳು ಮೆಚ್ಚಿನ ಹವ್ಯಾಸಗಳು. ಕಾನನದ ಲೇಖನಗಳನ್ನು ತಿದ್ದುಪಡಿ ಮಾಡುವ ನೆಪದಲ್ಲಿ, ಈ ‘ಕಾನನ’ ಪ್ರಪಂಚದ ಪರಿಚಯ ದೊರಕುತ್ತಿರುವುದು ಸೌಭಾಗ್ಯವೆಂದು ಭಾವಿಸುತ್ತೇನೆ.

ಕ್ಷಮಾ ವಿ ಭಾನುಪ್ರಕಾಶ್
ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಇವರು, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕೆಂಡಸಂಪಿಗೆಯಲ್ಲಿ ಪ್ರಕಟವಾಗುತ್ತಿರುವ ಮಕ್ಕಳ ವಿಜ್ಞಾನ ಕಥಾಮಾಲಿಕೆಯ ಲೇಖಕಿ. i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಆರು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಧರೆ ಕಟ್ಲರಿ ಬ್ಯಾಂಕ್ ಎಂಬ ಪರಿಸರ ಸ್ನೇಹಿ ಉಪಕ್ರಮದ ಸಹ-ಸಂಸ್ಥಾಪಕರಾಗಿ, ಶೂನ್ಯ ತ್ಯಾಜ್ಯ (Zero-Waste) ಸಮುದಾಯ ಕಾರ್ಯಕ್ರಮಗಳನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.

ವೈಲ್ಡ್ಲೈಫ್ ಕನ್ಸರ್ವೇಶನ್ ಗ್ರೂಪ್ (WCG) — ಕಾನನ ಪತ್ರಿಕೆಯ ಪ್ರಕಾಶಕರು. ಬೆಂಗಳೂರು ಮೂಲದ ಪ್ರಕೃತಿ ಸಂರಕ್ಷಣಾ ಸಂಸ್ಥೆ.