ಬೆಳವನ ಮೊಟ್ಟೆ ಸೆಳೆವನ ಪಾಲು
© ದೀಪಕ್ ಎಲ್ ಎಂ
ಕಳೆದ ಎರಡು ವರ್ಷಗಳಿಂದ ಕೆಂಪುಹೊಟ್ಟೆಯ ಗೌಜಲಕ್ಕಿ (Chestnut-bellied Sandgrouse) ಯನ್ನು ಬಹುತೇಕವಾಗಿ ವೀಕ್ಷಿಸುತ್ತಾ, ಅದರ ಎಲ್ಲ ನಡವಳಿಕೆಗಳನ್ನು ಚಿತ್ರ ರೂಪದಲ್ಲಿ ದಾಖಲಿಸುತ್ತಾ ಬಂದಿದ್ದೇವೆ. ಈ ವರ್ಷ, ಈ ಹಕ್ಕಿಯು ಹೇಗೆ ಗೂಡು ಕಟ್ಟುತ್ತದೆ ಹಾಗೂ ಇದರ ಮೊಟ್ಟೆಗಳು ಹೇಗಿರುತ್ತವೆ ಎಂಬುದನ್ನು ತಿಳಿಯಲು ಮುಂದಾದೆವು. ಪ್ರತಿ ಶನಿವಾರದಂತೆ, ಈ ಶನಿವಾರವೂ ಮುಂಜಾನೆ ಹಕ್ಕಿ ಫೋಟೋಗ್ರಫಿಗಾಗಿ ಬೆಂಗಳೂರಿನಿಂದ ಸುಮಾರು ನೂರು ಕಿಲೋಮೀಟರ್ ದೂರದಲ್ಲಿರುವ ಒಂದು ಹುಲ್ಲುಗಾವಲಿಗೆ ಹೊರಟೆವು.
ಗೌಜಲಕ್ಕಿಯು ಗೂಡು ಮಾಡಿರುವುದೇನೊ ಎಂದು ಹುಡುಕುತ್ತಿರುವಾಗ, ದೂರದಲ್ಲಿ ಒಂದು ತೇನೆ ಹಕ್ಕಿ (Red-Wattled Lapwing) ವಿಚಿತ್ರವಾಗಿ ರೆಕ್ಕೆಯನ್ನು ಬಡಿಯುತ್ತಾ ಹೆದರಿದಂತೆ ಹಾರಿ ಹೋಯಿತು. ಸಾಮಾನ್ಯವಾಗಿ ಈ ರೀತಿಯ ನಡವಳಿಕೆ ಅವು ಯಾವುದಾದರೂ ಬೇಟೆ ಪಕ್ಷಿಗಳನ್ನು (Raptors) ಕಂಡಾಗ ಮಾಡುತ್ತವೆ. ಇತರ ಪಕ್ಷಿಗಳಿಗೆ ಎಚ್ಚರಿಸಲು ಅವು “ಟೀ ಟೀ ಟೀ” ಎಂದು ಕೂಗುತ್ತವೆ.
ಇದನ್ನು ಕಂಡ ನಮಗೆ ಹತ್ತಿರದಲ್ಲೇ ಎಲ್ಲೊ ಯಾವುದೋ ಬೇಟೆ ಪಕ್ಷಿ ಇದೆಯೆಂದು ಖಚಿತವಾಯಿತು. ಹಾಗೆ ಬೈನಾಕ್ಯುಲರ್ನಲ್ಲಿ ನೋಡಿದಾಗ ನಮಗೆ ಕಂಡದ್ದು ‘ಪಟ್ಟಿರೆಕ್ಕೆಯ ಸೆಳೆವ’. ಈ ವರ್ಷದ ಚಳಿಗಾಲಕ್ಕೆ ವಲಸೆ ಬಂದಿರುವ ಇದನ್ನು ಗೌಜಲಕ್ಕಿಯ ಗೂಡು ಹುಡುಕುತ್ತಿದ್ದ ನಾವು ಅದನ್ನೆಲ್ಲಾ ಬಿಟ್ಟು ‘ಸೆಳೆವ’ ಇರುವ ಕಡೆ ಹೊರಟೆವು.

ಪಟ್ಟಿರೆಕ್ಕೆಯ ಸೆಳೆವ – ಆಂಗ್ಲದಲ್ಲಿ ಮೊಂಟಾಗುಸ್ ಹಾರ್ರಿಯರ್ (Montagu’s Harrier) ಎಂದು ಕರೆಯಲ್ಪಡುವ ಈ ಹಕ್ಕಿ ಚಳಿಗಾಲದಲ್ಲಿ ಯುರೋಪ್ ಹಾಗೂ ಪಶ್ಚಿಮ ಏಷ್ಯಾ ದಿಂದ ಭಾರತಕ್ಕೆ ವಲಸೆ ಬರುವ ಹಕ್ಕಿಯಾಗಿದೆ. ಒಂದು ಕಾಲದಲ್ಲಿ ಹುಲ್ಲುಗಾವಲು ಪ್ರದೇಶಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತಿತ್ತು; ಈಗ ಹುಲ್ಲುಗಾವಲುಗಳು ನಾಶವಾಗುತ್ತಿರುವ ಕಾರಣದಿಂದ ಇವು ಕಾಣುವುದು ಬಹಳ ವಿರಳವಾಗಿದೆ.

ಪಟ್ಟಿರೆಕ್ಕೆಯ ಸೆಳೆವ – ಬೇಟೆ ಪಕ್ಷಿಗಳ ಜಾತಿಗೆ ಸೇರಿದ್ದು, ಗಂಡು ಹಕ್ಕಿಯು ತಿಳಿ ನೀಲಿ-ಬೂದು ಬಣ್ಣವಿದ್ದು, ರೆಕ್ಕೆಯ ತುದಿಯಲ್ಲಿ ಕಪ್ಪು ಪಟ್ಟಿ ಪ್ರಮುಖವಾಗಿ ಕಾಣುತ್ತದೆ. ಹೆಣ್ಣು ಹಕ್ಕಿಯು ಕಂದು ಬಣ್ಣದ್ದಾಗಿದ್ದು, ದೇಹದಲ್ಲಿ ಪಟ್ಟೆಗಳಿರುತ್ತವೆ. ಹೆಣ್ಣು ಗಂಡು ಎರಡೂ ಹಕ್ಕಿಗಳು ಬಾಲದ ಹತ್ತಿರ ಚುಕ್ಕೆಗಳನ್ನು ಹೊಂದಿರುತ್ತವೆ.
ಸಾಮಾನ್ಯವಾಗಿ ಇವು, ಸಣ್ಣ ಸಸ್ತನಿಗಳು, ಸಣ್ಣ ಹಕ್ಕಿಗಳು, ಸರಿಸೃಪಗಳು (ಹಾವುಗಳನ್ನು ಒಳಗೊಂಡಂತೆ) ಮತ್ತು ದೊಡ್ಡ ಕೀಟಗಳನ್ನು ತಿನ್ನುತ್ತವೆ. ಭಾರತದಲ್ಲಿ ನಾವು ಕಂಡಂತೆ ಹೆಚ್ಚಾಗಿ ದೊಡ್ಡ ಕೀಟಗಳಾದ ಮಿಡತೆ ಹಾಗೂ ಓತಿಗಳನ್ನು ಬೇಟೆಯಾಡುವುದನ್ನು ಗಮನಿಸಿದ್ದೇವೆ. ಇವನ್ನು ಗುರುತಿಸುವುದು ಬಹಳ ಸುಲಭ. ಇತರ ಬೇಟೆ ಪಕ್ಷಿಗಳಂತೆ ಇವು ಎತ್ತರದಲ್ಲಿ ಹಾರುವುದಿಲ್ಲ. ಹುಲ್ಲುಗಾವಲಿನಲ್ಲಿ ಬೇಟೆಯನ್ನು ಹುಡುಕುತ್ತ ಬಹಳ ಕೆಳಮಟ್ಟದಲ್ಲಿ ಹಾರುತ್ತಿರುತ್ತವೆ.

ಸಾಮಾನ್ಯವಾಗಿ ಬೇಟೆ ಪಕ್ಷಿಗಳನ್ನು ಕಂಡರೆ ನಮಗೆ ಮರಳುಗಾಡಿನಲ್ಲಿ ನೀರು ಕಂಡಂತೆ ಆಗುತ್ತದೆ! ನಾವು ಸೆಳೆವನ ಹತ್ತಿರ ಬರುತ್ತಿದ್ದಂತೆ ಅದು ಹಾರಿ ಒಂದು ಮರದ ಕೊಂಬೆಯ ಮೇಲೆ ಕುಳಿತು, ಏನನ್ನೋ ಕಿತ್ತುಕೊಂಡು ಮತ್ತೆ ನೆಲೆದ ಮೇಲೆ ಬಂದು ಕುಳಿತು ತಿನ್ನಲು ಶುರುಮಾಡಿತು. ನಾವು ಆ ಮರದಲ್ಲಿರೋ ಯಾವುದೋ ಮಿಡತೆಯನ್ನು ಹಿಡಿದಿದೆ ಎಂದುಕೊಂಡೆವು.
ಅದು ತಿನ್ನುವುದರಲ್ಲಿ ಗಮನವಿದ್ದುದರಿಂದ ನಾವು ಹತ್ತಿರ ಹೋದರೂ ನಮ್ಮನ್ನು ಗಮನಿಸದಂತೆಯೇ ತನ್ನ ಪಾಡಿಗೆ ತಿನ್ನುತ್ತಿತ್ತು. ಮಿಡತೆಯನ್ನು ಹಿಡಿದಿದೆ ಎಂದು ಭಾವಿಸಿ ಕ್ಯಾಮೆರದಲ್ಲಿ ಅದು ಏನು ತಿನ್ನುತ್ತಿದೆ ಎಂದು ಗಮನಿಸಿದಾಗ ನಮಗೆ ಆಶ್ಚರ್ಯ ಕಾದಿತ್ತು! ಅದು ತಿನ್ನುತ್ತಿದ್ದದ್ದು ಮಿಡತೆಯನ್ನಲ್ಲ, ಆ ಮರದಲ್ಲಿ ಗೂಡು ಮಾಡಿದ್ದ ‘ಬೆಳವನ ಹಕ್ಕಿ’ಯ (Collared Dove) ಮೊಟ್ಟೆಯನ್ನು! “ಅರೇ ಇದು ಮೊಟ್ಟೆ ತಿನ್ನುತ್ತದಾ!” ಎಂದು ಒಂದು ಕ್ಷಣ ಆಶ್ಚರ್ಯ ಪಟ್ಟೆವು.

ನೋಡನೋಡುತ್ತಿದ್ದಂತೆಯೇ ಅದು ಮೊಟ್ಟೆಯನ್ನು ತಿಂದು ಮುಗಿಸಿ ಮತ್ತೆ ಹಾರಿ ಅದೇ ಗೂಡಿಗೆ ಹೋಗಿ ಅಲ್ಲಿರುವ ಮತ್ತೊಂದು ಮೊಟ್ಟೆಯನ್ನು ಬಾಯಲ್ಲಿ ಹಿಡಿದು ಈ ಬಾರಿ ನಮ್ಮ ಕಡೆಯೇ ಹಾರಿ ಬಂದು ಆ ಮೊಟ್ಟೆಯನ್ನು ತಿನ್ನಲು ಶುರುಮಾಡಿತು. ನಾವು ಒಂದು ಕ್ಷಣ ದಂಗಾಗಿ, ಹಾಗೆಯೇ ಹಕ್ಕಿಯನ್ನು ಕ್ಯಾಮೆರಾದಲ್ಲಿ ನೋಡುತ್ತಾ ಕ್ಲಿಕ್ಕಿಸುವುದನ್ನೇ ಮರೆತುಬಿಟ್ಟೆವು!

ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿ ನಾವು ಈ ರೀತಿ ಸೆಳೆವನ ನಡವಳಿಕೆಯನ್ನು ಕಂಡದ್ದು. ಪೂರ್ತಿ ಮೊಟ್ಟೆಯನ್ನು ತಿಂದು ಮುಗಿಸಿದ ಸೆಳೆವ ಆರಾಮವಾಗಿ ಕೆಳಮಟ್ಟದಲ್ಲಿ ಹಾರುತ್ತಾ ದೂರದಲ್ಲಿರುವ ಒಂದು ಮರದ ಮೇಲೆ ಕುಳಿತು ವಿಶ್ರಮಿಸಿತು. ನಾವು ಹಾಗೆಯೇ ಅದು ತಿಂದು ಬಿಸಾಡಿದ್ದ ಮೊಟ್ಟೆಯನ್ನು ನೋಡಲು ಹತ್ತಿರ ಹೋದಾಗ ಹುಲ್ಲುಗಾವಲಿನಲ್ಲಿ ಬಹಳಷ್ಟು ಮೊಟ್ಟೆಯ ಚೂರುಗಳನ್ನು ಕಂಡೆವು.
ನಾವು ಇದ್ದ ಹುಲ್ಲುಗಾವಲು ಪ್ರದೇಶದಲ್ಲಿ ಅಷ್ಟು ಮಿಡತೆಗಳಿಲ್ಲದ ಕಾರಣ ಅದು ಹಕ್ಕಿಯ ಮೊಟ್ಟೆಗಳನ್ನು ಗುರಿಯಾಗಿಸಿತೆಂದು ಭಾವಿಸಿದೆವು. ಹಾಗೆಯೇ ವಲಸೆ ಬಂದ ಎಲ್ಲಾ ಹಕ್ಕಿಗಳು ಹಿಂದಿರುಗುವ ಸಮಯದಲ್ಲಿ ಹಾರಲು ಶಕ್ತಿ ಬೇಕಾದುದರಿಂದ ಪ್ರೋಟೀನ್ ಯುಕ್ತ ಆಹಾರವನ್ನು ಹೆಚ್ಚು ತಿನ್ನುತ್ತವೆ.
ಸೆಳೆವಗಳು ಸಾಮಾನ್ಯವಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಮಾರ್ಚ್ ಕೊನೆಯಲ್ಲಿ ಹಿಂದಿರುಗುತ್ತವೆ. ನಾವು ಇದನ್ನು ನೋಡಿದ್ದು ಮಾರ್ಚ್ ತಿಂಗಳಾದುದ್ದರಿಂದ ಅದು ವಾಪಸ್ ಹೋಗುವ ತಯಾರಿಯಲ್ಲಿ ಇಲ್ಲಿರುವ ಬಹುತೇಕ ಮೊಟ್ಟೆಗಳನ್ನು ಖಾಲಿ ಮಾಡುತ್ತಿದ್ದಂತೆ ಕಾಣಿಸಿತು.

ನಂತರ ಮನೆಗೆ ಬಂದು ಇಂತಹ ನಡವಳಿಕೆ ಭಾರತದಲ್ಲಿ ಎಲ್ಲಾದರೂ ದಾಖಲಿಸಿದ್ದಾರೆಯೇ? ಎಂದು ಹುಡುಕಿದಾಗ, ರಾಜಸ್ಥಾನ್ ಹಾಗೂ ಹೈದರಾಬಾದಿನಲ್ಲಿ ಹೆಣ್ಣು ಸೆಳೆವಗಳು ಈ ರೀತಿ ಮೊಟ್ಟೆಯನ್ನು ಬಾಯಲ್ಲಿ ಹಿಡಿದು ಹಾರುವುದನ್ನು ದಾಖಲಿಸಿರುವುದು ತಿಳಿಯಿತು.
ಅಂದಹಾಗೆ, ಕೆಂಪುಹೊಟ್ಟೆಯ ಗೌಜಲಕ್ಕಿ ಮೊಟ್ಟೆಯನ್ನು ಹುಡುಕುತ್ತಾ ಹೋದ ನಮಗೆ, ಬೆಳವನ ಹಕ್ಕಿಯ ಮೊಟ್ಟೆಯನ್ನು ಸೆಳೆವನ ಬಾಯಲ್ಲಿ ಕಾಣುತ್ತೇವೆಂದು ಊಹಿಸಿಯೇ ಇರಲಿಲ್ಲ! ಪಕ್ಷಿಗಳ ಜಗತ್ತೇ ವಿಸ್ಮಯ.

ಲೇಖನ: : ದೀಪಕ್ ಎಲ್. ಎಂ.
ಬೆಂಗಳೂರು ಜಿಲ್ಲೆ



