ಹುಲಿ-ಜೀರುಂಡೆಗಳ ವಿಸ್ಮಯ ಲೋಕ – 1
© ಪುಷ್ಯ ಮಿತ್ರ
ನೀವು ಎಂದಾದರೂ ಕಡಲ ತೀರದ ಮಣ್ಣಿನ ರಾಶಿಯ ಮೇಲೋ, ಇಲ್ಲ ನದಿಯ ದಡದಲ್ಲೋ, ಕಾಡಿನ ಹಾದಿಯಲ್ಲೋ ನಡೆಯುತ್ತಿರಬೇಕಾದರೆ ನಿಮ್ಮ ಕಣ್ಣನ್ನೇ ಮೋಸಗೊಳಿಸುವಂತೆ ಕ್ಷಿಪ್ರವೇಗದಲ್ಲಿ ಥಳಥಳಿಸುವ ಸಣ್ಣ ಜೀವಿಯೊಂದು ಮಾಯವಾದ ಅನುಭವವಾಗಿದೆಯೇ? ಎಂದಾದರೂ ಅದು ಏನೆಂದು ಅದರ ಬೆನ್ನಟ್ಟಿದೀರಾ? ಇಲ್ಲವೆಂದರೆ ಇಂದಿನಿಂದ ಅದರ ಮೇಲೆ ಕಣ್ಹಾಕಿ! ನಿಮಗೆ ಮತ್ತೊಂದು ಹೊಸ ಪ್ರಪಂಚವೇ ಅನಾವರಣಗೊಳ್ಳುತ್ತದೆ!
ನನಗೆ ಮೊದಲ ಬಾರಿ ಹುಲಿ-ಜೀರುಂಡೆಗಳ ಪರಿಚಯವಾಗಿದ್ದು, ವಿಜ್ಞಾನಿಗಳಾದ ಜಗನಾಥನ್ ಪಿ, (NCF)ರವರಿಂದ. ನಾವು ಪಕ್ಷಿ ವೀಕ್ಷಣೆಗೆಂದು ರಾಮೇಶ್ವರಂಗೆ ಹೋದಾಗ ಅಲ್ಲಿನ ಕಡಲ ತೀರದ ಮರಳು ದಂಡೆಯ ಮೇಲೆ ನಡೆಯುತ್ತಿರಬೇಕಾದರೆ ಅವರು “ಟೈಗರ್ ಬೀಟಲ್… ಟೈಗರ್ ಬೀಟಲ್…” ಎಂದು ಕಿರುಚಿದರು, ಎಲ್ಲಿ? ಏನು? ಎಂದಾಗ, ಅವರು ನಿಧಾನಿಸಿ ಕಣ್ಣುಬಿಟ್ಟು ತೀಕ್ಷ್ಣವಾಗಿ ನೋಡು, ವೇಗವಾಗಿ ಚಲಿಸದಿರು, ಅಲ್ಲೇ ನಿಂತು ನೋಡು ಎಂದು ಹೇಳಿ, ನೋಡಲ್ಲಿ ಅಲ್ಲೇ ಕುಳಿತಿದೆಯಲ್ಲ ಅಂದಾಗ, ಅದೆಲ್ಲಿದೆ ಅಂತ ಮತ್ತೆ ಕೇಳಿದೆ, ಮತ್ತೆ ನಿನ್ನ ಮುಂದೆಯೇ ಇದೆ ನೋಡಲ್ಲಿ ಎಂದು ಕೈಬೆರಳು ತೋರಿಸಿದರು, ಆದರೂ ಕಾಣಲಿಲ್ಲ, ಮತ್ತೆ ನಿಧಾನಕ್ಕೆ ಬೆರಳನ್ನು ಅದರ ಹತ್ತಿರಕ್ಕೆ ತಂದರು, ಉಹೂಂ… ಕಾಣಲೇ ಇಲ್ಲ, ಅವರು ಮಣ್ಣಿನ ಮೇಲೆ ಕೂತು ಮತ್ತೆ ಕೈ ಬೆರಳನ್ನು ಅದರ ಹತ್ತಿರ 10 ಸೆಂಟಿಮೀಟರ್ ವರೆಗೆ ತಂದಾಗ ಕೊನೆಗೆ ಕಾಣಿಸಿಕೊಂಡಿತು! ಇದಾ ಹುಲಿ-ಜೀರುಂಡೆ ಎಂದು ಆಶ್ಚರ್ಯಚಕಿತನಾದೆ! ಥೇಟ್ ಕಡಲ ತೀರದ ಮಣ್ಣಿನ ಭಾಗದಂತೆ ಇತ್ತು, ಆ ಹುಲಿ–ಜೀರುಂಡೆ! ಅದೆಷ್ಟು ವೇಗ? ಕಣ್ರೆಪ್ಪೆ ಬಿಡುವಷ್ಟರಲ್ಲಿ ಎಲ್ಲೋ ಮಾಯವಾಗುತ್ತಿತ್ತು, ಸಾಕಷ್ಟು ನಿಧಾನಿಸಿ ಕಡಲ ಮರಳಿನಲ್ಲಿ ಹೊರಳಾಡಿ ಕೊನೆಗೆ ಕೆಲ ಚಿತ್ರಗಳನ್ನು ತೆಗೆದಿದ್ದೆ.
ಇನ್ನೂ, ಈ ಹುಲಿ–ಜೀರುಂಡೆಗಳ ವಿಷಯಕ್ಕೆ ಬಂದರೆ ಸಾಕಷ್ಟು ಕುತೂಹಲಕಾರಿ, ವಿಸ್ಮಯಕಾರಿ ವಿಷಯಗಳಿವೆ, ಮಾನವರೇ ನಾಚುವಂತಹ ರೇಡಾರ್ ವ್ಯವಸ್ಥೆ, ರೇಡಾರ್ ವಿರೋಧಿ ವ್ಯವಸ್ಥೆ ಅದರಲ್ಲಿದೆ! ಅದರ ಕ್ಷಿಪ್ರ ವೇಗಕ್ಕೆ ಕ್ಷಿಪಣಿಗಳೇ ತಲೆ ಭಾಗಬೇಕಿರುತ್ತದೆ! ಅದರ ಕುರಿತಾಗಿ ತಿಳಿಸುವುದೇ ಈ ಸರಣಿ ಲೇಖನಗಳ ಉದ್ದೇಶ.


ಹುಲಿ-ಜೀರುಂಡೆಗಳು ಕೀಟಗಳ ಪ್ರಭೇದಕ್ಕೆ ಸೇರಿದ್ದು, ಎಲ್ಲಾ ಕೀಟಗಳಂತೆ ಇವನ್ನು ಸಹ ತಲೆ (Head), ಎದೆ (Thorax), ಹೊಟ್ಟೆ (Abdomen) ಎನ್ನುವಂತೆ ಪ್ರತ್ಯೇಕಿಸಬಹುದು, ಹಾಗೆಯೇ 3 ಜೊತೆಯ ಕಾಲುಗಳನ್ನು ಹೊಂದಿರುತ್ತವೆ, ದೇಹದ ಬಾಹ್ಯ ಅಸ್ಥಿಪಂಜರವು ‘ಕೈಟಿನ್’ನಿಂದ ರಚನೆಗೊಂಡಿರುತ್ತದೆ, ಹಾಗೂ ಹಾರಬಲ್ಲವು (ಕೆಲವು ಕೀಟದ ಪ್ರಭೇದಗಳು ರೆಕ್ಕೆ ಇದ್ದರೂ ಹಾರಲಾರವು, ಅದರಂತೆ ಈ ಹುಲಿ-ಜೀರುಂಡೆಗಳಲ್ಲೂ ಒಂದು ಗುಂಪು ರೆಕ್ಕೆಗಳಿದ್ದರೂ ಹಾರುವುದಿಲ್ಲ, ಅವು ವೇಗವಾಗಿ ಓಡುವುದಕ್ಕೆ ವಿಕಾಸಗೊಂಡಿವೆ).
ಕೀಟಗಳ ಜಗತ್ತಿನಲ್ಲೇ ಅತ್ಯಂತ ವೈವಿಧ್ಯಮಯ ಗುಂಪಾದ ಜೀರುಂಡೆಗಳ (Beetles) ಗುಂಪಿಗೆ ಸೇರಿರುತ್ತವೆಯಾದರೂ ಪ್ರತ್ಯೇಕವಾಗಿ ಇವುಗಳಿಗೆ ಹುಲಿ–ಜೀರುಂಡೆ (Tiger Beetle) ಎಂದು ಹೆಸರು ಬರಲು ಕಾರಣ ಅವುಗಳ ಬೇಟೆಯಾಡುವ ವಿಧಾನ! ಥೇಟ್ ನಮ್ಮ ಹುಲಿಗಳಂತೆ ಇವು ಸಹ ಇತರ ಜೀವಿಗಳನ್ನು ಬೇಟೆಯಾಡಿ ತಿನ್ನುವ ಮಾಂಸಾಹಾರಿಗಳು! ಆದರೆ ಇವೆರಡರ ನಡುವೆ ವೇಗದಲ್ಲಿ ಸಾಕಷ್ಟು ವ್ಯತ್ಯಾಸವಿದೆ, ನಮ್ಮ ಹುಲಿ (Bengal Tiger) ಬೇಟೆಯಾಡುವಾಗ ಗಂಟೆಗೆ ಸರಿ ಸುಮಾರು 55 ರಿಂದ 60 ಕಿಲೋಮೀಟರ್ ವೇಗದಲ್ಲಿ; ಆದರೆ ಈ ಹುಲಿ-ಜೀರುಂಡೆ ಒಂದು ಸೆಕೆಂಡಿಗೆ ತನ್ನ ದೇಹದ ಉದ್ದದ ಸುಮಾರು 100 ರಿಂದ 150 ಪಟ್ಟು ದೂರ ಓಡುತ್ತದೆ, ಉದಾಹರಣೆಗೆ ಒಂದು ಹುಲಿ-ಜೀರುಂಡೆಯ ಉದ್ದ 1 ಸೆಂಟಿ ಮೀಟರ್ ಇದೆ ಎಂದರೆ, ಅದು ಒಂದು ಸೆಕೆಂಡಿಗೆ ಸುಮಾರು 1 ಮೀಟರಿನಿಂದ 1.5 ಮೀಟರಿನಷ್ಟು ಉದ್ದ ಕ್ರಮಿಸಬಲ್ಲದು! ಅದನ್ನು ಗಂಟೆಯ ವೇಗಕ್ಕೆ ಸಮೀಕರಿಸಿದರೆ 500 ರಿಂದ 600 ಕಿಲೋಮೀಟರ್ ವೇಗದಲ್ಲಿ ಓಡುತ್ತಿರುತ್ತದೆ! ನಮ್ಮ ಬೈಕು ಗಂಟೆಗೆ ಸುಮಾರು 120 ಕಿಲೋಮೀಟರು ವೇಗದಲ್ಲಿ ಓಡಿಸಿದರೆ ಅಬ್ಬಬ್ಬಾ ಅನ್ನುವ ನಾವು, ಅದರ 5 ಪಟ್ಟು ವೇಗವೆಂದರೆ! ಊಹಿಸಲೂ ಅಸಾಧ್ಯ! ಬೇಟೆಯಾಡುವಾಗ ಇಷ್ಟು ವೇಗವಾಗಿ ಓಡುವ ಅವುಗಳ ಕಣ್ಣಿನ ದೃಷ್ಟಿ ಕೆಲವೊಮ್ಮೆ ಮಬ್ಬಾಗುತ್ತದೆ. ಅದಕ್ಕೆ ಅವು ತಕ್ಷಣ ಕೆಲ ಕ್ಷಣಗಳು ನಿಂತು ತಾನು ಎಲ್ಲಿದ್ದೇನೆ ಎಂದು ಸುತ್ತಲೂ ಕತ್ತನ್ನು ಕಣ್ಣನ್ನು ತಿರುಗಿಸಿ ನೋಡಿಕೊಳ್ಳುತ್ತವೆ, ಮತ್ತೆ ಬೇಟೆಯಾಡಲು ಸಿದ್ಧಗೊಳ್ಳುತ್ತವೆ.

ಎಲ್ಲಾ ಜೀರುಂಡೆಗಳು ಈ ತೆರನಾಗಿ ವೇಗವಾಗಿ ಓಡುವುದಿಲ್ಲ, ಕೆಲ ಪ್ರಭೇದಗಳು ಮಾತ್ರ. ಆವಾಸಸ್ಥಾನಕ್ಕೆ ತಕ್ಕಂತೆ ಬೇರೆಯದ್ದೇ ರೀತಿಯಲ್ಲಿ ವಿಕಾಸಗೊಂಡಿವೆ. ಕೆಲ ಪ್ರಭೇದದ ಹುಲಿ-ಜೀರುಂಡೆಗಳು ಕೇವಲ ಕಡಲ ತೀರದಲ್ಲಿ ಮಾತ್ರ ಕಾಣಸಿಗುತ್ತವೆ, ಇನ್ನು ಕೆಲವು ನೀರಿನ ಅಭಾವವಿರುವ ಗಾಢ ಮರುಭೂಮಿಯಲ್ಲಿ, ಇನ್ನು ಕೆಲವು ನದಿಗಳು ಮೂಡಿಸಿರುವ ಮರಳಿನ ರಾಶಿಗಳ ಮೇಲೆ, ಕೆಲವು ಕೆರೆ ನದಿ ಮೂಲಗಳ ಅಂಚುಗಳಲ್ಲಿ, ಕೆಲವು ಭತ್ತದ ಗದ್ದೆಗಳಲ್ಲಿ, ಕೆಲವು ದಟ್ಟ ಕಾಡಿನ ಕಾಲುದಾರಿಯಲ್ಲಿ, ಕೆಲವು ಕಾಡಿನ ಎಲೆಗಳ ಮೇಲೆ, ಬೆಟ್ಟಗುಡ್ಡ, ಕಲ್ಲು-ಬಂಡೆಗಳ ಮೇಲೆ, ಕೆಲವು ಬಯಲು ಸೀಮೆಯಲ್ಲಿ… ಅಂದರೆ ಇವು ಎಲ್ಲಾ ಕಡೆಯಲ್ಲೂ ಕಾಣುತ್ತವೆ, ಆದರೆ ಅವುಗಳನ್ನು ನೋಡುವ ಗುರುತಿಸುವ ಕಣ್ಣಿರಬೇಕಷ್ಟೆ! ನಮ್ಮ ನಗರ ಪ್ರದೇಶದ ಕೆರೆಗಳ ಸುತ್ತ, ಕಾಲೇಜು ಆವರಣ, ಹಸಿರಿರುವ ಕಲುಷಿತಗೊಳ್ಳದ ಕಡೆ ಋತುಮಾನಕ್ಕೆ ಅನುಗುಣವಾಗಿ ಇವನ್ನು ಕಾಣಬಹುದು.

ನಾವೇಕೆ ಹುಲಿ–ಜೀರುಂಡೆಗಳಿಗೆ ಪ್ರಾಮುಖ್ಯತೆ ಕೊಡಬೇಕು? ಅವುಗಳಿಂದ ನಮಗೇನು ಉಪಯೋಗವಿದೆ? ಎನ್ನುವುದಾದರೆ ಇವು ಪರಿಸರ ವ್ಯವಸ್ಥೆಯ ಆರೋಗ್ಯದ ಸೂಚಕ, ಇದರ ಇರುವಿಕೆ ಮತ್ತು ಇಲ್ಲದಿರುವಿಕೆ ಆ ಪರಿಸರದ ಆರೋಗ್ಯವನ್ನು ಸೂಚಿಸುತ್ತದೆ. ಈ ಹುಲಿ-ಜೀರುಂಡೆಗಳು ಮರಿ (Larva) ಸಮಯದಲ್ಲಿ ಮತ್ತು ವಯಸ್ಕ (Adult) ಸಮಯದಲ್ಲೂ ಸಹ ಪರಭಕ್ಷಕ ಜೀವಿ. ಅಂದರೆ ಬೇರೆ ಕೀಟಗಳನ್ನು ಭಕ್ಷಿಸಿ ಜೀವಿಸುತ್ತವೆ. ಪ್ರತ್ಯೇಕವಾಗಿ ಭತ್ತದ ಗದ್ದೆಗಳಲ್ಲಿ ಇದು ಹಾನಿಕಾರಕ ಕೀಟಗಳನ್ನು ತಿಂದು ರೈತನ ಸ್ನೇಹಿತನಾಗುತ್ತದೆ. ಇದಲ್ಲದೆ ಇವನ್ನು ಬೇರೆ ಕೀಟಗಳು, ಪ್ರಾಣಿಗಳು, ಹಕ್ಕಿಗಳು, ಬಾವಲಿಗಳು ತಿನ್ನುವುದರಿಂದ ಪರಿಸರದ ಆಹಾರ ಸರಪಳಿಯ ಭಾಗವಾಗಿ ಕಾರ್ಯ ನಿರ್ವಹಿಸುತ್ತದೆ.

ಹುಲಿ-ಜೀರುಂಡೆಗಳ ದೊಡ್ಡ ಕುಡುಗೋಲು ಆಕಾರದ ದವಡೆಗಳು ಬೇಟೆಯನ್ನು ಹಿಡಿಯಲು ವಿನ್ಯಾಸಗೊಂಡಿವೆ. ಅವುಗಳ ಬೃಹತ್ ಸಂಯುಕ್ತ ಕಣ್ಣುಗಳು ಅತ್ಯುತ್ತಮ ದೃಷ್ಟಿಯನ್ನು ಒದಗಿಸುತ್ತವೆ. ಓಡಿ ಬೇಟೆಯನ್ನು ಹಿಡಿದ ತಕ್ಷಣ ಬೇಟೆಗೆ ಅದರ ಎಂಜಲನ್ನು ಉಗಿದು ಸವರಿ ತಿನ್ನುವುದರಿಂದ ಬೇಟೆ ವೇಗವಾಗಿ ಜೀರ್ಣವಾಗುತ್ತದೆ! ಇನ್ನು ಕಾಲುಗಳು ಉದ್ದವಾಗಿದ್ದು, ಓಡಲು ಸಹಕಾರಿ. ತಕ್ಷಣ ಅಪಾಯವನ್ನು ಕಂಡರೆ ಹೇಗೂ ವೇಗವಾಗಿ ಹಾರಿ ತಪ್ಪಿಸಿಕೊಳ್ಳಲು ರೆಕ್ಕೆಗಳಿವೆ!
ಈಗೊಮ್ಮೆ ಯೋಚಿಸಿ, ಹುಲಿ-ಜೀರುಂಡೆಗಳ ಗಾತ್ರ ತುಂಬಾ ಸಣ್ಣದು, ಕೆಲವು ಅರ್ಧ ಸೆಂಟಿಮೀಟರ್ ನಿಂದ 2 ಸೆಂಟಿಮೀಟರ್ ಅಷ್ಟೇ ಗಾತ್ರ, ಇಷ್ಟೇ ವೇಗ, ಅಷ್ಟೇ ಕ್ರೂರವಾಗಿ ಮೇಲೆ ಬಿದ್ದು, ಕಚ್ಚಿ ಜಿಗಿದು ತಿನ್ನುವ, ಹಾರಬಲ್ಲ ಇವು ನಮ್ಮ ಬೆಂಗಾಲ್ ಟೈಗರ್ ಗಾತ್ರದಲ್ಲಿ ಇದ್ದಿದ್ದರೆ, ಏನಾಗುತ್ತಿತ್ತು? ನಾವು ಭೂಮಿಯ ಮೇಲೆ ಇರಲು ಸಾಧ್ಯವಿತ್ತೇ? ಬೇರೆ ಜೀವಿಗಳನ್ನು ಹೇಗೆ ಬೇಟೆಯಾಡುತ್ತಿತ್ತು? ನಿಮ್ಮ ಕಲ್ಪನಾ ಲೋಕದಲ್ಲಿ ಒಮ್ಮೆ ವಿಹರಿಸಿ ಬನ್ನಿ…

ಈ ಹುಲಿ-ಜೀರುಂಡೆಗಳ ಆವಾಸಸ್ಥಾನಕ್ಕೆ ಅನುಗುಣವಾಗಿ ತನ್ನ ಬಣ್ಣ, ದೇಹರಚನೆ, ವೇಗ ವಿಕಾಸಗೊಂಡಿದೆ. ಮಿನುಗುವ ಬಣ್ಣ ಬಣ್ಣದಿಂದ ತೀರಾ ಮಂದವಾದ ಬಣ್ಣದಲ್ಲಿ ಇವು ಕಾಣಸಿಗುತ್ತವೆ. ನಮ್ಮ ಭಾರತದಲ್ಲಿ 260ಕ್ಕೂ ಹೆಚ್ಚಿನ ಹುಲಿ-ಜೀರುಂಡೆಗಳ ಪ್ರಭೇದಗಳನ್ನು ಗುರುತಿಸಲಾಗಿದೆ, ಇನ್ನಷ್ಟು ಹೊಸ ಪ್ರಭೇದದ ಜೀರುಂಡೆಗಳನ್ನು ಹೆಸರಿಸಲು ಸಾಕಷ್ಟು ಅವಕಾಶಗಳಿವೆ. ಕರ್ನಾಟಕದಲ್ಲಿ 80ಕ್ಕೂ ಹೆಚ್ಚಿನ ಹುಲಿ-ಜೀರುಂಡೆಗಳ ಪ್ರಭೇದಗಳು ಇರಲು ಸಾಧ್ಯವಿದೆ, ಅದಕ್ಕೆ ಇನ್ನಷ್ಟು ಸಂಶೋಧನೆಯ ಅವಶ್ಯಕತೆ ಇದೆ. ಇದರಲ್ಲಿ ಬಹುಪಾಲು ಹುಲಿ-ಜೀರುಂಡೆಗಳು ಸ್ಥಳೀಯ ಜೀವಿಗಳು, ಅಂದರೆ ಇಲ್ಲಿನ ಆ ಸಣ್ಣ ಜಾಗದಲ್ಲಿ ಬಿಟ್ಟು ವಿಶ್ವದ ಯಾವುದೇ ಮೂಲೆಯಲ್ಲಿ ಕಾಣಲಾರವು ಎಂದು ಅರ್ಥ. ಇಲ್ಲಿ ಕೆಲವು ಪ್ರಭೇದದ ಹುಲಿ-ಜೀರುಂಡೆಗಳ ಚಿತ್ರಗಳನ್ನು ನೀಡಲಾಗಿದೆ, ಸದ್ಯಕ್ಕೆ ಇವುಗಳಿಗೆ ಯಾವುದೇ ಕನ್ನಡದ ಹೆಸರಿಲ್ಲ, ಆದ್ದರಿಂದ ಮುಂದಿನ ದಿನಗಳಲ್ಲಿ ಅವುಗಳಿಗೆ ಕನ್ನಡದ ಹೆಸರನ್ನು ನಾಮಕರಣ ಮಾಡುವ ಅವಶ್ಯಕತೆಯಿದೆ.
ಜುಲೈ ತಿಂಗಳಲ್ಲಿ ಭಾರತದಾದ್ಯಂತ ವಿವಿಧ ಸಂಸ್ಥೆಗಳು, ಉತ್ಸಾಹಿಗಳು, ಸಂಶೋಧಕರು ಒಟ್ಟುಗೂಡಿ ಹುಲಿ-ಜೀರುಂಡೆಗಳ ಸಮೀಕ್ಷೆಯನ್ನು ಕೈಗೊಳ್ಳಲಿದ್ದೇವೆ, ಅದರಲ್ಲಿ ಪಾಲ್ಗೊಳ್ಳೋಣ, ಮುಂದಿನ ಅಧ್ಯಾಯಗಳಲ್ಲಿ ಹುಲಿ-ಜೀರುಂಡೆಗಳ ಇನ್ನಷ್ಟು ವಿಸ್ಮಯಕಾರಿ ವಿಷಯಗಳ ಕುರಿತು ಚರ್ಚಿಸೋಣ.


ಲೇಖನ: ಹರೀಶ ಎ. ಎಸ್.
ಉರ್ವಿ ನೇಚರ್ ಫೌಂಡೇಶನ್, ಬೆಂಗಳೂರು ಜಿಲ್ಲೆ



