ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ರೈತನ ಪ್ರಶ್ನೆಗಳು, ಸಮುದ್ರದ ಉತ್ತರ

ಚಾಮರಾಜನಗರದ ರೈತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರವಾಗಿ, ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದ ಉಷ್ಣತೆ ಬದಲಾವಣೆ ಎಲ್ ನಿನೋ ಮತ್ತು ಲಾ ನಿನಾ ಮೂಲಕ ಕರ್ನಾಟಕದ ಮುಂಗಾರು, ಬರಗಾಲ ಮತ್ತು ಕೃಷಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸರಳವಾಗಿ ವಿವರಿಸುವ ಯೋಗಾನಂದ್ ಚಂದ್ರಯ್ಯ ಅವರ ಲೇಖನ.
ಚಾಮರಾಜನಗರ ಹಳ್ಳಿಯಲ್ಲಿ ಪಕ್ಷಿವೀಕ್ಷಣೆ ಮಾಡುತ್ತಿರುವ ಸಂದರ್ಭ

           

    © ಧನರಾಜ್ ಎಂ.

 ಒಂದು ದಿನ ಬೆಳಗ್ಗೆ ಹೊತ್ತು, ಚಾಮರಾಜನಗರಹಳ್ಳಿಯೊಂದರಲ್ಲಿ ಪಕ್ಷಿವೀಕ್ಷಣೆ ಮಾಡುತ್ತಾ ಹೋಗುತ್ತಿದ್ದಾಗ, ಒಬ್ಬ ರೈತ ಕುತೂಹಲದಿಂದ ನನ್ನ ಬಳಿಗೆ ಬಂದು “ಯಾವೂರ್ ಸರ್ ನಿಮ್ದು, ಏನ್ ಮಾಡ್ತಾ ಇದ್ದೀರಾ?” ಎಂದು ಕೇಳಿದರು.

ಅವರ ಪ್ರಶ್ನೆಗೆ ನಾನು ವನ್ಯಜೀವಿ ಮತ್ತು ಪರಿಸರ ಅಧ್ಯಯನ ಮಾಡುತ್ತೇನೆ ಎಂದು ತಿಳಿಸಿದೆ. ನನ್ನ ಮಾತು ಕೇಳಿ ಮುಗುಳ್ನಗುತ್ತಾ, ಪ್ರಸ್ತುತ ನಮ್ಮ ರಾಜ್ಯದ ಅನೇಕ ರೈತರ ಮನದಲ್ಲಿ ಇರಬಹುದಾದ ಪ್ರಶ್ನೆಯೊಂದನ್ನು ನನ್ನ ಮುಂದಿಟ್ಟರು.

ನಾನು ‘ಕಾಡು ನಾಶ ಮಾಡುವುದೇ ಇದಕ್ಕೆಲ್ಲ ಕಾರಣ’ ಎನ್ನುವ ಉತ್ತರ ಸೂಕ್ತವಲ್ಲ ಎನಿಸಿ, ತಕ್ಷಣ ನಾನು ಇತ್ತೀಚೆಗಷ್ಟೇ ಅಧ್ಯಯನ ಮಾಡಿದ್ದ, ಭೂಮಿಯ ಅತ್ಯಂತ ಆಕರ್ಷಕ ಹವಾಮಾನ ವಿದ್ಯಮಾನಗಳಲ್ಲಿ ಒಂದಾದ ‘ಎಲ್ ನಿನೋ ಮತ್ತು ಲಾ ನಿನ್ನಾ’ (El nino and la nina) ವನ್ನು ಅರ್ಥವಾಗುವಂತೆ ತಿಳಿಸಲು ಮುಂದಾದೆ.

ಮಳೆ ಕರ್ನಾಟಕದ ಎಲ್ಲಾ ಕಡೆಯಲ್ಲಿಯೂ ಒಂದೇ ರೀತಿ ಆಗೋದಿಲ್ಲ. ನಮ್ಮ ರಾಜ್ಯ ವೈವಿಧ್ಯಮಯ ಭೂಪ್ರದೇಶಗಳಿಂದ ಕೂಡಿದೆ. ಪಶ್ಚಿಮ ಘಟ್ಟಗಳು, ಕರಾವಳಿಯ ಬಯಲು ಪ್ರದೇಶಗಳು, ಪ್ರಸ್ಥಭೂಮಿ ಇವೆಲ್ಲವೂ ಮಳೆ ಬೀಳುವ ವಿಧಾನದ ಮೇಲೆ ಪ್ರಭಾವ ಬೀರುತ್ತವೆ.

ಕರ್ನಾಟಕದ ಮಳೆ ಹಂಚಿಕೆ ಮತ್ತು ಪಶ್ಚಿಮ ಘಟ್ಟ ಪ್ರದೇಶ
    © ಧನರಾಜ್ ಎಂ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆ ಆಗುತ್ತದೆ. ಇದಕ್ಕೆ ಕಾರಣ ಅರಬ್ಬಿ ಸಮುದ್ರದಿಂದ ಬೀಸುವ ನೈರುತ್ಯ ಮುಂಗಾರು ಮಾರುತಗಳು ಪಶ್ಚಿಮ ಘಟ್ಟಗಳನ್ನು ಬಡಿದು ಮೇಲಕ್ಕೆ ಏರಿ ತಣ್ಣಗಾಗಿ ಮಳೆಯಾಗಿ ಸುರಿಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ವಿಜಯಪುರ, ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ತುಮಕೂರು ಮತ್ತು ರಾಮನಗರ ಮೊದಲಾದ ಜಿಲ್ಲೆಗಳು ಸೇರಿದಂತೆ ಕೆಲವು ಭಾಗಗಳು ಮಳೆ ನೆರಳು ಪ್ರದೇಶ ಎಂದು ಕರೆಯಲಾಗುತ್ತದೆ. ಪಶ್ಚಿಮ ಘಟ್ಟದ ಪರ್ವತಗಳನ್ನು ದಾಟಿದ ನಂತರ ಇಲ್ಲಿ ಮಳೆ ಕಡಿಮೆಯಾಗುತ್ತದೆ.

ಆದರೆ ಕೆಲವೊಮ್ಮೆ ಈ ಸಾಮಾನ್ಯ ನೈಸರ್ಗಿಕ ಪ್ರಕ್ರಿಯೆಯಲ್ಲೂ ನಾಟಕೀಯವಾಗಿ ಬದಲಾವಣೆ ಕಂಡುಬರುತ್ತದೆ. ಕೆಲವು ವರ್ಷಗಳು ತೀವ್ರ ಬರಗಾಲವನ್ನು, ಇನ್ನೂ ಕೆಲವು ವರ್ಷಗಳು ಪ್ರವಾಹ ಮತ್ತು ಭೂಕುಸಿತವನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಪೆಸಿಫಿಕ್ ಮಹಾಸಾಗರ.

ಎಲ್ ನಿನೋ ಮತ್ತು ಲಾ ನಿನಾ

ಎಲ್ ನಿನೋ ಲಾ ನಿನಾ ಹವಾಮಾನ ಚಕ್ರ - ಪೆಸಿಫಿಕ್ ಮಹಾಸಾಗರ
© NEEF

ಫೆಸಿಫಿಕ್ ಮಹಾಸಾಗರ ದಕ್ಷಿಣ ಅಮೇರಿಕಾದಿಂದ ಆಸ್ಟ್ರೇಲಿಯಾದವರೆಗೂ ವಿಸ್ತರಿಸಿರುವ ಒಂದು ಬೃಹತ್ ನೀರಿನ ಪ್ರದೇಶ. ಈ ಬೃಹತ್ ಸಾಗರದ ಉಷ್ಣತೆಯು ಇಡೀ ಭೂಗ್ರಹದ ಗಾಳಿ, ಮೋಡ ಮತ್ತು ಮಳೆಯ ಮೇಲೆ ಪ್ರಭಾವ ಬೀರುತ್ತದೆ.

‘ಎಲ್ ನಿನೋ ಮತ್ತು ಲಾ ನಿನಾ’ ಒಂದು ಬಗೆಯ ನೈಸರ್ಗಿಕ ಹವಾಮಾನ ಚಕ್ರ. ಮೊದಲನೆಯದು ಎಲ್ ನಿನೋ – ತಾಪಮಾನ ಏರಿಕೆಯ ಹಂತ. ಎಲ್ ನಿನೋ ಸಮಯದಲ್ಲಿ ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರವು ಎಂದಿಗಿಂತಲೂ ಬೆಚ್ಚಗಿರುತ್ತದೆ. ಇದು ವಾತಾವರಣ ಪರಿಚಲನೆಯ ದಿಕ್ಕು ಮತ್ತು ಬಲವನ್ನು ಬದಲಾಯಿಸುತ್ತದೆ. ಪರಿಣಾಮವಾಗಿ ಭಾರತದ ಮುಂಗಾರು ದುರ್ಬಲವಾಗುತ್ತದೆ.

ಕರ್ನಾಟಕ ಸೇರಿದಂತೆ ಭಾರತದ ಅನೇಕ ಭಾಗಗಳಲ್ಲಿ ಕಡಿಮೆ ಮಳೆ, ಮುಂಗಾರು ವಿಳಂಬವಾಗುವುದು, ದೀರ್ಘಕಾಲದ ಶುಷ್ಕ ಅವಧಿಗಳು, ಬರಗಾಲ ಜಲಾಶಯಗಳು ಮತ್ತು ನದಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುವ ಕಾರಣ ಕೃಷಿ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ.

 ಲಾ ನಿನಾ – ತಂಪಾಗಿಸುವ ಹಂತ

ಲಾ ನಿನಾ ತಂಪಾಗಿಸುವ ಹಂತ - ಬಲಗೊಂಡ ಮುಂಗಾರು ಮಳೆ
    © ಧನರಾಜ್ ಎಂ.

ಲಾ ನಿನಾ, ಎಲ್ ನಿನೋಗೆ ವಿರುದ್ಧವಾದ ಹಂತ. ಪೆಸಿಫಿಕ್ ಮಹಾಸಾಗರವು ಸಾಮಾನ್ಯಕ್ಕಿಂತ ಹೆಚ್ಚು ತಂಪಾಗಿರುತ್ತದೆ.  ಪೂರ್ವ ಮಾರುತಗಳನ್ನು ಬಲಪಡಿಸಿ, ಭಾರತದ ಮುಂಗಾರನ್ನು ಚುರುಕುಗೊಳಿಸುತ್ತದೆ. ಇದರ ಪರಿಣಾಮವಾಗಿ ಉತ್ತಮ ಮುಂಗಾರು ಮಳೆಯಾಗಿ, ನದಿಗಳ ಹರಿವು ಹೆಚ್ಚುತ್ತದೆ. ದೀರ್ಘ ಮಳೆಗಾಲದ ಪರಿಣಾಮ ಅಂತರ್ಜಲ ಸುಧಾರಿಸಿ, ಕೃಷಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

 ಆದರೆ ಕೆಲವೊಮ್ಮೆ ಅತಿಯಾದ ಮಳೆಯು ಭೂಕುಸಿತ ಮತ್ತು ಬೆಳೆ ಹಾನಿಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಕರ್ನಾಟಕದ ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಭಾಗಗಳಲ್ಲಿ ಇದು ಸಾಮಾನ್ಯ.

ಎಲ್ ನಿನೋ ಮತ್ತು ಲಾ ನಿನಾ ಮಳೆಯನ್ನು ಸಮವಾಗಿ ವಿತರಿಸುವುದಿಲ್ಲ ಬದಲಾಗಿ ಅವು ವಾತಾವರಣದಲ್ಲಿನ ತೇವಾಂಶವನ್ನು ನಿಯಂತ್ರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.  ತೇವಾಂಶವುಳ್ಳ ಗಾಳಿಯನ್ನು ಮೇಲಕ್ಕೆ ಎತ್ತುವುದು ಮತ್ತು ನಿರ್ಬಂಧಿಸುವುದು, ಗಾಳಿಯ ದಿಕ್ಕು, ಅರೇಬಿಯನ್ ಸಮುದ್ರ ಅಥವಾ ಬಂಗಾಳಕೊಲ್ಲಿಯ ಮೇಲೆ ಕಡಿಮೆ ಒತ್ತಡ ವ್ಯವಸ್ಥೆಗಳು, ಚಂಡಮಾರುತಗಳು, ಸ್ಥಳೀಯ ತಾಪಮಾನವು ಕಾಡುಗಳು ಮತ್ತು ಕಣಿವೆಗಳ ಮೋಡ ರಚನೆಗೆ ಕಾರಣವಾಗಿ ಈ ಎಲ್ಲಾ ಅಂಶಗಳು ಒಟ್ಟಾಗಿ ಕಾರ್ಯನಿರ್ವಹಿಸಿ ಮಳೆಯ ಹಂಚಿಕೆಯ ಮೇಲೆ ಪ್ರಭಾವ ಬೀರುತ್ತದೆ.

ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುವ ಮಳೆ ಪ್ರಮಾಣ - ಕರ್ನಾಟಕ
    © ಧನರಾಜ್ ಎಂ.

ಇದರ ಪರಿಣಾಮವಾಗಿ, ಒಂದು ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ 300 ಮಿಲಿಮೀಟರ್ ಮಳೆಯಾದರೆ ಕೇವಲ 100 ಕಿಲೋಮೀಟರ್ ದೂರದಲ್ಲಿನ ಮತ್ತೊಂದು ಜಿಲ್ಲೆಯಲ್ಲಿ ಮಳೆಯ ಸುಳಿವೇ ಇರುವುದಿಲ್ಲ. ಹವಾಮಾನ ಬದಲಾವಣೆಯು ಪರಿಸ್ಥಿತಿಯನ್ನು ಹೆಚ್ಚು ಜಟಿಲಗೊಳಿಸುತ್ತದೆ.

ಹವಾಮಾನ ಬದಲಾವಣೆಯು ಎಲ್-ನಿನೋ ಅಥವಾ ಲಾ-ನಿನಾವನ್ನು ಸೃಷ್ಟಿಸುವುದಿಲ್ಲ; ಆದರೆ ಹವಾಮಾನ ಬದಲಾವಣೆಯಿಂದ ಇವುಗಳು ಪರಿಸರದ ಮೇಲೆ ಉಂಟು ಮಾಡುವ ಪರಿಣಾಮವನ್ನು ಹೆಚ್ಚಿಸಲು ಮತ್ತು ಹವಾಮಾನವನ್ನು ಹೆಚ್ಚು ಅನಿರೀಕ್ಷಿತಗೊಳಿಸಲು ಕಾರಣವಾಗಿವೆ.

ಆದ್ದರಿಂದ ಹವಾಮಾನ ಬದಲಾವಣೆಯನ್ನು ಅರ್ಥಮಾಡಿಕೊಳ್ಳುವುದು ಕೇವಲ ವಿಜ್ಞಾನಿಗಳ ಕೆಲಸ ಮಾತ್ರವಲ್ಲ. ನಾಗರಿಕರು, ರೈತರು ಎಲ್ಲರೂ ಹವಾಮಾನ ಬದಲಾವಣೆಯ ಮುನ್ಸೂಚನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಅನುಗುಣವಾಗಿ ಜೀವನ ನಡೆಸಬೇಕು. ನೀರಿನ ಸಂರಕ್ಷಣೆ, ಯಾವಾಗ ಯಾವ ಬೆಳೆಯನ್ನು ಬೆಳೆಸಬೇಕು, ಯಾವಾಗ ಯಾವ ಬೀಜ ಬಿತ್ತನೆ ಮಾಡಬೇಕು ಎಂಬುದನ್ನು ಅರಿತು ಕೃಷಿಕರು ಕೃಷಿ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಅರಣ್ಯ ಇಲಾಖೆಯವರು ಬರಗಾಲದ ಮುನ್ಸೂಚನೆಯನ್ನು ಅರಿತು ಕಾಡಿಗೆ ಬೀಳುವ ಬೆಂಕಿ ತಡೆಗಟ್ಟಲು ಸಿದ್ಧರಾಗಬೇಕು. ಮೀನುಗಾರರು ಬದಲಾಗುವ ಸಾಗರ ಸ್ಥಿತಿಗತಿಗಳನ್ನು ಅರಿತು ಮೀನುಗಾರಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ವನ್ಯಜೀವಿ ಸಂಶೋಧಕರು ಪ್ರಾಣಿಗಳ ಚಲನೆ, ಆಹಾರ ಲಭ್ಯತೆ, ಆವಾಸಸ್ಥಾನದ ಆಯ್ಕೆಯಲ್ಲಿನ ಬದಲಾವಣೆ ಮತ್ತು ಸಂತಾನೋತ್ಪತ್ತಿ ಸಮಯದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಬಹುದು; ಸಾಮಾನ್ಯ ಜನರು ನೀರಿನ ಬಳಕೆಯನ್ನು ಅರಿತವರಾಗಿ ಸ್ಥಳೀಯ ಜಲಮೂಲಗಳನ್ನು ರಕ್ಷಿಸುವ ಮೂಲಕ ಪ್ರಯೋಜನ ಪಡೆಯಬಹುದು.

ಹವಾಮಾನ ಬದಲಾವಣೆಯ ಪರಿಣಾಮ - ಕೃಷಿ ಮತ್ತು ವನ್ಯಜೀವಿ
    © ಧನರಾಜ್ ಎಂ.

 ಒಟ್ಟಾರೆಯಾಗಿ, ಮಳೆ ಹಂಚಿಕೆ ಬದಲಾದಾಗ ಪ್ರಕೃತಿಯಲ್ಲಿ ಉಳಿದೆಲ್ಲವೂ ಬದಲಾಗುತ್ತದೆ. ಮರಗಳಲ್ಲಿ ಹೂವು ಅರಳುವ ಸಮಯ, ಕೀಟಗಳು ಹೊರಹೊಮ್ಮುವ ಸಮಯ, ಕೀಟಗಳನ್ನು ಭಕ್ಷಿಸುವ ಕಪ್ಪೆಗಳು ಮತ್ತು ಪಕ್ಷಿಗಳು ತಮ್ಮ ಸಂತಾನೋತ್ಪತ್ತಿ ಸಮಯವನ್ನು ಬದಲಾಯಿಸಿಕೊಳ್ಳುತ್ತವೆ.  ಹೊಳೆಗಳು ಒಣಗಿದಾಗ ಅಥವಾ ಪ್ರವಾಹ ಹೆಚ್ಚಾದಾಗ ಕಾಡು ಪ್ರಾಣಿಗಳು ಆಹಾರವನ್ನು ಹುಡುಕುತ್ತಾ ನಾಡಿನೆಡೆಗೆ ಮುಖ ಮಾಡುವ ಕಾರಣ ಮಾನವ- ವನ್ಯ ಜೀವಿ ಸಂಘರ್ಷ ಹೆಚ್ಚುತ್ತದೆ.

ಆದ್ದರಿಂದ ಮಳೆ ಹಂಚಿಕೆಯಲ್ಲಿನ ಬದಲಾವಣೆ ಕೇವಲ ಹವಾಮಾನ ಬದಲಾವಣೆಯ ಘಟನೆ ಮಾತ್ರವಲ್ಲದೆ ಇಡೀ ಪರಿಸರ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಪ್ರಾಕೃತಿಕ ಘಟನೆಯಾಗಿದೆ.

ನನ್ನ ಈ ಮಾತುಗಳನ್ನು ಕೇಳಿದ ರೈತ ಬಹಳ ಖುಷಿಯಿಂದ ತಾನು ಬಿ. ಎಸ್ಸಿ ಸಸ್ಯಶಾಸ್ತ್ರವನ್ನು ಅರ್ಧದಲ್ಲೇ ಕೈ ಬಿಟ್ಟು ಕೃಷಿಯನ್ನು ನಂಬಿದವನು ಎಂದು ತಿಳಿಸಿದಾಗ ನನಗೂ ಆಶ್ಚರ್ಯವಾಯಿತು.

ಅವನು ಮುಂದಿನ ಬಾರಿ ನಾನು ಎಲ್ ನಿನೋ ಅಥವಾ ಲಾ ನಿನಾ ಪದಗಳನ್ನು ಕೇಳಿದರೆ ಖಂಡಿತ ಅದು ನಮ್ಮ ಊರು ಅಥವಾ ಜಿಲ್ಲೆಯ ಸಮಸ್ಯೆ ಮಾತ್ರವಲ್ಲದೆ ಇಡೀ ವಿಶ್ವದ ಸಮಸ್ಯೆ ಎಂದು ಭಾವಿಸುವುದರ ಜೊತೆಗೆ ಇದು ಸಾವಿರಾರು ಕಿಲೋಮೀಟರ್ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನು ಅವಲಂಬಿಸಿದೆ ಎಂಬುದರ ಎಚ್ಚರಿಕೆ ಗಂಟೆಯನ್ನು ನೀಡುತ್ತದೆ ಎಂದು ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿ ತನ್ನ ಮುಂದಿನ ಕೃಷಿ ಕೆಲಸಗಳಿಗೆ ಹೊರಟ.

ಕೃಷಿ ಕೆಲಸಕ್ಕೆ ಹೊರಟ ರೈತ - ಚಾಮರಾಜನಗರ ಜಿಲ್ಲೆ
    © ಧನರಾಜ್ ಎಂ.

ಲೇಖನ: ಯೋಗಾನಂದ್ ಚಂದ್ರಯ್ಯ
ಚಾಮರಾಜನಗರ
ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.