ತಾಯಿಯೇ ಅತ್ಯುತ್ತಮ ಶಿಕ್ಷಕಿ
© ಗೋಪಾಲಕೃಷ್ಣ ಸಿ.
ಕಳೆದ ಬೇಸಿಗೆಯ ಒಂದು ಬೆಳಗ್ಗೆ, ಭದ್ರಾ ಜಲಾಶಯದ ಅಂಚಿನಲ್ಲಿನ ರಿವರ್ ಟರ್ನ್ ರೆಸಾರ್ಟ್-ನ ಕಡೆಯಿಂದ ಸಫಾರಿ ನಡೆಸುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ದೃಶ್ಯ ಇಂದಿಗೂ ಮರೆಯಲಾಗದು. ನೀರಿನ ಮಟ್ಟ ಕುಸಿದಿದ್ದ ಜಲಾಶಯದ ಅಂಚಿನಲ್ಲಿ ತಾಯಿ ಚಿರತೆ (Panthera pardus)ಯೊಂದು ತನ್ನ ಮೂರು ಮರಿಗಳೊಂದಿಗೆ ಸಂಚರಿಸುತ್ತಿತ್ತು. ಆ ಕ್ಷಣದಿಂದ ಆರಂಭವಾದ ಅವುಗಳ ವೀಕ್ಷಣೆ ಸುಮಾರು ಒಂದು ವರ್ಷದ ಕಾಲ ಮುಂದುವರಿಯಿತು. ಆ ಅವಧಿಯಲ್ಲಿ ಆ ತಾಯಿ ತನ್ನ ಮರಿಗಳಿಗೆ ಬದುಕಿನ ಪಾಠಗಳನ್ನು ಹೇಗೆ ಕಲಿಸಿದಳು ಎಂಬುದನ್ನು ನೋಡುವ ಅಪರೂಪದ ಅವಕಾಶ ನನಗೆ ದೊರೆಯಿತು.
ಬೇಸಿಗೆಯಾದ್ದರಿಂದ ದಿನ ಕಳೆದಂತೆ ಜಲಾಶಯದ ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗುತ್ತಾ, ಕಲ್ಲಿನ ಬಂಡೆಗಳು, ಮಣ್ಣಿನ ಅಂಚುಗಳು ಮತ್ತು ಕಿರಿದಾದ ಅರಣ್ಯ ಮಾರ್ಗಗಳು ಗೋಚರವಾಗತೊಡಗಿದವು. ಬಿದಿರಿನ ಪೊದೆಗಳು, ತೇಗದ ಮರಗಳು (Tectona grandis), ಕಿಂಡಲ್ ಮರಗಳು (Terminalia paniculata) ಮತ್ತು ತೋಟದ ಅಂಚುಗಳು ಸೇರಿ ರೂಪಿಸಿದ್ದ ಈ ವೈವಿಧ್ಯಮಯ ಭೂದೃಶ್ಯ ಚಿರತೆ ಕುಟುಂಬಕ್ಕೆ ಆಶ್ರಯವಾಗಿತ್ತು.
ಈ ಕುಟುಂಬದಲ್ಲಿ ಎರಡು ಸಾಮಾನ್ಯ ಮರಿಗಳು ಮತ್ತು ಒಂದು ಮೆಲನಿಸ್ಟಿಕ್ ಮರಿ (ಮೆಲನಿನ್ ವರ್ಣದ್ರವ್ಯ ಹೆಚ್ಚಿರುವುದರಿಂದ ಕಪ್ಪು ಬಣ್ಣ ಹೊಂದಿರುವ, ಜನಪ್ರಿಯವಾಗಿ “ಕಪ್ಪು ಪ್ಯಾಂಥರ್” ಎಂದು ಕರೆಯಲ್ಪಡುವ ಚಿರತೆ) ಇತ್ತು. ಮೊದಲ ಬಾರಿ ಆ ಕಪ್ಪು ಮರಿಯನ್ನು ನೋಡಿದಾಗ ಅದು ವಿಶೇಷವಾಗಿ ನನ್ನ ಗಮನವನ್ನು ಸೆಳೆಯಿತು. ಅದರ ಕಪ್ಪು ಬಣ್ಣದ ದೇಹ, ಬಿದಿರಿನ ನೆರಳು ಮತ್ತು ಕಲ್ಲುಗಳ ಕತ್ತಲೆಯೊಂದಿಗೆ ಎಷ್ಟು ಸಹಜವಾಗಿ ಬೆರೆಯುತ್ತಿತ್ತೆಂದರೆ ಕೆಲವೇ ಕ್ಷಣಗಳಲ್ಲಿ ಅದು ಸಂಪೂರ್ಣವಾಗಿ ಕಣ್ಮರೆಯಾಗುತ್ತಿತ್ತು.
ಆರಂಭದಿಂದಲೇ ತಾಯಿಗೆ ತನ್ನ ಪ್ರತಿಯೊಂದು ಮರಿಯನ್ನೂ ಗುರುತಿಸುವಲ್ಲಿ ಯಾವುದೇ ತೊಂದರೆ ಇರಲಿಲ್ಲ. ಮನುಷ್ಯನ ಕಣ್ಣಿಗೆ ಕಪ್ಪು ಮರಿ ವಿಭಿನ್ನವಾಗಿ ಕಾಣಿಸಿಕೊಂಡರೂ, ತಾಯಿಗೆ ಅವೆಲ್ಲ ಒಂದೇ. ವಾಸನೆ, ಧ್ವನಿ ಮತ್ತು ಚಲನೆಗಳ ಮೂಲಕ ಅವಳು ಮರಿಗಳನ್ನು ಗುರುತಿಸುತ್ತಿದ್ದಳು. ನನ್ನ ಗಮನ ಸೆಳೆದ ಮತ್ತೊಂದು ಸಂಗತಿಯೆಂದರೆ, ಕಪ್ಪು ಮರಿ ತನ್ನ ಒಡಹುಟ್ಟಿದವರಿಗಿಂತ ಹೆಚ್ಚು ಕುತೂಹಲ ಮತ್ತು ಧೈರ್ಯ ತೋರಿಸುತ್ತಿದ್ದುದು. ಒಬ್ಬಂಟಿಯಾಗಿ ಬಿದಿರಿನ ಪೊದೆಗಳೊಳಗೆ ಅಥವಾ ಬಂಡೆಗಳ ನಡುವೆ ಸ್ವಲ್ಪ ದೂರ ಹೋಗಿ ಅನ್ವೇಷಣೆ ನಡೆಸುವಲ್ಲಿ ಅದು ಹೆದರುತ್ತಿರಲಿಲ್ಲ.
ಮರಿಗಳ ಬಾಲ್ಯ ಆಟದಲ್ಲೇ ಕಳೆಯಿತು. ಜಲಾಶಯದ ಅಂಚಿನಲ್ಲಿ ತೆರೆದುಕೊಂಡಿದ್ದ ಕಲ್ಲಿನ ಬಂಡೆಗಳ ಮೇಲೆ ಓಡಾಡುವುದು, ಪರಸ್ಪರ ಬೆನ್ನಟ್ಟುವುದು, ಅಸಮ ನೆಲದ ಮೇಲೆ ಸಮತೋಲನ ಸಾಧಿಸಲು ಪ್ರಯತ್ನಿಸುವುದು – ಇವೆಲ್ಲವೂ ಅವುಗಳ ದೈನಂದಿನ ಚಟುವಟಿಕೆಗಳಾಗಿದ್ದವು. ಆರಂಭದಲ್ಲಿ ಆಟದಂತೆ ಕಂಡ ಈ ವರ್ತನೆಗಳು ನಂತರ ಅವುಗಳ ಚುರುಕುತನ ಮತ್ತು ಸಮನ್ವಯವನ್ನು ಹೆಚ್ಚಿಸುವ ತರಬೇತಿಗಳಾಗಿ ಪರಿಣಮಿಸಿದವು.

ಕಾಡಿನಲ್ಲಿ ಬದುಕುಳಿಯುವ ಪಾಠಗಳನ್ನು ತಾಯಿ ಮೌನವಾಗಿ ಕಲಿಸುತ್ತಿದ್ದಳು. ಅನೇಕ ಬಾರಿ ತಾಯಿ ಬಿದಿರು ಮತ್ತು ತೇಗದ ಮರಗಳ ನಡುವೆ ನಿಧಾನವಾಗಿ ಸಾಗುತ್ತಾ ಹೋಗಿ ಹಠಾತ್ತನೆ ನಿಂತು ಬಿಡುವುದನ್ನು ಗಮನಿಸಿದ್ದೇನೆ. ಆ ಕ್ಷಣದಲ್ಲೇ ಮರಿಗಳೂ ಚಲನೆಯಿಲ್ಲದೆ ಸ್ಥಬ್ಧವಾಗುತ್ತಿದ್ದವು. ತಾಯಿಯ ಪ್ರತಿಯೊಂದು ಚಲನೆಯನ್ನೂ ಅವು ಗಮನಿಸಿ ಅನುಕರಿಸುತ್ತಿದ್ದವು. ಹೀಗೆ ಅವು ಬೇರೆ ಜೀವಿಗಳಿಗೆ ಕಾಣಿಸಿಕೊಳ್ಳದ ಕಲೆಯನ್ನು ಕಲಿಯುತ್ತಿದ್ದವು.
ಕೆಲವೊಮ್ಮೆ ಮರಗಳ ಮೇಲಾವರಣದಲ್ಲಿ ಕುಳಿತಿದ್ದ ಮುಸುವಗಳ ಎಚ್ಚರಿಕೆಯ ಕೂಗು ಕೇಳಿಬರುತ್ತಿತ್ತು. ಇನ್ನೊಮ್ಮೆ ಚುಕ್ಕೆ ಜಿಂಕೆಗಳ ಎಚ್ಚರಿಕೆಯ ಕೂಗುವಿಕೆ ಕಾಡಿನ ನಿಶ್ಶಬ್ದತೆಯನ್ನು ಮುರಿಯುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಮರಿಗಳು ತಕ್ಷಣ ನೆಲಕ್ಕೆ ಅಂಟಿಕೊಂಡು ಮೌನವಾಗುತ್ತಿದ್ದವು. ಅಪಾಯವನ್ನು ಎದುರಿಸುವುದಕ್ಕಿಂತ ಮೊದಲು ಅದನ್ನು ಗುರುತಿಸುವುದು ಎಷ್ಟು ಮುಖ್ಯ ಎಂಬುದನ್ನು ಅವು ತಾಯಿಯಿಂದಲೇ ಕಲಿಯುತ್ತಿದ್ದವು.
ಭದ್ರಾ, ಚಿರತೆಗಳಿಗೆ ಸುಲಭವಾದ ನೆಲೆಯಲ್ಲ. ಇದು ಹುಲಿಗಳ ಪ್ರಾಬಲ್ಯವಿರುವ ಕಾಡು. ಜೊತೆಗೆ ಇತರ ಚಿರತೆಗಳು ಮತ್ತು ಕೆನ್ನಾಯಿಗಳ ಹಿಂಡುಗಳೂ ಇಲ್ಲಿವೆ. ಅನೇಕ ಬಾರಿ ಮರಿಗಳು ವಿಶ್ರಾಂತಿ ಪಡೆದ ಪ್ರದೇಶಗಳ ಸಮೀಪ ಹೊಸ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡಿದ್ದೇನೆ. ಇಂತಹ ಪರಿಸ್ಥಿತಿಗಳಲ್ಲಿ ತಾಯಿ ತನ್ನ ಮರಿಗಳನ್ನು ಆಗಾಗ ಸ್ಥಳಾಂತರಿಸುತ್ತಿದ್ದಳು.

ದಟ್ಟವಾದ ಬಿದಿರು, ಕಲ್ಲಿನ ಬಿರುಕುಗಳು, ಕಡಿದಾದ ಇಳಿಜಾರುಗಳು ಮತ್ತು ದೊಡ್ಡ ಪರಭಕ್ಷಕಗಳಿಗೆ ಪ್ರವೇಶಿಸಲು ಕಷ್ಟವಾಗುವ ಗಿಡಗಂಟಿಗಳು ಅವಳ ನೆಚ್ಚಿನ ಆಶ್ರಯಸ್ಥಾನಗಳಾಗಿದ್ದವು. ಅಪಾಯದ ಸುಳಿವು ಸಿಕ್ಕಾಗ ಅವಳು ಮರಿಗಳನ್ನು ಒಂದೊಂದಾಗಿ ಕುತ್ತಿಗೆಯಿಂದ ಹಿಡಿದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಳು. ಈ ಸ್ಥಳಾಂತರಗಳು ಕೇವಲ ಆಶ್ರಯ ಬದಲಾವಣೆಗಳಲ್ಲ; ಅವು ಬದುಕುಳಿಯುವ ಮಹತ್ವದ ಪಾಠಗಳಾಗಿದ್ದವು.
ಬೇಟೆಯ ಪಾಠಗಳು ಸಹ ನಿಧಾನವಾಗಿ ಆರಂಭವಾದವು. ಕೀಟಗಳು, ಅಳಿಲುಗಳು ಮತ್ತು ಸಣ್ಣ ಪಕ್ಷಿಗಳನ್ನು ಬೆನ್ನಟ್ಟುವ ಪ್ರಯತ್ನಗಳನ್ನು ಮರಿಗಳು ಆಗಾಗ ಮಾಡುತ್ತಿದ್ದುದು ಕಂಡುಬಂತು. ಹೆಚ್ಚಿನ ಪ್ರಯತ್ನಗಳು ವಿಫಲವಾಗುತ್ತಿದ್ದರೂ, ಅವು ತಾಳ್ಮೆ, ಗಮನ ಮತ್ತು ಸಮತೋಲನವನ್ನು ಕಲಿಯುತ್ತಿದ್ದವು. ಯಶಸ್ವಿ ಬೇಟೆಯ ನಂತರ ತಾಯಿ ತನ್ನ ಆಹಾರವನ್ನು ದಟ್ಟವಾದ ಪೊದೆಗಳಿಗೆ ಅಥವಾ ಮರದ ಕೊಂಬೆಗಳ ಮೇಲೆ ಎಳೆದುಕೊಂಡು ಹೋಗುತ್ತಿದ್ದಳು. ಭದ್ರಾದಂತಹ ಪ್ರದೇಶದಲ್ಲಿ ಇದು ಅತ್ಯಗತ್ಯ. ಏಕೆಂದರೆ ಕಾಡುನಾಯಿಗಳು ಅಥವಾ ಹುಲಿಗಳು ಕ್ಷಣಾರ್ಧದಲ್ಲಿ ಆಹಾರವನ್ನು ಕಸಿದುಕೊಳ್ಳಬಹುದು.

ಕಾಲಕ್ರಮೇಣ ಮರಿಗಳು ಬಲಿಷ್ಠವಾಗತೊಡಗಿದವು. ವಿಶೇಷವಾಗಿ ಕಪ್ಪು ಮರಿ ಬೆಳಗಿನ ಮತ್ತು ಸಂಜೆಯ ಮಸುಕಿನ ಬೆಳಕಿನಲ್ಲಿ ಬಹುತೇಕ ಅಗೋಚರವಾಗುತ್ತಿತ್ತು. ಅದನ್ನು ಗಮನಿಸುವುದು ನನಗೆ ಪ್ರತಿಬಾರಿಯೂ ಒಂದು ಸವಾಲಾಗಿತ್ತು.
ಮರಿಗಳು ದೊಡ್ಡದಾಗುತ್ತಿದ್ದಂತೆ ತಾಯಿಯ ವರ್ತನೆಯಲ್ಲೂ ಬದಲಾವಣೆ ಕಂಡುಬಂತು. ಅವಳು ಕಡಿಮೆ ರಕ್ಷಣಾತ್ಮಕಳಾದಳು. ಮರಿಗಳ ಕರೆಗೆ ತಕ್ಷಣ ಪ್ರತಿಕ್ರಿಯಿಸುವುದನ್ನು ನಿಧಾನವಾಗಿ ಕಡಿಮೆ ಮಾಡಿದಳು. ಮೊದಲಿಗೆ ಇದು ಮರಿಗಳಿಂದ ದೂರವಾಗುತ್ತಿರುವಂತೆ ಕಂಡರೂ, ವಾಸ್ತವದಲ್ಲಿ ಅದು ಸ್ವಾತಂತ್ರ್ಯದ ತರಬೇತಿಯಾಗಿತ್ತು.
ಚಿರತೆಗಳು ಏಕಾಂಗಿಯಾಗಿ ಬದುಕುವ ಪ್ರಾಣಿಗಳು. ಆದ್ದರಿಂದ ಮರಿಗಳು ತಮ್ಮದೇ ಪ್ರದೇಶಗಳನ್ನು ಹುಡುಕುವ ದಿನಕ್ಕಾಗಿ ಸಿದ್ಧರಾಗಬೇಕಾಗುತ್ತದೆ. ಅವು ತಾಯಿಯ ಮೂಲ ಪ್ರದೇಶದಿಂದ ದೂರ ಸಾಗಲು ಪ್ರಾರಂಭಿಸಿದವು. ಹೊಸ ಮಾರ್ಗಗಳನ್ನು ಕಂಡುಕೊಂಡವು. ಅಪರಿಚಿತ ಪ್ರದೇಶಗಳನ್ನು ಅನ್ವೇಷಿಸಿದವು. ಬೇರ್ಪಡುವಿಕೆಯಂತೆ ಕಾಣುತ್ತಿದ್ದ ಈ ಹಂತ ವಾಸ್ತವದಲ್ಲಿ ಸ್ವಾವಲಂಬಿ ಜೀವನದ ಆರಂಭವಾಗಿತ್ತು.
ಒಂದು ವರ್ಷದ ಅವಲೋಕನದ ಕೊನೆಯಲ್ಲಿ ನನಗೆ ಸ್ಪಷ್ಟವಾದ ಒಂದು ಸತ್ಯವೆಂದರೆ – ಕಾಡಿನಲ್ಲಿ ತಾಯಿಯೇ ಅತ್ಯುತ್ತಮ ಶಿಕ್ಷಕಿ. ಆಟದ ಮೂಲಕ, ಮೌನದ ಮೂಲಕ, ಅಪಾಯದ ಮೂಲಕ ಮತ್ತು ಅನುಭವದ ಮೂಲಕ ಅವಳು ತನ್ನ ಮರಿಗಳಿಗೆ ಬದುಕಿನ ಪಾಠಗಳನ್ನು ಕಲಿಸುತ್ತಾಳೆ. ಭದ್ರಾದ ಕಾಡಿನಲ್ಲಿ ನಾನು ಕಂಡ ಆ ಕುತೂಹಲಭರಿತ ಮರಿಗಳು, ಕಾಲಕ್ರಮೇಣ ಆತ್ಮವಿಶ್ವಾಸಿ ಯುವ ಚಿರತೆಗಳಾಗಿ ರೂಪುಗೊಂಡವು.
ಅವುಗಳಲ್ಲಿ ವಿಶೇಷವಾಗಿ ನನ್ನ ಮನಸ್ಸಿನಲ್ಲಿ ಉಳಿದಿರುವುದು ಆ ಕಪ್ಪು ಮರಿ. ನೆರಳಿನೊಳಗೆ ಕರಗಿ ಹೋಗುವ ಅದರ ರೂಪ, ಅದರ ಧೈರ್ಯ ಮತ್ತು ಕುತೂಹಲ ಹಾಗೂ ಅದರ ಹಿಂದೆ ಸದಾ ಕಾವಲಾಗಿ ನಿಂತಿದ್ದ ತಾಯಿ – ಇವೆಲ್ಲವೂ ನನಗೆ ಪ್ರಕೃತಿಯ ಮಹಾನ್ ಪಾಠವೊಂದನ್ನು ನೆನಪಿಸುತ್ತವೆ:
ಕಾಡಿನಲ್ಲಿ ಬದುಕನ್ನು ಕಲಿಸುವ ಮೊದಲ ಗುರು ತಾಯಿಯೇ.
ಲೇಖನ: ಗೋಪಾಲಕೃಷ್ಣ ಸಿ.
ಮೈಸೂರು ಜಿಲ್ಲೆ



