ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಹುಲಿ-ಜೀರುಂಡೆಗಳ ವಿಸ್ಮಯ ಲೋಕ – 3

ಕಳೆದ ಸಂಚಿಕೆಯಲ್ಲಿ ಹುಲಿ ಜೀರುಂಡೆಗಳ ‘ಮರಿ’ ಹಂತದಲ್ಲಿನ ವಿಸ್ಮಯಕಾರಿ ವಿವರಗಳನ್ನು ಓದಿದ್ದೀರಿ. ಈಗ ಅವು ಹುಳದಿಂದ ಹಾರುವ ಕೀಟಗಳಾದಾಗ ಅವನ್ನು ಎಲ್ಲಿ ಕಾಣಬಹುದು ಎಂಬ ಕುತೂಹಲ ನಿಮಗಿದ್ದರೆ, ಈ ಲೇಖನ ಓದಿ.
ಹುಲಿ ಜೀರುಂಡೆ (Tiger Beetle) - ಹುಲಿ ಜೀರುಂಡೆ (Tiger Beetle) - ಜೈಕುಮಾರ್ ಆರ್ ಅವರ ಛಾಯಾಚಿತ್ರ

    © ಜೈಕುಮಾರ್ ಆರ್.

ಕಳೆದ ಸಂಚಿಕೆಯಲ್ಲಿ ಹುಲಿ ಜೀರುಂಡೆಗಳ ‘ಮರಿ’ ಹಂತದಲ್ಲಿನ ವಿಸ್ಮಯಕಾರಿ ವಿವರಗಳನ್ನು ಓದಿದ್ದೀರಿ. ಈಗ ಅವು ಹುಳದಿಂದ ಹಾರುವ ಕೀಟಗಳಾದಾಗ ಅವನ್ನು ಎಲ್ಲಿ ಕಾಣಬಹುದು ಎಂಬ ಕುತೂಹಲ ನಿಮಗೆ ಇದೆ ಅಲ್ಲವೇ? 

ಹುಲಿ ಜೀರುಂಡೆಯನ್ನು ಎಲ್ಲಿ ಕಾಣಬಹುದು ಅಥವಾ ಹುಡುಕಬೇಕೆಂದು ಯಾರಾದರೂ ಕೇಳಿದರೆ, ತಕ್ಷಣವೇ ನನ್ನ ಉತ್ತರ ನಿಮ್ಮ ಸುತ್ತಮುತ್ತ ನೋಡಿ ಎಂದು ಹೇಳುತ್ತೇನೆ! ಆದರೆ, ಇಲ್ಲಿ ಸ್ವಲ್ಪ ಕ್ಲಿಷ್ಟಕರವಾದ ಸಂಗತಿಯಿದೆ. ಎಲ್ಲಾ ಕಡೆ ಕಂಡರೂ ಅವುಗಳಿಗೆ ಸೂಕ್ತವಾದ ಋತುಮಾನಗಳಿವೆ, ಆವಾಸಸ್ಥಾನಗಳಿವೆ, ನಿರ್ದಿಷ್ಟವಾದ ಸಮಯದಲ್ಲಿ ಮಾತ್ರ ಅವು ಸಕ್ರಿಯವಾಗಿರುತ್ತವೆ.

ವಿಭಿನ್ನ ಪ್ರಭೇದದ ಹುಲಿ ಜೀರುಂಡೆಗಳು ಮಣ್ಣು, ತೇವಾಂಶ, ಸಸ್ಯವರ್ಗ, ಸೂರ್ಯನ ಬೆಳಕು, ತಾಪಮಾನ ಮತ್ತು ಬೇಟೆಯ ನಿರ್ದಿಷ್ಟ ಸಂಯೋಜನೆಗಳೊಂದಿಗೆ ಬೇರೆ ಬೇರೆಯಾಗುತ್ತವೆ. ಕೆಲವು ಪ್ರಭೇದದ ಹುಲಿ ಜೀರುಂಡೆಗಳು ನದಿಯ ಪಕ್ಕದಲ್ಲಿ ವಾಸಿಸಬಹುದು. ಕೆಲವು ತೆರೆದ ಮರಳಿನ ನೆಲದ ಮೇಲೆ, ಇನ್ನು ಕೆಲವು ಕಾಡಿನ ನೆರಳಿನ ಕಾಲುದಾರಿಯನ್ನು ಇಷ್ಟಪಡಬಹುದು. ಕೆಲವು ಕರಾವಳಿ ತೀರದಲ್ಲಿ, ಇನ್ನೂ ಕೆಲವು ಪರ್ವತಗಳ ಎತ್ತರದ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತವೆ.

ಸಾಮಾನ್ಯವಾಗಿ ಕಾಣುವಂತಹ ಹುಲಿ ಜೀರುಂಡೆಗಳ ಆವಾಸಸ್ಥಾನಗಳ ಬಗ್ಗೆ ತಿಳಿಯೋಣ, ನೀವು ಆ ಆವಾಸಸ್ಥಾನಗಳಿಗೆ ಭೇಟಿ ಕೊಟ್ಟಾಗ ಅವುಗಳನ್ನು ಹುಡುಕಲು ಪ್ರಯತ್ನಿಸಬಹುದು.

ಸಮುದ್ರ ತೀರ ಪ್ರದೇಶ 

ಭಾರತವು ಸುಮಾರು 11098 ಕಿಲೋಮೀಟರ್ ಕಡಲ ತೀರವನ್ನು ಹೊಂದಿದೆ. ಈ ತೀರಪ್ರದೇಶವು ಸಾವಿರಾರು ಜೀವಿಗಳ ಆವಾಸಸ್ಥಾನವಾಗಿದೆ. ನಮ್ಮ ಈ ಕಡಲ ತೀರದಲ್ಲಿ ಎರಡು ಪ್ರತ್ಯೇಕವಾದ ಹುಲಿ ಜೀರುಂಡೆಗಳು ವಾಸಿಸುತ್ತವೆ. ಏಷ್ಯನ್ ಕೋಸ್ಟಲ್ ಟೈಗರ್ ಬೀಟಲ್ (Hypaetha biramosa) ಮತ್ತು ಫೋರ್-ಲೈನ್ಡ್ ಟೈಗರ್ ಬೀಟಲ್ (Hypaetha quadrilineata).

ಕರಾವಳಿ ಹುಲಿ ಜೀರುಂಡೆಗಳು ಕಠಿಣ ವಾತಾವರಣವನ್ನು ಎದುರಿಸಬೇಕಾಗುತ್ತದೆ. ಮರಳು ಅಸ್ಥಿರವಾಗಿರುತ್ತದೆ, ತಾಪಮಾನದಲ್ಲಿ ಏರಿಳಿತವಿರುತ್ತದೆ, ಸೂರ್ಯನ ಬೆಳಕು ತೀವ್ರವಾಗಿರುತ್ತದೆ. ವೇಗವಾಗಿ ಬದಲಾಗುವ ಮಳೆ, ಬಿರುಗಾಳಿ, ಚಂಡಮಾರುತ ತೇವಾಂಶದ ಲಭ್ಯತೆಗೆ ಆದಷ್ಟು ಬೇಗ ಹೊಂದಿಕೊಳ್ಳಬೇಕಾಗುತ್ತದೆ.

ಈ ಅಸ್ಥಿರ ಕಡಲತೀರದಲ್ಲಿ ಅಲೆಗಳು ಏರಿಳಿತವಾದಂತೆ ಈ ಜೀರುಂಡೆಗಳು ಅವುಗಳಿಗೆ ತಕ್ಕಂತೆ ಬೇಟೆಯಾಡುತ್ತವೆ, ನಿರ್ದಿಷ್ಟ ವಲಯದಲ್ಲಿ ಮಾತ್ರ ಜೀವಿಸುತ್ತವೆ. ಅಲೆ ಅಪ್ಪಳಿಸಿದಾಗ ಹಿಂದೆ ಸರಿಯುವ ಇವು ಅಲೆ ಹಿಮ್ಮೆಟ್ಟಿದ ತಕ್ಷಣ ಶರವೇಗದಲ್ಲಿ ತೇವಯುಕ್ತ ಮರಳಿಗೆ ಮರಳಿ ಅಲ್ಲಿನ ಕೀಟಗಳನ್ನು, ಮೃದುಚರ್ಮಿಗಳನ್ನು ಹಿಡಿದು ಭಕ್ಷಿಸುತ್ತವೆ. 

ಈ ಆವಾಸಸ್ಥಾನದ ಒಂದು ಸಣ್ಣ ಭಾಗವನ್ನು ನಾಶಪಡಿಸಿದರೂ ಅಥವಾ ಬದಲಾಯಿಸಿದರೂ ಹುಲಿ ಜೀರುಂಡೆಗಳ ಮೇಲೆ ನಮ್ಮ ಕಲ್ಪನೆಗಿಂತಲೂ ಹೆಚ್ಚಿನ ಪರಿಣಾಮಗಳನ್ನು ಬೀರಬಹುದು. ನಮಗೆ ಅದು “ಕೇವಲ ಮರಳು” ಆಗಿರಬಹುದು ಆದರೆ ಹುಲಿ ಜೀರುಂಡೆಗೆ, ಅದು ಇಡೀ ಪರಿಸರ ವ್ಯವಸ್ಥೆ!

ಕಡಲ ತೀರದಲ್ಲಿ ಕಂಡು ಬರುವ ಈ ಎರಡು ಪ್ರಭೇದದ ಜೀರುಂಡೆಗಳ ಮತ್ತೊಂದು ವಿಶೇಷವೆಂದರೆ ಇವುಗಳಿಗೆ ಋತಮಾನವಿಲ್ಲ; ವರ್ಷಾದ್ಯಂತ ಇವುಗಳನ್ನು ಕಾಣಬಹುದು.

ನದಿ ದಂಡೆಗಳು

ಹುಲಿ ಜೀರುಂಡೆಗಳನ್ನು ಹುಡುಕಲು ನದಿ ದಂಡೆಗಳು ಅತ್ಯಂತ ಆಸಕ್ತಿದಾಯಕ ಸ್ಥಳ. ನದಿಯು ನಿರಂತರವಾಗಿ ಹೊಸಹೊಸ ಆವಾಸಸ್ಥಾನವನ್ನು ಸೃಷ್ಟಿಸುತ್ತಿದೆ ಮತ್ತು ನಾಶಪಡಿಸುತ್ತಿದೆ. ನೀರಿನ ಮಟ್ಟ ಕಡಿಮೆಯಾದಾಗ ತಾಜಾ ಮರಳು, ಮಣ್ಣು ಮತ್ತು ಕಲ್ಲು-ಬಂಡೆಗಳು ತೆರೆದುಕೊಳ್ಳುತ್ತವೆ. ಈ ತೆರೆದ ಮೇಲ್ಮೈಗಳು ಹುಲಿ ಜೀರುಂಡೆಗಳಿಗೆ ಸೂಕ್ತವಾದ ಬೇಟೆಯಾಡುವ ಸ್ಥಳಗಳಾಗಿರುತ್ತವೆ. 

ನದಿಯ ವಿಭಿನ್ನ ಭಾಗಗಳನ್ನು ವಿಭಿನ್ನ ಹುಲಿ ಜೀರುಂಡೆಗಳು ಆಕ್ರಮಿಸಿಕೊಳ್ಳುತ್ತವೆ. ಕೀಟವಿಜ್ಞಾನಿ ಡಾ. ಬೆಳವಾಡಿ ವಿ. ವಿ ಮತ್ತು ಪರಿಸರಶಾಸ್ತ್ರಜ್ಞ-ಲೇಖಕರಾದ ಡಾ. ಕೆ. ಎನ್. ಗಣೇಶಯ್ಯನವರು ಒಂದು ಶ್ರೇಷ್ಠ ಅಧ್ಯಯನವನ್ನು ಕಾವೇರಿ ನದಿಯ ಮೇಕೆದಾಟು ಮರಳಿನ ದಿಣ್ಣೆಗಳ ಮೇಲೆ ಕೈಗೊಂಡಿದ್ದರು. ಅಲ್ಲಿ ಅವರು ಕೈಗೊಂಡ ಸಂಶೋಧನೆಯನ್ನು ಮುಂದೆ ಸವಿವರವಾಗಿ ಒಂದು ಅಂಕಣದಲ್ಲಿ ಬರೆಯುವೆ. 

ನದಿಯ ತೀರದಲ್ಲಿ ಸಾಮಾನ್ಯವಾಗಿ ಐದರಿಂದ ಆರು ಪ್ರಭೇದಗಳನ್ನು ಕಾಣಬಹುದು. ಅವು Calomera angulata, Myriochila distinguenda, Myriochila undulata, Cicindela sexpunctata, Calomera cardoni, Cylindera minuta. ಇವೆಲ್ಲವೂ ಅದು ಹೇಗೆ ಒಂದೇ ಕಡೆ ಜೀವಿಸುತ್ತವೆ? ಅದನ್ನು ಮೇಲೆ ತಿಳಿಸಿದ ಅಧ್ಯಯನವು ಉತ್ತರಿಸಬಲ್ಲದು.

ಹುಲಿ ಜೀರುಂಡೆ (Tiger Beetle) - ಹರೀಶ ಎ. ಎಸ್. ಅವರ ಛಾಯಾಚಿತ್ರ
    © ಹರೀಶ ಎ. ಎಸ್.

ಕಾಡು  

ಈಗ ತೆರೆದ ನದಿದಂಡೆಯನ್ನು ಬಿಟ್ಟು ಕಾಡಿಗೆ ನಡೆದು ಹೋದರೆ, ತಾಪಮಾನ ಇಳಿಯುತ್ತದೆ. ಸೂರ್ಯನ ಬೆಳಕು ತೇಪೆಗಳಾಗಿ ಒಡೆದಿರುತ್ತದೆ. ನೆಲವು ಎಲೆಗಳು, ಬೇರುಗಳು, ಕಲ್ಲುಗಳು ಮತ್ತು ಬಿದ್ದ ಕೊಂಬೆಗಳಿಂದ ಆವೃತಗೊಂಡಿರುತ್ತವೆ. ವೇಗವಾಗಿ ಓಡುವ ಹುಲಿ ಜೀರುಂಡೆಗೆ ಇದು ಯೋಗ್ಯವಲ್ಲದ ಸ್ಥಳ ಎಂದು ನೀವು ಭಾವಿಸಬಹುದು. ಆದರೆ ಕೆಲವು ಪ್ರಭೇದಗಳು ಈ ಪರಿಸ್ಥಿತಿಗಳಿಗೆ ಅನುಗುಣವಾಗಿಯೇ ವಿಕಸನಗೊಂಡಿವೆ ಎಂದರೆ ತಪ್ಪಿಲ್ಲ. ಹಲವಾರು ಪ್ರಭೇದಗಳು ಅರಣ್ಯದ ನೆಲ, ಕುರುಚಲು ಕಾಡುಗಳು, ತೆರೆದ ಅರಣ್ಯ ಪ್ರದೇಶ ಮತ್ತು ಕಲ್ಲಿನ ಆವಾಸಸ್ಥಾನಗಳೊಂದಿಗೆ ಜೀವಿಸಲು ವಿಕಾಸಗೊಂಡಿವೆ.

ಉದಾಹರಣೆಗೆ, Jansenia venus ಇದು ನೆರಳಿನ ಅರಣ್ಯ ಪರಿಸರಗಳು ಮತ್ತು ಪರ್ವತ ತೊರೆಗಳ ಸುತ್ತಲಿನ ತೇವಾಂಶವುಳ್ಳ ಪಾಚಿಬಂಡೆಗಳೊಂದಿಗೆ ಕಾಣಸಿಗುತ್ತದೆ. ನಮ್ಮ ಪಶ್ಚಿಮ ಘಟ್ಟಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತವೆ. Cicindela goryi ಜೀರುಂಡೆಗಳು ಕಾಡಿನ ತೆಳುವಾದ ಜಾಗಗಳಲ್ಲಿ ಕಾಲುದಾರಿಯಂತಹ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತವೆ. ನಾವು ಹತ್ತಿರ ಹೋದಂತೆ ಸಸ್ಯವರ್ಗದೊಳಗೆ ಹಾರಿ ಕಣ್ಮರೆಯಾಗುತ್ತವೆ. 

ಇನ್ನು Neocollyris (Arboreal tiger beetles) ಗುಂಪಿಗೆ ಸೇರಿದ ಹುಲಿಜೀರುಂಡೆಗಳನ್ನು ಕಂಡರೆ ಖಂಡಿತ ನಿಮಗೆ ಹುಲಿ ಜೀರುಂಡೆ ಎಂದೆನಿಸದು. ಇವು ಕೇವಲ ಎಲೆಗಳ ಮೇಲೆಯೇ ಜೀವಿಸುತ್ತವೆ.

ತೆರೆದ ಪ್ರದೇಶ

ಅನೇಕ ಹುಲಿ ಜೀರುಂಡೆಗಳು ಕಡಲ ತೀರ, ನದಿ ಸುತ್ತ, ಕಾಡುಗಳಲ್ಲಿ ಕಾಣಿಸಿದರೆ ಕೆಲವು ವಿರೋಧಾಭಾಸವಾಗಿ ತೆರೆದ ನೆಲದಲ್ಲಿ ಮಾತ್ರ ಜೀವಿಸುತ್ತವೆ. ಈ ಜೀರುಂಡೆಗಳು ಕ್ಷಿಪ್ರವಾಗಿ ಓಡುತ್ತಾ ಬೇಟೆಯಾಡುತ್ತವೆ. ಮಣ್ಣಿನ ಬಣ್ಣಕ್ಕೆ ಅನುಗುಣವಾಗಿ ಬೇರೆ ಬೇರೆ ಪ್ರಭೇದದ ಜೀರುಂಡೆಗಳು ಕಾಣುತ್ತವೆ. 

Lophyra catena ಎನ್ನುವ ಹುಲಿ ಜೀರುಂಡೆಯ ಮೇಲ್ಮೈಯಲ್ಲಿ ಜಡೆ ಹೆಣೆದಂತಹ ವಿನ್ಯಾಸವಿರುವ ಕಾರಣ ಬ್ರೈಡೆಡ್ ಟೈಗರ್ ಬೀಟಲ್ (Braided Tiger Beetle) ಎಂದು ಕರೆಯುವುದುಂಟು. ಇದು ಮರಳಿನ ರಾಶಿ, ತೆರೆದ ಪ್ರದೇಶಗಳಲ್ಲಿ ಕಾಣಸಿಗುತ್ತದೆ. 

ಚಿತ್ರ 7: Lophyra catena;     © ಹರೀಶ ಎ. ಎಸ್.

ಪರ್ವತಗಳು-ಬೆಟ್ಟ-ಗುಡ್ಡಗಳು

ಚಿತ್ರ 8: Jansenia rugosiceps;     © ಹರೀಶ ಎ. ಎಸ್.

ನಾವು ಪರ್ವತಗಳನ್ನು ಹತ್ತುತ್ತಿದ್ದಂತೆ, ತಾಪಮಾನ, ತೇವಾಂಶ, ಸಸ್ಯವರ್ಗ ಮತ್ತು ಭೂ ವಿನ್ಯಾಸ ಬದಲಾಗುತ್ತದೆ. ಅಂತೆಯೇ ಹುಲಿ ಜೀರುಂಡೆ ಸಮುದಾಯವೂ ಸಹ ಬದಲಾಗುತ್ತದೆ. ಕೆಲವು ಪ್ರಭೇದಗಳು ನಿರ್ದಿಷ್ಟ ಎತ್ತರಕ್ಕೆ ಸೀಮಿತವಾಗಿವೆ. ವಿಶೇಷವಾಗಿ ಕೆಲ ಜೀರುಂಡೆಗಳು ಹಿಮಾಲಯದಂತಹ ಎತ್ತರದ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ. ಇನ್ನು ನಮ್ಮ ಕರ್ನಾಟಕಕ್ಕೆ ಬಂದರೆ ಬಯಲಿನ ಯಾವುದೇ ಬೆಟ್ಟ ಗುಡ್ಡಗಳಿಗೆ ಮುಂಗಾರಿನ ಸಮಯದಲ್ಲಿ ಭೇಟಿಕೊಟ್ಟರೆ Jansenia rugosiceps ಎನ್ನುವ ಬಲು ಸುಂದರವಾದ ಚಿಕ್ಕದಾದ ಜೀರುಂಡೆಯು ಕಲ್ಲುಗಳ ಮೇಲೆ ಕಾಣಸಿಗುತ್ತದೆ.

ಇನ್ನು ಕೆಲ ಜೀರುಂಡೆಗಳು ತೆರೆದ ಹುಲ್ಲುಗಾವಲು, ಕುರುಚಲು ಕಾಡುಗಳಲ್ಲಿ ಕಾಣಸಿಗುತ್ತವೆ. ಅದರಲ್ಲಿ ವಿಶೇಷವಾಗಿ ಹಾರಲಾಗದ ಹುಲಿ ಜೀರುಂಡೆಗಳು, ರೆಕ್ಕೆಯಿದ್ದಂತೆ ಕಾಣಿಸಿದರೂ ಅವು ಹಾರುವುದಿಲ್ಲ, ವೇಗವಾಗಿ ಓಡುತ್ತವೆ ಹಿಡಿಯಲು ಹೋದರೆ ಹುಲ್ಲಿನಲ್ಲಿ, ಗಿಡಗಳಲ್ಲಿ ಮಾಯವಾಗುತ್ತವೆ. ಪ್ರತಿಯೊಂದು ತಾವಿರುವ ಪ್ರದೇಶಕ್ಕನುಗುಣವಾಗಿ ವಿಭಿನ್ನವಾಗಿ ವಿಕಾಸಗೊಂಡಿರುತ್ತವೆ.

ಹಿಂದೆ ಹೇಳಿದಂತೆ ಹುಲಿ ಜೀರುಂಡೆಗಳು ಎಲ್ಲಾ ಪರಿಸರ ವ್ಯವಸ್ಥೆಯಲ್ಲಿ ಇವೆ. ಆದರೆ, ಅವನ್ನು ಕಾಣುವ ಗುರುತಿಸುವ ಕಣ್ಣು ಬೇಕಷ್ಟೆ!

ಲೇಖನ: ಹರೀಶ ಎ. ಎಸ್.
                     ಉರ್ವಿ ನೇಚರ್ ಫೌಂಡೇಶನ್,
ಬೆಂಗಳೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *