ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಪ್ರಕೃತಿ ಬಿಂಬ

ಚೈತನ್ಯ ಶರ್ಮ ಅವರ ಛಾಯಾಚಿತ್ರಗಳೊಂದಿಗೆ ನಾಲ್ಕು ಹಕ್ಕಿಗಳನ್ನು ಪರಿಚಯಿಸಲಾಗಿದೆ: ಚೊಟ್ಟಿ ಸೂರೆಗಿಡುಗ (Nisaetus cirrhatus), ನವರಂಗ (Pitta brachyura), ಬಾಳೆಗುಬ್ಬಿ (Arachnothera longirostra) ಮತ್ತು ಮೂರುಬೆರಳಿನ ಮಿಂಚುಳ್ಳಿ (Ceyx erithaca). ಪ್ರತಿ ಹಕ್ಕಿಯ ಗಾತ್ರ, ಬಣ್ಣ, ಆಹಾರ ಮತ್ತು ಗೂಡು ಕಟ್ಟುವ ವಿಧಾನದ ಮಾಹಿತಿ ಇಲ್ಲಿದೆ.

               ಚೊಟ್ಟಿ ಸೂರೆಗಿಡುಗ   © ಚೈತನ್ಯ ಶರ್ಮ

ಭಾರತೀಯ ಉಪಖಂಡದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಈ ಬೇಟೆಹಕ್ಕಿಯು ಅಕ್ಸಿಪಿಟ್ರಿಡೇ (Accipitridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ನಿಸೇಟಸ್ ಸಿರ್ಹೇಟಸ್ (Nisaetus cirrhatus) ಎಂದು ಕರೆಯಲಾಗುತ್ತದೆ. ಸುಮಾರು 60–72 ಸೆಂ. ಮೀ ಉದ್ದವಿರುವ ಈ ಹಕ್ಕಿಯ ದೇಹದ ಮೇಲ್ಭಾಗವು ಕಂದು ಬಣ್ಣದ್ದಾಗಿದ್ದು, ಕೆಳಭಾಗವು ಬಿಳಿ ಅಥವಾ ತಿಳಿ ಬಣ್ಣದಲ್ಲಿರುತ್ತದೆ. ಎದೆ ಮತ್ತು ಗಂಟಲಿನ ಮೇಲೆ ಕಂದು ಅಥವಾ ಕಪ್ಪು ಬಣ್ಣದ ಉದ್ದನೆಯ ಪಟ್ಟೆಗಳಿದ್ದು, ರೆಕ್ಕೆಗಳ ಕೆಳಭಾಗ ಮತ್ತು ಬಾಲದ ಮೇಲೆ ಅಡ್ಡ ಪಟ್ಟೆಗಳಿರುತ್ತವೆ. ಕೆಲವು ಹಕ್ಕಿಗಳ ತಲೆಯ ಮೇಲೆ ಎದ್ದು ಕಾಣುವ ಕಿರೀಟದಂತಹ ಗರಿಗಳಿರುತ್ತವೆ. ಕಾಡುಗಳು, ಮರಗಳಿಂದ ಕೂಡಿದ ತೆರೆದ ಪ್ರದೇಶಗಳು ಹಾಗೂ ಕೃಷಿ ಭೂಮಿಗಳ ಸುತ್ತಮುತ್ತಲಿನ ಆವಾಸಸ್ಥಾನಗಳಲ್ಲಿ ಇವು ಕಂಡುಬರುತ್ತವೆ. ಸಣ್ಣ ಪಕ್ಷಿಗಳು, ಸಸ್ತನಿಗಳು ಮತ್ತು ಸರೀಸೃಪಗಳು ಇವುಗಳ ಮುಖ್ಯ ಆಹಾರವಾಗಿವೆ. ಎತ್ತರದ ಮರಗಳಲ್ಲಿ ಕಡ್ಡಿಗಳನ್ನು ಬಳಸಿ ದೊಡ್ಡ ಗೂಡು ಕಟ್ಟಿ, ಸಾಮಾನ್ಯವಾಗಿ ಒಂದು ಮೊಟ್ಟೆಯನ್ನಿಟ್ಟು ಮರಿ ಮಾಡುತ್ತದೆ.

                      ನವರಂಗ     © ಚೈತನ್ಯ ಶರ್ಮ

ಭಾರತೀಯ ಉಪಖಂಡದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಈ ಸುಂದರ, ವರ್ಣರಂಜಿತ ಹಕ್ಕಿಯು ಪಿಟ್ಟಿಡೇ (Pittidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಪಿಟ್ಟಾ ಬ್ರಾಕ್ಯುರಾ (Pitta brachyura) ಎಂದು ಕರೆಯಲಾಗುತ್ತದೆ. ಸುಮಾರು 18 ಸೆಂ. ಮೀ ಉದ್ದವಿರುವ ಇದರ ದೇಹದ ಮೇಲ್ಭಾಗವು ಹಸಿರು ಬಣ್ಣದ್ದಾಗಿದ್ದು, ಭುಜದ ಮೇಲೆ ನೀಲಿ ಬಣ್ಣದ ತೇಪೆ, ಹೊಟ್ಟೆಯ ಕೆಳಭಾಗದಲ್ಲಿ ಕೆಂಪು ಬಣ್ಣ ಹಾಗೂ ಕಣ್ಣಿನ ಮೇಲ್ಭಾಗದಲ್ಲಿ ಕಪ್ಪು ಪಟ್ಟಿಯನ್ನು ಹೊಂದಿರುತ್ತದೆ. ತಲೆಯ ಮೇಲೆ ತಿಳಿ ಕಂದು ಬಣ್ಣದ ಪಟ್ಟೆಗಳಿದ್ದು, ಗಂಟಲು ಬಿಳಿ ಬಣ್ಣದ್ದಾಗಿರುತ್ತದೆ.  ಕುರುಚಲು ಕಾಡುಗಳು ಮತ್ತು ದಟ್ಟ ಪೊದೆಗಳಿರುವ ಪ್ರದೇಶಗಳಲ್ಲಿ ವಾಸಿಸುವ ಈ ಹಕ್ಕಿಯು ನೆಲದ ಮೇಲೆ ಬಿದ್ದಿರುವ ಒಣ ಎಲೆಗಳನ್ನು ಕೆದಕಿ ಕೀಟಗಳು, ಎರೆಹುಳುಗಳು ಮತ್ತು ಇತರ ಸಣ್ಣ ಅಕಶೇರುಕಗಳನ್ನು ಆಹಾರವಾಗಿ ಸೇವಿಸುತ್ತದೆ. ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ‘ವೀಟ್-ಟ್ಯೂ’ ಎಂಬ ಎರಡು ಸ್ವರಗಳ ವಿಶಿಷ್ಟ ಕೂಗನ್ನು ಕೇಳಬಹುದು. ಮಳೆಗಾಲದಲ್ಲಿ ಸಂತಾನೋತ್ಪತ್ತಿ ಮಾಡುವ ಈ ಹಕ್ಕಿಯು ನೆಲದ ಮೇಲೆ ಅಥವಾ ಮರದ ಕೆಳಗಿನ ಕೊಂಬೆಗಳಲ್ಲಿ ಒಣ ಎಲೆ ಮತ್ತು ಹುಲ್ಲುಗಳಿಂದ ಗೂಡು ಕಟ್ಟಿ ಸಾಮಾನ್ಯವಾಗಿ 4–6 ಮೊಟ್ಟೆಗಳನ್ನು ಮೊಟ್ಟೆಯನ್ನಿಟ್ಟು ಮರಿ ಮಾಡುತ್ತದೆ.

          ಬಾಳೆಗುಬ್ಬಿ    © ಚೈತನ್ಯ ಶರ್ಮ

ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ವಿವಿಧ ಪ್ರದೇಶಗಳ ತೇವಾಂಶಭರಿತ ಕಾಡುಗಳು, ಕಾಡಂಚುಗಳು ಹಾಗೂ ಬಾಳೆ ಮತ್ತು ಏಲಕ್ಕಿ ತೋಟಗಳಲ್ಲಿ ಕಂಡುಬರುವ ಈ ಪುಟ್ಟ ಹಕ್ಕಿಯು ನೆಕ್ಟರಿನಿಡೇ (Nectariniidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಅರಕ್ನೊಥೆರಾ ಲಾಂಗಿರೋಸ್ಟ್ರಾ (Arachnothera longirostra) ಎಂದು ಕರೆಯಲಾಗುತ್ತದೆ. ಸುಮಾರು 13–16 ಸೆಂ. ಮೀ ಉದ್ದವಿರುವ ಇದರ ದೇಹವು ಆಲಿವ್ ಹಸಿರು ಮಿಶ್ರಿತ ಹಳದಿ ಬಣ್ಣದ್ದಾಗಿದ್ದು, ಗಂಟಲು ಮತ್ತು ಎದೆಯ ಭಾಗವು ಬೂದು ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತದೆ. ಇದರ ಉದ್ದವಾದ, ಬಾಗಿದ ಕೊಕ್ಕು ವಿಶಿಷ್ಟ ಲಕ್ಷಣವಾಗಿದೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ನೋಡಲು ಬಹುತೇಕ ಒಂದೇ ರೀತಿ ಇರುತ್ತವೆ. ಹೂವುಗಳ ಮಕರಂದ, ಜೇಡಗಳು ಮತ್ತು ಸಣ್ಣ ಕೀಟಗಳನ್ನು ಆಹಾರವಾಗಿ ಸೇವಿಸುತ್ತದೆ. ವಿಶೇಷವಾಗಿ ಬಾಳೆಗಿಡ ಮತ್ತು ಶುಂಠಿ ಕುಟುಂಬದ ಸಸ್ಯಗಳ ಹೂವುಗಳಿಂದ ಮಕರಂದವನ್ನು ಹೀರುವುದರಿಂದ, ಅವುಗಳ ಪರಾಗಸ್ಪರ್ಶದಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ. ಬಾಳೆ ಎಲೆ ಅಥವಾ ಇತರ ಅಗಲವಾದ ಎಲೆಗಳ ಕೆಳಭಾಗಕ್ಕೆ ಜೇಡರ ಬಲೆ ಮತ್ತು ಸಸ್ಯನಾರುಗಳ ಸಹಾಯದಿಂದ ಪುಟ್ಟ ಜೋಲಿಯಾಕಾರದ ಗೂಡನ್ನು ಕಟ್ಟಿ ಸಾಮಾನ್ಯವಾಗಿ ಎರಡು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ.

ಮೂರುಬೆರಳಿನ ಮಿಂಚುಳ್ಳಿ © ಚೈತನ್ಯ ಶರ್ಮ

       ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ವಿವಿಧ ಪ್ರದೇಶಗಳ ದಟ್ಟವಾದ, ತೇವಾಂಶಭರಿತ ಕಾಡುಗಳಲ್ಲಿ ಹಾಗೂ ಸಣ್ಣ ಹಳ್ಳ-ತೊರೆಗಳ ಸುತ್ತಮುತ್ತ ಕಂಡುಬರುವ ಈ ಪುಟ್ಟ ಮಿಂಚುಳ್ಳಿಯು ಅಲ್ಸಿಡಿನಿಡೇ (Alcedinidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಸೆಯಿಕ್ಸ್ ಎರಿಥಾಕಾ (Ceyx erithaca) ಎಂದು ಕರೆಯಲಾಗುತ್ತದೆ. ಸುಮಾರು 13 ಸೆಂ. ಮೀ ಉದ್ದವಿರುವ ಈ ಹಕ್ಕಿಯ ಬೆನ್ನು ನೀಲಿ ಮಿಶ್ರಿತ ಕಪ್ಪು ಬಣ್ಣದಲ್ಲಿದ್ದು, ತಲೆ ಮತ್ತು ದೇಹದ ಮೇಲ್ಭಾಗದಲ್ಲಿ ನೇರಳೆ ಮಿಶ್ರಿತ ಕೆಂಪು-ಕಂದು ಬಣ್ಣವಿರುತ್ತದೆ. ಹೊಟ್ಟೆಯ ಭಾಗವು ಕಿತ್ತಳೆ ಮಿಶ್ರಿತ ಹಳದಿ ಬಣ್ಣದಲ್ಲಿದ್ದು, ಕೊಕ್ಕು ಕೆಂಪು ಬಣ್ಣದ್ದಾಗಿರುತ್ತದೆ. ಕೀಟಗಳು, ಜೇಡಗಳು, ಸಣ್ಣ ಏಡಿಗಳು ಮತ್ತು ಕಪ್ಪೆಗಳನ್ನು ಆಹಾರವಾಗಿ ಸೇವಿಸುತ್ತದೆ. ಮಣ್ಣಿನ ದಿಬ್ಬಗಳಲ್ಲಿ ಸುರಂಗದಂತಹ ಬಿಲವನ್ನು ತೋಡಿ ಗೂಡು ಕಟ್ಟಿ ಸಾಮಾನ್ಯವಾಗಿ 4–5 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ.

ಚಿತ್ರ: ಚೈತನ್ಯ ಶರ್ಮ.
ಲೇಖನ: ದೀಪ್ತಿ ಎನ್.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *