ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಪ್ರಕೃತಿ ಬಿಂಬ

ಭಾರತೀಯ ಉಪಖಂಡದಲ್ಲಿ ಕಂಡುಬರುವ ನಾಲ್ಕು ಆಕರ್ಷಕ ಚಿಟ್ಟೆಗಳಾದ ಕಂದು ಹೂ,  ನವಿಲು ಹೂ, ನೀಲಿ ಹೂ ಮತ್ತು ಬಿಳಿ ಚಿಟ್ಟೆಗಳ ಸಂಕ್ಷಿಪ್ತ ಪರಿಚಯ.

                                                        ಕಂದು ಹೂ                                                              © ಡಾ. ಅಮೋಲ್
 

ಏಷ್ಯಾ ಖಂಡದ ಸಮತಟ್ಟು ಪ್ರದೇಶ, ಎಲೆ ಉದುರುವ ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಈ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜುನೋನಿಯಾ ಇಫಿಟಾ (Junonia iphita) ಎಂದು ಕರೆಯಲಾಗುತ್ತದೆ. ಕಿತ್ತಳೆ ಕಂದು ಬಣ್ಣದ ಮೇಲ್ಭಾಗವನ್ನು ಹೊಂದಿದ್ದು, ಹಲವಾರು ಕಂದು ಪಟ್ಟೆಗಳನ್ನೂ ಸಹ ಹೊಂದಿದೆ. ಕೆಳಗಿನ ರೆಕ್ಕೆಗಳ ಮೇಲೆ ಹಲವಾರು ಕೆಂಪು ಮಿಶ್ರಿತ ಕಂದು ಬಣ್ಣದ ಕಣ್ಣಿನಂತಹ ಮಚ್ಚೆಗಳ ಸರಣಿಯನ್ನು ಹೊಂದಿದೆ. ಸಾಮಾನ್ಯವಾಗಿ ರೆಕ್ಕೆಗಳನ್ನು ತೆರೆದು ಗಿಡ ಅಥವಾ ನೆಲದ ಮೇಲೆ ಕೂತು ಬೇಟೆಯಾಡುತ್ತದೆ. ಅಕಾಂಥೇಸಿ (Acanthaceae) ಕುಟುಂಬಕ್ಕೆ ಸೇರುವ ರುಯೆಲಿಯಾ ರಿಪನ್ಸ್ (Ruellia repens) ಮತ್ತು ಹೆಮಿಗ್ರಾಫಿಸ್ ರೆಪ್ಟಾನ್ಸ್ (Hemigraphis reptans) ಇದರ ಅತಿಥೇಯ ಸಸ್ಯಗಳಾಗಿವೆ.

            ನವಿಲು ಹೂ                                                                                       © ಡಾ. ಅಮೋಲ್

ದಕ್ಷಿಣ ಏಷ್ಯಾ ಮತ್ತು ಕಾಂಬೋಡಿಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ನವಿಲು ಹೂ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜುನೋನಿಯಾ ಅಲ್ಮಾನಾ (Junonia almana) ಎಂದು ಕರೆಯಲಾಗುತ್ತದೆ. ರೆಕ್ಕೆಗಳು ಹಳದಿ ಮಿಶ್ರಿತ ಕಂದು ಬಣ್ಣವಿದ್ದು, ಕಡುಗಂದು ಬಣ್ಣದ ಅಂಚನ್ನು ಹೊಂದಿರುತ್ತದೆ. ರೆಕ್ಕೆಯ ಮುಂಭಾಗದಲ್ಲಿ ನವಿಲು ಗರಿಯಲ್ಲಿರುವ ಹಾಗೆ ದೊಡ್ಡ ಮತ್ತು ಸಣ್ಣ ಕಪ್ಪು ಬಣ್ಣದಿಂದ ಸುತ್ತುವರಿದ ವೃತ್ತಾಕಾರದ ಮಚ್ಚೆಗಳನ್ನು ಹೊಂದಿರುತ್ತದೆ.  ಹೆಚ್ಚಾಗಿ ಕೆರೆಗಳ ಬಳಿ, ಹೂಗಿಡಗಳ ಮೇಲೆ ಮತ್ತು ತೇವಾಂಶವಿರುವ ಮಣ್ಣಿನ ಮೇಲೆ ಕಾಣಸಿಗುತ್ತವೆ. ಗಂಡು ಚಿಟ್ಟೆಗಳು ತಮ್ಮದೇ ಆದ ವಾಸಕ್ಷೇತ್ರವನ್ನು ಆರಿಸಿಕೊಂಡು ಅಲ್ಲಿಗೆ ಬರುವ ಇತರೆ ಚಿಟ್ಟೆಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಅಕಾಂಥೇಸಿ (Acanthaceae) ಕುಟುಂಬದ ಕೊಳವಳಿಕೆ ಗಿಡದ ಜಾತಿಯ ವಿವಿಧ ಸಸ್ಯಗಳು, ಪೋಯೇಸಿ (Poaceae) ಕುಟುಂಬದ ಭತ್ತದ ಗಿಡ, ವರ್ಬೆನೇಸಿ (Verbenaceae) ಕುಟುಂಬದ ನೆಲ ಹಿಪ್ಪಲಿ ಅಥವಾ ಜಲ ಹಿಪ್ಪಲಿ ಗಿಡಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

                    ನೀಲಿ ಹೂ  © ಡಾ. ಅಮೋಲ್

ಆಫ್ರಿಕಾ, ದಕ್ಷಿಣ ಮತ್ತು ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾದ ವಿವಿಧ ಪ್ರದೇಶಗಳ ಕುರುಚಲು ಕಾಡುಗಳು, ಎಲೆ ಉದುರುವ ಕಾಡುಗಳು, ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ನೀಲಿ ಹೂ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜುನೋನಿಯಾ ಒರಿಥಿಯಾ (Junonia orithya) ಎಂದು ಕರೆಯಲಾಗುತ್ತದೆ. ಮೇಲಿನ ರೆಕ್ಕೆಗಳ ಮುಂಭಾಗವು ಕಡುಗಂದು ಅಥವಾ ಕಪ್ಪು ಬಣ್ಣವನ್ನು ಹೊಂದಿದ್ದು ಹಾಗೂ ಕೆಳಗಿನ ರೆಕ್ಕೆಗಳ ಮುಂಭಾಗವು ಪ್ರಕಾಶಮಾನವಾದ ನೀಲಿ ಬಣ್ಣವಿದ್ದು, ಎರಡೂ ರೆಕ್ಕೆಗಳಲ್ಲಿ ಕಿತ್ತಳೆ ಬಣ್ಣದ ಕಣ್ಣಿನಾಕಾರದ ಮಚ್ಚೆಗಳನ್ನು ಕಾಣಬಹುದು. ಹಿಂಭಾಗವು ಬೂದು ಮಿಶ್ರಿತ ಕಂದು ಬಣ್ಣವಿದ್ದು, ಮೇಲಿನಂತೆಯೇ ಮಚ್ಚೆಗಳನ್ನು ಹೊಂದಿರುತ್ತವೆ. ಜಾರುವ ರೀತಿ ಹಾರಾಡುತ್ತವೆ ಮತ್ತು ರೆಕ್ಕೆಗಳನ್ನು ತೆರೆದು ಕೂತು ಬಿಸಿಲನ್ನು ಕಾಯುತ್ತದೆ. ಅಕಾಂಥೇಸಿ (Acanthaceae) ಕುಟುಂಬದ ಲವಣವಲ್ಲಿ ಗಿಡ (Asystasia gangetica), ಕಾನ್ವಾಲ್ವುಲೇಸಿ (Convolvulaceae) ಕುಟುಂಬದ ಸಿಹಿ ಗೆಣಸಿನ ಗಿಡ, ಫ್ಯಾಬೇಸಿ (Fabaceae) ಕುಟುಂಬದ ಮುಟ್ಟಿದರೆ ಮುನಿ ಗಿಡ ಇತ್ಯಾದಿಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

        ಬಿಳಿಯ                                                                            © ಡಾ. ಅಮೋಲ್

         ಭಾರತೀಯ ಉಪಖಂಡ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಬಿಳಿಯ ಚಿಟ್ಟೆಯು ಪಿಯರಿಡೇ (Pieridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಲೆಪ್ಟೋಸಿಯಾ ನೀನಾ (Leptosia nina) ಎಂದು ಕರೆಯಲಾಗುತ್ತದೆ. ಮೇಲಿನ ರೆಕ್ಕೆಗಳ ಮುಂಭಾಗದ ಅಂಚಿನ ಒಳಭಾಗದಲ್ಲಿ ದೊಡ್ಡ ಕಪ್ಪು ಚುಕ್ಕೆ ಇರುತ್ತದೆ. ಎರಡೂ ರೆಕ್ಕೆಗಳ ಹಿಂಭಾಗ ಬೆಳ್ಳಗಿದ್ದು, ಕಂದು ಮಿಶ್ರಿತ ಕಪ್ಪು ಬಣ್ಣದ ಉದ್ದವಾದ ಗೆರೆಗಳನ್ನು ಹೊಂದಿರುತ್ತದೆ.  ನೆರಳನ್ನು ಪ್ರೀತಿಸುವ ಇವುಗಳನ್ನು ಮಂದಗತಿಯಲ್ಲಿ ಹೂಗಳ ಮೇಲೆ ಹಾರಾಡುವುದನ್ನು ಕಾಣಬಹುದು ಮತ್ತು ಎಲೆಗಳ ಮೇಲೆ ಕುಳಿತಾಗ, ರೆಕ್ಕೆಗಳನ್ನು ಮಡಚಿ ಕೂರುತ್ತವೆ‌. ಕ್ಲಿಯೋಮೇಸಿ (Cleomaceae- spider plant family) ಕುಟುಂಬಕ್ಕೆ ಸೇರಿದ ಮಾಂಬಳ್ಳಿ (Cleome gynandra) ಗಿಡದ ಜಾತಿಯ ವಿವಿಧ ಸಸ್ಯಗಳು ಹಾಗೂ ಕ್ಯಾಪರೇಸೀ (Capparaceae) ಕುಟುಂಬದ ಮುಳ್ಳು ಕತ್ತರಿ (Capparis zeylanica) ಗಿಡದ ಜಾತಿಯ ವಿವಿಧ ಸಸ್ಯಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ಚಿತ್ರ : ಡಾ. ಅಮೋಲ್
ಲೇಖನ: ದೀಪ್ತಿ ಎನ್.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.