ಓ ನೇರಳೆ… ನೀ ಯಾರೆಂದು ಹೇಳಲೇ!
ನೇರಳೆ ಮರ
Jamoon tree
Syzygium cumini
© ನಾಗೇಶ್ ಒ. ಎಸ್.
ನಾವು ಗೊತ್ತಲ್ಲ ನೈಂಟಿಸ್ ಕಿಡ್ಸ್ (1990ರ ದಶಕದಲ್ಲಿ ಹುಟ್ಟಿರುವವರು). ನಮಗೆ ಬೇಸಿಗೆ ರಜೆ ಮಾರ್ಚ್ ನಲ್ಲಿ ಶುರುವಾದರೆ ಜೂನ್ ಒಂದಕ್ಕೆ ಮುಗಿಯುತ್ತಿದ್ದದ್ದು. ಅಲ್ಲಿವರೆಗೂ ರಜಾ ಮಜಾ. ಬೇಸಿಗೆ ರಜೆಯಲ್ಲಿ ನಾವು ಮಾಡುತ್ತಿದ್ದ ತುಂಟಾಟಗಳು ಒಂದಾ ಎರಡಾ! ಗೋಲಿ, ಬುಗುರಿ, ಕುಂಟೆಬಿಲ್ಲೆ, ಮರಕೋತಿ. ಯಪ್ಪಾ! ಪಟ್ಟಿ ಮಾಡಿದರೆ ಒಂದು ಹಾಳೆ ತುಂಬಾ ಅದೇ ಆಗುತ್ತೇನೋ. ಈ ಆಟಗಳು ಒಂದು ಕಡೆ ಆದರೆ ಮಾವಿನ ಕಾಯಿ, ಹಲಸಿನ ಹಣ್ಣು, ಈಚಲು ಹಣ್ಣು, ನೇರಳೆ ಹಣ್ಣು ಕಿತ್ತು ತಂದು ತಿನ್ನೋದು ಒಂತರ ಮಜಾ. ನಾಲ್ಕೈದು ಜನ ಸ್ನೇಹಿತರು ಗುಂಪಾಗಿ ಒಂದೆರಡು ಕವರ್ ಗಳನ್ನು ಹಿಡಿದು ಬೇಟೆಗೆ ಹೋದರೆ ಅಲ್ಲಿಂದ ಯಾರಾದ್ರೂ ಅಟ್ಟಾಡಿಸಿಕೊಂಡು ಬರೋವರೆಗೂ ಆ ಮರ, ಈ ಮರ ಅಂತ ಹತ್ತಿ, ಹಣ್ಣು ಕೀಳೋದೇ ಕೆಲಸ. ನೇರಳೆ ಮರ ಸಿಕ್ಕರಂತೂ ಅದರ ಹಣ್ಣು ಕೀಳಲು ಎಲ್ಲರೂ ಒಂದೊಂದು ಕೊಂಬೆಯ ತುದಿಯಲ್ಲಿ ಕುಳಿತಿರುತ್ತಿದ್ದೆವು. ಯಾಕ್ ಈ ಮರಗಳು ಅಷ್ಟು ತುದಿಯಲ್ಲಿ ಹಣ್ಣನ್ನು ಬಿಡುತ್ತವೋ ಎಂದು ಬೈದುಕೊಳ್ಳುತ್ತಾ ಮರದ ಒಡಲಲ್ಲಿಯೇ ಐಕ್ಯವಾದಂತೆ ಕೂರುತ್ತಿದ್ದೆವು. ಈಗಲೂ ಹಳ್ಳಿಯಲ್ಲಿ ಬೆಳೆಯುವ ಮಕ್ಕಳು ಈ ಸಾಹಸಗಾಥೆಯನ್ನು ಮಾಡುತ್ತಿರಬಹುದು. ಅಂದು ನಮಗೆ ಈ ಮರದ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ, ಅಂದರೆ ಅದರ ವಿಶೇಷತೆ, ಉಪಯೋಗವೆಲ್ಲ ತಿಳಿದಿರಲಿಲ್ಲ. ನಾನು ಜೀವಶಾಸ್ತ್ರವನ್ನೇ ಓದಿದ ಕಾರಣ ಅದರ ಬಗ್ಗೆ ತಿಳಿದು ಆಶ್ಚರ್ಯವೇ ಆಯಿತು. ಅದರ ಮಾಹಿತಿಯನ್ನು ನಿಮ್ಮೊಂದಿಗೂ ಸ್ವಲ್ಪ ಹಂಚಿಕೊಳ್ತೇನೆ.

ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಔಷಧೀಯ ಹಾಗೂ ಪರಿಸರದ ದೃಷ್ಟಿಯಿಂದ ಮಹತ್ವವಾದ ಮರ ನೇರಳೆ ಎಂದರೆ ತಪ್ಪಾಗಲಾರದು. ನೇರಳೆ ಮರ ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ನದಿಯ ತೀರಗಳು, ತೇವಾಂಶಯುಕ್ತ ಮಣ್ಣು ಮತ್ತು ಉತ್ತಮ ನೀರು ಹರಿಯುವ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. ನೇರಳೆ ಮರವು ಆಳವಾಗಿ ಬೆಳೆಯುವ ಮುಖ್ಯ ಬೇರು (Tap root system) ಮತ್ತು ಅನೇಕ ಪಾರ್ಶ್ವ ಬೇರುಗಳನ್ನು ಹೊಂದಿರುತ್ತದೆ. ಇದರಿಂದ ಬರಗಾಲವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಮರವು 15 ರಿಂದ 30 ಮೀಟರ್ ಎತ್ತರ ಬೆಳೆಯುತ್ತದೆ. ಕಾಂಡದ ತೊಗಟೆಯು ಬೂದು ಅಥವಾ ಕಂದು ಬಣ್ಣದಲ್ಲಿದ್ದು, ವಯಸ್ಸಾದಂತೆ ಬಿರುಕು ಬಿಡುತ್ತದೆ. ಮರದ ಕಾಂಡ ಹಾಗೂ ರೆಂಬೆಗಳು ಗಟ್ಟಿಯಾಗಿದ್ದು ನೀರಿನ ಪ್ರತಿರೋಧಕ ಗುಣ ಹೊಂದಿದೆ. ಎಲೆಗಳು ಸರಳ, ಎದುರು ಎದುರಾಗಿ ಜೋಡಿಯಾಗಿ ಬೆಳೆಯುತ್ತವೆ. ಹೊಳೆಯುವ ಗಾಢ ಹಸಿರು ಬಣ್ಣದ ಎಲೆಗಳಲ್ಲಿ ತೈಲ ಗ್ರಂಥಿಗಳು (oil glands) ಇರುತ್ತವೆ. ಎಲೆಗಳನ್ನು ಪುಡಿ ಮಾಡಿದಾಗ ವಿಶಿಷ್ಟವಾದ ಪರಿಮಳ ಬರುತ್ತದೆ. ಇದರ ಹೂಗಳು ಸಣ್ಣ ಬಿಳಿ ಅಥವಾ ಹಸಿರು ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತದೆ. ಸಾಮಾನ್ಯವಾಗಿ ಮಾರ್ಚ್ ನಿಂದ ಏಪ್ರಿಲ್ ವರೆಗೆ ಹೂವು ಬಿಡುತ್ತವೆ. ಇದರ ಹಣ್ಣು ರಸಭರಿತ ಡ್ರೂಪ್ (drupe) ಆಗಿದೆ. ಆರಂಭದಲ್ಲಿ ಹಸಿರು ಬಣ್ಣದಲ್ಲಿದ್ದು ನಂತರ ಗುಲಾಬಿ, ನೇರಳೆ ಮತ್ತು ಕೊನೆಯಲ್ಲಿ ಗಾಢ ನೇರಳೆ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹಣ್ಣುಗಳು ಸಾಮಾನ್ಯವಾಗಿ ಒಂದು ಬೀಜವನ್ನು ಹೊಂದಿರುತ್ತವೆ. ನೇರಳೆ (Syzygium cumini) ಹಣ್ಣು, ಬೀಜ, ತೊಗಟೆ ಮತ್ತು ಎಲೆಗಳಲ್ಲಿ ಪಾಲಿಫೀನಾಲ್ಗಳು, ಟಾನಿನ್ಗಳು ಸೇರಿದಂತೆ ಹಲವು ಜೈವಿಕ ಕ್ರಿಯಾಶೀಲ ಸಂಯುಕ್ತಗಳು ಕಂಡುಬರುತ್ತವೆ. ಹಣ್ಣಿನ ನೇರಳೆ-ಕಪ್ಪು ಬಣ್ಣಕ್ಕೆ ಮುಖ್ಯ ಕಾರಣ ಅಂತೋಸಯಾನಿನ್ಗಳು
ಇನ್ನು ಇದರ ಔಷಧೀಯ ಗುಣಗಳನ್ನು ಗಮನಿಸುವುದಾದರೆ ಒಂದಾ ಎರಡಾ!!!
‘ಆಂಟಿ ಆಕ್ಸಿಡೆಂಟ್’ ಗುಣಗಳಿಂದ ಜೀವಕೋಶವನ್ನು ರಕ್ಷಿಸುತ್ತದೆ. ಬೀಜದಲ್ಲಿರುವ ಜಾಂಬೋಲಿನ್ (Jamboline) ಮತ್ತು ಪಾಲಿಫೀನಾಲ್ (polyphenol) ರಕ್ತದಲ್ಲಿನ ಗ್ಲುಕೋಸ್ ನಿಯಂತ್ರಣಕ್ಕೆ ಸಹಕಾರಿಯಾಗಬಹುದು. ಎಲೆ ಮತ್ತು ತೊಗಟೆಯಲ್ಲಿರುವ ‘ಟ್ಯಾನಿನ್’ ಗಳು ಬ್ಯಾಕ್ಟೀರಿಯ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಹಣ್ಣು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ.



ನೇರಳೆ ಮರದ ಬೀಜ, ಹಣ್ಣು, ತೊಗಟೆಯಲ್ಲಿ ಔಷಧೀಯ ಗುಣಗಳ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈಯಾಕ್ಸೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವಲ್ಲಿ ಸಹಕಾರಿ.
ನಗರ ಪ್ರದೇಶಗಳಲ್ಲಿ ನೆರಳಿಗೆ ಮತ್ತು ಹವಾಮಾನ ಸುಧಾರಣೆಗೆ ನೆರವಾಗುತ್ತದೆ. ಅಲ್ಲದೆ ಮಣ್ಣಿನ ಸವೆತವನ್ನು ತಡೆಯಲು ಸಹಕಾರಿ. ನೇರಳೆ ಮರವು ನೂರಾರು ವರ್ಷಗಳವರೆಗೆ ಬದುಕಬಲ್ಲದು; ಇದರ ಕಾಂಡವು ಗಟ್ಟಿಯಾಗಿರುವುದರಿಂದ ಪೀಠೋಪಕರಣಗಳು, ಕೃಷಿ ಉಪಕರಣಗಳು ಮತ್ತು ಕಟ್ಟಡ ಕಾಮಗಾರಿಗಳಲ್ಲಿಯೂ ಬಳಸಲಾಗುತ್ತದೆ.
“ನೇರಳೆಯ ಸಿಹಿ ನಾಲಿಗೆಯನ್ನು ತಣಿಸಿದರೆ, ಅದರ ನೆರಳು ಪ್ರಕೃತಿಯ ಮಡಿಲಿನಲ್ಲಿ ಮನಸ್ಸಿಗೆ ನೆಮ್ಮದಿ ಕೊಡುತ್ತದೆ”.
ನಾವಂತೂ ಎಷ್ಟು ಆಗುತ್ತೋ ಅಷ್ಟು ನೇರಳೆ ಹಣ್ಣು ತಿಂದು ನಾಲಿಗೆಯ ಬಣ್ಣ ಯಾರದ್ದು ಗಾಢವಾಗಿದೆ ಎಂದು ಆಟ ಆಡ್ತಿದ್ವಿ. ಆಗ ನಮ್ಮನ್ನು ಅಟ್ಟಿಸಿಕೊಂಡು ಬಂದವರನ್ನ ಎಲ್ಲಾ ಮರೆತು ಮತ್ತೆ ನಾಳೆ ಬೇಟೆಗೆ ಸಿದ್ಧರಾಗ್ತಿದ್ವಿ. ನೀವು ಹಿಂಗೇ ಮಾಡ್ತಿದ್ರ? ಮಾಡಿದ್ದೀರಾ?
ಲೇಖನ:ಹರ್ಷಿತ ಪಿ. ಹನುಮಯ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆ



