ಕಾನನ

ನಿಸರ್ಗದೆಡೆಗೆ ಪಯಣ

ಪ್ರಕೃತಿ ಬಿಂಬ

ಪ್ಯಾಪಿಲಿಯೊನಿಡೆ, ನಿಂಫಾಲಿಡೇ ಮತ್ತು ಲೈಕೇನಿಡೆ ಕುಟುಂಬಕ್ಕೆ ಸೇರಿದ ನಾಲ್ಕು ಅಪರೂಪದ ಚಿಟ್ಟೆಗಳ ಅದ್ಭುತ ಛಾಯಾಚಿತ್ರ ಸಂಗ್ರಹ – ನೀಲಿ ಕುಪ್ಪಿ, ಕಪಿಲ, ಬೆಳ್ಳಿಗೆರೆ ಮತ್ತು ನೀಲಿ ಹುಲಿ.
ನೀಲಿ ಕುಪ್ಪಿ ಚಿಟ್ಟೆ ತೇವದ ಮಣ್ಣಿನ ಮೇಲೆ – Graphium sarpedon Karnataka

                                         ನೀಲಿ ಕುಪ್ಪಿ                                                                       © ಅನಿಲ್ ಕುಮಾರ್ ಎನ್. ಆರ್.
 

ಪೂರ್ವ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಎಲೆ ಉದುರುವ ಕಾಡು ಮತ್ತು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ನೀಲಿ ಕುಪ್ಪಿ ಚಿಟ್ಟೆಯು ಪ್ಯಾಪಿಲಿಯೊನಿಡೆ (Papilionidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಗ್ರ್ಯಾಫಿಯಂ ಸಾರ್ಪೆಡಾನ್ (Graphium sarpedon) ಎಂದು ಕರೆಯಲಾಗುತ್ತದೆ. ಕೆಳಗಿನ ಮತ್ತು ಮೇಲಿನ ರೆಕ್ಕೆಗಳು ಕಪ್ಪಾಗಿದ್ದು, ತಳದ ಹೊರಭಾಗದಲ್ಲಿ ಉದ್ದವಾದ ನೀಲಿ ಪಟ್ಟೆಯಿರುತ್ತದೆ ಮತ್ತು ಅದರ ಸುತ್ತ ಕೆಲವು ಕೆಂಪು ಬಣ್ಣದ ಮಚ್ಚೆಗಳಿರುತ್ತವೆ. ಅಂಚಿನಲ್ಲಿ ಅರ್ಧ ಚಂದ್ರಾಕೃತಿಯ ನೀಲಿ ಮಿಶ್ರಿತ ಹಸಿರು ಮಚ್ಚೆಗಳಿರುತ್ತವೆ. ವೇಗವಾಗಿ ಹಾರಾಡುತ್ತವೆ ಮತ್ತು ತೇವಾಂಶವಿರುವ ಮಣ್ಣಿನ ಮೇಲೆ ಗುಂಪುಗುಂಪಾಗಿ ಕಂಡು ಬರುತ್ತವೆ. ಲಾರೇಸಿ (Lauraceae) ಕುಟುಂಬದ ಕಾಡು ದಾಲ್ಚಿನ್ನಿ ಹಾಗೂ ಕರ್ಪೂರದ ಮರದ ಜಾತಿಗೆ ಸೇರಿದ ವಿವಿಧ ಮರಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ಕಪಿಲ ಚಿಟ್ಟೆ ಗಿಡದ ಮೇಲೆ – Acraea terpsicore ಕರ್ನಾಟಕ
 ಕಪಿಲ                                                                                                © ಅನಿಲ್ ಕುಮಾರ್ ಎನ್. ಆರ್.

ಆಗ್ನೇಯ ಏಷ್ಯಾ ಮತ್ತು ಉತ್ತರ ಆಸ್ಟ್ರೇಲಿಯಾದ ವಿವಿಧ ಭಾಗಗಳಲ್ಲಿನ, ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು ಹಾಗೂ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಕಪಿಲ ಚಿಟ್ಟೆಯು ನಿಂಫಾಲಿಡೇ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಅಕ್ರೇಯಾ ಟೆರ್ಪ್ಸಿಕೋರ್ (Acraea terpsicore) ಎಂದು ಕರೆಯಲಾಗುತ್ತದೆ. ರೆಕ್ಕೆಗಳು ಕಿತ್ತಳೆ ಬಣ್ಣವಿದ್ದು, ಅಲ್ಲಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಕೆಳಗಿನ ರೆಕ್ಕೆಯ ಹಿಂಭಾಗದ ಅಂಚಿನಲ್ಲಿ ಕಪ್ಪು ವರ್ತುಲವಿರುವ ಬಿಳಿ ಮಚ್ಚೆಗಳಿರುತ್ತವೆ. ಹೂಗಳ ಮೇಲೆ ಹೆಚ್ಚಾಗಿ ಕಾಣಸಿಗುವ ಇವುಗಳು ಪರಭಕ್ಷಕರಿಗೆ ವಿಷಕಾರಿಯಾಗಿವೆ. ಪಾಸಿಫ್ಲೋರೇಸಿ (Passifloraceae) ಕುಟುಂಬದ ಜ್ಯೂಸ್ ಹಣ್ಣು (passion fruit) ಜಾತಿಯ ವಿವಿಧ ಗಿಡಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ಬೆಳ್ಳಿಗೆರೆ ಚಿಟ್ಟೆ ಬಿಳಿ ಹೂವಿನ ಮೇಲೆ – Cigaritis vulcanus
ಬೆಳ್ಳಿಗೆರೆ  © ಅನಿಲ್ ಕುಮಾರ್ ಎನ್. ಆರ್.

ಏಷ್ಯಾದ ವಿವಿಧ ಭಾಗಗಳಲ್ಲಿನ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು ಹಾಗೂ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಬೆಳ್ಳಿಗೆರೆ ಚಿಟ್ಟೆಯು ಲೈಕೇನಿಡೆ (Lycaenidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಸಿಗರೈಟಿಸ್ ವಲ್ಕನಸ್ (Cigaritis vulcanus) ಎಂದು ಕರೆಯಲಾಗುತ್ತದೆ.  ರೆಕ್ಕೆಗಳ ಹಿಂಭಾಗದಲ್ಲಿ ಬೆಳ್ಳಿಗೆರೆವುಳ್ಳ ನಾಲ್ಕು ಉದ್ದವಾದ ಕೆಂಪು ಬಣ್ಣದ ಪಟ್ಟಿಗಳಿರುತ್ತವೆ. ಉಳಿದಂತೆ ಬಿಳಿಯ ಬಣ್ಣ ಹೊಂದಿರುತ್ತವೆ. ಕೆಳಗಿನ ರೆಕ್ಕೆ ಎರಡು ಬಾಲಗಳನ್ನು ಹೊಂದಿರುತ್ತದೆ. ಪೊದೆಗಳಲ್ಲಿ ವೇಗದ ಹಾರಾಟಮಾಡುತ್ತದೆ. ತೇವಾಂಶವಿರುವ ಮಣ್ಣು ಹಾಗೂ ಪಕ್ಷಿಗಳ ಮಲದ ಮೇಲೆ ಕೂರುತ್ತದೆ. ಅಪೊಸಿನಾನ್ಸಿಯೇ (Apocynanceae) ಕುಟುಂಬದ ಕವಳಿ ಹೆಣ್ಣಿನ ಗಿಡ, ಕ್ಯಾಪರೇಸೀ (Capparaceae) ಕುಟುಂಬದ ಮರಗಾಡೆ ಗಿಡ, ಫ್ಯಾಬೇಸಿ (Fabaceae) ಕುಟುಂಬದ ಕುಕ್ಕೆ ಗಿಡ, ರುಬಿಯೇಸಿ (Rubiaceae) ಕುಟುಂಬದ ಕಾರೆಮುಳ್ಳು ಗಿಡ, ಸಪಿಂಡೇಸಿ (Sapindaceae) ಕುಟುಂಬದ ಕಸಬಳ್ಳಿ ಗಿಡ ಇತ್ಯಾದಿಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ನೀಲಿ ಹುಲಿ ಚಿಟ್ಟೆ ಕಾಂಡದ ಮೇಲೆ – Tirumala limniace ಕರ್ನಾಟಕ
            ನೀಲಿ ಹುಲಿ                                                                                © ಅನಿಲ್ ಕುಮಾರ್ ಎನ್. ಆರ್.

ದಕ್ಷಿಣ ಮತ್ತು ದಕ್ಷಿಣ ಆಗ್ನೇಯ ಏಷ್ಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು ಹಾಗೂ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ನೀಲಿ ಹುಲಿ ಚಿಟ್ಟೆಯು ನಿಂಫಾಲಿಡೇ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ತಿರುಮಲ ಲಿಮ್ನಿಯಾಸ್ (Tirumala limniace) ಎಂದು ಕರೆಯಲಾಗುತ್ತದೆ. ರೆಕ್ಕೆಗಳ ಮುಂಭಾಗವು ಕಡು ಕಂದು ಅಥವಾ ಕಪ್ಪು ಬಣ್ಣವಿದ್ದು, ಅರೆ ಪಾರದರ್ಶಕವಾದ ಬಿಳಿ ಮಿಶ್ರಿತ ನೀಲಿ ಬಣ್ಣದ ಚುಕ್ಕೆಗಳು ಹಾಗೂ ಗೆರೆಗಳನ್ನು ಹೊಂದಿರುತ್ತದೆ. ಹಿಂಭಾಗವು ಇದೇ ರೀತಿ ಇದ್ದು ಕೊಂಚ ತೆಳು ಬಣ್ಣದ್ದಾಗಿರುತ್ತದೆ. ಈ ಚಿಟ್ಟೆಗಳು ಮಳೆಗಾಲದಲ್ಲಿ ಪಶ್ಚಿಮ ಘಟ್ಟದಿಂದ ಪೂರ್ವ ಘಟ್ಟಗಳೆಡೆ, ಚಳಿಗಾಲದಲ್ಲಿ ಪೂರ್ವ ಘಟ್ಟಗಳಿಂದ ಪಶ್ಚಿಮ ಘಟ್ಟಗಳೆಡೆ ವಲಸೆ ಹೋಗುವುದನ್ನು ಕಾಣಬಹುದು. ಪೊಯೇಸೀ (Poaceae) ಕುಟುಂಬದ ಕಬ್ಬಿನ ಗಿಡ, ಅಪೊಸಿನೇಸಿ (Apocynaceae) ಕುಟುಂಬದ ಎಕ್ಕದ ಗಿಡ, ಬುಗುಡಿ ಬಳ್ಳಿ, ಮೇಣದ ಬಳ್ಳಿ ಇತ್ಯಾದಿಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ಚಿತ್ರ : ಅನಿಲ್ ಕುಮಾರ್ ಎನ್. ಆರ್.
ಲೇಖನ: ದೀಪ್ತಿ ಎನ್.

ಕಾನನದ ದನಿ ಹರಡಿ

4 thoughts on “ಪ್ರಕೃತಿ ಬಿಂಬ

    1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಕಾನನ ಮಾಸಿಕವನ್ನು ಓದಿ ಇತರರೊಂದಿಗೆ ಹಂಚಿಕೊಳ್ಳಿ

    1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಕಾನನ ಮಾಸಿಕವನ್ನು ಓದಿ ಇತರರೊಂದಿಗೆ ಹಂಚಿಕೊಳ್ಳಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.