ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಎಲಾ ಎಲೆಯೇ!

ಚೈನೀಸ್ ಮನಿ ಪ್ಲಾಂಟ್‌ನ (Pilea peperomioides) ಎಲೆಯ ನಾಳಗಳು ನಗರಾಭಿವೃದ್ಧಿಯಲ್ಲಿ ಬಳಸುವ ವೆರೊನೋಯ್ ಡಯಾಗ್ರಮ್ ಅನ್ನು ಹೋಲುತ್ತವೆ ಎಂದು ವಿಜ್ಞಾನಿಗಳು ಗಮನಿಸಿದ್ದಾರೆ. ಈ ವಿನ್ಯಾಸ ಹೇಗೆ ಮೂಡುತ್ತದೆ ಮತ್ತು ಅದರ ಪ್ರಯೋಜನವೇನು ಎಂಬುದನ್ನು ತಿಳಿಯಲು ಇನ್ನೂ ಸಂಶೋಧನೆ ಅಗತ್ಯವಿದೆ ಎಂದು ಲೇಖನ ತಿಳಿಸುತ್ತದೆ.

    © ಧನರಾಜ್ ಎಂ.

ಎಲೆ ಎಲೆಯೇ…
ವಿಸ್ಮಯಗಳು ನಿನ್ನ ಸಾಮಾನ್ಯ ಕಲೆಯೇ?
ನಿರೂಪಣೆಯು ಬರಿಯ ಹಸಿಯೇ?
ಅದರಲ್ಲಿಹುದು ವಿಚಾರ-ಕಲೆಗಳ ಸೆಲೆಯೇ…


ಚಿಕ್ಕಂದಿನಲ್ಲಿ ಶಾಲೆಗೆ ಹೋಗುತ್ತಿದ್ದ ದಾರಿಯಲ್ಲಿ ಸಿಗುತ್ತಿದ್ದ ಹಲವು ಗಿಡಮರಗಳ ಎಲೆಗಳಲ್ಲಿ ಒಂದು ಬಳ್ಳಿಯ ಎಲೆಯು ನಮಗೆ ವಿಶೇಷವಾಗಿ ಹತ್ತಿರವಾಗಿತ್ತು. ಅದಕ್ಕೆ ಕಾರಣವೆಂದರೆ, ಆ ಎಲೆಯ ತೊಟ್ಟು ಸ್ವಲ್ಪ ಉದ್ದವಾದದ್ದು. ಬರೀ ಉದ್ದವಾಗಿದ್ದರೆ ಅದರಲ್ಲಿ ಏನು ವಿಶೇಷತೆ ಎನ್ನುವಿರಾ? ಆ ಉದ್ದದ ತೊಟ್ಟು ನಮಗೆ ಬೇರೆ ಕೆಲಸಕ್ಕೆ ಬರುತ್ತಿತ್ತು. ಆ ಉದ್ದ ತೊಟ್ಟಿನ ಎಲೆಯನ್ನು ಕಿತ್ತು, ತೊಟ್ಟನ್ನು ಎಡಕ್ಕೊಮ್ಮೆ, ಬಲಕ್ಕೊಮ್ಮೆ ಮುರಿದು, ಕೊನೆಯಲ್ಲಿ ಎಲೆಯನ್ನು ಮಡಚಿ ಸ್ವಲ್ಪ ಹರಿದರೆ, ಅದರಲ್ಲಿ ನೆಕ್ಲೆಸ್‌ (ಸರ) ಮೂಡುತ್ತಿತ್ತು. ಇದನ್ನು ಹಲವಾರು ಗಿಡಗಳ ಎಲೆಗಳಿಂದ ಮಾಡಬಹುದಿತ್ತಾದರೂ ಈ ಎಲೆಯ ತೊಟ್ಟು ಸ್ವಲ್ಪ ಉದ್ದವಾಗಿದ್ದು, ಮುರಿದಾಗ ಕಿತ್ತುಹೋಗದಂತೆ ತೊಟ್ಟಿನ ಹೊರಪದರದಲ್ಲಿ ನಾರಿನ ಅಂಶ ಇದ್ದುದರಿಂದ ಸರ ಹೆಚ್ಚು ಉದ್ದಸಿಗುತ್ತಿತ್ತು.

ಹೀಗೆ ನಮ್ಮ ಸುತ್ತಲಿರುವ ಹತ್ತಾರು ವಸ್ತುಗಳನ್ನು ಬಳಸಿಕೊಂಡು ಅವುಗಳಲ್ಲಿ ಆನಂದ ಪಡುವ ನಾವು, ಬೆಳೆದಂತೆ ಅವುಗಳಿಂದ ನಮಗಾಗುವ ಆರ್ಥಿಕ ಉಪಯೋಗವನ್ನು ಹುಡುಕಲು ಶುರು ಮಾಡುತ್ತೇವೆ. ಉದಾಹರಣೆಗೆ, ಮಿಂಚಿನ ವೇಗದಲ್ಲಿ ಬೇಟೆಯಾಡುವ ಮಿಂಚುಳ್ಳಿ ಪಕ್ಷಿ, ನೀರಿನೊಳಗಿರುವ ಮೀನನ್ನು ಅಷ್ಟು ಸರಾಗವಾಗಿ, ನಿಖರವಾಗಿ ಬೇಟೆಯಾಡಲು ಅದರ ಕೊಕ್ಕಿನ ಆಕಾರ ಬಹುಮುಖ್ಯ ಪಾತ್ರವಹಿಸುತ್ತದೆ. ಇದನ್ನು ತಿಳಿದ ನಾವು, ಅದರಿಂದ ಪ್ರೇರಣೆ ಪಡೆದು, ಜಗತ್ತಿನ ಅತಿ ವೇಗದ ರೈಲುಗಳಲ್ಲಿ ಒಂದಾದ ಬುಲೆಟ್‌ ರೈಲಿನ ವೇಗವನ್ನು ಹೆಚ್ಚಿಸಲು ಸಾಧ್ಯವಾಗಿದೆ.

ಹೀಗೆ ಪ್ರಕೃತಿಯಿಂದ ಎಷ್ಟೋ ವಿಚಾರಗಳಲ್ಲಿ ಆಲೋಚನೆಗಳನ್ನು ಹಾಗೂ ಸಮಸ್ಯೆಗಳಿಗೆ ಪರಿಹಾರಗಳನ್ನು ಎರವಲು ಪಡೆಯುವ ನಾವು, ಎಲೆಗಳಿಂದ ಏನಾದರೂ ಉಪಯೋಗ ಪಡೆದುಕೊಂಡಿದ್ದೇವೆಯೇ ಎಂದು ಯೋಚಿಸಿದರೆ, ತಕ್ಷಣ ನೆನಪಿಗೆ ಬರುವಷ್ಟು ವಿಚಾರಗಳು ಸಿಗುವುದಿಲ್ಲ. ಆದರೆ ಇಲ್ಲೊಂದು ಚೈನೀಸ್ ಮನಿ ಪ್ಲಾಂಟ್‌ನ (Pilea peperomioides) ಎಲೆಯಲ್ಲಿ ಗಮನಿಸಿದ ವಿಚಾರವೊಂದು ಮುಂದೆ ಯಾವುದಾದರೂ ಒಂದು ಹೊಸ ಆವಿಷ್ಕಾರಕ್ಕೆ ನಾಂದಿಯಾಗಬಹುದು ಎನಿಸುತ್ತಿದೆ.

    © ಧನರಾಜ್ ಎಂ.

ಸಾಮಾನ್ಯವಾಗಿ ಎಲೆಗಳ ಮೇಲೆ ಒಂದು ರೀತಿಯ ಬಲೆಯಂತಿರುವ ರಚನೆಯನ್ನು ಗಮನಿಸಿರುತ್ತೀರಿ. ಆ ಬಲೆಯು ಎಲೆಯೊಳಗೆ ನೀರು ಮತ್ತು ಪೋಷಕಾಂಶಗಳನ್ನು ಸಾಗಿಸುವ ನಾಳಗಳಿಂದ ರೂಪುಗೊಂಡಿರುತ್ತದೆ. ಇಲ್ಲಿ, ಚೈನೀಸ್ ಮನಿ ಪ್ಲಾಂಟ್‌ನ ಎಲೆಯಲ್ಲಿ ಆ ರಚನೆ ಸ್ವಲ್ಪ ವಿಶೇಷವಾಗಿದೆ. ನಾವು ಗಮನಿಸಿದಂತೆ, ಎಲೆಗಳ ನಾಳಗಳಲ್ಲಿ ಮೊದಲು ಎಲೆಯನ್ನು ಎರಡು ಭಾಗ ಮಾಡುವಂತೆ ಒಂದು ದೊಡ್ಡ ನಾಳವಿರುತ್ತದೆ. ಉಳಿದ ನಾಳಗಳು ಎಡಬಲಕ್ಕೆ ಚಲಿಸಿ ಕವಲೊಡೆಯುತ್ತವೆ. ಅವು ಮತ್ತೆ ಕವಲೊಡೆದು ಎಲೆಯ ಬಹುತೇಕ ಎಲ್ಲಾ ಭಾಗಗಳಿಗೂ ಹರಡುತ್ತವೆ. ಈ ಚೈನೀಸ್ ಮನಿ ಪ್ಲಾಂಟ್‌ನಲ್ಲೂ ಅದೇ ರೀತಿ ಇದೆ. ಆದರೆ ಆ ನಾಳಗಳು ಸಾಗಿರುವ ರೀತಿ ಬೇರೆ ಗಿಡಗಳ ಎಲೆಗಳಿಗಿಂತ ವಿಭಿನ್ನವಾಗಿದೆ. ಆ ವಿಭಿನ್ನತೆಯಿಂದ ಮೂಡಿದ ಆಕೃತಿಯೂ ವಿಶೇಷವಾಗಿದೆ.


ನೋಡಿ, ಈ ಚಿತ್ರದಲ್ಲಿ ತೋರಿಸಿರುವಂತೆ, ಈ ಆಕೃತಿಯು ನಾವು ನಗರಾಭಿವೃದ್ಧಿಯಲ್ಲಿ ಬಳಸುವ ‘ವೆರೊನೋಯ್ ಡಯಾಗ್ರಮ್‌’ (Voronoi diagram) ಅನ್ನು ಹೋಲುತ್ತದೆ. ಹೌದು, ಬಲಕ್ಕಿರುವ ಚಿತ್ರ ವೆರೊನೋಯ್ ಡಯಾಗ್ರಮ್; ಎಡಕ್ಕಿರುವುದು ಅದನ್ನೇ ಹೋಲುವ ಚೈನೀಸ್ ಮನಿ ಪ್ಲಾಂಟ್‌ನ ಎಲೆಯ ಚಿತ್ರ. ನೋಡಿ, ಎರಡರಲ್ಲೂ ಎಷ್ಟು ಸಾಮ್ಯತೆ ಇದೆ?



ಈಗ ವೆರೊನೋಯ್ ಡಯಾಗ್ರಮ್ ಅನ್ನು ಅರ್ಥೈಸಿಕೊಳ್ಳೋಣ. ಈ ಆಕೃತಿಯನ್ನು ರೂಪಿಸಲು ಒಂದು ಜಾಗದ ವಿಸ್ತೀರ್ಣವನ್ನು ಹಲವು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಆ ವಿಂಗಡಣೆ ಹೇಗಿರಬೇಕು ಎಂದರೆ, ಪ್ರತಿಯೊಂದು ಭಾಗದಲ್ಲಿಯೂ ಒಂದು ನಿರ್ದಿಷ್ಟ ಬಿಂದುವಿರುತ್ತದೆ. ಆ ಭಾಗದ ಯಾವುದೇ ಸ್ಥಳದಿಂದ ನೋಡಿದರೂ, ಆ ಬಿಂದುವೇ ಇತರ ಬಿಂದುಗಳಿಗಿಂತ ಹತ್ತಿರದಲ್ಲಿರಬೇಕು. ಹೀಗೆ ರೂಪುಗೊಳ್ಳುವ ವಿನ್ಯಾಸವನ್ನು ವೆರೊನೋಯ್ ಡಯಾಗ್ರಮ್ ಎನ್ನುತ್ತಾರೆ.

ಇದರಿಂದ ಆಗುವ ಪ್ರಯೋಜನವಾದರೂ ಏನು? ನಗರಗಳನ್ನು ರೂಪಿಸುವಾಗ ಅಥವಾ ವಿನ್ಯಾಸಗೊಳಿಸುವಾಗ ಇದು ಉಪಯುಕ್ತವಾಗಬಹುದು. ಉದಾಹರಣೆಗೆ, ತುರ್ತು ಸಂದರ್ಭದಲ್ಲಿ ಈ ವಿಂಗಡಣೆಯ ಆಧಾರದ ಮೇಲೆ ರೂಪಿಸಿದ ನಗರದಲ್ಲಿ ಬೆಂಕಿಯ ಅವಘಡ ಸಂಭವಿಸಿದರೆ, ಪ್ರತಿಯೊಂದು ಪ್ರದೇಶಕ್ಕೂ ಹತ್ತಿರದಲ್ಲಿರುವ ಅಗ್ನಿಶಾಮಕ ಠಾಣೆಯನ್ನು ಗುರುತಿಸಬಹುದು. ಇದರಿಂದ ತುರ್ತು ಸೇವೆಗಳ ವ್ಯಾಪ್ತಿಯನ್ನು ಯೋಜಿಸಲು ನೆರವಾಗುತ್ತದೆ. ಹಾಗೆಯೇ, ನೀರಿನ ವಿತರಣಾ ವ್ಯವಸ್ಥೆ ಮತ್ತು ಇತರ ಸೇವೆಗಳ ಯೋಜನೆಗಳಲ್ಲಿಯೂ ಈ ವಿನ್ಯಾಸ ಉಪಯುಕ್ತವಾಗಬಹುದು.

ಈ ವೆರೊನೋಯ್ ಡಯಾಗ್ರಮ್‌ಗೆ ಹೋಲುವ ವಿನ್ಯಾಸ ಎಲೆಯಲ್ಲಿ ಕಂಡುಬಂದಿರುವುದು ಆ ಎಲೆಗೆ ಯಾವುದೋ ಒಂದು ಮುಖ್ಯ ಪ್ರಯೋಜನವನ್ನು ನೀಡುತ್ತಿರಬಹುದು ಎಂಬ ಕುತೂಹಲವನ್ನು ಸಂಶೋಧಕರಲ್ಲಿ ಮೂಡಿಸಿದೆ.

© Navlakha lab_CSHL

ಬಹುಶಃ, ಎಲೆಯಿಂದ ನೀರನ್ನು ಹೊರಹಾಕುವ ಹೈಡಥೋಡ್‌ (hydathodes) ಎಂಬ ಸಣ್ಣ ರಂಧ್ರಗಳಿಂದ ನೀರನ್ನು ಸಾಗಿಸುವ ಪ್ರಮುಖ ನಾಳಗಳನ್ನು ದೂರವಿಡುವ ವಿನ್ಯಾಸ ಇದಾಗಿರಬಹುದು. ಈ ರಂಧ್ರಗಳ ಮೂಲಕ ಕೆಲವು ಸಸ್ಯಗಳಲ್ಲಿ ಹೆಚ್ಚುವರಿ ನೀರು ಹೊರಹೋಗುತ್ತದೆ. ನಾಳಗಳು ಮತ್ತು ಈ ರಂಧ್ರಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಸಸ್ಯಗಳ ಬೆಳವಣಿಗೆಯಲ್ಲಿ ಆಕ್ಸಿನ್‌ (auxin) ಎಂಬ ಹಾರ್ಮೋನ್ ಪ್ರಮುಖ ಪಾತ್ರವಹಿಸುತ್ತದೆ. ಚೈನೀಸ್ ಮನಿ ಪ್ಲಾಂಟ್‌ನ ಎಲೆಗಳ ಬೆಳವಣಿಗೆಯನ್ನು ವಿವರಿಸಲು ರೂಪಿಸಿದ ಕಂಪ್ಯೂಟರ್ ಮಾದರಿಗಳ ಪ್ರಕಾರ, ಈ ಹಾರ್ಮೋನ್‌ನ ಅಲೆಗಳು ರಂಧ್ರಗಳ ಸುತ್ತ ಹರಡಿ, ಪರಸ್ಪರ ಸಂಧಿಸುವ ಮೂಲಕ ನಾಳಗಳ ವಿನ್ಯಾಸ ರೂಪುಗೊಳ್ಳಬಹುದು. ಆದರೆ ಈ ವಿನ್ಯಾಸದ ನಿಜವಾದ ಪ್ರಯೋಜನವೇನು ಮತ್ತು ಅದು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯಲು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಈ ಸಂಶೋಧನೆಯಲ್ಲಿ ಭಾಗಿಯಾದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂದೊಂದು ದಿನ ಈ ಸಂಶೋಧನೆ ಮುಂದುವರಿದು, ಅದರಿಂದ ಹೊಸದೊಂದು ವಿಚಾರ ಹೊರಬಂದು, ಆ ವಿಚಾರವನ್ನು ಬಳಸಿ ಮಹತ್ತರವಾದ ಆವಿಷ್ಕಾರವೊಂದು ಸಾಧ್ಯವಾಗಲಿ ಎನ್ನುವುದು ನಮ್ಮೆಲ್ಲರ ಆಶಯ.

© ಧನರಾಜ್ ಎಂ.

ಅತಿಸಾಮಾನ್ಯವಾಗಿ ಕಾಣುವ ಈ ಎಲೆಗಳೂ ಸಹ ವಿಜ್ಞಾನಿಗಳನ್ನು ಮತ್ತು ವಿಜ್ಞಾನ ಚಿಂತಕರನ್ನು ಅತಿಯಾಗಿ ಕಾಡಬಲ್ಲ ವಿಚಾರಗಳನ್ನು ತಮ್ಮೊಳಗೆ ಇಟ್ಟುಕೊಂಡಿರಬಹುದು ಎನ್ನುವುದಕ್ಕೆ ಈ ಸಂಶೋಧನೆಯೇ ಸಾಕ್ಷಿ. ವಿಜ್ಞಾನವೆಂದರೆ ಅದಲ್ಲವೇ?

ವಿ (ವಿಶೇಷ, ವಿಭಿನ್ನ, ವಿಸ್ಮಯ, ವಿವಿಧ, ವಿಮಲ, ವಿನೂತನ, ವಿಚಾರಿತ, ವಿಕಸಿತ, ವಿಸ್ತೃತ, ವಿಚಿತ್ರ…) ಜ್ಞಾನ!

ಹುಡುಕಿದವರಿಗೆ ಹುಡುಕಿದಷ್ಟು.
ಕಂಡವರಿಗೆ ಕಂಡಷ್ಟು.
ಅನುಭವಿಸಿದವರಿಗೆ ಅನುಭವಿಸಿದಷ್ಟು!


ಮೂಲ: https://www.snexplores.org/article/plant-leaves-veins-geometric-pattern

ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ


                 

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *