ಪ್ರಕೃತಿ ಬಿಂಬ
ಚಿಟ್ಟು ಗಿಳಿ © ಚೈತನ್ಯ ಶರ್ಮ
ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ವಿವಿಧ ಪ್ರದೇಶಗಳ ಕಾಡು ಮತ್ತು ಕೃಷಿ ಭೂಮಿಗಳಲ್ಲಿ ಕಂಡುಬರುವ ಈ ಪುಟ್ಟ ಗಿಳಿಯು ಸಿಟ್ಟಾಕುಲಿಡೇ (Psittaculidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಲೋರಿಕ್ಯುಲಸ್ ವರ್ನಾಲಿಸ್ (Loriculus vernalis) ಎಂದು ಕರೆಯಲಾಗುತ್ತದೆ. ಕೇವಲ 14 ಸೆಂ. ಮೀ. ಗಾತ್ರದಲ್ಲಿರುವ ಇದರ ದೇಹವು ಹಸಿರು ಬಣ್ಣದ್ದಾಗಿದ್ದು, ಕೊಕ್ಕು ಮತ್ತು ಬಾಲದ ಮೇಲ್ಭಾಗವು (Rump) ಕೆಂಪು ಬಣ್ಣವಿರುತ್ತದೆ. ಗಂಡು ಹಕ್ಕಿಯು, ಕುತ್ತಿಗೆಯ ಮುಂಭಾಗದಲ್ಲಿ ನೀಲಿ ಬಣ್ಣದ ತೇಪೆಯನ್ನು ಹೊಂದಿರುತ್ತದೆ. ಹೆಣ್ಣು ಹಕ್ಕಿಯಲ್ಲಿ ಹಸಿರು ತೇಪೆಯಿರುತ್ತದೆ. ಗುಂಪುಗಳಲ್ಲಿ ವಾಸಿಸುತ್ತಾ ಮರದ ಪೊಟರೆಗಳಲ್ಲಿ ಗೂಡು ಕಟ್ಟಿ 2-4 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ. ಹಣ್ಣುಗಳು, ಬೀಜಗಳು, ಹೂವಿನ ಮೊಗ್ಗು ಮತ್ತು ಮಕರಂದವನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ.

ದಕ್ಷಿಣ ಏಷ್ಯಾದ ನೇಪಾಳ, ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಚೀನಾ ಮತ್ತು ಇಂಡೋನೇಷ್ಯಾದ ಕಾಡುಗಳಲ್ಲಿ ಕಂಡುಬರುವ ಈ ಪುಟ್ಟ ಹಕ್ಕಿಯು ಸಿಟ್ಟಿಡೇ (Sittidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಸಿಟ್ಟಾ ಫ್ರಂಟಾಲಿಸ್ (Sitta frontalis) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ನೇರಳೆ ಮತ್ತು ನೀಲಿ ಬಣ್ಣದಲ್ಲಿದ್ದು, ಬಿಳಿ ಬಣ್ಣದ ಕತ್ತು, ಹಳದಿ ಕಣ್ಣುಗಳು, ಕೆಂಪು ಕೊಕ್ಕು, ತೆಳುವಾದ ಕಂದು ಬಣ್ಣದ ಕೆಳಭಾಗವನ್ನು ಹೊಂದಿರುತ್ತದೆ. ಮರದ ಪೊಟರೆಗಳಲ್ಲಿ ಅಥವಾ ಬಿರುಕುಗಳಲ್ಲಿ ಹುಲ್ಲು, ಪಾಚಿ ಮತ್ತು ಗರಿಗಳಿಂದ ಗೂಡನ್ನು ಕಟ್ಟಿ, ಬಿಳಿಯ ಬಣ್ಣದ ಕೆಂಪು ಚುಕ್ಕೆಗಳಿರುವ 3-6 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಉತ್ತರ ಭಾರತದಲ್ಲಿ ಸಂತಾನೋತ್ಪತ್ತಿಯು ಬೇಸಿಗೆಯಲ್ಲಿ ನಡೆದರೆ, ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಏಪ್ರಿಲ್ ನಿಂದ ಜೂನ್ ಹಾಗೂ ಜನವರಿ ಯಿಂದ ಮೇ ವರೆಗೆ ನಡೆಯುತ್ತದೆ. ಹಲವಾರು ಕೀಟಗಳು ಮತ್ತು ಜೇಡಗಳು ಇವುಗಳ ಆಹಾರವಾಗಿವೆ.

ಭಾರತೀಯ ಉಪಖಂಡದ ಅರಣ್ಯ ಪ್ರದೇಶ ಮತ್ತು ತೆರೆದ ಕಾಡುಪ್ರದೇಶ ಹಾಗೂ ನಗರದ ಉದ್ಯಾನಗಳಿಗೆ ಸ್ಥಳೀಯವಾಗಿರುವ ಈ ಕೆಂದಲೆ ಗಿಳಿಯು, ಸಿಟ್ಟಾಕುಲಿಡೇ (Psittaculidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಸಿಟ್ಟಾಕುಲಾ ಸೈನೋಸೆಫಲಾ (Psittacula cyanocephala) ಎಂದು ಕರೆಯಲಾಗುತ್ತದೆ. ದೇಹವು ಹಸಿರಾಗಿದ್ದು, ಗಂಡು ಹಕ್ಕಿಯು ಗುಲಾಬಿ-ನೇರಳೆ ಬಣ್ಣದ ತಲೆಯನ್ನು ಹೊಂದಿದೆ. ಹೆಣ್ಣು ಹಕ್ಕಿಯು ಬೂದು-ನೀಲಿ ಬಣ್ಣದ ತಲೆಯನ್ನು ಹೊಂದಿರುತ್ತದೆ. ವಿವಿಧ ರೀತಿಯ ಕರ್ಕಶವಾದ ಕೂಗುಗಳನ್ನು ಮಾಡುತ್ತದೆ. ಜೋಡಿ ಹಕ್ಕಿಗಳು ಮರದ ಕಾಂಡಗಳಲ್ಲಿ ರಂಧ್ರಗಳನ್ನು ಮಾಡಿ ಗೂಡುಕಟ್ಟುತ್ತವೆ ಹಾಗೂ ಸಾಮಾನ್ಯವಾಗಿ ಹೆಣ್ಣು ಹಕ್ಕಿಯು 4–6 ಬಿಳಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಧಾನ್ಯಗಳು, ಹಣ್ಣುಗಳು ಮತ್ತು ಹೂವುಗಳು ಇವುಗಳ ಆಹಾರವಾಗಿವೆ.

ಪಶ್ಚಿಮ ಘಟ್ಟಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮತ್ತು ಕಾಫಿ ತೋಟಗಳಲ್ಲಿ ಕಂಡುಬರುವ ಈ ಕೆಂಪುಕತ್ತಿನ ಕಂಚುಕುಟಿಗ ಹಕ್ಕಿಯು ಮೆಗಲೈಮಿಡೆ (Megalaimidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಸೈಲೋಪೋಗನ್ ಮಲಬಾರಿಕಸ್ (Psilopogon malabaricus) ಎಂದು ಕರೆಯಲಾಗುತ್ತದೆ. ಇವು ಪ್ರಕಾಶಮಾನವಾದ ಹಸಿರು ಬಣ್ಣದಲ್ಲಿದ್ದು, ಎದ್ದುಕಾಣುವ ಕಡುಗೆಂಪು ಮುಖ, ಹಣೆ ಮತ್ತು ಗಂಟಲು ಹಾಗೂ ಕಣ್ಣಿನ ಮೇಲೆ ಮತ್ತು ಕಿರೀಟದ ಹಿಂಭಾಗದ ಸುತ್ತಲೂ ಕಪ್ಪು ಪಟ್ಟಿಯನ್ನು ಹೊಂದಿರುತ್ತದೆ. ದೇಹದ ಕೆಳಭಾಗವು ಹಳದಿ-ಹಸಿರು ಅಥವಾ ಮಸುಕಾದ ನೀಲಿ-ಹಸಿರು ಬಣ್ಣದಲ್ಲಿರುತ್ತದೆ. ರಂಧ್ರವನ್ನು ತೆಳುವಾದ ಕೊಂಬೆಗಳ ಕೆಳಭಾಗದಲ್ಲಿ ಮಾಡಿ ಎರಡು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಹಣ್ಣುಗಳು ಇವುಗಳ ಮುಖ್ಯ ಆಹಾರವಾಗಿದೆ. ಕೆಲವೊಮ್ಮೆ ಮರಿಹುಳುಗಳು, ಗೆದ್ದಲುಗಳು, ಮತ್ತು ಇರುವೆಗಳನ್ನು ತಿನ್ನುತ್ತದೆ.
ಚಿತ್ರ : ಚೈತನ್ಯ ಶರ್ಮ
ಲೇಖನ: ದೀಪ್ತಿ ಎನ್.



