ಅಶ್ವತ್ಥ ಮರ: ಸಂಸ್ಕೃತಿ ಮತ್ತು ಪ್ರಕೃತಿಯ ಸೇತುವೆ
Peepul tree
Ficus religiosa
© ಧನರಾಜ್ ಎಂ.
ಏನೇ ಕಷ್ಟ ಬಂದ್ರೂ ನಮ್ಮ ಹಿರಿಯರು ಹೇಳೋ ಒಂದು ಸಾಮಾನ್ಯ ಮಾತು “ಅರಳಿ ಮರ ಸುತ್ತು! ಸರಿ ಆಗುತ್ತೆ” ಎಂದು. ಏನೇ ಸಮಸ್ಯೆ ಇದ್ರೂ ಅರಳಿ ಮರ ಸುತ್ತಿದ್ರೆ ಒಳ್ಳೇದಾಗುತ್ತೆ ಅನ್ನೋ ನಂಬಿಕೆ ನಮ್ಮಲ್ಲಿ ಬಹಳ ಹಿಂದಿನಿಂದಲೂ ಇದೆ. ಇದು ನಿಜವೋ? ಸುಳ್ಳೋ? ಅದರ ಮಾತು ಈಗ ಬಿಡಿ! ನಾವು ಈಗ ಇದರ ವೈಜ್ಞಾನಿಕ ಮಾಹಿತಿಯ ಬಗ್ಗೆ ತಿಳಿದು ಯಾಕೆ ಹಿರಿಯರು ಅರಳಿ ಮರಕ್ಕೆ ಅಷ್ಟು ಪ್ರಾಮುಖ್ಯತೆ ನೀಡಿರಬಹುದು ಎಂಬುದನ್ನು ಒಮ್ಮೆ ಅವಲೋಕಿಸೋಣ.
ಮೊರಾಸಿ (Moraceae) ಕುಟುಂಬಕ್ಕೆ ಸೇರಿದ ಈ ಮರವು ಭಾರತದ ಸಾಂಸ್ಕೃತಿಕ ಹಾಗೂ ಪರಿಸರ ಮಹತ್ವ ಹೊಂದಿರುವ ಮರಗಳಲ್ಲಿ ಒಂದು.
ಎಲೆಯೇ ಇದರ ಗುರುತು: ಹೃದಯಾಕಾರದ ಎಲೆ, ಉದ್ದ ಬಾಲದಂತಿರುವ ತುದಿ ಮತ್ತು ತೆಳುವಾದ ಎಲೆಯ ರಚನೆ ಅರಳಿ ಮರವನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ. ಎಲೆಯ ಉದ್ದನೆಯ ತುದಿಯು ಮಳೆಯ ನೀರು ಜಾರಿಹೋಗಲು ನೆರವಾಗುತ್ತದೆ. ಈ ವಿಶಿಷ್ಟ ಎಲೆಗಳೇ ಅಶ್ವತ್ಥ ಮರದ ಪ್ರಮುಖ ಗುರುತುಗಳಲ್ಲಿ ಒಂದು.
ಹೂವಿನ ಹಿಂದಿರುವ ಕುತೂಹಲ: ಅಶ್ವತ್ಥಕ್ಕೆ ಹೂಗಳೇ ಇಲ್ಲವೆಂದು ಕೆಲವರು ಭಾವಿಸುತ್ತಾರೆ. ವಾಸ್ತವವಾಗಿ ಹೂವುಗಳು ಹೊರಗೆ ಕಾಣಿಸುವುದಿಲ್ಲ. ಅವು ಸೈಕೋನಿಯಂ (syconium) ಎಂಬ ವಿಶೇಷ ರಚನೆಯೊಳಗೆ ಬೆಳೆಯುತ್ತವೆ. ಈ ಕಾರಣದಿಂದ ಈ ಮರದ ಹೂವು ಪ್ರಕೃತಿಯಲ್ಲಿರುವ ಒಂದು ಅದ್ಬುತ ವಿನ್ಯಾಸವೆನಿಸುತ್ತದೆ

ಒಂದು ಸಣ್ಣ ಕೀಟದೊಂದಿಗೆ ದೊಡ್ಡ ಸಂಬಂಧ: ಈ ಮರದ ಸಂತಾನೋತ್ಪತ್ತಿಯಲ್ಲಿ Platyscapa quadraticeps ಎಂಬ ಸಣ್ಣ ಅಂಜೂರದ ಕಣಜ (fig wasp) ಪ್ರಮುಖ ಪಾತ್ರವಹಿಸುತ್ತದೆ. ಈ ಕಣಜವು ಅಶ್ವತ್ಥದ ಸೈಕೋನಿಯಂನೊಳಗೆ ಪ್ರವೇಶಿಸಿ ಪರಾಗಸ್ಪರ್ಶಕ್ಕೆ ನೆರವಾಗುತ್ತದೆ. ಮರವು ಕಣಜಕ್ಕೆ ಸಂತಾನೋತ್ಪತ್ತಿಯ ತಾಣವನ್ನು ಒದಗಿಸಿದರೆ, ಕಣಜವು ಮರದ ಪರಾಗಸ್ಪರ್ಶಕ್ಕೆ ನೆರವಾಗುತ್ತದೆ. ಮರ ಮತ್ತು ಕೀಟದ ನಡುವಿನ ಈ ಸಂಬಂಧವು ಪರಸ್ಪರ ಅವಲಂಬಿತ ಸಹಜೀವನದ ಆಸಕ್ತಿದಾಯಕ ಉದಾಹರಣೆಯಾಗಿದೆ.
ಪಕ್ಷಿಗಳ ಊಟದ ಮನೆ: ಇದರ ಸಣ್ಣ ಹಣ್ಣುಗಳು ಮಾಗಿದಾಗ ವಿವಿಧ ಪಕ್ಷಿಗಳಿಗೆ ಆಹಾರವಾಗುತ್ತವೆ. ಪಕ್ಷಿಗಳು ಹಣ್ಣುಗಳನ್ನು ತಿಂದು, ಬೀಜಗಳನ್ನು ಬೇರೆ ಸ್ಥಳಗಳಿಗೆ ಹರಡುವುದರಿಂದ ಈ ಮರದ ಬೀಜ ಪ್ರಸರಣಕ್ಕೂ ನೆರವಾಗುತ್ತದೆ. ಹೀಗೆ ಅಶ್ವತ್ಥ ಮರವು ಪಕ್ಷಿಗಳ ಆಹಾರ ಸರಪಳಿಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ.
ಬೀಜದಿಂದ ದೊಡ್ಡ ಮರದವರೆಗೆ: ಈ ಮರದ ಬೀಜಗಳು ಕೆಲವೊಮ್ಮೆ ಬೇರೆ ಮರಗಳ ಕೊಂಬೆಗಳ ಮೇಲೆ ಅಥವಾ ಕಟ್ಟಡಗಳ ಬಿರುಕುಗಳಲ್ಲಿಯೂ ಮೊಳಕೆಯೊಡೆಯುವುದನ್ನು ನೀವು ನೋಡಿರಬಹುದು. ಆರಂಭದಲ್ಲಿ ಸಣ್ಣ ಸಸಿಯಾಗಿ ಬೆಳೆಯುವ ಇದು, ಕ್ರಮೇಣ ತನ್ನ ಬೇರುಗಳನ್ನು ಕೆಳಕ್ಕೆ ಹರಡುತ್ತಾ ದೊಡ್ಡ ಮರವಾಗಿ ಬೆಳೆಯಬಲ್ಲದು. ಕಟ್ಟಡಗಳ ಬಿರುಕುಗಳಲ್ಲಿ ಬೆಳೆದರೆ, ಅದರ ಬೇರುಗಳ ಬೆಳವಣಿಗೆಯಿಂದ ಕಟ್ಟಡಕ್ಕೆ ಹಾನಿಯೂ ಉಂಟಾಗಬಹುದು.

ಜೀವವೈವಿಧ್ಯಕ್ಕೆ ಕೊಡುಗೆ: ಈ ಮರದ ಹಣ್ಣುಗಳನ್ನು ಹಲವು ಪಕ್ಷಿಗಳು ಮತ್ತು ಸಣ್ಣ ಜೀವಿಗಳು ಆಹಾರವಾಗಿ ಬಳಸುತ್ತವೆ. ಹೀಗಾಗಿ ಪಕ್ಷಿಗಳು ಸೇರಿದಂತೆ ಹಲವು ಜೀವಿಗಳಿಗೆ ಆಹಾರ ಮತ್ತು ಆಶ್ರಯ ಒದಗಿಸುತ್ತದೆ.
ಸಾಂಸ್ಕೃತಿಕ ಮಹತ್ವ: ಈ ಮರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಹಿಂದೂ, ಬೌದ್ಧ ಮತ್ತು ಜೈನ ಪರಂಪರೆಗಳಲ್ಲಿಯೂ ಮಹತ್ವವಿದೆ. ಬೌದ್ಧ ಪರಂಪರೆಯಲ್ಲಿ, ಗೌತಮ ಬುದ್ಧರು ಜ್ಞಾನೋದಯ ಪಡೆದದ್ದು ಅಶ್ವತ್ಥದ ಪ್ರಭೇದವಾದ ಬೋಧಿವೃಕ್ಷದ ಕೆಳಗೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಮರವು ಪ್ರಕೃತಿಯ ಸಂಕೇತವಾಗಿರುವುದರ ಜೊತೆಗೆ ಆಧ್ಯಾತ್ಮಿಕ ಮಹತ್ವವನ್ನೂ ಹೊಂದಿದೆ.
ಪರಿಸರದ ದೃಷ್ಟಿಯಿಂದ: ದೊಡ್ಡ ಗಾತ್ರಕ್ಕೆ ಬೆಳೆಯುವ ಈ ಮರವು ಉತ್ತಮ ನೆರಳನ್ನು ನೀಡುತ್ತದೆ. ಇದರ ವಿಶಾಲವಾದ ಮೇಲಾವರಣವು ಸುತ್ತಮುತ್ತಲಿನ ಪ್ರದೇಶವನ್ನು ತಂಪಾಗಿಡಲು ನೆರವಾಗುತ್ತದೆ. ಇತರ ಹಸಿರು ಪ್ರದೇಶಗಳಂತೆ, ನಗರ ಪ್ರದೇಶಗಳಲ್ಲಿಯೂ ಸ್ಥಳೀಯ ತಾಪಮಾನ ಮತ್ತು ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ಹೀಗೆ ಸಾಕಷ್ಟು ವಿಶಿಷ್ಟ ಗುಣಗಳನ್ನು ಹೊಂದಿರುವ ಈ ಮರದ ಗಾಳಿ ಅಷ್ಟೇ ತಂಪು.
ಆದರೆ ನಮ್ಮ ಹಿರಿಯರು ಹೇಳೋ ಪ್ರಕಾರ ಮದ್ವೆ ಆಗಿಲ್ವಾ ಅರಳಿ ಮರ ಸುತ್ತು, ಮಕ್ಕಳಿಲ್ವ ಅರಳಿ ಮರ ಸುತ್ತು, ದುಡ್ಡು ಇಲ್ವಾ ಅರಳಿ ಮರ ಸುತ್ತು. ಯಪ್ಪಾ ಅದಕ್ಕೆ ದಾರಗಳನ್ನ ಸುತ್ತೊದೇನು ಕಡ್ಡಿ ಅಚ್ಚೋದೇನು ನೋಡೋಕೆ ಎರಡು ಕಣ್ಣು ಸಾಲಲ್ಲ!
ಆದರೆ, ಒಂದು ವಿಷಯ ಗೊತ್ತಿರಲಿ. ಅಶ್ವತ್ಥ ಮರವು ಇತರ ಹಸಿರು ಸಸ್ಯಗಳಂತೆ ದ್ಯುತಿಸಂಶ್ಲೇಷಣೆಯ ಮೂಲಕ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಬೆಳಗಿನ ಸಮಯದಲ್ಲಿ ಪ್ರಕೃತಿಯ ನಡುವೆ ನಡೆಯುವುದು ಮನಸ್ಸಿಗೆ ನೆಮ್ಮದಿ ನೀಡಬಹುದು. ಆದರೆ ಅಶ್ವತ್ಥ ಮರವನ್ನು ಸುತ್ತುವುದರಿಂದಲೇ ಶ್ವಾಸಕೋಶದ ಸಮಸ್ಯೆಗಳು ಸುಧಾರಿಸುತ್ತವೆ ಅಥವಾ ನಿರ್ದಿಷ್ಟ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಲು ಸಾಕಷ್ಟು ವೈಜ್ಞಾನಿಕ ಆಧಾರವಿಲ್ಲ.
ನಿಮಗೂ ಯಾರಾದ್ರು “ಮರ ಸುತ್ತು, ಅದಾಗುತ್ತೆ, ಇದಾಗುತ್ತೆ” ಅಂತ ತಲೆ ಕೆಡಿಸಿದ್ದಾರಾ? ಅಂಥವರು ನನ್ನ ನೆನಪಿಸಿಕೊಳ್ಳೋದನ್ನ ಮಾತ್ರ ಮರೀಬೇಡಿ, ಆಯ್ತಾ?

ಲೇಖನ: ಹರ್ಷಿತ ಪಿ. ಹನುಮಯ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆ



