ಒಂದು ಅನಿರೀಕ್ಷಿತ ಕರೆ
© ಕಾರ್ತಿಕ್ ಜಿ. ಸಾಲೆಹಿತ್ತಲ
ನಾನು ಚಿಟ್ಟೆಗಳನ್ನು ವೀಕ್ಷಿಸುವ ಮತ್ತು ಅವುಗಳ ಕುರಿತು ಅಧ್ಯಯನ ಮಾಡುವ ಹವ್ಯಾಸಿ. ಆದರೆ, ಈ ಹವ್ಯಾಸ ಒಂದು ದಿನ ನನ್ನನ್ನು ಅಪರೂಪದ ಶೋಧಯಾತ್ರೆಗೆ ಕರೆದೊಯ್ಯುವುದೆಂದು ಕನಸುಮನಸಿನಲ್ಲೂ ಎಣಿಸಿರಲಿಲ್ಲ.
ಅದು 2022ರ ಏಪ್ರಿಲ್ ತಿಂಗಳು. ಎಲ್ಲೆಡೆ ದರ್ಬೆ ಜಡ್ಡಿಗಳು (ಒಣ ಹುಲ್ಲುಗಾವಲುಗಳು) ಬಿಸಿಲಿಗೆ ಒಣಗಿ ನಿಂತು, ಕಾಳ್ಗಿಚ್ಚಿಗೆ ಆಹುತಿಯಾಗಲು ತಯಾರಾದಂತೆ ಕಾಣುತ್ತಿದ್ದವು. ಆದರೆ, ಚಿಟ್ಟೆಪ್ರಿಯರಿಗೆ ಇದು ಹಬ್ಬದ ಕಾಲ. ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕೆಲವು ಚಿಟ್ಟೆ ಪ್ರಭೇದಗಳು ನದಿಯ ಒಣಗಿದ ದಡಗಳಲ್ಲಿ ಗುಂಪುಗೂಡಿ, ಲವಣಗಳನ್ನು ಹೀರುವ ವಿಸ್ಮಯದ ದೃಶ್ಯವನ್ನು ಸೃಷ್ಟಿಸುತ್ತಿದ್ದವು.
ಈ ವಿಸ್ಮಯವನ್ನು ಜನರಿಗೆ ಪರಿಚಯಿಸುವ ಸಲುವಾಗಿ, ಮೂಡಬಿದರೆಯ ಸಮೀಪದ ಬೆಳ್ವಾಯಿ ಎಂಬ ಪುಟ್ಟ ಗ್ರಾಮದಲ್ಲಿ ನನ್ನ ಗುರುಗಳಾದ ಶ್ರೀಯುತ ಸಮ್ಮಿಲನ್ ಶೆಟ್ಟಿ ಅವರು ಪ್ರತಿವರ್ಷ ಚಿಟ್ಟೆಗಳ ಕಾರ್ಯಾಗಾರವನ್ನು ಆಯೋಜಿಸುತ್ತಾರೆ. ಚಿಟ್ಟೆಗಳ ಮೇಲಿನ ನನ್ನ ಪ್ರೀತಿ ಪ್ರತಿವರ್ಷ ನನ್ನನ್ನು ಅಲ್ಲಿಗೆ ಸೆಳೆಯುತ್ತಿತ್ತು. ಮೂರು ದಿನಗಳ ಈ ಕಾರ್ಯಾಗಾರದಲ್ಲಿ ಸ್ವಯಂಸೇವಕರೊಂದಿಗೆ ಕೆಲಸ ಮಾಡುವುದರ ಜೊತೆಗೆ, ಚಿಟ್ಟೆ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶವೂ ಸಿಗುತ್ತಿತ್ತು.

ಅದೇ ಸಂದರ್ಭದಲ್ಲಿ ನನಗೆ ಪ್ರದೀಪ್ ನಾಯಕ್ ಎಂಬ ಹೊಸ ಗೆಳೆಯರ ಪರಿಚಯವಾಯಿತು. ವಯಸ್ಸಿನಲ್ಲಿ ನನಗಿಂತ ದೊಡ್ಡವರಾದರೂ, ‘ಬ್ರೋ’ ಎಂದು ಕರೆಯುವ ಸ್ನೇಹಮಯ ವ್ಯಕ್ತಿತ್ವ ಅವರದು. ಅವರ ಸಾಹಸಮಯ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾಗ, ಅವರು, “ಬ್ರೋ, ನಾಳೆ ಫಾರೆಸ್ಟ್ ಎಕ್ಸ್ಪ್ಲೋರ್ ಮಾಡ್ಲಿಕ್ಕೆ ಹೋಗ್ತಿದ್ದೇನೆ. ಎಲ್ಲ ಹುಡುಕಾಡೋಣ, ಬರ್ತೀರಾ?” ಎಂದು ಕೇಳಿದರು. ಅದನ್ನು ಕೇಳಿ ನನಗೆ ಎಲ್ಲಿಲ್ಲದ ಖುಷಿ. ಆದರೆ, ಹೊನ್ನಾವರದಲ್ಲಿ ಬಿಟ್ಟು ಬಂದಿದ್ದ ನನ್ನ ಕೆಲಸ ಮತ್ತು ಖಾಲಿ ಇದ್ದ ಜೇಬು ನೆನಪಿಗೆ ಬಂದು ಉತ್ಸಾಹ ಇಳಿಯಿತು. “ನೀವು ಹೋಗಿ ಬಾಸ್, ನಾನು ಮತ್ತೆಂದಾದರೂ ಬರುವೆ,” ಎಂದು ಹೇಳಿ, ನಿರಾಶೆಯಿಂದ ಹೊನ್ನಾವರಕ್ಕೆ ಹಿಂತಿರುಗಿದೆ.
ಕೆಲವು ದಿನಗಳ ನಂತರ ಪ್ರದೀಪ್ ಅವರಿಂದ ಒಂದು ಸಂದೇಶ ಬಂತು. ಅದನ್ನು ಓದಿದಾಗ ನನ್ನ ಹೊಟ್ಟೆ ಉರಿಯಿತು! ಅವರು ಹೀಗೆ ಬರೆದಿದ್ದರು: “ಬ್ರೋ, ಆ ದಿನ ಬನ್ನಿ ಅಂದರೆ ಬರಲಿಲ್ಲ. ಈಗ ನೋಡಿ, ನನಗೆ ಸಂಪಾಜೆ ಘಾಟಿಯಲ್ಲಿ ‘Coorg Brush Flitter’ ಸಿಕ್ಕಿದೆ! ರೇರ್ ಬ್ರೋ, ದಕ್ಷಿಣ ಭಾರತದಲ್ಲಿ ಇಷ್ಟು ವರ್ಷ ಯಾರಿಗೂ ಸಿಕ್ಕಿಲ್ಲ. ಫೋಟೋ ಕೂಡ ಇರಲಿಲ್ಲ! ಏಂತ ಬ್ರೋ, ನೀವು ಬರ್ಲಿಲ್ಲ!”
ಅದನ್ನು ಓದಿದಾಗ ನನಗೆ ಚಟಪಟ ಎನಿಸಿದ್ದು ಸುಳ್ಳಲ್ಲ. “ನಾನು ಆ ಸುಯೋಗದಿಂದ ವಂಚಿತನಾದೆ” ಎಂಬ ಹತಾಶೆ ಒಂದು ಕಡೆಯಾದರೆ, “ಎಂತಹ ಅದ್ಭುತ ಶೋಧವಿದು!” ಎಂಬ ಸಂತಸ ಇನ್ನೊಂದು ಕಡೆ. ಆದರೂ ತಕ್ಷಣವೇ, “ಕಂಗ್ರಾಜುಲೇಷನ್ಸ್ ಬಾಸ್,” ಎಂದು ಹಾರೈಸಿದೆ. ಆದರೆ, ‘Coorg Brush Flitter’ ಎಂಬ ಚಿಟ್ಟೆಯ ಹೆಸರು ನನ್ನ ಕಿವಿಗೆ ಬಿದ್ದಿರಲಿಲ್ಲ. ಅದು ನನ್ನ ಕುತೂಹಲವನ್ನು ಕೆಣಕಿತು.
ಅದರ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದಾಗ, ಒಂದೆರಡು ಸಾಮಾನ್ಯ ತಾಣಗಳು ಸಿಕ್ಕವೇ ಹೊರತು ಹೆಚ್ಚಿನ ವಿವರಗಳು ಸಿಗಲಿಲ್ಲ. ಈ ವಿಷಯವನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕು ಎಂದು ನಿರ್ಧರಿಸಿ, ಆ ಚಿಟ್ಟೆಯ ಹಿನ್ನೆಲೆಯ ಕುರಿತು ಮಾಹಿತಿ ಹುಡುಕತೊಡಗಿದೆ.

ಈ ಹುಡುಕಾಟದಲ್ಲಿ ನನ್ನ ಗಮನ ಸೆಳೆದದ್ದು Evans, W. H. ಅವರು ಪ್ರಕಟಿಸಿದ್ದ A Catalogue of the Hesperiidae from Europe, Asia, and Australia in the British Museum ಎಂಬ ಪುಸ್ತಕ. ಅದರಲ್ಲಿ ಈ ಚಿಟ್ಟೆಯನ್ನು Hyarotis microstictum coorga ಎಂದು ಉಲ್ಲೇಖಿಸಲಾಗಿತ್ತು. ಈ ಉಪಪ್ರಭೇದದ ಕೊನೆಯ ದೃಢೀಕೃತ ದಾಖಲೆ 1927ರಲ್ಲಿ ಕೊಡಗಿನ ಸತ್ಯಿ ನದಿಯ ಬಳಿಯಿಂದ ದೊರೆತ ಮಾದರಿಯಾಗಿತ್ತು.
ಹೀಗಾಗಿ, 95 ವರ್ಷಗಳ ಬಳಿಕ ಸಂಪಾಜೆ ಘಾಟಿಯ ಪಯಸ್ವಿನಿ ನದಿ ಪ್ರದೇಶದಲ್ಲಿ ಈ ಚಿಟ್ಟೆ ಮತ್ತೆ ದಾಖಲಾಗಿರುವುದು ಮಹತ್ವದ ಸಂಗತಿಯಾಗಿತ್ತು. ಹಿಂದಿನ ದಾಖಲೆಗಳು ಬಹಳ ಸೀಮಿತವಾಗಿದ್ದವು.
ಈ ಐತಿಹಾಸಿಕ ಮತ್ತು ವೈಜ್ಞಾನಿಕ ಮಾಹಿತಿಯನ್ನು ಪ್ರದೀಪ್ ಹಾಗೂ ಗುರುಗಳೊಂದಿಗೆ ಹಂಚಿಕೊಂಡೆ. ಈ ಶೋಧವನ್ನು ವೈಜ್ಞಾನಿಕ ಲೇಖನದ ಮೂಲಕ ಜಗತ್ತಿಗೆ ತಿಳಿಸುವಂತೆ ಅವರಿಗೆ ಸಲಹೆ ನೀಡಿದೆ. ಅದರ ಫಲವಾಗಿ, Rediscovery of the South Indian Population of the Brush Flitter Butterfly Hyarotis microstictum coorga from Karnataka ಎಂಬ ಶೀರ್ಷಿಕೆಯಡಿ ಪ್ರದೀಪ್ ನಾಯಕ್ ಅವರ ವೈಜ್ಞಾನಿಕ ಲೇಖನ Bionotes ಪತ್ರಿಕೆಯಲ್ಲಿ ಜೂನ್ 2022ರಲ್ಲಿ ಪ್ರಕಟವಾಯಿತು.
ಆ ವೈಜ್ಞಾನಿಕ ಲೇಖನದ ಸಾರಾಂಶ ಹೀಗಿದೆ
ಪ್ರದೀಪ್ ನಾಯಕ್ ಅವರು ತಮ್ಮ ತಂಡದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ 2022ರ ಮಾರ್ಚ್ 18ರಿಂದ ಏಪ್ರಿಲ್ 18ರವರೆಗೆ ಈ ಚಿಟ್ಟೆಯನ್ನು ಗಮನಿಸಿದ್ದರು. ಈ ಅಧ್ಯಯನದ ವಿಶೇಷತೆಯೆಂದರೆ, Hyarotis microstictum coorga ಉಪಪ್ರಭೇದದ ನೈಸರ್ಗಿಕ ಪರಿಸರದಲ್ಲಿನ ಮೊದಲ ಛಾಯಾಚಿತ್ರಗಳನ್ನು ಅವರು ಪ್ರಕಟಿಸಿದ್ದರು.

ಈ ಚಿಟ್ಟೆಯ ಹೆಸರಿನಲ್ಲಿರುವ coorga ಎಂಬುದು Hyarotis microstictum ಪ್ರಭೇದದ ಒಂದು ಉಪಪ್ರಭೇದವೆಂದು ವೈಜ್ಞಾನಿಕ ಲೇಖನದಲ್ಲಿ ವಿವರಿಸಲಾಗಿದೆ. ಈ ಉಪಪ್ರಭೇದದ ತಿಳಿದಿರುವ ವಿತರಣೆ ಕರ್ನಾಟಕಕ್ಕೆ ಸೀಮಿತವಾಗಿದೆ. ಇದೇ ಪ್ರಭೇದದ ಇನ್ನೊಂದು ಉಪಪ್ರಭೇದವು ಈಶಾನ್ಯ ಭಾರತ ಸೇರಿದಂತೆ ಏಷ್ಯಾದ ಇತರ ಭಾಗಗಳಲ್ಲಿ ಕಂಡುಬರುತ್ತದೆ. ಈ ಚಿಟ್ಟೆಯ ಅಪರೂಪದ ದಾಖಲೆ ಮತ್ತು ಅದರ ಛಾಯಾಚಿತ್ರಗಳನ್ನು ದಾಖಲಿಸಿರುವುದು ಪ್ರದೀಪ್ ಅವರ ತಂಡದ ಮಹತ್ವದ ಕೊಡುಗೆ.
ಈ ಲೇಖನ ಪ್ರಕಟವಾದ ಕೆಲವು ತಿಂಗಳ ನಂತರ, ಒಂದು ಸಾಯಂಕಾಲ ಆರು ಗಂಟೆಯ ಹೊತ್ತಿಗೆ ನನಗೆ ಕರೆ ಬಂತು. “ಹಲೋ” ಎಂದಾಗ, ಮತ್ತೊಂದು ಕಡೆಯಿಂದ ಪ್ರದೀಪ್ ಅವರ ಉತ್ಸಾಹದ ಧ್ವನಿ ಕೇಳಿಸಿತು: “ಹಲೋ ಬ್ರೋ, ಹೇಗಿದ್ದೀರಿ? ಕೂರ್ಗ್ ಎಕ್ಸ್ಪೆಡಿಷನ್ಗೆ ಹೋಗೋಣ, ಬರ್ತೀರಾ? ಬರುವುದಾದರೆ, ರಾತ್ರಿ ಹನ್ನೊಂದು ಗಂಟೆಗೆ ಹೊನ್ನಾವರದಿಂದ ಬೆಳ್ವಾಯಿಗೆ ಬಸ್ ಇದೆ. ಹತ್ತಿಬಿಡಿ, ಇವತ್ತೇ!”
ನಾನು ಆಲೋಚಿಸಿ ಹೇಳುತ್ತೇನೆಂದು ಫೋನ್ ಇಟ್ಟೆ. ಆದರೆ, ಆ ಅಪರೂಪದ ಚಿಟ್ಟೆಯನ್ನು ಕಣ್ಣಾರೆ ನೋಡಬೇಕೆಂಬ ಹಂಬಲ ಮತ್ತೆ ತೀವ್ರವಾಯಿತು. ಬಂದ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿದೆ. ತಕ್ಷಣವೇ ಅಪ್ಪನಿಂದ ಎರಡು ದಿನದ ರಜೆ ಮತ್ತು ಕೈಖರ್ಚಿಗೆ ಹಣ ಪಡೆದು, ಕ್ಯಾಮೆರಾ ಹಾಗೂ ಬಟ್ಟೆಗಳನ್ನು ಸಿದ್ಧಪಡಿಸಿಕೊಂಡೆ. ಊಟ ಮುಗಿಸಿ, ರಾತ್ರಿ ಹನ್ನೊಂದು ಗಂಟೆಯ ಬಸ್ ಹತ್ತಿ ಹೊನ್ನಾವರದಿಂದ ಹೊರಟೆ.
ಬೆಳಗಿನ ಜಾವ ಸುಮಾರು 2:45ಕ್ಕೆ ಬೆಳ್ವಾಯಿ ತಲುಪಿದೆ. ಅಲ್ಲಿಂದ ಗುರುಗಳ ಮನೆಗೆ ನಡೆದುಹೋದೆ. ಪ್ರದೀಪ್ ಹಿಂದಿನ ಸಾಯಂಕಾಲವೇ ಬಂದು ತಂಗಿದ್ದರು. ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ, ಸುಮಾರು 5:30ಕ್ಕೆ ಟೆಂಟ್ ಮತ್ತು ಸ್ಲೀಪಿಂಗ್ ಬ್ಯಾಗ್ಗಳನ್ನು ಕಾರಿನಲ್ಲಿ ತುಂಬಿಕೊಂಡು, ಸುಳ್ಯದ ಮಾರ್ಗವಾಗಿ ಸಂಪಾಜೆ ಕಡೆಗೆ ಹೊರಟೆವು.
ಸುಳ್ಯದಲ್ಲಿ ಉಪಾಹಾರ ಸೇವಿಸಿ, ಬೆಳಿಗ್ಗೆ ಸುಮಾರು 8:30ಕ್ಕೆ ಚಿಟ್ಟೆಯ ಹಿಂದಿನ ದಾಖಲೆ ದೊರೆತಿದ್ದ ಪ್ರದೇಶದ ಸಮೀಪ ತಲುಪಿದೆವು. ಸುತ್ತಲೂ ದಟ್ಟವಾದ ಕಾಡು, ಮಧ್ಯದಲ್ಲಿ ಹೆದ್ದಾರಿ; ವಾಹನ ಸಂಚಾರವೂ ಹೆಚ್ಚಾಗಿತ್ತು. ಒಂದು ಬದಿಯ ಗುಡ್ಡ ಕುಸಿದಿದ್ದರಿಂದ ಅಲ್ಲಿ ತಡೆಗೋಡೆ ನಿರ್ಮಾಣದ ಕೆಲಸವೂ ನಡೆಯುತ್ತಿತ್ತು!
ಕಾರಿನಿಂದ ಇಳಿದಾಗ ಪಯಸ್ವಿನಿ ನದಿ ಕಾಡಿನ ನಡುವೆ ಹರಿಯುತ್ತಿರುವುದು ಕಾಣಿಸಿತು. ಅಲ್ಲಿ ನಿಂತು ನನಗೆ ಒಂದು ಪ್ರಶ್ನೆ ಮೂಡಿತು: “ಇಷ್ಟೆಲ್ಲ ವಾಹನ ಸಂಚಾರ ಮತ್ತು ಮಾನವ ಚಟುವಟಿಕೆಗಳ ನಡುವೆಯೂ, ಈ ಚಿಟ್ಟೆ 95 ವರ್ಷಗಳ ಕಾಲ ಯಾರ ಕಣ್ಣಿಗೂ ಬೀಳದೆ ಹೇಗೆ ಉಳಿಯಿತು?” ಅಷ್ಟರಲ್ಲಿ ಪ್ರದೀಪ್, “ಬನ್ನಿ, ಇನ್ನು ತಡವೇಕೆ, ಹುಡುಕಾಟ ಶುರುಮಾಡೋಣ,” ಎಂದರು. ಜೊತೆಗೆ, “ಡಾರ್ಕ್ ಕಲರ್ನ ಸ್ಕಿಪ್ಪರ್ (Skipper) ಚಿಟ್ಟೆಗಳ ಮೇಲೆ ಕಣ್ಣಿಡಿ ಬ್ರೋ,” ಎಂದು ಸಲಹೆ ನೀಡಿದರು.
ಹುಡುಕಾಟ ಪ್ರಾರಂಭವಾಯಿತು. ಆ ಪ್ರದೇಶದಲ್ಲಿ ಹಲವು ಬಗೆಯ ಚಿಟ್ಟೆಗಳು ಕಣ್ಣಿಗೆ ಬಿದ್ದವು. ಕೆಲವು ಗಂಟೆಗಳು ಕಳೆದರೂ ನಾವು ಹುಡುಕುತ್ತಿದ್ದ Hyarotis microstictum coorga ಸಿಗಲಿಲ್ಲ. ಹುಡುಕಿ ಹುಡುಕಿ ಆಯಾಸಗೊಂಡು, ಪ್ರಯತ್ನ ಬಿಡುವ ಹಂತಕ್ಕೆ ತಲುಪಿದ್ದೆ.
ಅಷ್ಟರಲ್ಲಿ ಒಂದು ಕಂದುಬಣ್ಣದ ಚಿಟ್ಟೆ ಹಾರಿ ಬಂದು, Leea indica ಗಿಡದ ಮೇಲೆ ಕುಳಿತುಕೊಂಡಿತು. ಅದರ ಗಾತ್ರ ಮತ್ತು ಆಕಾರ ನಾವು ಹುಡುಕುತ್ತಿದ್ದ ಚಿಟ್ಟೆಯನ್ನು ಹೋಲುತ್ತಿತ್ತು. ಅದನ್ನು ಕಂಡ ತಕ್ಷಣ, “ಕೂರ್ಗ್!” ಎಂದು ಕೂಗಿದೆ. ಪ್ರದೀಪ್ ಮತ್ತು ಗುರುಗಳು ಧಾವಿಸಿ ಬಂದರು. ಆದರೆ, ಅದು ನಾವು ಹುಡುಕುತ್ತಿದ್ದ ಚಿಟ್ಟೆಯಾಗಿರಲಿಲ್ಲ; ‘Partwing’ ಎಂಬ ಮತ್ತೊಂದು ಚಿಟ್ಟೆಯಾಗಿತ್ತು. ನಮ್ಮ ಉತ್ಸಾಹ ಕ್ಷಣಾರ್ಧದಲ್ಲಿ ಕುಗ್ಗಿದರೂ, ಹುಡುಕಾಟ ಮುಂದುವರಿಸಿದೆವು.
ಸ್ವಲ್ಪ ಸಮಯದ ನಂತರ ಪ್ರದೀಪ್ಗೆ ಒಂದು ಗಿಡದ ಮೇಲೆ ಚಿಟ್ಟೆಯ ಮೊಟ್ಟೆಯೊಂದು ಕಂಡಿತು. ಅದು ಇತರ ಚಿಟ್ಟೆಗಳ ಮೊಟ್ಟೆಗಳಿಗಿಂತ ವಿಭಿನ್ನವಾಗಿ ಕಾಣುತ್ತಿತ್ತು. ಬಹುಶಃ ಇದು ಕೂರ್ಗ್ ಬ್ರಷ್ ಫ್ಲಿಟ್ಟರ್ನ ಮೊಟ್ಟೆಯಾಗಿರಬಹುದೇ ಎಂಬ ಅನುಮಾನ ಮೂಡಿತು. ಆದರೆ, ಅದನ್ನು ಸಂಗ್ರಹಿಸಿ ಪರಿಶೀಲಿಸಲು ನಮ್ಮ ಬಳಿ ಅಗತ್ಯ ಸಾಧನಗಳಾಗಲೀ, ಅಧಿಕೃತ ಅನುಮತಿಯಾಗಲೀ ಇರಲಿಲ್ಲ. ಆದ್ದರಿಂದ ಅದನ್ನು ಅಲ್ಲೇ ಬಿಟ್ಟು ಹುಡುಕಾಟ ಮುಂದುವರಿಸಿದೆವು.
ಮಧ್ಯಾಹ್ನವಾಯಿತು. ಹತ್ತಿರದಲ್ಲಿ ಊಟದ ವ್ಯವಸ್ಥೆ ಸಿಗದ ಕಾರಣ, ಕುರುಕುಲು ತಿಂಡಿ ತಿಂದು ಸ್ವಲ್ಪ ವಿಶ್ರಾಂತಿ ಪಡೆದೆವು. ಆ ಅಪರೂಪದ ಚಿಟ್ಟೆ ಕಣ್ಣಿಗೆ ಬೀಳದಿದ್ದರೂ, ಮೊಟ್ಟೆಯ ಕುರಿತು ಮೂಡಿದ್ದ ಕುತೂಹಲ ನಮ್ಮೊಳಗೆ ಉಳಿದಿತ್ತು.

ಮಧ್ಯಾಹ್ನ ಸುಮಾರು 2:30ಕ್ಕೆ ಮತ್ತೆ ಅದೇ ಸ್ಥಳಕ್ಕೆ ಮರಳಿದೆವು. ಎರಡು ಬಾರಿ ನಿರಾಸೆಯಾಗಿದ್ದರಿಂದ, ಅಲ್ಲಿ ಕಂಡ ಇತರ ಚಿಟ್ಟೆಗಳನ್ನು ಛಾಯಾಚಿತ್ರಗಳಲ್ಲಿ ದಾಖಲಿಸಲು ಆರಂಭಿಸಿದೆವು. ಆ ಕ್ಷಣಕ್ಕೆ, ನಾವು ಮೂಲತಃ ಹುಡುಕುತ್ತಿದ್ದ ‘Hyarotis microstictum coorga’ ಎಂಬ ಮೂಲ ಉದ್ದೇಶವೇ ಎಲ್ಲರಿಗೂ ಮರೆತಂತಾಗಿತ್ತು.
ಇಂತಹ ಸುಂದರ ಸೃಷ್ಟಿಯ ವಿಸ್ತಾರದಲ್ಲಿ, ಒಂದು ಸಣ್ಣ ಕಂದು ಚಿಟ್ಟೆಗಾಗಿ ಹಟ ಹಿಡಿದು ಕುಳಿತುಕೊಳ್ಳುವುದು ತರವಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೆವು. ನಾವು ಹೀಗೆ ನಮ್ಮ ಹೊಸ ಕೆಲಸದಲ್ಲಿ ಮುಳುಗಿದ್ದಾಗ, ದೂರದಲ್ಲಿ — ಅಂದಾಜು ಹತ್ತು ಅಡಿ ಎತ್ತರದ Leea indica ಗಿಡದ ಮೇಲೆ — ಒಂದು ಕಂದುಬಣ್ಣದ ಚಿಕ್ಕ ಚಿಟ್ಟೆ ಮಧ್ಯಾಹ್ನದ ಸೂರ್ಯನ ಶಾಖವನ್ನು ಹೀರಿಕೊಳ್ಳಲು ಕುಳಿತಿತ್ತು. ನಾನು ಅದನ್ನು ಉಳಿದವರಿಗೆ ತೋರಿಸಿದೆ. ಪ್ರದೀಪ್ ಅದನ್ನು ನೋಡಿದ ತಕ್ಷಣ ಉತ್ಸಾಹದಿಂದ “ಬ್ರೋ, ಅದು ಕೂರ್ಗ್ ಬ್ರೋ!” ಎಂದು ಕೂಗಿದ.
ತಕ್ಷಣ ನಮ್ಮ ಕ್ಯಾಮೆರಾಗಳು ಅದರತ್ತ ಮುಗಿಬಿದ್ದವು. ಆದರೆ, ಚಿಟ್ಟೆ ಬಹಳ ಎತ್ತರದಲ್ಲಿ, ದಟ್ಟವಾದ ಎಲೆಗಳ ಮಧ್ಯದಲ್ಲಿ ಇದ್ದ ಕಾರಣ, ನಮಗೆ ಮನಸ್ಸಿಗೆ ಖುಷಿ ಕೊಡುವಂತಹ ಸ್ಪಷ್ಟ ಚಿತ್ರಗಳು ಸಿಗಲಿಲ್ಲ. ಆದರೂ, ಅದು ಅಲ್ಲಿ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಸಾಕಾಗುವಷ್ಟು ಫೋಟೋಗಳು ದೊರೆತವು. 95 ವರ್ಷಗಳಿಂದ ದೃಢೀಕೃತ ದಾಖಲೆ ಇಲ್ಲದಿದ್ದ ಚಿಟ್ಟೆ ನಮ್ಮ ಕಣ್ಮುಂದೆ ಇತ್ತು!
ಆ ಚಿಟ್ಟೆಯನ್ನು ಇನ್ನಷ್ಟು ಸ್ಪಷ್ಟವಾಗಿ ದಾಖಲಿಸಲು ಪ್ರಯತ್ನಿಸಿದೆವು. ಆದರೆ, ಅದು ಎಲೆಗಳ ನಡುವೆ ಮಾಯವಾಗಿ ಹೋಯಿತು. ಮತ್ತೆ ಹುಡುಕಿದರೂ ಸಿಗಲಿಲ್ಲ. ಆ ಸಣ್ಣ ನೋಟವೇ ದೊಡ್ಡ ಸಾಧನೆಯಂತೆ ಅನಿಸಿತು; ಆದರೆ, ಅದನ್ನು ಇನ್ನಷ್ಟು ಹೊತ್ತು ವೀಕ್ಷಿಸಲಾಗಲಿಲ್ಲವೆಂಬ ಅತೃಪ್ತಿಯೂ ಉಳಿಯಿತು.

ಅಷ್ಟರಲ್ಲಿ ಅಲ್ಲಿನ ಅರಣ್ಯ ಇಲಾಖೆಯ ಒಬ್ಬ ಫಾರೆಸ್ಟ್ ವಾಚರ್ ಸಿಕ್ಕರು. ಅವರ ಸಹಾಯದಿಂದ ಪಯಸ್ವಿನಿ ನದಿಯ ದಡಕ್ಕೆ ತಲುಪಿದೆವು. ಅಲ್ಲಿ ಮರಳಿನ ಮೇಲೆ ‘Yellow-breasted Flat’ ಮತ್ತು ‘Blue Admiral’ ಮುಂತಾದ ಚಿಟ್ಟೆಗಳನ್ನು ಕಂಡು, ಅವುಗಳ ಚಿತ್ರಗಳನ್ನು ತೆಗೆದೆವು. ಪ್ರಕೃತಿಯ ಇಂತಹ ವಿಸ್ಮಯಗಳು ಇನ್ನೂ ಇಲ್ಲಿ ಉಳಿದಿವೆಯಲ್ಲ ಎಂಬ ಸಮಾಧಾನವಾಯಿತು. ಕತ್ತಲಾಗತೊಡಗಿದಾಗ, ಆನೆಗಳಿರುವ ಸಾಧ್ಯತೆಯನ್ನು ಮನದಲ್ಲಿಟ್ಟುಕೊಂಡು ಅಲ್ಲಿಂದ ಹೊರಟೆವು. ಅಂದು ರಾತ್ರಿ ಉಳಿದುಕೊಳ್ಳಲು ಪ್ರದೀಪ್ ಅವರ ಸಂಬಂಧಿಕರ ಮನೆಗೆ ಹೋದೆವು. ದಿನವಿಡೀ ನಡೆದ ಹುಡುಕಾಟ ಮತ್ತು ಕಂಡ ಚಿಟ್ಟೆಗಳ ಕುರಿತು ಚರ್ಚಿಸುತ್ತಾ, ಮರುದಿನದ ಯೋಜನೆ ರೂಪಿಸಿದೆವು. ಆ ಅಪರೂಪದ ಚಿಟ್ಟೆಯನ್ನು ಮತ್ತೊಮ್ಮೆ ನೋಡುವ ಆಸೆ ನಮ್ಮೊಳಗೆ ಜೀವಂತವಾಗಿತ್ತು.
ಮರುದಿನ ಬೆಳಿಗ್ಗೆ ಸುಮಾರು 4:30ಕ್ಕೆ ಎದ್ದು, ಸರಕು-ಸಾಮಾನುಗಳನ್ನು ಕಾರಿನಲ್ಲಿ ತುಂಬಿಕೊಂಡು ಆತಿಥ್ಯ ನೀಡಿದ ಮನೆಯವರಿಗೆ ಧನ್ಯವಾದ ಹೇಳಿ ಮತ್ತೊಂದು ಹುಡುಕಾಟಕ್ಕೆ ಸಿದ್ಧರಾದೆವು. ಆ ದಿನದ ಗುರಿ ಸಂಪಾಜೆ ಘಾಟಿಯ ಇನ್ನಷ್ಟು ಒಳಭಾಗ. ಅಲ್ಲಿ ಒಣಗಿದ ಒಂದು ತೋಡಿನಲ್ಲಿ ‘Pluffy Tit’ ಎಂಬ ಮತ್ತೊಂದು ಚಿಟ್ಟೆ ಕಂಡಿತು. ಅಭ್ಯಾಸದಂತೆ ಕ್ಯಾಮೆರಾಗಳು ತಕ್ಷಣವೇ ಅದರತ್ತ ತಿರುಗಿದವು. ಪ್ರಕೃತಿ ಯಾವಾಗಲೂ ಅನಿರೀಕ್ಷಿತ ಅತಿಥಿಗಳನ್ನು ಕಳುಹಿಸುತ್ತದೆ.
ಹೀಗೆ ಸುತ್ತುತ್ತಾ ಹತ್ತು ಗಂಟೆಯಾಯಿತು. ಈಗ ಬೆಳ್ವಾಯಿಗೆ ಹಿಂತಿರುಗಲೇಬೇಕಾದ ಒತ್ತಡ. ನಾವು ಹೊರಡಲು ಮನಸ್ಸು ಮಾಡಿದೆವು. ಕಾರಿನಲ್ಲಿ ಹೊರಟ ಸ್ವಲ್ಪ ದೂರದಲ್ಲಿ ರಸ್ತೆ ಮಧ್ಯೆ ಒಂದು ಸಣ್ಣ ಸೇತುವೆ ಸಿಕ್ಕಿತು. ನಮ್ಮೊಳಗಿನ ಚಿಟ್ಟೆ ಹುಡುಕುವ ಕುತೂಹಲ ಇನ್ನೂ ತಣಿದಿರಲಿಲ್ಲ. ಕಾರು ನಿಲ್ಲಿಸಿ ಕೆಳಗಿಳಿದೆವು.
ಅಲ್ಲಿ ಮತ್ತೊಂದು ಕಂದುಬಣ್ಣದ ಚಿಟ್ಟೆ Leea indica ಗಿಡದ ಮೇಲೆ ಕುಳಿತು ಮಕರಂದ ಹೀರುತ್ತಿತ್ತು. ಒಂದು ನಿಮಿಷ ಗಮನವಿಟ್ಟು ನೋಡಿದಾಗ, ಅದು ನಮ್ಮ ಕೂರ್ಗ್ ಬ್ರಷ್ ಫ್ಲಿಟ್ಟರ್ ಎಂಬುದು ಖಚಿತವಾಯಿತು! ಈ ಬಾರಿ ಯಾರಿಗೂ ಕೂಗುವ ಅಗತ್ಯವೇ ಇರಲಿಲ್ಲ. ಖುಷಿ, ಸಡಗರ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಶಾಂತವಾದ ಆತ್ಮತೃಪ್ತಿ ನಮ್ಮನ್ನು ಆವರಿಸಿತು.

ಹಿಂದಿನ ದಿನ ಕೈಗೆ ಸಿಗದೆ ನಿರಾಶೆಗೊಳಿಸಿದ್ದ ಚಿಟ್ಟೆ, ಇಂದು ನಮ್ಮ ಕಣ್ಮುಂದೆ ಕಾಣಿಸಿಕೊಂಡಿತ್ತು. ನಾವು ಮೂವರೂ ಅದನ್ನು ವಿವಿಧ ಕೋನಗಳಿಂದ ಛಾಯಾಚಿತ್ರಗಳಲ್ಲಿ ದಾಖಲಿಸಿದೆವು. ಒಂದು ಸಣ್ಣ ಕಂದುಬಣ್ಣದ ಚಿಟ್ಟೆ, ದಶಕಗಳ ಕಾಲದ ದಾಖಲೆಗಳ ಇತಿಹಾಸವನ್ನು ಹೊತ್ತು ನಮ್ಮ ಕಣ್ಮುಂದೆ ಹಾರಾಡುತ್ತಿತ್ತು.
ಈ ಅನುಭವವನ್ನು ಬರೀ ಚಿತ್ರಗಳಲ್ಲಿ ಹಿಡಿಯಲು ಸಾಧ್ಯವಿಲ್ಲ. ಸಾಯಂಕಾಲ ಕವಿಯಲಾರಂಭಿಸಿದಾಗ, ಭಾರವಾದ ಮನಸ್ಸಿನಿಂದ ಚಿಟ್ಟೆಯನ್ನು ಅದರ ಪಾಡಿಗೆ ಬಿಟ್ಟು ಬೆಳ್ವಾಯಿ ಕಡೆಗೆ ಹಿಂತಿರುಗಿದೆವು. ಆದರೆ, ಆ ಅಪರೂಪದ ಚಿಟ್ಟೆಯನ್ನು ಕಂಡು ದಾಖಲಿಸಿದ ತೃಪ್ತಿ ನಮ್ಮೊಂದಿಗಿತ್ತು.
ಬೆಳ್ವಾಯಿಯಿಂದ ಬಸ್ ಹತ್ತಿ ಹೊನ್ನಾವರಕ್ಕೆ ಹಿಂತಿರುಗಿದೆ. ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ಮನೆ ಸೇರಿದೆ. ಆ ದಿನಗಳು ಕೇವಲ ಸಾಹಸದ ದಿನಗಳಾಗಿರಲಿಲ್ಲ; ಪ್ರಕೃತಿಯ ಸಣ್ಣ ರಹಸ್ಯವೊಂದನ್ನು ಅರಿಯಲು ನಡೆಸಿದ ಹುಡುಕಾಟದ, ನನ್ನ ಹವ್ಯಾಸದ ಪಯಣದಲ್ಲಿ ಎಂದಿಗೂ ಮರೆಯಲಾಗದ ಅನುಭವವಾಗಿದ್ದವು.
ವೈಜ್ಞಾನಿಕ ಉಲ್ಲೇಖ: Nayak, Pradeep. “Rediscovery of the South Indian Population of the Brush Flitter Butterfly Hyarotis microstictum coorga from Karnataka.” Bionotes, Vol. 24 (1&2), June 2022.

ಲೇಖನ: ಕಾರ್ತಿಕ್ ಜಿ. ಸಾಲೆಹಿತ್ತಲ್
ದಕ್ಷಿಣ ಕನ್ನಡ ಜಿಲ್ಲೆ



