ಪ್ರಕೃತಿ ಬಿಂಬ
© ರಘುಕುಮಾರ್ ಸಿ.
ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಪಟ್ಟೆ ಹುಲಿ ಚಿಟ್ಟೆಯು ನಿಂಫಾಲಿಡೇ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಡಾನೌಸ್ ಜೆನುಟಿಯಾ (Danaus genutia) ಎಂದು ಕರೆಯಲಾಗುತ್ತದೆ. ರೆಕ್ಕೆಗಳ ಮುಂಭಾಗವು ಕಡು ಕಂದು ಅಥವಾ ಕಪ್ಪು ಬಣ್ಣವಿದ್ದು, ಅರೆ ಪಾರದರ್ಶಕವಾದ ಬಿಳಿ ಮಿಶ್ರಿತ ನೀಲಿ ಬಣ್ಣದ ಚುಕ್ಕೆಗಳು ಹಾಗೂ ಗೆರೆಗಳನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ವಲಸೆ ಹೋಗುವುದನ್ನು ಕಾಣಬಹುದು. ಪೊಯೇಸೀ (Poaceae) ಕುಟುಂಬದ ಕಬ್ಬಿನ ಗಿಡ, ಅಪೊಸಿನೇಸಿ (Apocynaceae) ಕುಟುಂಬದ ಎಕ್ಕದ ಗಿಡ, ಬುಗುಡಿ ಬಳ್ಳಿ, ಮೇಣದ ಬಳ್ಳಿ ಇತ್ಯಾದಿ ಇವುಗಳ ಅತಿಥೇಯ ಸಸ್ಯಗಳಾಗಿವೆ.

ದಕ್ಷಿಣ ಏಷ್ಯಾ ಮತ್ತು ಕಾಂಬೋಡಿಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ನವಿಲು ಹೂ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜುನೋನಿಯಾ ಅಲ್ಮಾನಾ (Junonia almana) ಎಂದು ಕರೆಯಲಾಗುತ್ತದೆ. ರೆಕ್ಕೆಗಳು ಹಳದಿ ಮಿಶ್ರಿತ ಕಂದು ಬಣ್ಣವಿದ್ದು, ಕಡುಗಂದು ಬಣ್ಣದ ಅಂಚನ್ನು ಹೊಂದಿರುತ್ತವೆ. ರೆಕ್ಕೆಯ ಮುಂಭಾಗದಲ್ಲಿ ನವಿಲು ಗರಿಯಲ್ಲಿರುವ ಹಾಗೆ ದೊಡ್ಡ ಮತ್ತು ಸಣ್ಣ ಕಪ್ಪು ಬಣ್ಣದಿಂದ ಸುತ್ತುವರಿದ ವೃತ್ತಾಕಾರದ ಮಚ್ಚೆಗಳನ್ನು ಹೊಂದಿರುತ್ತದೆ. ಹೆಚ್ಚಾಗಿ ಕೆರೆಗಳ ಬಳಿ, ಹೂಗಿಡಗಳ ಮೇಲೆ ಮತ್ತು ತೇವಾಂಶವಿರುವ ಮಣ್ಣಿನ ಮೇಲೆ ಕಾಣಸಿಗುತ್ತವೆ. ಗಂಡು ಚಿಟ್ಟೆಗಳು ತಮ್ಮದೇ ಆದ ವಾಸಕ್ಷೇತ್ರವನ್ನು ಆರಿಸಿಕೊಂಡು ಅಲ್ಲಿಗೆ ಬರುವ ಇತರೆ ಚಿಟ್ಟೆಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಅಕಾಂಥೇಸಿ (Acanthaceae) ಕುಟುಂಬದ ಕೊಳವಳಿಕೆ ಗಿಡದ ಜಾತಿಯ ವಿವಿಧ ಸಸ್ಯಗಳು, ಪೋಯೇಸಿ (Poaceae) ಕುಟುಂಬದ ಭತ್ತದ ಗಿಡ, ವರ್ಬೆನೇಸಿ (Verbenaceae) ಕುಟುಂಬದ ನೆಲ ಹಿಪ್ಪಲಿ ಅಥವಾ ಜಲ ಹಿಪ್ಪಲಿ ಗಿಡಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ಆಗ್ನೇಯ ಏಷ್ಯಾ ಮತ್ತು ಉತ್ತರ ಆಸ್ಟ್ರೇಲಿಯಾದ ವಿವಿಧ ಪ್ರದೇಶಗಳಲ್ಲಿನ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಈ ಕಪಿಲ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಅಕ್ರೇಯಾ ಟೆರ್ಪ್ಸಿಕೋರ್ (Acraea terpsicore) ಎಂದು ಕರೆಯಲಾಗುತ್ತದೆ. ಇವುಗಳ ರೆಕ್ಕೆಗಳು ಕಿತ್ತಳೆ ಬಣ್ಣವಿದ್ದು, ಅಲ್ಲಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಕೆಳಗಿನ ರೆಕ್ಕೆಯ ಹಿಂಭಾಗದ ಅಂಚಿನಲ್ಲಿ ಕಪ್ಪು ವರ್ತುಲವಿರುವ ಬಿಳಿ ಮಚ್ಚೆಗಳಿರುತ್ತವೆ. ಹೂಗಳ ಮೇಲೆ ಹೆಚ್ಚಾಗಿ ಕಾಣಸಿಗುವ ಇವುಗಳು ಪರಭಕ್ಷಕರಿಗೆ ವಿಷಕಾರಿಯಾಗಿವೆ. ಪಾಸಿಫ್ಲೋರೇಸಿ (Passifloraceae) ಕುಟುಂಬದ ಜ್ಯೂಸ್ ಹಣ್ಣಿನ (Passion fruit) ಜಾತಿಯ ವಿವಿಧ ಸಸ್ಯಗಳು ಇವುಗಳ ಆತಿಥೇಯ ಸಸ್ಯಗಳಾಗಿವೆ.

ಏಷ್ಯಾ ಖಂಡದ ಸಮತಟ್ಟು ಪ್ರದೇಶ, ಎಲೆ ಉದುರುವ ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಈ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜುನೋನಿಯಾ ಇಫಿಟಾ (Junonia iphita) ಎಂದು ಕರೆಯಲಾಗುತ್ತದೆ. ಕಿತ್ತಳೆ ಕಂದು ಬಣ್ಣದ ಮೇಲ್ಭಾಗವನ್ನು ಹೊಂದಿದ್ದು, ಹಲವಾರು ಕಂದು ಪಟ್ಟೆಗಳನ್ನೂ ಸಹ ಹೊಂದಿದೆ. ಕೆಳಗಿನ ರೆಕ್ಕೆಗಳ ಮೇಲೆ ಹಲವಾರು ಕೆಂಪು ಮಿಶ್ರಿತ ಕಂದು ಬಣ್ಣದ ಕಣ್ಣಿನಂತಹ ಮಚ್ಚೆಗಳ ಸರಣಿಯನ್ನು ಹೊಂದಿದೆ. ಸಾಮಾನ್ಯವಾಗಿ ರೆಕ್ಕೆಗಳನ್ನು ತೆರೆದು ಗಿಡ ಅಥವಾ ನೆಲದ ಮೇಲೆ ಕೂತು ಬೇಟೆಯಾಡುತ್ತದೆ. ಅಕಾಂಥೇಸಿ (Acanthaceae) ಕುಟುಂಬಕ್ಕೆ ಸೇರುವ ರುಯೆಲಿಯಾ ರಿಪನ್ಸ್ (Ruellia repens) ಮತ್ತು ಹೆಮಿಗ್ರಾಫಿಸ್ ರೆಪ್ಟಾನ್ಸ್ (Hemigraphis reptans) ಇದರ ಅತಿಥೇಯ ಸಸ್ಯಗಳಾಗಿವೆ.
ಚಿತ್ರ: ರಘುಕುಮಾರ್ ಸಿ.
ಲೇಖನ: ದೀಪ್ತಿ ಎನ್.



