ಬಯಲುಸೀಮೆಯ ನೇಸರೋದಯ
ಬಯಲುಸೀಮೆಯ ಮುಂಜಾವಿನ ಸೊಬಗು, ಹಕ್ಕಿಗಳ ಚಿಲಿಪಿಲಿ, ಗಿಳಿ-ನರಿ-ಜೇನುಗಳ ಚಟುವಟಿಕೆ ಮತ್ತು ಎಚ್ಚರಗೊಳ್ಳುವ ಧರೆಯ ಚೈತನ್ಯವನ್ನು ಚಿತ್ರಿಸುವ ರಾಮಲಿಂಗ ಮಾಡಗಿರಿಯವರ ಭಾವಪೂರ್ಣ ಕವನ.
© ಧನರಾಜ್ ಎಂ
ತಿಳಿನೀಲಾಂಬರದಿ ಕಿಲಕಿಲ ನಕ್ಕು
ಜನುಮ ತಾಳುತ್ತಿರುವ ಬಾಲ ರವಿ
ತೆಳ್ಳಗೆ ಚದುರಿದ ಹೊನ್ನ ಕಿರಣ
ಬಯಲು ಸೀಮೆಗದುವೆ ಶಕ್ತಿಚೇತನ
ಹಕ್ಕಿಗಳ ಹಿಂಡು ಬೆಳೆಸಿತೆನೆಮ್ಯಾಲ ಕುಳಿತು
ಉಯ್ಯಾಲೆ ತೂಗುತ್ತಿದ್ದವು
ಹಾಲೊಯ್ಯುತ್ತಿರುವ ಸಿಹಿ ಸಜ್ಜೆ ಕಿವುಚಿ-ಕಿವುಚಿ
ಹಾಲು ಕುಡಿಯುವ ಗಿಳಿಗಳ ದಂಡು
ನರಿಗಳ ಸೈನ್ಯ ಹೊಲದಿ ನುಸುಳಿತ್ತು
ಹಕ್ಕಿಗಳ ಬೇಟೆಗೆ ಡಾವಾಕಿತ್ತು
ಮಧುಪಾನಕೆ ಜೇನು ಬಂದಿತ್ತು
ಹೂದುಡಿಗೆ ಮುತ್ತನ್ನೊತ್ತಿತ್ತು
ಕಬ್ಬಕ್ಕಿ ಗುಂಞಗುಟ್ಟಿತ್ತು, ಕೊಂಗೆ ಗದ್ದೇಲಿ ಕುಣಿದಿತ್ತು
ಕಲಿ ಬೇಟೆಗಾರ ಕಾಜಾಣ ಕೊಕ್ಕೆಯ ಮಸಿದಿತ್ತು
ಎಳೆ ಗರಕೆ, ಬೇವು, ಮಡ್ಡಿ, ಜಮ್ಮೆ, ಜಾಲಿ ತಲೆದೂಗಿತ್ತು
ಧರೆ ಮೆಲ್ಲನೆಚ್ಚರಗೊಂಡು ಚೈತನ್ಯದೊಲವ ಚೆಲ್ಲಿತ್ತು.
ಕೊಂಗೆ = ಬಕಪಕ್ಷಿ
ಜಮ್ಮೆ ಗಿಡ = ಬನ್ನಿ ಮರ
ಮಡ್ಡಿ ಗಿಡ = ನೋನಿ ಗಿಡ
– ರಾಮಲಿಂಗ ಮಾಡಗಿರಿ
ರಾಯಚೂರು ಜಿಲ್ಲೆ



