ಅತ್ತಿ ಮರ: ಪ್ರಕೃತಿಯ ವರದಾನ
© ನಾಗೇಶ್ ಒ. ಎಸ್.
ಅತ್ತಿ ಮರ
Fig tree
Ficus racemosa
ನಿತ್ಯಹರಿದ್ವರ್ಣವಾಗಿರುವ ಈ ಅತ್ತಿ ಮರವನ್ನು ನೋಡಿ ನಾನೊಮ್ಮೆ ನಮ್ಮ ದೊಡ್ಡಮ್ಮನನ್ನು ಅದರ ಬಗ್ಗೆ ಕೇಳಿದಾಗ ಅವರು ಹೇಳಿದ್ದು “ಅತ್ತಿ ಹಣ್ಣನ್ನು ತಿನ್ನಬೇಕು ಒಳ್ಳೆಯದು, ನೀವು ಚಿಕ್ಕವರಿರಬೇಕಾದರೆ ಅದರಲ್ಲಿ ಹುಳು ಇರುವುದನ್ನು ಕಂಡರೂ ಸಹ ನಿಮಗೆ ನಾನು ಆ ಹಣ್ಣನ್ನು ತಿನ್ನಿಸುತ್ತಿದ್ದೆ” ಎಂದು.
ಅತ್ತಿ ಮರವು Moraceae ಕುಲಕ್ಕೆ ಸೇರಿದ ಒಂದು ಪ್ರಮುಖ ಔಷಧೀಯ ಹಾಗೂ ಪರಿಸರ ಸ್ನೇಹಿ ಮರವಾಗಿದೆ. ಇದನ್ನು ಇಂಗ್ಲಿಷ್ ನಲ್ಲಿ ಕ್ಲಸ್ಟರ್ ಫಿಗ್ ಟ್ರೀ ಅಥವಾ ಇಂಡಿಯನ್ ಫಿಗ್ ಟ್ರೀ ಎಂದು ಕರೆಯುತ್ತಾರೆ. ಈ ಮರವು ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮತ್ತು ಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಇದು ಸುಮಾರು 15-20 ಮೀಟರ್ ಬೆಳೆಯುತ್ತದೆ. ಇದರ ಕಾಂಡವು ದಪ್ಪವಾಗಿದ್ದು, ತೊಗಟೆ ಬೂದು ಅಥವಾ ಕಂದು ಬಣ್ಣದಲ್ಲಿರುತ್ತದೆ. ಎಲೆಗಳು ಸರಳ ಅಂಡಾಕಾರ ಹೊಂದಿದ್ದು ಹಾಗೂ ಹೊಳೆಯುವ ಹಸಿರು ಬಣ್ಣದಲ್ಲಿರುತ್ತವೆ. ಈ ಮರದ ವಿಶೇಷ ಲಕ್ಷಣವೆಂದರೆ ಇದರ ಹಣ್ಣುಗಳು ನೇರವಾಗಿ ಕಾಂಡ ಮತ್ತು ಮುಖ್ಯ ಕೊಂಬೆಗಳ ಮೇಲೆ ಗುಂಪುಗಳಾಗಿ ಬೆಳೆಯುತ್ತವೆ. ಹಣ್ಣುಗಳು ಮೊದಲು ಹಸಿರು ಬಣ್ಣದಲ್ಲಿದ್ದು, ನಂತರ ಕೆಂಪು ಅಥವಾ ಕೆಂಪುಕಂದು ಬಣ್ಣಕ್ಕೆ ಬದಲಾಗುತ್ತದೆ. ನಾವು ಇದಕ್ಕೆ ಹಣ್ಣುಗಳು ಎಂದು ಏನು ಕರೆಯುತ್ತೇವಾದರೂ ಅವುಗಳೇ ಹೂವುಗಳು ಸಹ, ಇದಕ್ಕೆ ಹೈಪಾಂಥೋಡಿಯಂ (Hypanthodium) ಪುಷ್ಪಮಂಜರಿ ಎನ್ನಲಾಗುತ್ತದೆ.



ಈ ಮರವು ನದಿಗಳ ತೀರ, ತೇವಾಂಶವಿರುವ ಕಾಡು ಹಾಗೂ ಕೃಷಿ ಭೂಮಿಗಳ ಸುತ್ತಮುತ್ತ ಚೆನ್ನಾಗಿ ಬೆಳೆಯುತ್ತದೆ. ಇದು ಉಷ್ಣ ಮತ್ತು ಉಪಉಷ್ಣ ವಲಯದ ಹವಾಮಾನಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ.
ಆಯುರ್ವೇದದಲ್ಲಿ ಅತ್ತಿ ಮರದ ತೊಗಟೆ, ಅತ್ತಿ ಹಣ್ಣು, ಬೇರು ಹಾಗೂ ಹಾಲಿನಂತಹ ರಸ (latex)ವನ್ನು ವಿವಿಧ ಔಷಧೀಯ ಉದ್ದೇಶಗಳಿಗೆ ಬಳಸಲಾಗುತ್ತದೆ.
- ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.
- ಅತಿಸಾರ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಉಪಯುಕ್ತ.
- ಗಾಯಗಳು ಬೇಗ ಗುಣವಾಗಲು ನೆರವಾಗುತ್ತದೆ.
- ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ.
ಈ ಮರವು ಅನೇಕ ಪಕ್ಷಿಗಳು, ಬಾವಲಿಗಳು, ಅಳಿಲುಗಳು, ಕೋತಿಗಳು ಮತ್ತು ಇತರ ವನ್ಯಜೀವಿಗಳಿಗೆ ಆಹಾರವನ್ನು ಒದಗಿಸುತ್ತದೆ. ಜೇನುನೊಣಗಳು ಹಾಗೂ ಪರಾಗಸ್ಪರ್ಶ ಕೀಟಗಳನ್ನು ಆಕರ್ಷಿಸುವ ಮೂಲಕ ಜೀವ ವೈವಿಧ್ಯತೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮರವು ಔಷಧೀಯ, ಪರಿಸರೀಯ ಹಾಗೂ ಆರ್ಥಿಕ ದೃಷ್ಟಿಯಿಂದ ಅತ್ಯಂತ ಮಹತ್ವವಾಗಿದೆ. ಈ ಮರವನ್ನು ಸಂರಕ್ಷಿಸಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದರಿಂದ ಪರಿಸರ ಸಮತೋಲನ ಮತ್ತು ಜೀವವೈವಿಧ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ. ಅತ್ತಿ ಮರ ಇದ್ದಲ್ಲಿ ಅಂತರ್ಜಲ ಇರುತ್ತದೆ ಎಂದು ಹೇಳುತ್ತಾರೆ, ಅದಲ್ಲದೆ ಈ ಮರದ ಹಣ್ಣನ್ನು ಬಡವರ ಡ್ರೈ ಫ್ರೂಟ್ ಎಂದು ಕರೆಯುತ್ತಾರೆ.
ಭಾರತೀಯ ಸಂಸ್ಕೃತಿಯಲ್ಲಿ ಅತ್ತಿ ಮರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನಿಮ್ಮ ಮನೆಯ ಸುತ್ತಮುತ್ತ ಈ ಮರವನ್ನು ನೆಡುವುದು ಅತ್ಯಂತ ಉಪಯುಕ್ತ ಎಂದರೆ ತಪ್ಪಾಗಲಾರದು. ನೀವು ಈ ಮರವನ್ನು ನೆಡ್ತೀರಲ್ಲ?

ಲೇಖನ:ಹರ್ಷಿತ ಪಿ. ಹನುಮಯ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆ



