ಹವಾಮಾನ ಬದಲಾವಣೆ, ಕಾರ್ಬನ್ ಕ್ರೆಡಿಟ್ಗಳು ಮತ್ತು ಭಾರತದ ಸುಸ್ಥಿರ ಭವಿಷ್ಯ
© ಕುಮುದ
ಜಾಗತಿಕವಾಗಿ ನಾವು ಎದುರಿಸುತ್ತಿರುವ ಪರಿಸರ ಸವಾಲುಗಳಲ್ಲಿ ಇಂದು ಹವಾಮಾನ ಬದಲಾವಣೆ ಪ್ರಮುಖ ಸ್ಥಾನದಲ್ಲಿದೆ. ಕಳೆದ ಕೆಲವು ದಶಕಗಳಲ್ಲಿ ಭೂಮಿಯ ಸರಾಸರಿ ತಾಪಮಾನ ಏರಿಕೆ, ಮಳೆಯಾಗುವಿಕೆಯಲ್ಲಿನ ವ್ಯತ್ಯಾಸ, ಅತಿವೃಷ್ಠಿ, ಬರಗಾಲ ಪ್ರವಾಹ, ಉಷ್ಣ ಅಲೆಗಳು, ಸಮುದ್ರಮಟ್ಟದ ಏರಿಕೆ ಇವುಗಳೆಲ್ಲವೂ ಸಾಮಾನ್ಯವಾಗಿವೆ. ಹಾಗೆಯೇ ಇವು ಕೇವಲ ಪ್ರಕೃತಿಯ ಏರುಪೇರುಗಳಲ್ಲ; ಮಾನವನ ಮಿತಿಮೀರಿದ ಅಭಿವೃದ್ಧಿಯ ಚಟುವಟಿಕೆಗಳಿಂದ ಉಂಟಾಗಿರುವ ಮುಂದಿನ ಪೀಳಿಗೆಗೂ ಹರಡಬಲ್ಲ ತೀವ್ರ ತರಹದ ಸಮಸ್ಯೆಗಳಾಗಿವೆ.

ಹವಾಮಾನ ಬದಲಾವಣೆಯ ಮೂಲ ವಿಜ್ಞಾನ
ಭೂಮಿಯ ಉಷ್ಣತೆಯನ್ನು ಉಳಿಸುವ ನೈಸರ್ಗಿಕ ಪ್ರಕ್ರಿಯೆ ಹಸಿರುಮನೆ ಪರಿಣಾಮ. ಭೂಮಿಯ ವಾತಾವರಣದಲ್ಲಿ ನಿಸರ್ಗದತ್ತವಾಗಿ ಸಿಗುವ ಕಾರ್ಬನ್ ಡೈಆಕ್ಸೈಡ್ (CO₂), ಮೀಥೇನ್ (CH₄), ಮತ್ತು ನೈಟ್ರಸ್ ಆಕ್ಸೈಡ್ (N₂O) ನಂತಹ ಅನಿಲಗಳು ಸೂರ್ಯನಿಂದ ಬರುವ ಕಿರಣಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹೀರಿಕೊಂಡು ಬೀಜ ಮೊಳೆಯುವಿಕೆ, ದ್ಯುತಿ ಸಂಶ್ಲೇಷಣೆಯಂತಹ ಅನೇಕ ಜೈವಿಕ ಕ್ರಿಯೆಗಳಿಗೆ ಉಪಯುಕ್ತವಾಗಿದೆ. ಅಲ್ಲದೆ ಭೂಮಿಯನ್ನು ಇಲ್ಲಿನ ಎಲ್ಲ ಜೀವಿಗಳಿಗೆ ಅನುಕೂಲಕರವಾಗಿ ಬೆಚ್ಚಗೆ ಇಡುತ್ತದೆ.
ಹಾಗಿದ್ದಲ್ಲಿ, ಹಸಿರುಮನೆ ಪರಿಣಾಮ ಕೆಟ್ಟ ಪರಿಣಾಮಗಳನ್ನು ಹೇಗೆ ಬೀರುತ್ತದೆ? ಹೇಗೆಂದರೆ, ಸ್ವಾಭಾವಿಕವಾಗಿ ನಡೆಯುವ ಈ ಪರಿಣಾಮ ಜೀವಕ್ಕೆ ಅಗತ್ಯವಾದ ತಾಪಮಾನವನ್ನು ಕಾಪಾಡುತ್ತದೆ. ಆದರೆ ಮಾನವ ಚಟುವಟಿಕೆಗಳಿಂದ CO₂ ಮತ್ತು ಇತರೆ ಹಸಿರುಮನೆಯ ಅನಿಲಗಳ ಪ್ರಮಾಣ ಹೆಚ್ಚಾದಾಗ, ಈ ಉಷ್ಣತೆ ಹೆಚ್ಚು ಪ್ರಮಾಣದಲ್ಲಿ ಹಿಡಿಯಲ್ಪಟ್ಟು ಭೂಮಿಯಲ್ಲಿಯೇ ಸಿಕ್ಕಿಕೊಳ್ಳುತ್ತದೆ. ಇದರಿಂದ ಭೂಮಿಯ ತಾಪಮಾನ ಏರಿಕೆಯಾಗಿ ಹವಾಮಾನ ಬದಲಾವಣೆ ಉಂಟಾಗುತ್ತದೆ.

ಮಾನವ ನಿರ್ಮಿತ ಚಟುವಟಿಕೆಗಳಾದ ಕಲ್ಲಿದ್ದಲು ಬಳಕೆ, ತೈಲ ಮತ್ತು ಅನಿಲಗಳ ಅತಿಯಾದ ಬಳಕೆ, ಕೈಗಾರಿಕಾ ವಿಸ್ತರಣೆ, ಸಾರಿಗೆ ಕ್ಷೇತ್ರದಲ್ಲಿನ ವೇಗದ ಬೆಳವಣಿಗೆ, ಅರಣ್ಯ ನಾಶ, ಮತ್ತು ಕೆಲವು ಪಶುಸಂಗೋಪನೆ & ಕೃಷಿ ಪದ್ಧತಿಗಳು ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆಯ ಅನಿಲಗಳನ್ನು ಬಿಡುಗಡೆ ಮಾಡುತ್ತಿವೆ. ಕಾರ್ಬನ್ ಡೈ ಆಕ್ಸೈಡ್ (CO₂), ಮೀಥೇನ್ (CH₄), ಮತ್ತು ನೈಟ್ರಸ್ ಆಕ್ಸೈಡ್ (N₂O) ಅಲ್ಲದೆ ಹೈಡ್ರೋ ಕ್ಲೋರೊ ಕಾರ್ಬನ್ (HFCs) ಗಳು ಕ್ಲೋರೋಪ್ಲೂರೋ ಕಾರ್ಬನ್ (CFCs), ಪರ್ಫ್ಲೂರೋಕಾರ್ಬನ್ (PFCs) ಗಳನ್ನು ಬಿಡುಗಡೆ ಮಾಡಿ ಉಷ್ಣವನ್ನು ಹೆಚ್ಚಾಗಿ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತಾ ಹಸಿರುಮನೆ ಪರಿಣಾಮ ಜಾಗತಿಕ ಸಮಸ್ಯೆಯಾಗಿ ಮಾರ್ಪಾಡಾಗಿದೆ.
ಕೈಗಾರಿಕಾ ಕ್ರಾಂತಿಯಿಂದ ಹವಾಮಾನ ಸಂಕಷ್ಟದವರೆಗೆ

ಈ ಸಮಸ್ಯೆಯನ್ನು ಕಂಡುಕೊಂಡಿದ್ದು ಹೇಗೆ? 18ನೇ ಶತಮಾನದ ಕೈಗಾರಿಕಾ ಕ್ರಾಂತಿ ಮಾನವ ಸಮಾಜದ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿದ ವಿದ್ಯಮಾನ. ಕಾರ್ಖಾನೆಗಳು, ರೈಲು ಸಾರಿಗೆ ವ್ಯವಸ್ಥೆ ಮತ್ತು ನಂತರದ ಇಂಧನ ಆಧಾರಿತ ಆರ್ಥಿಕ ವ್ಯವಸ್ಥೆಗಳು ಆರಂಭವಾಗಿ ವೇಗವನ್ನೂ ಪಡೆದವು. ಇದರ ಉಪಯೋಗಕ್ಕಾಗಿ ಲಕ್ಷಾಂತರ ವರ್ಷಗಳಿಂದ ಭೂಗರ್ಭದಲ್ಲಿ ಸಂಗ್ರಹವಾಗಿದ್ದ ಕಾರ್ಬನ್ ಹಲವಾರು ರೂಪದಲ್ಲಿ ವಾತಾವರಣಕ್ಕೆ ಬಿಡುಗಡೆಯಾಗತೊಡಗಿತು
ಈ ಬೆಳವಣಿಗೆಯ ಪರಿಸರೀಯ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಹಿಮಾಲಯ ಮತ್ತು ಧ್ರುವ ಪ್ರದೇಶಗಳ ಹಿಮನದಿಗಳು ಕರಗುತ್ತಿವೆ, ಸಮುದ್ರಮಟ್ಟ ಏರುತ್ತಿದೆ, ಮಳೆಯ ಮಾದರಿಗಳು ಅಸ್ಥಿರವಾಗುತ್ತಿವೆ ಮತ್ತು ಜೀವವೈವಿಧ್ಯತೆ ಕುಸಿಯುತ್ತಿದೆ.

ಅರಣ್ಯಗಳು: ಭೂಮಿಯ ನೈಸರ್ಗಿಕ ಕಾರ್ಬನ್ ಬ್ಯಾಂಕ್
ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ಅರಣ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮರಗಳು ದ್ಯುತಿ ಸಂಶ್ಲೇಷಣೆಯ ಮೂಲಕ ವಾತಾವರಣದಲ್ಲಿರುವ CO₂ ಅನ್ನು ಹೀರಿಕೊಂಡು ತಮ್ಮ ಕಾಂಡ, ಕೊಂಬೆ, ಬೇರು, ಎಲೆಗಳು ಮತ್ತು ಮಣ್ಣಿನಲ್ಲಿ ಸಂಗ್ರಹಿಸುತ್ತವೆ. ಈ ಪ್ರಕ್ರಿಯೆಯನ್ನು ಕಾರ್ಬನ್ ಸ್ಥಿರೀಕರಣ/ ಸಂಗ್ರಹಣೆ (Carbon Sequestration) ಎಂದು ಕರೆಯಲಾಗುತ್ತದೆ. ಹೀಗೆ ಕಾರ್ಬನ್ನನ್ನು ಕೂಡಿಡುವುದರಿಂದ ಅರಣ್ಯಗಳನ್ನು ಭೂಮಿಯ ನೈಸರ್ಗಿಕ ಕಾರ್ಬನ್ ಬ್ಯಾಂಕ್ಗಳು ಎಂದು ಹೇಳಬಹುದು.
ಮರಗಳಲ್ಲಿ ಮಾತ್ರವಲ್ಲದೇ, ಮಣ್ಣಿನಲ್ಲಿಯೂ ಅಪಾರ ಪ್ರಮಾಣದಲ್ಲಿ ಕಾರ್ಬನ್ ಸಂಗ್ರಹವಾಗಿರುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಮಣ್ಣಿನ ಕಾರ್ಬನ್ ಸಂಗ್ರಹ ಸಾಮರ್ಥ್ಯವು ವಾತಾವರಣದಲ್ಲಿರುವ ಕಾರ್ಬನ್ನಿಗಿಂತ ಸುಮಾರು ಮೂರು ಪಟ್ಟು ಹೆಚ್ಚು ಇರಬಹುದು.

ಕಾರ್ಬನ್ ನ ಮೂಲಗಳು
ಕಾರ್ಬನ್ ಬಿಡುಗಡೆಯಾಗುವಿಕೆಯನ್ನು, ವಾತಾವರಣದಲ್ಲಿ ಕಾರ್ಬನ್ ಹೆಚ್ಚಳವನ್ನು, ಕೇವಲ ಕೈಗಾರಿಕೆಗಳಿಗೆ ಮಾತ್ರವೇ ಸೀಮಿತಗೊಳಿಸಿದರೆ ತಪ್ಪಾಗುತ್ತದೆ. ಗ್ರಾಮೀಣ ಮತ್ತು ನಗರ ಜೀವನದ ಹಲವು ಕ್ಷೇತ್ರಗಳು ಇದಕ್ಕೆ ಕಾರಣವಾಗುತ್ತವೆ. ಮುಖ್ಯ ಮೂಲಗಳು ಸಾರಿಗೆ ಮತ್ತು ವಾಹನಗಳು, ಪಶುಸಂಗೋಪನೆ, ಭತ್ತದ ಕೃಷಿ ಗೃಹಮಟ್ಟದ ಇಂಧನ ಬಳಕೆ, ತ್ಯಾಜ್ಯ ನಿರ್ವಹಣೆಯ ಕೊರತೆ, ಅರಣ್ಯ ನಾಶ.

ನೀರು ತುಂಬಿದ ಭತ್ತದ ಗದ್ದೆಗಳಿಂದ ಮೀಥೇನ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಪಶುಗಳ ಜೀರ್ಣಕ್ರಿಯೆಯೂ ಮೀಥೇನ್ ಉತ್ಸರ್ಗದ ಪ್ರಮುಖ ಮೂಲವಾಗಿದೆ. ಹಾಗೆಯೇ ಮರಗಳನ್ನು ಕಡಿಯುವುದರಿಂದ ಕಾರ್ಬನ್ ಸ್ಥಿರೀಕರಣ ಕಡಿಮೆಯಾಗುತ್ತದೆ. ಕೃಷಿ ಪ್ರಧಾನ ರಾಜ್ಯಗಳಲ್ಲಿ ಈ ಎಲ್ಲವೂ ಗಮನಿಸಲೇಬೇಕಾದ ಅಂಶಗಳಾಗಿವೆ. ಅರಣ್ಯ ನಾಶವು ಎರಡು ರೀತಿಯಲ್ಲಿ ಹಾನಿ ಉಂಟುಮಾಡುತ್ತದೆ. ಮೊದಲನೆಯದಾಗಿ, ಮರಗಳು ಸಂಗ್ರಹಿಸುವ ಕಾರ್ಬನ್ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಎರಡನೆಯದಾಗಿ, ಭವಿಷ್ಯದಲ್ಲಿ ವಾತಾವರಣದ ಕಾರ್ಬನ್ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಮಾನವ ನಿರ್ಮಿತ ಕಾರ್ಬನ್ ಬಿಡುಗಡೆಯಾಗುವಿಕೆಯ 20–25 ಶೇಕಡಾ ಅರಣ್ಯ ನಾಶ ಮತ್ತು ಭೂಬಳಕೆ ಬದಲಾವಣೆಯಿಂದ ಉಂಟಾಗುತ್ತಲಿದೆ ಎಂದು ಅಧ್ಯಯನಗಳು ಹೇಳುತ್ತವೆ.


ನಮ್ಮ ದೈನಂದಿನ ಅಗತ್ಯಗಳು ಹಾಗು ಕೆಲವು ಅತಿಯಾಸೆಗಳಿಂದ ‘ಕಾರ್ಬನ್’ ನ ಪ್ರಮಾಣ ಭೂಮಿಯಲ್ಲಿ ಹೆಚ್ಚುತ್ತಲೇ ಇದೆ. ಕೈಗಾರಿಕಾ ಕ್ರಾಂತಿಯ ನಂತರ ಹವಾಮಾನ ಬದಲಾವಣೆಯ ಗಂಭೀರ ಪರಿಸ್ಥಿತಿಯು ಅರಿವಿಗೆ ಬಂದ ನಂತರದಲ್ಲಿ ವಿವಿಧ ದೇಶಗಳೆಲ್ಲ ಸೇರಿ ಕಾರ್ಬನ್ ಬಿಡುಗಡೆ ಕಡಿಮೆ ಮಾಡಲು ಮಿತಿ ಹಾಗೂ ಗುರಿಗಳನ್ನು ನಿಗದಿಪಡಿಸುವ ಚರ್ಚೆ ನಡೆಸಿದವು. ಆದರೆ ಈಗಾಗಲೇ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಆರ್ಥಿಕ ಬೆಳವಣಿಗೆ, ಕೈಗಾರಿಕಾ ಅವಲಂಬನೆ ಮತ್ತು ಈ ಹಿಂದೆ ‘ಕಾರ್ಬನ್’ ಅನ್ನು ಬಿಡುಗಡೆ ಮಾಡಲಾಗಿರುವ ದೇಶಗಳ ಜವಾಬ್ದಾರಿ ಕುರಿತು ಭಿನ್ನಾಭಿಪ್ರಾಯಗಳು ಮೂಡಿದವು. ಆಗ 1988 ರಲ್ಲಿ ಶುರುವಾದದ್ದು ಇಂಟರ್ ಗವರ್ನಮೆಂಟಲ್ ಪ್ಯಾನಲ್ ಫಾರ್ ಕ್ಲೈಮೇಟ್ ಚೇಂಜ್ (IPCC).
ಇದರ ನಂತರದಲ್ಲಿ ‘ಕಾರ್ಬನ್’ ಅನ್ನು ಕಡಿಮೆ ಬಿಡುಗಡೆ ಮಾಡುವುದಕ್ಕೆ ಹಾಗೂ ಬಿಡುಗಡೆಯಾದ ‘ಕಾರ್ಬನ್’ ಅನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಆರ್ಥಿಕ ಪ್ರೇರಣೆ ನೀಡುವ ಮಾರುಕಟ್ಟೆ ಆಧಾರಿತ ವಿಧಾನ ಅಗತ್ಯವೆಂದು ಜಾಗತಿಕ ಮಟ್ಟದಲ್ಲಿ ಚರ್ಚೆ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಶುರುವಾದದ್ದು ಕಾರ್ಬನ್ ಕ್ರೆಡಿಟ್ ವ್ಯವಸ್ಥೆ.
ಕಾರ್ಬನ್ ಕ್ರೆಡಿಟ್ ಎಂದರೆ, ಒಂದು ಸಂಸ್ಥೆ ಅಥವಾ ದೇಶ ತನ್ನ ಕಾರ್ಬನ್ ಬಿಡುಗಡೆ ಪ್ರಮಾಣವನ್ನು ಕಡಿಮೆ ಮಾಡಿದರೆ ಅಥವಾ ಅರಣ್ಯಗಳ ಮೂಲಕ ‘ಕಾರ್ಬನ್’ ಅನ್ನು ಸಂಗ್ರಹಿಸಿದರೆ, ಅದನ್ನು ಅಳೆಯಬಹುದಾದ ಒಂದು ಪ್ರಮಾಣವಾಗಿ ಒಂದು “ಕ್ರೆಡಿಟ್” ಆಗಿ ಪರಿಗಣಿಸಲಾಗುತ್ತದೆ.
ಒಂದು ಟನ್ ಕಾರ್ಬನ್ ಡೈಆಕ್ಸೈಡ್ ಬಿಡುಗಡೆ ಕಡಿಮೆ ಮಾಡಿದರೆ ಅಥವಾ ಅಷ್ಟೇ ಪ್ರಮಾಣದ ‘ಕಾರ್ಬನ್’ ಅನ್ನು ಸಂಗ್ರಹಿಸಿದರೆ = ಒಂದು ಕಾರ್ಬನ್ ಕ್ರೆಡಿಟ್
ಕಾರ್ಬನ್ ಬಿಡುಗಡೆಯನ್ನು ನಿಯಂತ್ರಿಸಿ ಈ ಕ್ರೆಡಿಟ್ ಅನ್ನು ಪಡೆಯಲು ಸಾಧ್ಯವಾಗದ ಇತರ ಸಂಸ್ಥೆಗಳು ಅಥವಾ ರಾಷ್ಟ್ರಗಳು ಖರೀದಿಸಬಹುದು ಎಂಬ ಆಲೋಚನೆ ನಂತರದಲ್ಲಿ ಬೆಳವಣಿಗೆಯಾಯಿತು. ಈ ರೀತಿಯ ಮಾರುಕಟ್ಟೆ ಆಧಾರಿತ ವಿಧಾನವನ್ನು ಜಾಗತಿಕ ಮಟ್ಟದಲ್ಲಿ ಜಾರಿಗೆ ತಂದಂತಹ ಪ್ರಮುಖ ಘಟ್ಟವೇ 1997ರ ಕ್ಯೋಟೋ ಪ್ರೋಟೊಕಾಲ್.
ಈ ಒಪ್ಪಂದದಡಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕಡ್ಡಾಯವಾಗಿ ಕಾರ್ಬನ್ ಬಿಡುಗಡೆಯಲ್ಲಿ ಕಡಿತ ಮಾಡಬೇಕೆಂಬ ಗುರಿಗಳನ್ನು ನಿಗದಿಪಡಿಸಲಾಯಿತು. ಜೊತೆಗೆ Clean Development Mechanism (CDM) ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೈಗೊಂಡ ಕಾರ್ಬನ್ ಬಿಡುಗಡೆ ಕಡಿತ ಯೋಜನೆಗಳಿಗೆ ‘ಕಾರ್ಬನ್’ ಕ್ರೆಡಿಟ್ ಅನ್ನು ನೀಡುವ ವ್ಯವಸ್ಥೆ ಪ್ರಾರಂಭವಾಯಿತು.
ಮುಂದುವರಿಯುವುದು . . .



ಲೇಖನ: ಕುಮುದ
ಚಿಕ್ಕಮಗಳೂರು ಜಿಲ್ಲೆ



