ನನ್ನೊಲವಿನ ಗುಲ್ ಮೊಹರ್
© ಡಾ. ಅಶ್ವಥ ಕೆ. ಎನ್.
ದೂರದಿಂದಲೇ ತನ್ನಿರುವನ್ನು ತೋರುವ ಈ ಮರ ಪ್ರಕೃತಿಯ ಒಂದು ವಿಸ್ಮಯವೇ ಸರಿ. ನಮ್ಮ ನಾಡಿನ ಮರವಲ್ಲದಿದ್ದರೂ ಇಂದು ಅದು ನಮ್ಮದೇ ಮರವಾಗಿಬಿಟ್ಟಿದೆ. ಬೆಂಗಳೂರಿನ ತುಂಬೆಲ್ಲಾ ಈ ಮರದ್ದೇ ಕಾರುಬಾರು. ನಮ್ಮ ವಿಧಾನಸೌಧ, ಎಂ. ಜಿ. ರೋಡ್, ವಿಲ್ಸನ್ ಗಾರ್ಡನ್, ಕೋರಮಂಗಲ, ಹೆಚ್. ಎಸ್. ಆರ್. ಸರ್ಜಾಪುರದ ರಸ್ತೆಯ ಇಕ್ಕೆಲಗಳಲ್ಲಿ ಮೈ ಚಾಚಿ ನಿಂತಿಹ ಈ ಮರ ಸೊಬಗು ಬಣ್ಣಿಸಲು ಅಸದಳ.

ದೂರದ ಮಡಗಾಸ್ಕರ್ ದಾಟಿ ಬಂದಿರುವ ಈ ಗುಲ್ ಮೊಹರ್ ಎಂಬ ಹೆಸರು ಪರ್ಷಿಯನ್ ಮೂಲದ್ದು (ಗುಲ್ – ಹೂ; ಮೊಹರ್ – ಮುದ್ರೆ/ಚಿಹ್ನೆ). ಇದರ ಕಂಗೊಳಿಸುವ ಹೂಗಳು ಪ್ರಕೃತಿಯ ಅದ್ಭುತ ಮುದ್ರೆಯಂತೆ ಕಾಣುವುದರಿಂದ ಈ ಹೆಸರು ಬಂದಿರಬಹುದು. ಬೇಸಿಗೆಯ ಸಮಯ, ರಣರಣ ಬಿಸಿಲು ಸುಡುವ ಹೊತ್ತಿನಲ್ಲಿ ಮರದ ತುಂಬ ಸೊಂಪಾದ ಚಿಗುರು ಎಲೆಗಳು, ಆ ಹಸಿರಿಗೆ ರಮಣೀಯವಾಗಿ ಹೊಂದುವ ರಕ್ತವರ್ಣದ ಪಕಳೆಗಳಲ್ಲಿ ಕಲಾವಿದನೊಬ್ಬ ಅಲ್ಲಲ್ಲೇ ಬಣ್ಣದ ಸಿಂಚನ ಮಾಡಿಸಿದಂತೆ ಬಿಳಿಯ ಅಥವಾ ಹಳದಿಯ ಮಿಶ್ರಣವಾದ ಹೂಗಳು. ಓಹ್! ಅದ್ಭುತ ದೃಶ್ಯ.
ಹೇಳಲು ಮರೆತೆ, ಕನ್ನಡದಲ್ಲಿ ಈ ಮರವನ್ನು ಕತ್ತಿಕಾಯಿ ಮರವೆನ್ನುತ್ತಾರೆ. ಇದರ ಕಾಯಿಗಳು ಕತ್ತಿಯಂತೆ ಕಾಣುವ ಕಾರಣವಿರಬಹುದು. ಬೆಂಗಾಲಿ ಮತ್ತು ಒರಿಯಾದಲ್ಲಿ ಕೃಷ್ಣ ಚೂಡಾ (ಕೃಷ್ಣನ ಕಿರೀಟ) ಎಂದು ಕರೆಯುತ್ತಾರೆ. ಇದರ ಎಲೆಗಳು, ಹೂಗಳು ಎಷ್ಟು ಮೃದುವೋ ಅಷ್ಟೇ ಗಡಸು ಇದರ ಕಾಯಿ. ಒಮ್ಮೊಮ್ಮೆ ಹೂವಿನ ಮೃದುತ್ವಕ್ಕೂ ಕಾಯಿಯ ಗಡಸುತನಕ್ಕೂ ಇರುವ ಅಂತರವೇ ಬದುಕಿನ ಪಾಠ ಎನಿಸುತ್ತದೆ. ಇದರೊಳಗಿನ ಬೀಜವೂ ಸಹ. ಬಣ್ಣವಾಗಲಿ ಅಥವಾ ಗಡಸುತನವಾಗಲಿ ಹೂಗಿಂತ ಎಷ್ಟು ವಿಭಿನ್ನ. ಬೀಜಗಳು ಒಟ್ಟಿಗಿರುವಾಗ ಮಾಡುವ ನಿನಾದ ಬಹಳ ಮಧುರ.
ನಾನು ಕೆಲಸ ಮಾಡುವ ಶಾಲೆಯ ಆವರಣದಲ್ಲಿ ಕಾಲಿಟ್ಟೊಡನೆ ಕಾಣುವ ಮೊದಲ ಮರವೆಂದರೆ ಗುಲ್ ಮೊಹರ್, ನನ್ನ ಕಣ್ಣುಗಳು ತನ್ನಂತಾನೆ ಇದರತ್ತ ಹೊರಳುತ್ತದೆ. ತೆಳು ಮುಗುಳುನಗೆಯೊಂದಿಗೆ ನಮ್ಮಿಬ್ಬರ ಸಂಭಾಷಣೆ ನಡೆಯುತ್ತದೆ. ನಾನು ಕೆಲವೊಮ್ಮೆ ಬೇಸಿಗೆಯ ರಜೆಯಲ್ಲೂ ಶಾಲೆಗೆ ಹೋಗುವುದು ಈ ಮರವನ್ನು ಭೇಟಿಮಾಡಲು. ನನ್ನ ಮನೆಯ ಗೇಟಿನ ಬಳಿಯೂ ಇದೇ ಮರವಿದೆ. ಬೇಸಿಗೆಯಿಡೀ ಬಿಸಿಲೊಂದಿಗೆ ಸ್ಪರ್ಧಿಸುತ್ತಾ, ನಗುನಗುತ್ತಾ ಅರಳುತ್ತದೆ. ಇದನ್ನು ನೋಡುತ್ತಾ ಮೈಮರೆತ ಕ್ಷಣಗಳು ಅದೆಷ್ಟೋ. ಚಿಕ್ಕ ಮಗುವಿನಂತೆ ಈ ಮರದ ಮುಂದೆ ನಿಂತೇ ಇರುತ್ತೇನೆ.

ಹೇ ಗೆಳತಿ, ಅರಿಯೆ ನೀ ಯಾರು, ಎಲ್ಲಿಂದ ಬಂದಿರುವೆಯೆಂದು
ನೀ ಯಾರಾದರೇನು, ತಿಳಿಯುವ ಅಗತ್ಯವು ನನಗೆಲ್ಲಿಯದು
ನನ್ನ ನಿನ್ನ ನಡುವಿನಲಿ ಹರಿಯುತಿಹ ಬಂಧವೆಂತಹುದು
ನಿನ್ನ ಪುಟ್ಟ ನೋಟ, ಉಕ್ಕಿಸುವುದು ಪ್ರೀತಿಯ ಸೆಲೆಯನು
ವಸಂತನ ಆಗಮನಕ್ಕಾಗಿ ಹಾತೊರೆಯುವ ನಿನ್ನೊಲವು
ನನಗೆ ತಿಳಿಯದೆ ನಿನ್ನಅಂತರಂಗ, ಬಲ್ಲೆ ನಾನು ಎಲ್ಲವ,
ನಿನ್ನ ಈ ಸೊಬಗು, ಬಿನ್ನಾಣ, ಸಿಂಗಾರದ ಆರಾಧಕಿ ನಾನು
ಪ್ರತಿ ಬೇಸಿಗೆಯಲ್ಲೂ ಉಸಿರಹಿಡಿದು ಕಾಯುವೆ ನಿನಗಾಗಿ ನಾನು
ಆಡದೆಯೇ ನುಡಿದಿದೆ ನೂರೆಂಟು ಮಾತ ಆ ನಿನ್ನ ಕುಡಿ ನೋಟ
ಸಾಕು ನನಗೆ ಹೃದಯ ತುಂಬುತಿಹ ನಿನ್ನ ಈ ಒಂದು ನೋಟ

ಲೇಖನ: :ಮಂಜುಳಾ ರಾವ್
ಬೆಂಗಳೂರು ಜಿಲ್ಲೆ






