ಸಕ್ಕರೆ ತಿಂದರೆ, ತೊಂದರೆ!
ಕೇವಲ ಒಂದು ರೂಪಾಯಿ ಇದ್ದಿದ್ದರೆ ಆಗ ಏನೆಲ್ಲಾ ಸಿಗುತ್ತಿತ್ತು, ಗೊತ್ತೇನು? 12 ಪೆಪ್ಪರ್ಮೆಂಟ್ ಅಥವಾ 8 ಶುಂಠಿ ಪೆಪ್ಪರ್ಮೆಂಟ್ ಅಥವಾ 2 ಹುಣಸೆ ಹಣ್ಣಿನ ಸ್ಪೂನ್ ಅಥವಾ 4 ಸಣ್ಣ ರಸಗುಲ್ಲಾ ಹೀಗೆ ಹೇಳುತ್ತಾ ಹೋದರೆ ಎಷ್ಟೋ ಇದೆ. ಆದರೆ ಆ ಒಂದು ರೂಪಾಯಿ ನಮ್ಮ ಕೈಗೆ ಸಿಗುತ್ತಿದ್ದದ್ದೇ ಕಡಿಮೆ. ಸಿಕ್ಕರೆ ಮಾತ್ರ ಇಂತಹುದೇ ಯಾವುದಾದರೂ ಒಂದೊಳ್ಳೆ ಪದಾರ್ಥ ನಮ್ಮ ಕೈಯಲ್ಲಿ ಇರುತ್ತಿತ್ತು. ನಾಲಿಗೆ ಅದನ್ನು ಸವಿಯುತ್ತಿತ್ತು. ಆಗ ಮನೆಯ ಆಹಾರ ಬಿಟ್ಟು ಹೊರಗಡೆ ಅಂದರೆ ಅಂಗಡಿಯ ಕುರುಕಲು ತಿಂಡಿಗಳನ್ನು ತಿನ್ನುವುದು ಐಶ್ವರ್ಯವಾಗಿತ್ತು. ಆದರೆ ಈಗ ಅದು ಸಾಮಾನ್ಯವಾಗಿಬಿಟ್ಟಿದೆ. ಮನೆಯ ಅಥವಾ ನಾವೇ ಕೈಯಾರೆ ಮನೆಯಲ್ಲಿ ಮಾಡಿದ ಒಳ್ಳೆ ಆಹಾರ ತಿನ್ನುವುದೇ ಐಶ್ವರ್ಯವಾಗಿಬಿಟ್ಟಿದೆ. ಇಂತಹುದನ್ನೇ ಗಮನಿಸಿದ ಪಾಶ್ಚಾತ್ಯ ವಿಜ್ಞಾನಿಗಳು ಒಂದು ಹೊಸ ವಿಚಾರವನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ, ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಅಂದರೆ ಮೊದಲ 2-3 ವಯಸ್ಸಿನಲ್ಲಿ ತಿನ್ನುವ ಸಕ್ಕರೆಯ ಪ್ರಮಾಣದ ಮೇಲೆ ಮುಂದೆ ಅವರ ಜೀವನದಲ್ಲಿ ಅದರ ಪರಿಣಾಮ ಇರುತ್ತದಂತೆ. ಅದು ಹೇಗೆ ಎಂದರೆ, ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಸಕ್ಕರೆ ತಿಂದರೆ ದಶಕಗಳ ನಂತರ ಅಂತಹ ಮಕ್ಕಳಲ್ಲಿ ಬುದ್ಧಿಮಾಂದ್ಯತೆ ಬರುವ ಸಾಧ್ಯತೆಗಳು ಹೆಚ್ಚು ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಸಕ್ಕರೆ ತಿಂದ ತಕ್ಷಣ ಮಕ್ಕಳಲ್ಲಿ ಶಕ್ತಿ ಉಲ್ಬಣಿಸುವುದು. ಮಕ್ಕಳು ಚಟುವಟಿಕೆಯಿಂದ ನಲಿಯುವರು. ಆದರೆ ಅದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಹೆಚ್ಚು ಸಕ್ಕರೆ ಸೇವನೆಯಿಂದ ಸಕ್ಕರೆ ಖಾಯಿಲೆ, ರಕ್ತದ ಒತ್ತಡಗಳಂತಹ ಅನಾರೋಗ್ಯಕ್ಕೆ ದಾರಿ ಮಾಡಿಕೊಡಬಹುದು ಎಂಬುದನ್ನು ವಿಜ್ಞಾನಿಗಳು ಈಗಾಗಲೇ ಊಹಿಸಿದ್ದಾರೆ. ಆದರೆ ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ವಿಜ್ಞಾನಿಗೆ ಬಂದ ಸಂಶಯವೆಂದರೆ, ಇದೇ ಹೆಚ್ಚು ಸಕ್ಕರೆ ಸೇವನೆ ಇಂದ ಮೆದುಳಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದೇ? ಎಂದು. ಇದನ್ನು ತಿಳಿಯಲೂ ಸಹ ಮುಂದಾದರು.

ಇದಕ್ಕಾಗಿ ಅವರು UKಯಲ್ಲಿನ ಜುಲೈ 1942ರಿಂದ ಜೂನ್ 1954 ರವರೆಗಿನ 65000 ಜನರ ವೈದ್ಯಕೀಯ ಮಾಹಿತಿಯನ್ನು ತೆಗೆದುಕೊಂಡರು. ಇದು ಇವರಿಗೆ ‘ಬಯೋ ಬ್ಯಾಂಕ್’ ಎಂದು ಕರೆಯಲ್ಪಡುವ ಜಾಗದಿಂದ ದೊರಕಿತು. ಇದರಲ್ಲಿ ವಿಶ್ವ ಮಹಾಯುದ್ಧ II ರಲ್ಲಿ ಬ್ರಿಟೀಷರು ವಿಧಿಸಿದ್ದ ಸಕ್ಕರೆ ಸೇವನೆಯ ಮಿತಿಯನ್ನು ಅಧಾರವಾಗಿ ಇಟ್ಟುಕೊಂಡು ಹೇಳಲಾಗುತ್ತಿದೆ ಎಂದು ಇವರ ವಾದ. ಅದರಲ್ಲಿ ಹೇಳಿರುವ ಹಾಗೆ ಪ್ರತಿಯೊಬ್ಬರಿಗೂ ಪ್ರತೀ ದಿನ 41g ನಷ್ಟು ಸಕ್ಕರೆಯನ್ನು ಖರೀದಿಸಿ ಸೇವಿಸಬಹುದಿತ್ತು.
ಹೀಗೆ ನಿಗದಿಪಡಿಸಿದ ಪ್ರಮಾಣದಂತೆ ಚಿಕ್ಕ ವಯಸ್ಸಿನಲ್ಲಿ ಸಕ್ಕರೆ ಸೇವಿಸಿದ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಬೇರೆಯವರಿಗಿಂತ 23% ಕಡಿಮೆ ಬುದ್ಧಿ ಮಾಂದ್ಯತೆಗೆ ಒಳಗಾಗುತ್ತಿದ್ದರಂತೆ. ಹಾಗೂ 28% ಕಡಿಮೆ ಪ್ರಮಾಣದಲ್ಲಿ ಮರೆವಿನ ಖಾಯಿಲೆಗೆ ತುತ್ತಾಗುತ್ತಿದ್ದರಂತೆ. ಇದು ಪ್ರಮುಖವಾಗಿ ಮಕ್ಕಳ ಮೊದಲ 1000 ದಿನಗಳ ಅಂದರೆ 2-3 ವರ್ಷ ವಯಸ್ಸಿನಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣದ ಅಧಾರವಾಗಿದೆ ಎಂಬುದು ವಿಜ್ಞಾನಿಗಳ ಅಂಕಿ-ಅಂಶಗಳ ಅಭಿಪ್ರಾಯ.
ಹಾಗೆಂದು ಹೆಚ್ಚು ಸಕ್ಕೆರೆ ಸೇವನೆಯಿಂದ ಮಾತ್ರ ಹೀಗೆ ಆಗುತ್ತದೆ ಎಂದು ಖಡಾಖಂಡಿತವಾಗಿ ಹೇಳಲಾಗದು. ಇದರ ಜೊತೆಗೆ ಹತ್ತು ಹಲವಾರು ಕಾರಣಗಳಿರಬಹುದು. ಆದರೆ ಮೊದಲ ಹಂತದ ಅಂಕಿ-ಅಂಶಗಳು ಹೇಳುತ್ತಿರುವುದನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಏನೇ ಆಗಲಿ ಸಕ್ಕರೆ ಸೇವನೆಯ ಪ್ರಮಾಣದಿಂದ ಇಂತಹ ಖಾಯಿಲೆಗಳ ಪ್ರಭಾವ ಕಡಿಮೆ ಆಗುವ ಸಾಧ್ಯತೆಗಳಿದ್ದರೆ, ಏಕೆ ಮಾಡಬಾರದು? ಎಂದು ವಿಜ್ಞಾನಿಗಳು ಜನಸಾಮಾನ್ಯರಲ್ಲಿ ಕೇಳಲು ಬಯಸುತ್ತಾರೆ.

ನನ್ನ ವಾದವೂ ಅದೇ. ನಮ್ಮ ಅನಾರೋಗ್ಯದ ಸೂಚನೆಗಳು ನಮ್ಮ ದೇಹ ನಮಗೆ ಮುಂಚಿತವಾಗಿಯೇ ತಲುಪಿಸುತ್ತದೆ. ಅದನ್ನು ಸರಿಯಾಗಿ ಗಮನಿಸಿ ಅದರಂತೆ ನಡೆದರೆ ಅದು ದೊಡ್ಡದಾಗುವುದನ್ನು ತಪ್ಪಿಸಬಹುದು. ಅದಲ್ಲದೇ ಮುಂದುವರಿದ ಜ್ಞಾನ, ತಂತ್ರಜ್ಞಾನ ಹಾಗೂ ಇಂತಹ ಸಂಶೋಧನೆಗಳಿಂದ ತಿಳಿದು ಬರುವ ಈ ಸುವಿಚಾರಗಳನ್ನು ಆಲಿಸಿ-ಪಾಲಿಸಿದರೆ ಯಾವ ಗಂಟನ್ನು ಕಳೆದುಕೊಳ್ಳುತ್ತೀರಿ? ಆದರೆ ಒಳ್ಳೆಯದೇ ಆಗುತ್ತದೆ ಅಲ್ಲವೇ? ಸಕ್ಕರೆ ಮೇಲೆ ಇರುವ ಅಕ್ಕರೆ ಸ್ವಲ್ಪವಾದರೂ ನಮ್ಮ ಆರೋಗ್ಯದ ಮೇಲೆ ಇಟ್ಟರೇ… ತಪ್ಪಬಹುದು ತೊಂದರೆ.

Source: www.sciencenews.org

ಲೇಖನ: ಜೈಕುಮಾರ್ ಆರ್
ಬೆಂಗಳೂರು ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.



