ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಪೊಮಾಟೋಸ್…! 

ನಾವು ಪ್ರತಿದಿನ ಬಳಸುವ ಆಲೂಗಡ್ಡೆ ಮತ್ತು ಟೊಮಾಟೋ ನಡುವಿನ ಸಂಬಂಧ ನಿಮಗೆ ಗೊತ್ತೇ? ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಆಲೂಗಡ್ಡೆಯ ವಿಕಾಸದ ಹಿಂದಿರುವ ಅಚ್ಚರಿಯ ಕಥೆಯನ್ನು ಅನಾವರಣಗೊಳಿಸಿವೆ. ಸಸ್ಯಗಳ ಅನುವಂಶಿಕತೆ, ವಿಕಾಸ ಮತ್ತು ಕೃಷಿ ವಿಜ್ಞಾನದ ಕುತೂಹಲಕಾರಿ ಸಂಗತಿಗಳನ್ನು ಈ ಲೇಖನ ಪರಿಚಯಿಸುತ್ತದೆ.
ಟೊಮಾಟೋ ಮತ್ತು ಆಲೂಗಡ್ಡೆ ಒಂದೇ ಕುಟುಂಬದ ಸಸ್ಯಗಳು

   

ಯುಗಾದಿ ಹಬ್ಬ, ಎಂದ ಕೂಡಲೇ ಸಾಮಾನ್ಯವಾಗಿ ಹಸಿರು ತೋರಣ, ಎಣ್ಣೆ ಸ್ನಾನ, ಹೊಸ ಬಟ್ಟೆ, ಒಬ್ಬಟ್ಟುಗಳು ನೆನಪಾಗುತ್ತವೆ. ಆದರೆ ನನಗೆ ಇದೆಲ್ಲದರ ಜೊತೆಗೆ. ಅಲ್ಲಾ, ಇದೆಲ್ಲಾದಕ್ಕೂ ಒಂದು ಕೈ ಹೆಚ್ಚು ಎಂಬಂತೆ ಮನೆಯಲ್ಲಿ ಮಾಡುವ ಆಲೂಗಡ್ಡೆ ಪಲ್ಯ ಮತ್ತು ಒಬ್ಬಟ್ ರಸಂ ಹೆಚ್ಚು ನೆನಪಾಗುತ್ತದೆ. ಯುಗಾದಿಯ ಸಮಯದಲ್ಲಿ ಎಲ್ಲರೂ ಒಬ್ಬಟ್ಟು, ತುಪ್ಪದ ನಡುವಿನ ರುಚಿ ಬಂಧವನ್ನು ಬೆಸೆದು ಅನುಭವಿಸುತ್ತಿದ್ದರೆ, ನಾನು ಅದಕ್ಕಿಂತ ಅಮ್ಮ ಮಾಡುವ ಆ ಆಲೂಗಡ್ಡೆ ಪಲ್ಯ ನನ್ನ ರುಚಿ ಗ್ರಂಥಿಗಳು ಸವಿಯುವುದನ್ನು ಗಾಢವಾಗಿ ಅನುಭವಿಸುತ್ತಿದ್ದೆ. ಏನೋ ಗೊತ್ತಿಲ್ಲ, ಸಾವಿರಾರು ಬಗೆಯ ತಿನಿಸುಗಳನ್ನು ಮಾಡಲು ಒಗ್ಗುವ ಈ ಆಲೂಗಡ್ಡೆ ನನಗೆ ಮಾತ್ರ ಆ ಅಮ್ಮ ಮಾಡುವ ಪಲ್ಯದ ರೂಪದಲ್ಲೇ ಹೆಚ್ಚು ಆಸ್ವಾದಕರ. ಬಹುಶಃ ಅದಕ್ಕೆ ಏನೋ ಸೆಳೆತವಿದೆ. ಹಾಗೆ ಇನ್ನೊಂದು ಇದೇ ತರಹದ ಮನೆ ಮನೆಯಲ್ಲೂ ಬಳಸುವ ಟೊಮಾಟೋ ಕೂಡಾ ಗೊಜ್ಜಿನ ರೂಪದಲ್ಲಿ ಇದ್ದ್ರೆ ನನಗೆ ಭಾಳ ಇಷ್ಟ. ಇದೇ ತರಕಾರಿಯನ್ನ ಸಾಸ್ ಆಗಿ ಮಾಡೀ ಪ್ರಪಂಚದಾದ್ಯಂತ ಬಳಸ್ತಾರೆ. ಅದು ನಿಮಗೂ ಗೊತ್ತಿದೆ. ನಿಮಗೆ ಇದುವರೆಗೆ ಗೊತ್ತಿಲ್ಲದ, ನನ್ನಂತ ಹಲವರಿಗೆ ಊಹಿಸಲೂ ಸಹ ಆಗದಂತ ಒಂದು ವಿಚಾರ ಇದೆ. ಹೇಳಲೇ? ಫ್ರೆಂಚ್ ಫ್ರೈಸ್, ಚಿಪ್ಸ್, ಅಲೂಗಡ್ಡೆ ಪಲ್ಯದ ಮೂಲಕ ಮನೆ ಮಾತಾಗಿರುವ ಇಂದಿನ ಆಲೂಗಡ್ಡೆಯ ವಂಶವು ಟೊಮಾಟೊ ಪೂರ್ವಜ ಮತ್ತು Etuberosum ಎಂಬ ಗಿಡದ ಸ್ವಾಭಾವಿಕ ಸಂಕರಣದಿಂದ ಹುಟ್ಟಿಕೊಂಡಿದೆ. ಒಂದು ರೀತಿಯಲ್ಲಿ ಹೇಳುವುದಾದರೆ, ಟೊಮಾಟೊ ವಂಶವು ಆಲೂಗಡ್ಡೆಯ ಎರಡು ಪೂರ್ವಜ ವಂಶಗಳಲ್ಲಿ ಒಂದಾಗಿದೆ. ಹೇಗೆ?

Solanum etuberosum ಕಾಡು ಆಲೂಗಡ್ಡೆಯ ಪೂರ್ವಜ
© Vidyascooking

ಸುಮಾರು ವರ್ಷಗಳಿಂದ ವಿಜ್ಞಾನಿಗಳನ್ನೂ ಕಾಡುತ್ತಿದ್ದ ಪ್ರಶ್ನೆಯಿದು. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಸುಮಾರು 9 ಮಿಲಿಯನ್ ವರ್ಷಗಳ ಹಿಂದೆ ದಕ್ಷಿಣ ಅಮೆರಿಕದ ಆಂಡೀಸ್ ಪರ್ವತ ಪ್ರದೇಶದಲ್ಲಿ ಟೊಮಾಟೊ ವಂಶದ ಪೂರ್ವಜ ಮತ್ತು Etuberosum ಎಂಬ ಆಲೂಗಡ್ಡೆಯ ಪೂರ್ವಜ ಗಿಡದ ನಡುವೆ ಸ್ವಾಭಾವಿಕವಾಗಿ ನಡೆದ ಸಂಕರಣದಿಂದ ಆಲೂಗಡ್ಡೆಯ ಹೊಸ ವಂಶ ಉದ್ಭವಿಸಿತು. ನಂತರ ಈ ವಂಶವು ಹಲವು ಕಾಡು ಜಾತಿಗಳಾಗಿ ವಿಕಸನಗೊಂಡು, ಅವುಗಳಲ್ಲಿನ ಕೆಲವು ಜಾತಿಗಳನ್ನು ಮಾನವರು ಆಯ್ದು ಬೆಳೆಸಿದ ಪರಿಣಾಮ ಇಂದು ನಾವು ಸೇವಿಸುವ ಆಲೂಗಡ್ಡೆ ರೂಪುಗೊಂಡಿದೆ. ಅದು ಹೇಗೆ ಗೊತ್ತಾಯಿತು?

ಅಲೂಗಡ್ಡೆಯು ಟೊಮಾಟೊದ ಹತ್ತಿರದ ಸಂಬಂಧಿ ಎಂದು ವಿಜ್ಞಾನಿಗಳಿಗೆ ಈಗಾಗಲೇ ಅವುಗಳ ಜೀನೋಮ್ (ಅನುವಂಶಿಕ ಮಾಹಿತಿ) ಅಧ್ಯಯನದಿಂದ ತಿಳಿದಿತ್ತು. ಆದರೆ ಇತ್ತೀಚಿನ ಅಧ್ಯಯನವು ಇಂದಿನ ಆಲೂಗಡ್ಡೆಯ ಜೀನೋಮ್‌ನಲ್ಲಿ ಟೊಮಾಟೊ ವಂಶದ ಪೂರ್ವಜ ಮತ್ತು Solanum etuberosum ವಂಶದ ಎರಡೂ ಪೂರ್ವಜಗಳ ಅನುವಂಶಿಕ ಕೊಡುಗೆ ಇರುವುದನ್ನು ಬಹಿರಂಗಪಡಿಸಿದೆ.

ಅಂದರೆ ಇದರ ಅರ್ಥ, ಟೊಮಾಟೊ ವಂಶದ ಪೂರ್ವಜ ಮತ್ತು Solanum etuberosum ವಂಶದ ಪೂರ್ವಜದ ನಡುವೆ ನಡೆದ ಸ್ವಾಭಾವಿಕ ಸಂಕರಣದಿಂದ ಆಲೂಗಡ್ಡೆಯ ಹೊಸ ವಂಶ ಉದ್ಭವಿಸಿತು. ಇನ್ನೂ ನಿಖರವಾಗಿ ಹೇಳುವುದಾದರೆ, ಆಲೂಗಡ್ಡೆಯ ಗಡ್ಡೆಯು ಭೂಮಿಯೊಳಗೆ ಬೆಳೆಯುವ ಮಾರ್ಪಾಡಾದ ಕಾಂಡ (ಟ್ಯೂಬರ್). ಈ ಟ್ಯೂಬರ್ ರೂಪುಗೊಳ್ಳಲು ಅಗತ್ಯವಾದ SP6A ಜೀನ್ ಟೊಮಾಟೊ ವಂಶದಿಂದ ಬಂದಿದೆ. ಗಡ್ಡೆಯು ಭೂಮಿಯೊಳಗೆ ಬೆಳೆಯಲು ನೆರವಾಗುವ IT1 ಜೀನ್ Solanum etuberosum ವಂಶದಿಂದ ಬಂದಿದೆ. ಈ ಎರಡೂ ಜೀನ್‌ಗಳ ಸಂಯೋಜನೆಯೇ ಟ್ಯೂಬರ್ ರೂಪುಗೊಳ್ಳಲು ಕಾರಣವಾಯಿತು. ಆದರೆ ಇಂದು ನಾವು ತಿನ್ನುವ ಆಲೂಗಡ್ಡೆ ನೇರವಾಗಿ ಆ ಸಂಕರಣದಿಂದ ಹುಟ್ಟಿಲ್ಲ. ಮೊದಲು ಆ ಸಂಕರಣದಿಂದ ಹಲವು ಕಾಡು ಆಲೂಗಡ್ಡೆ ಜಾತಿಗಳು (wild species) ರೂಪುಗೊಂಡವು. ಅವುಗಳಲ್ಲಿ ಹೆಚ್ಚಿನವು ಮಾನವ ಸೇವನೆಗೆ ಯೋಗ್ಯವಾಗಿರಲಿಲ್ಲ. ನಂತರ ಆಂಡೀಸ್ ಪ್ರದೇಶದಲ್ಲಿ ಕಂಡುಬಂದ ಕೆಲವು ಸೂಕ್ತ ಕಾಡು ಜಾತಿಗಳನ್ನು ಮಾನವರು ಆಯ್ದು, ಹಲವು ತಲೆಮಾರುಗಳ ಆಯ್ಕೆ ಮತ್ತು ಕೃಷಿಯ ಮೂಲಕ ಇಂದು ನಾವು ಬೆಳೆಯುವ ಆಲೂಗಡ್ಡೆಯ ತಳಿಗಳನ್ನು ಅಭಿವೃದ್ಧಿಪಡಿಸಿದರು.

ಈ ವಿಕಸನದ ಜೊತೆಗೆ ಆಲೂಗಡ್ಡೆಯ ಬೆಳವಣಿಗೆಯಲ್ಲಿಯೂ ಹಲವು ಬದಲಾವಣೆಗಳು ಸಂಭವಿಸಿವೆ. ಆರಂಭಿಕ ಕಾಡು ಆಲೂಗಡ್ಡೆ ಜಾತಿಗಳು ತಮ್ಮ ಪೂರ್ವಜ ವಂಶಗಳಿಂದ ಬಂದ ಅನುವಂಶಿಕ ಗುಣಗಳಿಂದ ವಿವಿಧ ಪರಿಸರ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದ್ದವು. ಜೊತೆಗೆ ಹಲವು ರೋಗಗಳು ಮತ್ತು ಪರಿಸರದ ಒತ್ತಡಗಳನ್ನು ಸಹ ತಡೆದುಕೊಳ್ಳುವ ಗುಣಗಳಿದ್ದವು. ಆದರೆ ಮಾನವರು ತಮ್ಮ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಇಳುವರಿ, ರುಚಿ ಮತ್ತು ಇತರ ಕೃಷಿ ಗುಣಗಳನ್ನು ಆಯ್ದು ಬೆಳೆಸುತ್ತಾ ಬಂದ ಪರಿಣಾಮ, ಕೆಲವು ಕಾಡು ಜಾತಿಗಳಲ್ಲಿದ್ದ ಸಹಜ ಅನುವಂಶಿಕ ವೈವಿಧ್ಯ ಮತ್ತು ಪ್ರತಿರೋಧ ಸಾಮರ್ಥ್ಯ ಕಡಿಮೆಯಾಗಿದೆ. ಬದಲಾಗುತ್ತಿರುವ ಹವಾಮಾನ ಮತ್ತು ಹೊಸ ರೋಗಗಳ ಹಿನ್ನೆಲೆಯಲ್ಲಿ ಇಂದಿನ ಅನೇಕ ಕೃಷಿ ತಳಿಗಳು ಹೆಚ್ಚು ಸೂಕ್ಷ್ಮವಾಗಿರುವುದು ಕಂಡುಬರುತ್ತಿದೆ. ಇದು ವಾಸ್ತವದ ಒಂದು ಮುಖ.

ಆಲೂಗಡ್ಡೆ ಗಿಡ ಮತ್ತು ಟೊಮಾಟೋ ಗಿಡದ ಹೋಲಿಕೆ
© ಧನರಾಜ್ ಎಂ.

ಈ ವಿಷಯದ ಇನ್ನೊಂದು ಮುಖವೆಂದರೆ, ಈ ಅನುವಂಶಿಕ ಸಂಬಂಧವನ್ನು ಅರಿತುಕೊಂಡಿರುವ ನಾವು ಆಲೂಗಡ್ಡೆಯ ಕಾಡು ಸಂಬಂಧಿಗಳು ಮತ್ತು ಪೂರ್ವಜ ವಂಶಗಳಲ್ಲಿರುವ ಉಪಯುಕ್ತ ಗುಣಗಳನ್ನು ಭವಿಷ್ಯದ ತಳಿ ಅಭಿವೃದ್ಧಿಯಲ್ಲಿ ಬಳಸಬಹುದೇ ಎಂಬ ಪ್ರಶ್ನೆ. ಇಂತಹ ಅಧ್ಯಯನಗಳು ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತವೆ. ಪ್ರಕೃತಿಯ ವಿಕಸನವನ್ನು ಅರ್ಥಮಾಡಿಕೊಂಡಷ್ಟೂ ಕೃಷಿಯನ್ನು ಇನ್ನಷ್ಟು ಸ್ಥಿರ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವಂತೆ ರೂಪಿಸುವ ಅವಕಾಶಗಳು ಹೆಚ್ಚುತ್ತವೆ. ಆ ಅವಕಾಶಗಳನ್ನು ಹೇಗೆ ಬಳಸಬೇಕು ಎಂಬುದು ವಿಜ್ಞಾನಿಗಳ, ಕೃಷಿ ತಜ್ಞರ ಮತ್ತು ಸಮಾಜದ ಸಮೂಹ ನಿರ್ಧಾರವಾಗಿದೆ.

ಬದಲಾವಣೆ ಜಗದ ನಿಯಮ – ಸರಿ. ಆದರೆ ಪ್ರಕೃತಿಯನ್ನು ಅರ್ಥಮಾಡಿಕೊಂಡು ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಪರಿಸರಕ್ಕೂ, ಕೃಷಿಗೂ ಮತ್ತು ಮುಂದಿನ ತಲೆಮಾರುಗಳಿಗೂ ಎಷ್ಟು ಸೂಕ್ತ ಎಂಬುದನ್ನು ಯೋಚಿಸಬೇಕಿದೆ. ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ಅರ್ಥಪೂರ್ಣ ಬದಲಾವಣೆಯ ಆರಂಭ.

ಆಲೂಗಡ್ಡೆ ಟ್ಯೂಬರ್ ರಚನೆ

Source: www.snexplores.org

ಲೇಖನ: ಜೈಕುಮಾರ್ ಆರ್
                    ಬೆಂಗಳೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.