ಕಾನನ

ನಿಸರ್ಗದೆಡೆಗೆ ಪಯಣ

ಇತಿಹಾಸದ ಪುಟಗಳಲ್ಲಿ ವೃಕ್ಷಗಳ ಸಂರಕ್ಷಣೆ

ಮರಗಳ ಸ್ಥಳಾಂತರ ಎನ್ನುವುದು ಆಧುನಿಕ ತಂತ್ರಜ್ಞಾನದಿಂದ ಮಾತ್ರ ಸಾಧ್ಯವಾದ ಕಾರ್ಯವಲ್ಲ. ತುಘಲಕ್ ಕಾಲದಲ್ಲಿಯೇ ನಡೆದ ಮರಗಳ ಸ್ಥಳಾಂತರದ ಐತಿಹಾಸಿಕ ದಾಖಲೆಗಳು ಮತ್ತು ಬೆಂಗಳೂರಿನ ಮೆಟ್ರೋ ಕಾಮಗಾರಿಯಲ್ಲಿ ಉಳಿಸಲಾದ ಮರಗಳ ಕಥೆ ಇಲ್ಲಿದೆ.

        © ಶ್ರೀನಿವಾಸ್ ಕೆ. ಎಸ್.

ಮರಗಳು ನಮಗೆ ಪ್ರಕೃತಿ ಕೊಟ್ಟ ಬಹುದೊಡ್ಡ ಕೊಡುಗೆ. ಮರಗಳಿಲ್ಲದ ವಾತಾವರಣವನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಇತ್ತೀಚೆಗೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಪರಿಸರವಾದಿಗಳು ಇದಕ್ಕೆ ಬಹಳಷ್ಟು ವಿರೋಧ ವ್ಯಕ್ತಪಡಿಸುತ್ತಾರೆ. ಆದರೂ ಸರ್ಕಾರಗಳು ಕಿವುಡು ಕಪ್ಪೆಗಳ ರೀತಿ ಅವರು ಅಂದುಕೊಂಡಂತೆ ಕೆಲಸ ಮಾಡುತ್ತಿರುತ್ತಾರೆ. ಪ್ರತೀ ವರ್ಷ ಜೂನ್ 5ರಂದು ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿವೆ. ಆಗ ಕೆಲವು ಘೋಷಣೆಗಳು ಕಿವಿಗೆ ಕೇಳಿಸುತ್ತವೆ. ದೊಡ್ಡ ದೊಡ್ಡ ಫಲಕಗಳು ಕಾಣಿಸುತ್ತವೆ. “ಕಾಡು ಉಳಿಸಿ ನಾಡು ಬೆಳಸಿ”, “ಮನೆಗೊಂದು ಮರ ಊರಿಗೊಂದು ವನ”, “ಕಾಡಿದ್ದರೆ ಮಳೆ, ಮಳೆ ಇದ್ದರೆ ಬೆಳೆ” ಮುಂತಾದ ಘೋಷಣೆಗಳು ಹೊರಬೀಳುತ್ತವೆ.

ಜೂನ್ 5ರ ನಂತರ ಘೋಷಣೆಗಳು ಮರೆಯಾಗುತ್ತವೆ. ಕಾಡು ನಮಗೆಲ್ಲಾ ಅತಿ ಅವಶ್ಯಕ. ಕಾಡು ಇದ್ದರೆ ನಮಗೆಲ್ಲಾ ನೆರಳು, ಹಣ್ಣು, ಉಸಿರಾಡಲು ಒಳ್ಳೆಯ ಗಾಳಿ ಸಿಗುತ್ತದೆ. ಇದಕ್ಕಿಂತ ಮುಖ್ಯವಾಗಿ ಮಳೆ ಹೊತ್ತ ಮೋಡಗಳನ್ನು ತಡೆದು ಮಳೆ ಸುರಿಸುತ್ತದೆ. ಇದರಿಂದ ಭೂಮಿ ಸಸ್ಯಶ್ಯಾಮಲೆಯಾಗಿ ಕಂಗೊಳಿಸುವಳು. ಎಲ್ಲಾ‌ ಪ್ರಾಣಿ-ಪಕ್ಷಿಗಳಿಗೂ ಆಧಾರ ಆಗುವಳು. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕೆಲವೊಂದು ಕಾರಣಗಳಿಂದ ಮರಗಳನ್ನು ಕಡಿಯುವ ಪರಿಸ್ಥಿತಿ ಬರುತ್ತದೆ.

ಉದಾಹರಣೆ ಸುಗಮ ಸಂಚಾರಕ್ಕಾಗಿ ದೊಡ್ಡ ರಸ್ತೆಗಳನ್ನು ಮಾಡಬೇಕಾಗುತ್ತದೆ. ಅಥವಾ ಮೆಟ್ರೋ ಕಾಮಗಾರಿ ನಡೆಯುವಾಗ ಕಾಮಗಾರಿಗೆ ತೊಡಕಾಗುವ ಮರಗಳನ್ನು ಕಡಿಯಬೇಕಾಗುತ್ತದೆ. ಆಗ ಅಲ್ಲಿರುವ ಮರಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿದರೆ ಮರಗಳು ಉಳಿಯುತ್ತವೆ. ಮರಗಳನ್ನು ಸ್ಥಳಾಂತರಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅವುಗಳೆಂದರೆ, ಮರದ ಸುತ್ತ ಗುಂಡಿಯನ್ನು ತೋಡಿ ಬುಡಕ್ಕೆ ನೀರುಹಾಕಿ ಮಣ್ಣು ಸಡಿಲಗೊಳಿಸಿ ತಾಯಿಬೇರು ಸಮೇತ ಮರವನ್ನು ಮೇಲೆತ್ತಲಾಗುತ್ತದೆ. ಬೇರು ಒಣಗದಂತೆ ಸುರಕ್ಷಾ ಕ್ರಮ ವಹಿಸಲಾಗುತ್ತದೆ. ಅದನ್ನು ನೆಡಲು ತೋಡಿರುವ ಗುಂಡಿಗೆ ಮೊದಲೇ ನೀರುಣಿಸಿ, ಅಗತ್ಯ ಪೋಷಕಾಂಶ, ಕ್ರಿಮಿನಾಶಕ, ಗೊಬ್ಬರ ಹಾಕಿ ಬೇರು ಬೇಗ ನೆಲದಾಳಕ್ಕೆ ಇಳಿಯುವ ಸೂಕ್ತ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ನಂತರ ಕ್ರೇನ್ ಸಹಾಯದಿಂದ ಮರವನ್ನು ಗುಂಡಿಗೆ ಇಳಿಸಿ ನೆಡಲಾಗುತ್ತದೆ.

ಬೆಳೆದ ಮರಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ರಸ್ತೆಬದಿ, ಉದ್ಯಾನ, ಕೆರೆ ಆವರಣದಲ್ಲಿ ಸಸಿ ನೆಟ್ಟು ಪೋಷಿಸಿ ಬೆಳೆಸಲು ದೀರ್ಘಾವಧಿ ಬೇಕಾಗುತ್ತದೆ. ರಸ್ತೆ ವಿಸ್ತರಣೆ ಅಥವಾ ಇನ್ನಿತರ ಕಾಮಗಾರಿಗೆ ಬಲಿಯಾಗುವ ಮರಗಳನ್ನು ಸ್ಥಳಾಂತರಿಸಿದರೆ ಅವು ಬದುಕುತ್ತವೆ. ಹೊಸ ಸಸಿನೆಟ್ಟು ಅಷ್ಟು ದೊಡ್ಡದಾಗಿ ಬೆಳೆಸಲು ಬೇಕಾಗುವ ಸಮಯ, ಶ್ರಮ ಉಳಿತಾಯವಾಗುತ್ತದೆ.

ಈ ರೀತಿ ಮರಗಳ ಸ್ಥಳಾಂತರವೊಂದು ವೃಕ್ಷ ಫೌಂಡೇಶನಿನ ವೃಕ್ಷತಜ್ಞ ವಿಜಯ್ ನಿಶಾಂತ್ ಮತ್ತು ಪರಿಸರ ಪ್ರೇಮಿ ಅಕ್ಷಯ್ ಹೆಬ್ಳೀಕರ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಡೆಯಿತು. ಬೆಂಗಳೂರಿನ ವೈಟ್ ಫೀಲ್ಡ್ – ಐಟಿಪಿಎಲ್ ಬಳಿಯ ಸತ್ಯಸಾಯಿ ಆಸ್ಪತ್ರೆಯಿಂದ ವೈದೇಹಿ ಆಸ್ಪತ್ರೆವರೆಗಿನ ರಸ್ತೆಯ ಬದಿಗಳು ಮತ್ತು ನಡುವೆ ಬೆಳೆದು ನಿಂತಿದ್ದ ವಿವಿಧ ಬಗೆಯ 108 ಮರಗಳು ಮೆಟ್ರೋ ಕಾಮಗಾರಿಯ ಕೊಡಲಿ ಪೆಟ್ಟಿನಿಂದ ತಪ್ಪಿಸಿ ಸತ್ಯಸಾಯಿ ವೈದ್ಯಕೀಯ ಸಂಸ್ಥೆಯ ಆವರಣಕ್ಕೆ ಸ್ಥಳಾಂತರಗೊಂಡು ಚಿಗುರೊಡೆದು ಬೆಳೆದು ನಿಂತಿವೆ.

ಈ ಮರಗಳು ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿಗೆ (ಬೈಯ್ಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರಗೆ) ಬಲಿಯಾಗುತ್ತಿದ್ದವು. ಇದಕ್ಕಾಗಿ BMRC ರವರು ಬಿಬಿಎಂಪಿಯಿಂದ ಅನುಮತಿ ಪಡೆದಿದ್ದರು. ಮರಗಳಿಗೆ ಗುರುತು ಹಾಕಿದ್ದನ್ನು ಗಮನಿಸಿದ ಐಬಿಎಂ ಉದ್ಯೋಗಿಗಳಾದ ರಾಮ್ ಮತ್ತು ಸಿದ್ಧಾರ್ಥನಾಗ್ ಅವರು ಮರಗಳ ಸ್ಥಳಾಂತರಕ್ಕೆ ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸಿದರು. ಇದಕ್ಕೆ ಸಹಕಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಇದಕ್ಕೆ ವೃಕ್ಷತಜ್ಞ ವಿಜಯ್ ನಿಶಾಂತ್ ಮತ್ತು ಪರಿಸರ ಪ್ರೇಮಿ ಅಕ್ಷಯ್ ಹೆಬ್ಳೀಕರ್ ನೆರವು ನೀಡಲು ಒಪ್ಪಿದರು. ಮರಗಳ ಮರುನಾಟಿ ಮಾಡಲು ಹಲವು ಸಂಸ್ಥೆಗಳಲ್ಲಿ ಅನುಮತಿ ಕೇಳಲಾಗಿತ್ತು. ಅನುಮತಿ ಸಿಕ್ಕಿರಲಿಲ್ಲ. ಸತ್ಯಸಾಯಿ ವೈದ್ಯಕೀಯ ಸಂಸ್ಥೆಯವರು ಆವರಣದಲ್ಲಿ ಸ್ಥಳ ನೀಡಲು ಒಪ್ಪಿದರು. 2017 ಡಿಸೆಂಬರ್ ತಿಂಗಳಲ್ಲಿ ಮರ ಸ್ಥಳಾಂತರ ಪ್ರಕ್ರಿಯೆ ನಡೆದಿತ್ತು. ವಿಜಯ್ ನಿಶಾಂತ್ ನೇತೃತ್ವದಲ್ಲಿ 115 ಮರಗಳ ಪೈಕಿ 108 ಮರಗಳನ್ನು ಸ್ಥಳಾಂತರ ಮಾಡಲಾಯಿತು. ನಿಶಾಂತ್ ಅವರು ಮರಗಳಿಗೆ ಸೋಂಕು ತಗುಲದಂತೆ ಶಿಲೀಂಧ್ರ ನಾಶಕಗಳು, ಇತರೆ ಔಷಧಗಳನ್ನು ಲೇಪಿಸಿ ಆರೈಕೆ ಮಾಡಿದ್ದರು. ಆಸ್ವತ್ರೆಯ ಸಿಬ್ಬಂದಿ ನೀರು ಹಾಕಿ ಮರಗಳ ಪೋಷಣೆ ಮಾಡಿದರು. ಈಗ ಮರಗಳು ಸೊಂಪಾಗಿ ಬೆಳೆದು ಪರಿಸರ ಪ್ರೇಮಿಗಳ ಮನ ತಣಿಸುತ್ತಿವೆ (ಪ್ರಜಾವಾಣಿ 28 ಮೇ 2018).

ಪರಿಸರ ಕಾಳಜಿಯಿಂದ ಮರಗಳನ್ನು ನೆಡುವುದು, ಬೆಳೆದ ಮರಗಳನ್ನು ಯಶಸ್ವಿಯಾಗಿ ಬೇರೆ ಕಡೆ ಸ್ಥಳಾಂತರಿಸುವುದು ಇತ್ತೀಚೆಗೆ ಬಂದ ಪದ್ದತಿಯೇನಲ್ಲ! ನಮ್ಮ ದೇಶವನ್ನು ಆಳಿದ ಕೆಲ ರಾಜರ ಚರಿತ್ರೆ ಓದಿದಾಗ ಈ ರೀತಿಯ ಕೆಲಸಗಳನ್ನು ಸಾವಿರಾರು ವರ್ಷದ ಹಿಂದೆ, ಹಲವು ಶತಮಾನಗಳ ಹಿಂದೆಯು ಸಹ ಮಾಡಿದ್ದಾರೆ. ಮೊದಲಿಗೆ ಮರಗಳ ನೆಡುವಿಕೆಯ ವಿಷಯ ಬಂದಾಗ ನಮ್ಮ ಗಮನಕ್ಕೆ ಬರುವ ಹೆಸರು ಮೌರ್ಯಸಾಮ್ರಾಜ್ಯದ ದೊರೆ ”ಅಶೋಕ ಚಕ್ರವರ್ತಿ”. ಅಶೋಕ ಚಕ್ರವರ್ತಿಯು ರಸ್ತೆಯ ಇಕ್ಕೆಲಗಳಲ್ಲಿ ಸಸಿಗಳನ್ನು ನೆಡೆಸಿ ಅವುಗಳನ್ನು ಪೋಷಿಸಿ ನೋಡಿಕೊಳ್ಳಲು ಕೆಲವರನ್ನು ನೇಮಿಸಿದ್ದನು. ಅಷ್ಟೇ ಅಲ್ಲದೆ ತನ್ನ ರಾಜ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡುವವರ ವಿರುದ್ಧ ಕ್ರಮಗಳನ್ನು ತೆಗೆದುಕೊಂಡ ದಾಖಲೆಗಳು ಇವೆ. ಮಾನವರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಸಹ ದವಾಖಾನೆ ಕಟ್ಟಿಸಿದ್ದನು.

ಆದರೆ ಒಬ್ಬ ರಾಜನ ಹೆಸರು ಈ ವಿಷಯಕ್ಕೆ ತಳುಕು ಹಾಕಿದರೆ ಜನರು ಕಕ್ಕಾಬಿಕ್ಕಿಯಾಗುವರು. ಆ ಹೆಸರು ಯಾವುದು ಗೊತ್ತೇ? ಅವನೇ ಇತಿಹಾಸದಲ್ಲಿ ಹುಚ್ಚುದೊರೆ, ತಿಕ್ಕಲು ದೊರೆ ಎಂದು ಕುಖ್ಯಾತಿ ಪಡೆದಿರುವ ”ಮೊಹಮ್ಮದ್-ಬಿನ್-ತುಘಲಕ್”. ಇವನು ಬರುವುದು 14ನೇ ಶತಮಾನದಲ್ಲಿ ಆದರೆ 21ನೇ ಶತಮಾನದಲ್ಲಿ ಯಾವ ರಾಜಕಾರಣಿ ತಪ್ಪು ಮಾಡಿದರು ”ತುಘಲಕ್ ದರ್ಬಾರ್” ಎಂದು ಆಡಿಕೊಳ್ಳುವರು. ಪಾಪ, ಅವನ ಆತ್ಮಕ್ಕೆ ಅದೆಷ್ಟು ನೋವಾಗಬೇಡ. ಇರಲಿ ಈಗ ವಿಷಯಕ್ಕೆ ಬರೋಣ. ಇವನಿಗೆ ವಿಶಾಲ ರಾಜ್ಯವಿದ್ದ ಕಾರಣ ದೆಹಲಿಯಲ್ಲಿ ಕುಳಿತು ಇಡೀ ಸಾಮ್ರಾಜ್ಯದ ಆಡಳಿತ ನೋಡಿಕೊಳ್ಳಲು ಕಷ್ಟವಾಗುತ್ತಿತ್ತು. ಅದರ ಬದಲು ಮಹಾರಾಷ್ಟ್ರದ ದೇವಗಿರಿಯನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ಮಾಡಿದರೆ ಸರಿಹೋಗುತ್ತದೆ ಎಂಬುದು ಅವನ ಯೋಜನೆ ಅದಕ್ಕೆ ದೌಲತಾಬಾದ್ ಎಂದು ದೇವಗಿರಿಯ ಹೆಸರನ್ನು ಬದಲಿಸಿದನು. ಯೋಜನೆ ಸರಿಯಾಗಿತ್ತು. ಆದರೆ ಅವನು ಮಾಡಿಕೊಂಡ ಎಡವಟ್ಟು ಅಂದರೆ ಕೇವಲ ಆಡಳಿತಯಂತ್ರವನ್ನು ವರ್ಗಾಯಿಸಲು ಹೋಗದೇ ದೆಹಲಿಯ ಸಮಸ್ತ ಜನರನ್ನು ಅವರ ಸಾಕುಪ್ರಾಣಿಗಳ ಜೊತೆಯಲ್ಲಿ ದೇವಗಿರಿಗೆ ಹೊರಡಲು ಆದೇಶವಿತ್ತನು. ಜನಗಳು ವಿಧಿಯಿಲ್ಲದೆ ದೆಹಲಿಯಿಂದ ದೇವಗಿರಿಗೆ ಬಂದರು. ಆಗ ಶತ್ರುಗಳು ದೆಹಲಿ ಮೇಲೆ ದಾಳಿ ಮಾಡಿದಾಗ ಪುನಃ ಜನಗಳಿಗೆ ದೆಹಲಿಗೆ ಹೋಗಲು ಹೇಳಿದನು. ಜನಗಳಿಗೆ ಈ ಯೋಜನೆಯಿಂದ ಅಪಾರ ಹಾನಿಯಾಯಿತು. ಅವನಿಗೆ ಹುಚ್ಚುದೊರೆ, ತಿಕ್ಕಲು ದೊರೆ ಎಂಬ ಬಿರುದುಗಳು ಸಿಕ್ಕವು. ಈ ಯೋಜನೆ ಸಂಪೂರ್ಣ ವಿಫಲವಾಯಿತು.

ಈ ಸಂದರ್ಭದಲ್ಲಿ ನಮ್ಮ ಗಮನ ಸೆಳೆಯುವ ಪ್ರಮುಖ ವಿಷಯವೆಂದರೆ ಮರಗಳ ಸ್ಥಳಾಂತರ ಪ್ರಕ್ರಿಯೆ. ಇದರ ಅಧಿಕೃತ ದಾಖಲೆ ”ಇಬ್ನಬತೂತಾ” ಎಂಬ ಪ್ರವಾಸಿಯ ಪ್ರವಾಸಿಕಥನದಿಂದ ತಿಳಿದುಬರುತ್ತದೆ. ಇವನು ತುಘಲಕ್ ಆಸ್ಥಾನಕ್ಕೆ ಭೇಟಿಕೊಟ್ಟಿದ್ದನು ಮತ್ತು ದೆಹಲಿಯಿಂದ ದೇವಗಿರಿ, ದೇವಗಿರಿಯಿಂದ ದೆಹಲಿ ವಿಫಲ ಯೋಜನೆಯ ಪ್ರತ್ಯಕ್ಷದರ್ಶಿಯಾಗಿದ್ದನು.ರಿಸಿ ಮನೆಗೆ ಹಿಂದಿರುಗಿದೆ.

ಇವನ ಬರಹದ ಪ್ರಕಾರ ರಾಜನು ದಿಲ್ಲಿಯ ನಿವಾಸಿಗಳೆಲ್ಲ ಕೂಡಲೆ ದೇವಗಿರಿಗೆ ಹೊರಡಬೇಕೆಂದು ಆದೇಶ ನೀಡಿದನು. ಆದೇಶ ನೀಡುವ ಮೊದಲು ಜನಗಳು ನಡೆದುಕೊಂಡು ಹೋಗುವ ಹಾದಿಯಲ್ಲಿ ಎಲ್ಲಿ ಮರಗಳು ಇರುವುದಿಲ್ಲವೋ ಅಲ್ಲಿ ಪೂರ್ಣಬೆಳೆದ ಮರಗಳನ್ನು ನೆಡೆಸಿದ್ದನು. ಅವುಗಳನ್ನು ಈ ಉದ್ದೇಶಕ್ಕಾಗಿ ಬೇರೆ ಕಡೆಯಿಂದ ಕಿತ್ತು ತಂದು ನೆಡಲಾಗಿತ್ತು. (ಆಧಾರ: ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ ಪುಸ್ತಕ. ಪುಟಸಂಖ್ಯೆ 18). ಈಗ ಆಧುನಿಕ ಸಲಕರಣೆಗಳು ಬಂದಿವೆ. ಕ್ರೇನ್, ಜೆಸಿಬಿಗಳು ಇವೆ. ಇವು ಯಾವುವು ಇಲ್ಲದ ಕಾಲದಲ್ಲಿ ತುಘಲಕ್ ಕೇವಲ ಮಾನವ ಶಕ್ತಿಯನ್ನು ಬಳಸಿ ಮರಗಳ ಸ್ಥಳಾಂತರ ಮಾಡಿಸಿದ್ದು ಶ್ಲಾಘನೀಯ.

ಅವನು ಎಷ್ಟೇ ಎಡವಟ್ಟುಗಳು ಮಾಡಿರಲಿ ಅವನಿಂದ ಆದ ಒಳ್ಳೆಯ ಕಾರ್ಯವನ್ನು ಮೆಚ್ಚಬೇಕಾಗುತ್ತದೆ. ಇದೇ ರೀತಿ ಇತಿಹಾಸದಲ್ಲಿ ಆಗಿ ಹೋಗಿರುವ ಒಳ್ಳೆಯ ವಿಷಯಗಳನ್ನು ಹೊರತಂದು ಜನರ ಗಮನಕ್ಕೆ ತರಬೇಕಿದೆ. ಇತಿಹಾಸದಲ್ಲಿ ನಡೆದಿರುವ ಒಳ್ಳೆಯದನ್ನು ಎಲ್ಲರು ಮುಂದುವರೆಸಿಕೊಂಡು ಹೋಗುವಂತಾಗಬೇಕು. ”ನಾವು ಇತಿಹಾಸವನ್ನು ಕೇವಲ ವಿಷಯವಾಗಿ ಅಧ್ಯಯನ ಮಾಡುತ್ತೇವೆ ಹೊರತು ಇತಿಹಾಸದಿಂದ ಪಾಠ ಕಲಿಯುವುದಿಲ್ಲ” -ಪೂರ್ಣಚಂದ್ರ ತೇಜಸ್ವಿ. ಈ ಮಾತನ್ನು ತೇಜಸ್ವಿಯವರು ಬಹಳ ನೋವಿನಿಂದ ಹೇಳಿದ್ದಾರೆ. ನಾವು ಸ್ಪಲ್ಪವಾದರು ಇತಿಹಾಸದಿಂದ ಪಾಠ ಕಲಿತು ಒಳ್ಳೆಯದು ಮಾಡುವ ಕಡೆಗೆ ಗಮನಹರಿಸಬೇಕು.

ಲೇಖನ: : ಜೆ. ಅಶೋಕ್ ಕುಮಾರ್
                     ಚಿಕ್ಕಬಳ್ಳಾಪುರ ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.