ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಪ್ರಕೃತಿ ಬಿಂಬ

ಪಶ್ಚಿಮ ಘಟ್ಟ ಮತ್ತು ಭಾರತದಾದ್ಯಂತ ಕಂಡುಬರುವ ನಾಲ್ಕು ಬಗೆಯ ಕಪ್ಪೆಗಳ ಬಣ್ಣ, ಆವಾಸ ಮತ್ತು ವಿಶಿಷ್ಟ ಜೀವನಚಕ್ರದ ಸಚಿತ್ರ ಪರಿಚಯ - ಸರನಾಯಕಿಯವರ ಛಾಯಾಚಿತ್ರಗಳೊಂದಿಗೆ.
ವಯನಾಡು ಪೊದೆ ಕಪ್ಪೆ (Pseudophilautus wynaadensis) - ಸರನಾಯಕಿ ಚಿತ್ರ

                                                        ವಯನಾಡು ಪೊದೆ ಕಪ್ಪೆ                            © ಸರನಾಯಕಿ
 

ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕಾಡು, ಪೊದೆಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಕಪ್ಪೆಗಳು ರಾಕೋಫೋರಿಡೆ (Rhacophoridae) ಕುಟುಂಬಕ್ಕೆ ಸೇರುತ್ತವೆ. ಇದನ್ನು ವೈಜ್ಞಾನಿಕವಾಗಿ ಸ್ಯೂಡೋಫಿಲಾಟಸ್ ವೈನಾಡೆನ್ಸಿಸ್ (Pseudophilautus wynaadensis) ಎಂದು ಕರೆಯಲಾಗುತ್ತದೆ. ದೇಹವು ತೆಳ್ಳಗಿದ್ದು, ಮೊನಚಾದ ಮೂಗಿನ ಮೇಲೆ ತ್ರಿಕೋನಾಕೃತಿಯ ಬಿಳಿ ಮೆಚ್ಚೆಯನ್ನು ಹೊಂದಿದೆ ಹಾಗೂ ಗಂಟಲು ತಿಳಿ ಬೂದು ಮಿಶ್ರಿತ ಹಳದಿ ಬಣ್ಣದ ಮಚ್ಚೆಗಳನ್ನು ಹೊಂದಿದೆ. ಈ ಕಪ್ಪೆಗಳು ತಮ್ಮ ಮೊಟ್ಟೆಗಳನ್ನು ತೇವಾಂಶವಿರುವ ಪ್ರದೇಶಗಳಲ್ಲಿ ಇಡುತ್ತವೆ ಹಾಗೂ ಜೀವನ ಚಕ್ರದಲ್ಲಿ ಗೊದಮೊಟ್ಟೆ ಮರಿ (tadpole) ಹಂತವಿಲ್ಲದಿರುವುದು ವಿಶೇಷತೆಯಾಗಿದೆ. ಇದು ಸಣ್ಣ ಕೀಟಗಳನ್ನು ತನ್ನ ಆಹಾರವಾಗಿ ಸೇವಿಸುತ್ತದೆ.

ನೀಲಗಣ್ಣಿನ ಪೊದೆ ಕಪ್ಪೆ (Raorchestes luteolus) - ಪಶ್ಚಿಮ ಘಟ್ಟ
            ನೀಲಗಣ್ಣಿನ ಪೊದೆ ಕಪ್ಪೆ                                                                                            © ಸರನಾಯಕಿ

ಕರ್ನಾಟಕದ ಪಶ್ಚಿಮ ಘಟ್ಟಗಳಿಗೆ (ಮುಖ್ಯವಾಗಿ ಕೊಡಗು ಮತ್ತು ಶರಾವತಿ ಕಣಿವೆ) ಸ್ಥಳೀಯವಾಗಿದ್ದು, ಅಲ್ಲಿನ ದಟ್ಟ ಕಾಡುಗಳು ಮತ್ತು ಕಾಫಿ ತೋಟಗಳ ಪೊದೆಗಳಲ್ಲಿ ಕಂಡುಬರುವ ಈ ಕಪ್ಪೆಯು ರಾಕೋಫೋರಿಡೆ (Rhacophoridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ರಾವೋರ್ಚೆಸ್ಟೆಸ್ ಲುಟಿಯೋಲಸ್ (Raorchestes luteolus) ಎಂದು ಕರೆಯಲಾಗುತ್ತದೆ. ದೇಹವು ಬಹಳ ಚಿಕ್ಕದಾಗಿದ್ದು (ಸುಮಾರು 3 ಸೆಂ. ಮೀ.), ಸಂತಾನೋತ್ಪತ್ತಿಯ ಸಮಯದಲ್ಲಿ ಗಾಢ ಹಳದಿ ಅಥವಾ ತಿಳಿ ಕಂದು ಬಣ್ಣಕ್ಕೆ ತಿರುಗುತ್ತದೆ ಹಾಗೂ ಇದರ ಬಂಗಾರದ ಬಣ್ಣದ ಕಣ್ಣುಗಳ ಸುತ್ತಲೂ ಹೊಳೆಯುವ ನೀಲಿ ಬಣ್ಣದ ವರ್ತುಲವಿರುವುದು (blue ring) ಇದರ ಪ್ರಮುಖ ಆಕರ್ಷಣೆಯಾಗಿದೆ. ಈ ಕಪ್ಪೆಗಳು ತೇವಾಂಶವಿರುವ ಎಲೆಗಳ ಮೇಲೆ ಮೊಟ್ಟೆಗಳನ್ನಿಡುತ್ತವೆ ಹಾಗೂ ಇವುಗಳ ಜೀವನ ಚಕ್ರದಲ್ಲಿ ಗೊದಮೊಟ್ಟೆ (tadpole) ಹಂತವೇ ಇಲ್ಲದೆ, ಮೊಟ್ಟೆಯಿಂದ ನೇರವಾಗಿ ಪುಟ್ಟ ಕಪ್ಪೆಮರಿಗಳೇ ಹೊರಬರುವುದು ಇವುಗಳ ವಿಶೇಷತೆಯಾಗಿದೆ. ಇದು ರಾತ್ರಿ ವೇಳೆ ಸಕ್ರಿಯವಾಗಿದ್ದು, ಸಣ್ಣ ಕೀಟಗಳನ್ನು ತನ್ನ ಆಹಾರವಾಗಿ ಸೇವಿಸುತ್ತದೆ.

ಜೋಗ್ಸ್ ನೈಟ್ ಫ್ರಾಗ್ (Nyctibatrachus jog) - ಪಶ್ಚಿಮ ಘಟ್ಟದ ಕಪ್ಪೆ
                   ಜೋಗ್ಸ್ ನೈಟ್ ಫ್ರಾಗ್  © ಸರನಾಯಕಿ

ಕರ್ನಾಟಕದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿದ್ದು, ಅಲ್ಲಿನ ವೇಗವಾಗಿ ಹರಿಯುವ ತೊರೆಗಳು ಮತ್ತು ನದಿ ತೀರದ ಸಸ್ಯವರ್ಗಗಳಲ್ಲಿ ಕಂಡುಬರುವ ಈ ಕಪ್ಪೆಯು ನಿಕ್ಟಿಬಾಟ್ರಾಕಿಡೆ (Nyctibatrachidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ನೈಕ್ಟಿಬ್ಯಾಟ್ರಾಕಸ್ ಜೋಗ್ (Nyctibatrachus jog) ಎಂದು ಕರೆಯಲಾಗುತ್ತದೆ. ದೇಹವು ಸುಕ್ಕುಗಟ್ಟಿದಂತಿರುವ ಚರ್ಮವನ್ನು ಹೊಂದಿದ್ದು, ಗಾಢ ಕಂದು ಅಥವಾ ಬೂದು ಬಣ್ಣದಲ್ಲಿದ್ದು, ದೊಡ್ಡದಾದ ಹೊಳೆಯುವ ಕಣ್ಣುಗಳನ್ನು ಹೊಂದಿದೆ. ಈ ಕಪ್ಪೆಗಳು ತಮ್ಮ ಮೊಟ್ಟೆಗಳನ್ನು ತೊರೆಗಳ ಮೇಲಿರುವ ಎಲೆಗಳ ಮೇಲೆ ಇಡುತ್ತವೆ ಹಾಗೂ ಮೊಟ್ಟೆಯಿಂದ ಹೊರಬರುವ ಗೊದಮೊಟ್ಟೆಗಳು (tadpole) ನೇರವಾಗಿ ಕೆಳಗಿನ ನೀರಿಗೆ ಬಿದ್ದು ಬೆಳೆಯುವುದು ಇದರ ವಿಶೇಷವಾಗಿದೆ. ಇದು ತೊರೆಗಳ ಸುತ್ತಮುತ್ತಲಿನ ಸಣ್ಣ ಕೀಟಗಳನ್ನು ತನ್ನ ಆಹಾರವಾಗಿ ಸೇವಿಸುತ್ತದೆ.

ಕೋಣಗಪ್ಪೆ (Hoplobatrachus tigerinus) - ಭಾರತದ ದೊಡ್ಡ ಕಪ್ಪೆ
        ಕೋಣಗಪ್ಪೆ                                                                          © ಸರನಾಯಕಿ

         ಭಾರತದಾದ್ಯಂತ ವ್ಯಾಪಕವಾಗಿ ಕಂಡುಬರುವ ಹಾಗೂ ಸಿಹಿನೀರಿನ ಜೌಗು ಪ್ರದೇಶಗಳು, ಕೆರೆಗಳು ಮತ್ತು ಭತ್ತದ ಗದ್ದೆಗಳಲ್ಲಿ ವಾಸಿಸುವ ಈ ಕಪ್ಪೆಯು ಡಿಕ್ರೋಗ್ಲೊಸಿಡೆ (Dicroglossidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಹೋಪ್ಲೋಬಾಟ್ರಾಕಸ್ ಟೈಗರಿನಸ್ (Hoplobatrachus tigerinus) ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ಕಂಡುಬರುವ ಅತ್ಯಂತ ದೊಡ್ಡ ಕಪ್ಪೆಯಾಗಿದ್ದು, ಸಾಮಾನ್ಯವಾಗಿ ಆಲಿವ್ ಹಸಿರು ಅಥವಾ ಕಂದು ಬಣ್ಣದ ಚರ್ಮವನ್ನು ಹೊಂದಿದ್ದರೂ, ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಕಪ್ಪೆಗಳು ಗಾಢ ಹಳದಿ ಬಣ್ಣಕ್ಕೆ ತಿರುಗುವುದರ ಜೊತೆಗೆ, ಗಂಟಲಿನ ಎರಡೂ ಬದಿಗಳಲ್ಲಿರುವ ನೀಲಿ ಬಣ್ಣದ ಧ್ವನಿ ಚೀಲಗಳನ್ನು ಉಬ್ಬಿಸಿಕೊಂಡು ಜೋರಾಗಿ ಕೂಗುವುದು ಈ ಅವಧಿಯ ಪ್ರಮುಖ ಆಕರ್ಷಣೆಯಾಗಿದೆ. ಈ ಕಪ್ಪೆಗಳು ಕೆರೆಗಳು, ಮಳೆನೀರಿನ ಹೊಂಡಗಳು, ಜೌಗು ಪ್ರದೇಶಗಳು ಮತ್ತು ನೀರು ತುಂಬಿದ ಭತ್ತದ ಗದ್ದೆಗಳ ನೀರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಡುತ್ತವೆ ಹಾಗೂ ಇವುಗಳ ಗೊದಮೊಟ್ಟೆಗಳು (Tadpoles) ಅತ್ಯಂತ ವೇಗವಾಗಿ ಬೆಳೆಯುವ ಮಾಂಸಾಹಾರಿಗಳಾಗಿದ್ದು, ಬೇರೆ ಕಪ್ಪೆಗಳ ಮರಿಗಳನ್ನು ತಿನ್ನುವುದು ಇವುಗಳ ವಿಶೇಷತೆಯಾಗಿದೆ. ಇದು ರಾತ್ರಿ ಹಾಗೂ ಹಗಲು ಎರಡೂ ವೇಳೆ ಸಕ್ರಿಯವಾಗಿದ್ದು, ಸಣ್ಣ ಕೀಟಗಳು, ಏಡಿಗಳು ಮತ್ತು ಸಣ್ಣ ಹಾವಿನ ಮರಿಗಳನ್ನು ತನ್ನ ಆಹಾರವಾಗಿ ಸೇವಿಸುತ್ತದೆ.

ಚಿತ್ರ :ಸರನಾಯಕಿ
ಲೇಖನ: ದೀಪ್ತಿ ಎನ್.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *