ದ್ವಿವರ್ಣದ ಕಪ್ಪೆಯ ವೈಶಿಷ್ಟ್ಯ
© ಡಾ. ಎಸ್. ಶಿಶುಪಾಲ
ಮಳೆಯು ಇಳೆಯಲ್ಲಿ ತರುವ ಪರಿವರ್ತನೆ ನಿಸರ್ಗದ ಸೋಜಿಗಗಳಲ್ಲೊಂದು. ನೀರು ಭೂಮಿಗೆ ನವಚೇತನ ನೀಡುವ ಅಮೃತ ಧಾರೆ. ಹಲವಾರು ಜೀವಿಗಳಿಗೆ ಜೀವಕಳೆ ನೀಡುವ ಜೀವಜಲ. ಮೊದಲಿಗೆ ಮಣ್ಣಿನ ಪರಿಮಳ, ನಂತರ ಮಣ್ಣಿನಿಂದ ಪುಟಿದೇಳುವ ಅಣಬೆಗಳು, ಸಸಿಗಳು, ಹಣ್ಣುಗಳ ಸುವಾಸನೆ, ಕೀಟಗಳ ಸಂಗೀತ, ಕಪ್ಪೆಗಳ ಪ್ರೇಮಗೀತೆ, ಹಕ್ಕಿಗಳ ಗಾಯನ, ಅದ್ಭುತ ಜೀವಜಾಲದ ಚಟುವಟಿಕೆಗಳ ಪ್ರಾರಂಭ. ಬಹಳಷ್ಟು ಜೀವಿಗಳಿಗೆ ಉತ್ಕೃಷ್ಟ ಆಹಾರ ಸಿಗುವ ಕಾಲವಾಗಿರುವುದರಿಂದ ಸಂತಾನಾಭಿವೃದ್ಧಿಗೆ ಸೂಕ್ತ ಸಮಯ. ಉಭಯವಾಸಿಗಳಿಗಂತೂ ತಮ್ಮ ಸಂತತಿ ಮುಂದುವರೆಯಲು ಮಳೆ ಅತೀ ಅವಶ್ಯಕ. ಈ ವರ್ಷ ತಡವಾಗಿಯಾದರೂ ಮುಂಗಾರು ಮಳೆ ಆರಂಭವಾಗಿದೆ. ಇತ್ತೀಚೆಗೆ ತೀರ್ಥಹಳ್ಳಿಯಿಂದ ಬರುವಾಗ ಸಂಜೆ 5 ಗಂಟೆಯ ಹೊತ್ತು ಹಣಗೆರೆಕಟ್ಟೆಯ ಕಾಡಿನ ರಸ್ತೆಯ ಇಕ್ಕೆಲಗಳಲ್ಲಿ ಕಪ್ಪೆಗಳ ಜೋರು ಪ್ರೇಮ ನಿವೇದನೆ ಕೇಳಿಸಿತು. ಕಾರಿನಿಂದ ಇಳಿದು ಜಿಟಿಜಿಟಿ ಮಳೆಯಲ್ಲಿ ಧ್ವನಿ ಬಂದತ್ತ ಸೂಕ್ಷ್ಮವಾಗಿ ಗಮನಿಸಿದರೂ ಕಪ್ಪೆಗಳು ಕಾಣಲಿಲ್ಲ. ಪ್ರಯಾಣ ಮುಂದುವರೆದಂತೆ ರಸ್ತೆ ದಾಟುತ್ತಿದ್ದ ನೂರಾರು ಕಪ್ಪೆಗಳು ಮುಂದೆ ಹೋಗುತ್ತಿದ್ದ ಕಾರಿನ ಚಕ್ರದಡಿ ಅಪ್ಪಚ್ಚಿಯಾಗುತ್ತಿದ್ದುದ್ದನ್ನು ನೋಡಿ ಬದಿಗೆ ಕಾರು ನಿಲ್ಲಿಸಿದೆ. ಕೊಡೆ ಹಿಡಿದು ಹೊರಬಂದು ನೋಡಿದರೆ ನೂರಾರು ವಿಶಿಷ್ಟ ಕಪ್ಪೆಗಳು ರಸ್ತೆ ಆಚೆಯ ಕೆರೆಯ ಕಡೆ ಪ್ರಯಾಣ ಬೆಳಸಿದ್ದವು ಮತ್ತು ಹಲವಾರು ರಸ್ತೆಯಲ್ಲಿ ಅಪಘಾತಕ್ಕಿಡಾಗಿ ಪ್ರಾಣ ಬಿಡುತ್ತಿದ್ದವು. ಲಘುಬಗೆಯಿಂದ ಕೆಲವು ವಾಹನಗಳನ್ನು ನಿಲ್ಲಿಸಿ ಹಲವು ಕಪ್ಪೆಗಳನ್ನು ರಸ್ತೆಯ ಇನ್ನೊಂದು ಬದಿಗೆ ದಾಟಿಸುವ ಪ್ರಯತ್ನ ವಿಫಲವಾಯಿತು. ಕಾರಿನಿಂದ ಕ್ಯಾಮೆರಾ ತೆಗೆದು ಕಪ್ಪೆಗಳ ಬೆನ್ನು ಬಿದ್ದು ಅವು ನಿಂತೊಡನೆ ಕೆಲವು ಚಿತ್ರಗಳನ್ನು ತೆಗೆದಿದ್ದಾಯಿತು. ಶಿವಮೊಗ್ಗ ಜಿಲ್ಲೆಯ ಬಿಲ್ವಡೇರ ಕೊಪ್ಪವೆಂಬ ಸಣ್ಣ ಗ್ರಾಮದಲ್ಲಿ ರಸ್ತೆಯ ಅಚೆ ಬದಿ ಕೆರೆಯೊಂದಿದೆ. ಕಪ್ಪೆಗಳ ಚಲನೆ ಆ ಕೆರೆಯ ಕಡೆಯೇ ಇದ್ದಿತು.

ಕಪ್ಪೆಯ ಗುಣಲಕ್ಷಣಗಳು: ವಿಶಿಷ್ಟವಾಗಿ ಎರಡು ಬಣ್ಣಗಳನ್ನು ಹೊಂದಿರುವ ದ್ವಿವರ್ಣ ಕಪ್ಪೆಯನ್ನು ಸಾಮಾನ್ಯವಾಗಿ ಇಂಗ್ಲೀಷ್ ನಲ್ಲಿ ಬೈಕಲರ್ಡ್ ಫ್ರಾಗ್ (Bicolored Frog) ಎಂದು ಕರೆಯುವರು. ಇವುಗಳನ್ನು ಮಲಬಾರ್ ಕಪ್ಪೆ ಎಂದೂ ಸಹ ಕರೆಯುತ್ತಾರೆ. ಪ್ರಾಣಿಶಾಸ್ತ್ರೀಯವಾಗಿ ಕ್ಲಿನೋಟಾರ್ಸಸ್ ಕರ್ಟೈಪ್ಸ್ (Clinotarsus curtipes) ಎಂದು ನಾಮಾಂಕಿತಗೊಂಡಿದೆ. ದೇಹದ ಮೇಲ್ಭಾಗವು ಹಳದಿ-ಕಂದು ಬಣ್ಣದ್ದಾಗಿರುತ್ತದೆ, ಕೆಳಭಾಗವು ಹೊಳೆಯುವ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹಾಗಾಗಿ ಇದರ ದೇಹವು ಎರಡು ಬಣ್ಣಗಳಿಂದ ಕೂಡಿರುತ್ತದೆ. ಈ ರೀತಿಯ ಬಣ್ಣದ ರಚನೆ, ಕಾಡಿನ ತರೆಗೆಲೆಗಳ ಮೇಲೆ ಕುಳಿತಿರುವಾಗ ಬೇಟೆಗಾರರಿಂದ ಮರೆಮಾಚಲು ಉಪಕಾರಿ. ಗಾತ್ರ 7 ರಿಂದ 9 ಸೆಂ. ಮೀ. ಇರುತ್ತದೆ. ಹೆಣ್ಣಿನ ದೇಹದ ಗಾತ್ರ ದೊಡ್ಡದು ಮತ್ತು ದಪ್ಪ. ಗಂಡಿಗೆ ಚಿಕ್ಕ ದೇಹವಿದ್ದು ತೆಳುವಾಗಿರುತ್ತದೆ. ದೊಡ್ಡ ತಲೆ, ಚಿಕ್ಕದಾದ ಮೂತಿಯಿರುತ್ತದೆ. ಮೂತಿಯ ತುದಿಯಲ್ಲಿ ಉಸಿರಾಟದ ರಂಧ್ರಗಳಿರುತ್ತವೆ. ಸಾಮಾನ್ಯವಾಗಿ ಗಂಡಿಗೆ ಗಂಟಲಿನ ಚೀಲವಿರುತ್ತದೆ. ಅದರಲ್ಲಿ ಧ್ವನಿ ಪೆಟ್ಟಿಗೆಯಿರುತ್ತದೆ. ಆದರೆ ಹೆಣ್ಣು ಧ್ವನಿ ಹೊರಡಿಸಲಾಗದ ಮೂಕಿ! ಬೆನ್ನಿನ ಮೇಲ್ಭಾಗದಲ್ಲಿ ಕಂದು-ಕೆಂಪು ಬಣ್ಣದ ಚುಕ್ಕೆಗಳನ್ನು ಕೆಲವೊಮ್ಮೆ ಕಾಣಬಹುದು. ಆಶ್ಚರ್ಯವೆಂದರೆ ನಮ್ಮ ಬೆರಳ ಗುರುತಿನ ತರಹ ಈ ಚುಕ್ಕೆಗಳು ಪ್ರತಿ ಕಪ್ಪೆಗೂ ವಿಶಿಷ್ಟವಾಗಿರುತ್ತವೆ. ಈ ಚುಕ್ಕೆಗಳ ಮಾದರಿಯನ್ನು ಅನುಸರಿಸಿ ವಿಜ್ಞಾನಿಗಳು ತಳಿ ವರ್ಗಿಕರಣ ಮತ್ತು ಒಂದು ಪ್ರದೇಶದಲ್ಲಿನ ಇವುಗಳ ಸಂಖ್ಯಾ ಸಾಂದ್ರತೆಯನ್ನು ತಿಳಿಯಲು ಬಳಸುತ್ತಾರೆ. ಇವುಗಳಿಗೆ ಜಾಲಪಾದಗಳಿರುತ್ತವೆ. ಹಿಂಗಾಲುಗಳು ಬಲಿಷ್ಟವಾಗಿರುತ್ತವೆ. ಮಧ್ಯದ ಬೆರಳು ಉದ್ದವಿದ್ದು ಎಲ್ಲಾ ಬೆರಳಿನ ತುದಿಗಳು ಸ್ವಲ್ಪ ಊದಿಕೊಂಡಿದ್ದು ಬಿಲ್ಲೆಯಂತಿರುತ್ತವೆ.

ವಿಸ್ತರಣೆ ಮತ್ತು ಆಹಾರ: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಜೀವಿಸುವ ಸ್ಥಳೀಯ (Endemic) ಕಪ್ಪೆಗಳಿವು. ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿದಂತೆ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ನೆಲವಾಸಿಗಳಾಗಿದ್ದು ಕಾಡಿನ ನೆಲದ ಮೇಲೆ ಬಿದ್ದಿರುವ ತಂಪಾದ ಎಲೆಗಳ ರಾಶಿಯಲ್ಲಿ ಜೀವಿಸುತ್ತವೆ. ಆಹಾರಕ್ಕಾಗಿ ರಾತ್ರಿಯಲ್ಲಿ ಸಕ್ರಿಯವಾಗಿ ಬೇಟೆಯಾಡುವ ಕಪ್ಪೆಗಳು, ಜೇಡ ಸೇರಿದಂತೆ ಹಲವಾರು ನಿಶಾಚರಿ ಕೀಟಗಳನ್ನು ಮತ್ತು ಚಿಕ್ಕ ಮೃಧ್ವಂಗಿಗಳನ್ನು ತಿನ್ನುತ್ತವೆ.
ಸಂತಾನಾಭಿವೃದ್ಧಿ: ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟಂಬರ್‌ವರೆಗೆ ಪ್ರಜನನ ಕಾಲ. ಮುಂಗಾರು ಮಳೆ ಪ್ರಾರಂಭದಲ್ಲಿ ವಯಸ್ಕ ಕಪ್ಪೆಗಳು ಕಾಡಿನ ಹತ್ತಿರದ ಜಲಮೂಲಗಳಾದ ಕೆರೆ, ತೊರೆಗಳ ಸಮೀಪ ತೆರಳುತ್ತವೆ. ಪ್ರಜನನಕ್ಕೆ ಸ್ವಚ್ಛ ನೀರು ಅಗತ್ಯ. ಗಂಡು ಕಪ್ಪೆಗಳು ಗುಂಪಾಗಿ ಕೂಗುತ್ತಾ ಹೆಣ್ಣು ಕಪ್ಪೆಗಳನ್ನು ಮಿಲನಕ್ಕೆ ಆಹ್ವಾನಿಸುತ್ತವೆ. ಗಂಡು ಹೆಣ್ಣಿನ ಬೆನ್ನಮೇಲೆ ಕುಳಿತು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ನುಣುಪಾದ ಹೆಣ್ಣಿನ ದೇಹವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಗಂಡಿನ ಬೆರಳಿನ ತುದಿಗಳ ಬಿಲ್ಲೆಗಳಂತ ಆಕಾರವು ನಿರ್ವಾತ ಪ್ರದೇಶವನ್ನು ಉಂಟು ಮಾಡುತ್ತವೆ. ಈ ಹಂತದಲ್ಲಿ ಹೆಣ್ಣು ದಾರದಲ್ಲಿ ಪೋಣಿಸಿದ ಮಣಿಗಳಂತಹ ಮೊಟ್ಟೆಗಳನ್ನು ಹೊರ ಹಾಕುತ್ತದೆ. ಗಂಡು ಅದರ ಮೇಲೆ ವೀರ್ಯಾಣುಗಳನ್ನು ಚೆಲ್ಲುತ್ತದೆ. ಬಾಹ್ಯ ನಿಶೇಚನದ ನಂತರ ಫಲಿತ ಮೊಟ್ಟೆಗಳು ಗೊದಮೊಟ್ಟೆ (Tadpoles) ಗಳಾಗಿ ಪರಿವರ್ತಿತಗೊಳ್ಳುತ್ತವೆ. ಕಡು ಕಪ್ಪು ಬಣ್ಣದ ಗೊದಮೊಟ್ಟೆಗಳು ಗಾತ್ರದಲ್ಲಿ ವಯಸ್ಕ ಕಪ್ಪೆಯಷ್ಟಿರುವುದು ಈ ಪ್ರಭೇದದ ವಿಶೇಷ. ಇವು ನಿಧಾನವಾಗಿ ಹರಿಯುವ ನೀರಿನಲ್ಲಿ ಗುಂಪು ಗುಂಪಾಗಿ ವಾಸಿಸುತ್ತಾ ಸುರಕ್ಷಿತ ಸ್ಥಳಗಳಿಗೆ ಈಜುತ್ತಿರುತ್ತವೆ. ಸ್ವಲ್ಪ ಸಮಯದ ನಂತರ ರೂಪ ಪರಿವರ್ತನೆ ಹೊಂದಿ ಗುಂಪಾಗಿ ಕಾಡಿನ ತರಗೆಲೆಗಳ ನಡುವೆ ಸೇರುತ್ತವೆ. ಎರಡು ವರ್ಷಗಳ ನಂತರ ವಯಸ್ಕ ಕಪ್ಪೆಗಳಾಗಿ ಹೊರಕಾಣಿಸುತ್ತವೆ. ಸಾಮಾನ್ಯವಾಗಿ ನೆಲವಾಸಿಗಳಾಗಿ ಒಂಟಿ ಜೀವನ ನಡೆಸುವ ಈ ಕಪ್ಪೆಗಳು ಮಳೆಗಾಲದಲ್ಲಿ ಸಂತನಾಭಿವೃದ್ಧಿಗಾಗಿ ಗುಂಪುಗೂಡುತ್ತವೆ.
ದುಃಖಕರ ವಿಚಾರವೆಂದರೆ ಬದಲಾಗುತ್ತಿರುವ ಪರಿಸರ, ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಅತಿಯಾದ ಕೀಟನಾಶಕಗಳ ಬಳಕೆ, ಜಾಗತಿಕ ತಾಪಮಾನ ಏರಿಕೆ, ವಿಸ್ತರಿಸುತ್ತಿರುವ ಶುಷ್ಕ ವಾತಾವರಣ, ಅಲ್ಲದೇ ರಸ್ತೆಯ ವಾಹನಗಳ ಚಕ್ರದಡಿ ಸಿಲುಕಿ ಸಾವನ್ನಪ್ಪುವುದು ಈ ವಿಶಿಷ್ಟ ಜೀವಿಗಳಿಗೆ ಮರಣಶಾಸನವಾಗುತ್ತಿದೆ. ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (International Union for Conservation of Nature, IUCN) ಪ್ರಕಾರ ಕಪ್ಪೆಗಳ ಸಂತತಿ ಕ್ಷೀಣಿಸುತ್ತಿದೆ. ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರ (National Centre for Biological Sciences, NCBS) ದಲ್ಲಿ ಈ ಕಪ್ಪೆಗಳ ಯಕೃತ್ತನ್ನು ಸೂಕ್ತ ರೀತಿಯಲ್ಲಿ ಶೇಖರಿಸಿ ಅದರಿಂದ ಡಿಎನ್‌ಎಯನ್ನು ಬೇರ್ಪಡಿಸಿ ಈ ವಿಶಿಷ್ಟ ಕಪ್ಪೆಗಳ ತಳಿ ಅಧ್ಯಯನವನ್ನು ನಡೆಸಲಾಗುತ್ತಿದೆ. ಮಾನವನ ಕುರುಡು ಅಭಿವೃದ್ಧಿ ಎಂಬ ಕಾಲಚಕ್ರದಡಿಯಲ್ಲಿ ಇನ್ನೂ ಅದೆಷ್ಟು ಜೀವಿಗಳು ಬಲಿಯಾಗಬೇಕೋ? ತಿಳಿಯದು. ಹಾಗಾಗಿಯೇ ಕಾಡಿನ ಮಧ್ಯೆ, ಕೆರೆ, ನದಿಗಳ ಪಾತ್ರಗಳಲ್ಲಿ ರಸ್ತೆ, ವಾಹನ ಓಡಾಟ ಬೇಡ ಎಂದು ನಿಸರ್ಗ ಪ್ರಿಯರ ಕಾಳಜಿ. ವನ್ಯ-ಜೀವಿ ಮಾನವ ಸಂಘರ್ಷಕ್ಕೆ ಮಿತಿಯಿಲ್ಲದಿದ್ದರೆ ಅಪರೂಪದ ಜೀವಿಗಳು ಕಣ್ಮರೆಯಾಗಿ ಪರಿಸರ ಸಮತೋಲನ ನಾಶವಾಗುವುದಲ್ಲವೇ? ಪ್ರಕೃತಿಯ ಒಡನಾಟವನ್ನು ಸರಿಯಾಗಿ ಅರ್ಥಮಾಡಿಕೊಂಡು ಸುಸ್ಥಿರ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತಂದರೆ ಮಾತ್ರ ಜೀವಿಗಳ ಉಳಿವು ಮತ್ತು ಅದರಿಂದ ಮಾನವನು ಉಳಿವು ಸಾಧ್ಯ.

ಲೇಖನ: ಡಾ. ಎಸ್. ಶಿಶುಪಾಲ
ದಾವಣಗೆರೆ ಜಿಲ್ಲೆ

ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ, ದಾವಣಗೆರೆ



