ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಬೆಳಗಲಿ ಹಸಿರಸಿರಿ ಜಗ ಜೀವನ

ಅಭಿವೃದ್ಧಿಯ ಹೆಸರಿನಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ಕಾಡುಗಳು, ಅರಣ್ಯ ನಾಶ, ಮಾಲಿನ್ಯ ಮತ್ತು ಪ್ರಕೃತಿಯ ಮೇಲಿನ ಮಾನವನ ಹಸ್ತಕ್ಷೇಪದ ಕುರಿತು ಎಚ್ಚರಿಸುವ ಈ ಕವನವು ಹಸಿರನ್ನು ಉಳಿಸುವ ಜವಾಬ್ದಾರಿಯನ್ನು ಮನದಟ್ಟು ಮಾಡುತ್ತದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರವನ್ನು ಕಾಪಾಡುವ ಸಂದೇಶವನ್ನು ಇದು ಸಾರುತ್ತದೆ.
ಹಸಿರು ಭೂಮಿಯ ಸಂಕೇತಾತ್ಮಕ ಚಿತ್ರ

© ಧನರಾಜ್ ಎಂ

ನಿಲ್ಲಲಿ ಅತಿರೇಕದ ಕಾಂಕ್ರೀಟ್ ‘ಜಂಗಲ್’ನ ನಿರ್ಮಾಣ,
ತುಂಬಿಬರಲಿ ಅಂತರ್ಜಲದ ಸಂಗ್ರಹಣ;
ಹೆಚ್ಚಲಿ ಅಲ್ಲಲ್ಲಿ ಇಂಗುಗುಂಡಿಗಳು,
ಉಕ್ಕುತ್ತಿರಲಿ ಮರುಪೂರಣದ ಬುಗ್ಗೆಗಳು;

ಕಾಡು ಕಡೆಸಿ, ನಾಡು ನುಗ್ಗಿಸಿ,
ಬಡಿವಾರದಿ ಬಿಲ್ಡಿಂಗ್ ಕಟ್ಟಿಸಿ;
ಮ್ಯಾಲೆ ಅಭಿವೃದ್ಧಿಯ ನಾಮವಿರಿಸಿ,
ವನ್ಯಜೀವಿಗಳಾಸ್ಥಾನ ಕೆಕ್ಕರಿಸಿ, ನೆಲಕ್ಕೊರಿಸಿ;
ಬಂದರೆ ಕಾಡುಪ್ರಾಣಿ ಆಹಾರ ಅರಸಿ,
ಎದ್ದು ಬಿದ್ದು ಓಡುವರು ಎಲ್ಲಾ ಬದಿಗಿರಿಸಿ?

ಸುತ್ತಿಹವು ಬೇರಿನ ಸುತ್ತ ಪ್ಲಾಸ್ಟಿಕ್ ಪದರಗಳು,
ಇದ್ದಲ್ಲಿಯೇ ಕೊಳೆತಿಹವು ಮೊಳೆಯಬೇಕಾದ ಬೀಜಗಳು!
ಅರಿತು ಅರಿಯದಂತೆ ಸ್ವತಃ ಹೊಡೆದುಕೊಂಡಿದ್ದೇವೆ,
ನಮ್ಮ ಶವಪೆಟ್ಟಿಗೆಯ ಮ್ಯಾಲೆ ಮಾಲಿನ್ಯದ ಮೊಳೆಗಳು!

ತಾಗದಿರಲಿ ಆಸೆಯ ಕೊಡಲಿ ಹಸುರಿಗೆ,
ಇದ್ದಿದ್ದಾದರೂ ಉಳಿಯಲಿ ನಮ್ಮ ಉಸಿರಿಗೆ;
ಸಾಧ್ಯವಾದರೆ ಬೆಳೆಸಿ ಹಸಿರು, ಭವ್ಯ ಭವಿಷ್ಯಕ್ಕಾಗಿ,
ಇಲ್ಲವೆ, ಇರೋದನ್ನು ಉಳಿಸಿ ನಿಮ್ಮ ಪೀಳಿಗೆಯ ಜೀವಕ್ಕಾಗಿ!
ಚಿರಕಾಲ ನೆಲಸಲಿ ಜೀವಸಂಕುಲದ ಸಿಂಚನ,
ಬೆಳಗಲಿ ಹಸಿರಸಿರಿ ಜಗ ಜೀವನ!

ರಾಮಲಿಂಗ ಮಾಡಗಿರಿ
        ರಾಯಚೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.