ಬಾ ಚೈತ್ರ
© ಪ್ರವೀಣ್ ಎಸ್
ಫಾಲ್ಗುಣವ ಬದಿಸರಿಸಿ ಬಾ ಚೈತ್ರ ನಲಿನಲಿದು
ನಿನ್ನ ಕಾಲ್ಗುಣದಿಂದ ಹಸಿರು ಚೆಲ್ಲಿ
ಮಾಮರದಿ ಕೋಗಿಲೆಯು ಗಿಳಿಗುಬ್ಬಿ ಗೊರವಂಕ
ಬಲುಮೋಹಗೊಂಡಿಹವು ನೆಲ್ಮೆಯಲ್ಲಿ
ಕಪ್ಪು ಮೋಡಗಳನ್ನು ನೀ ಹೊತ್ತು ತಂದಿರಲು
ಮೊದಲ ಹನಿ ಧರೆಗಿಳಿಯೆ ಕಂಪು ಕಂಪು
ಶಿಶಿರ ಋತುವಿನ ಧೂಳು ಎಲ್ಲೆಡೆಯು ಮುತ್ತಿರಲು
ನೀ ಮಳೆಯ ಸುರಿಸಿರಲು ತಂಪು ತಂಪು
ಮಾಗಿದೆಲೆಗಳು ಉದುರಿ ಬೋಳು ಮರಗಳ ಸಾಲು
ಎಲ್ಲಿ ನೋಡಲಲ್ಲಿ ಚಿಗುರು ಹರಿಸು
ಕೆರೆಕಟ್ಟೆ ಒಣಗುತಲಿ ಬಿರುಕು ಮೂಡಿಹುದಲ್ಲಿ
ಸುರಿಸು ಬಿರುಮಳೆಯನ್ನು ಸೊಬಗು ತರಿಸು
ಚೈತ್ರ ರಾಜನೆ ನಿನ್ನ ಆಧರಿಸಿ ಕರೆದಿಹನು
ಸಕಲ ಜೀವಿಗಳ ಮೇಲೂ ನಿಮಗಿದೆ ಅಗಾಧ ಕರುಣೆ
ನಿಮ್ಮನ್ನೆಲ್ಲಾ ರಕ್ಷಿಸುವುದು ಪ್ರತಿ ಮನುಜನ ಹೊಣೆ
ಕಾದಿಹೆವು ಸ್ವಾಗತಕೆ ಅನುರಣಿಸುತ.
– ಚನ್ನಕೇಶವ ಜಿ. ಲಾಳನಕಟ್ಟೆ
ತುಮಕೂರು ಜಿಲ್ಲೆ
