ವಸುಂಧರೆಯ ಮಡಿಲು
ಓ ಜನನಿ, ನಿನ್ನ ಹರಿದ್ವರ್ಣದ ಜೋಕಾಲಿಯಲಿ
ತರುಲತೆಗಳ ಸುಮಧುರ ಜೋಗುಳದಲಿ
ಮಿಂದು ಅಂಕುರಿಸಿದೆವಮ್ಮ ನಿನ್ನ ಮಡಿಲಿನಲಿ
ಭೋರ್ಗರೆದು ಹರಿವ ಅಮೃತಧಾರೆಯ ಸವಿದು
ಸ್ವಚ್ಛಂದದ ಮಣ್ಣಿನಲಿ ಆಡಿ, ನಲಿದು
ಬೆಳೆದು ನಿಂತೆವಮ್ಮಾ , ನಿನ್ನ ಮಮತೆಗೆ ಮಿಡಿದು
ದುಷ್ಟ-ದುರುಳರು ಬಗೆದು ಆಳಿದರೂ, ನಿನ್ನ ಒಡಲ
ಮುನ್ನಡೆಸುತಿರುವೆ ಕೊಟ್ಟು ನಿನ್ನ ಹೆಗಲ
ಹೇಗೆ ವರ್ಣಿಸಲಿ ತಾಯೆ, ನಿನ್ನೀ ತ್ಯಾಗದ ಅನಲ!
ರಕ್ಕಸರಂತೆ ಕೆಡವಿದೆವು ನಿನ್ನನು ಅಧಃಪತನದೆಡೆಗೆ
ರಕ್ಷಿಸುವ ಅನಿವಾರ್ಯತೆಯು ಎಮಗೆ ನಿನ್ನ ಉಳಿವಿಗೆ
ಆಗಲೇ ಉಳಿದಾವು ಸಕಲ ಜೀವರಾಶಿಗಳು ಹಲವು ಬಗೆ.
– ದೀಪ್ತಿ ಎನ್.
ಕೋಲಾರ ಜಿಲ್ಲೆ