ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ನಾಗೇಶ್ ಓ. ಎಸ್, ನತ್ತಿಂಗ

ನತ್ತಿಂಗ ಪಕ್ಷಿಯು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದಾದ್ಯಂತ ಕಂಡುಬರುತ್ತದೆ. ನೆಲದ ಮೇಲೆ ವಾಸಿಸುವ ಈ ನತ್ತಿಂಗ ಪಕ್ಷಿಯನ್ನು ಮುಂಜಾನೆ ಮತ್ತು ಮುಸ್ಸಂಜೆಯ ವಿಶಿಷ್ಟ ಕೂಗಿನಿಂದ ಸುಲಭವಾಗಿ ಪತ್ತೆಹಚ್ಚಬಹುದು. ಇದರ ಬಣ್ಣ ಮರದ ತೊಗಟೆಗೆ ಹಾಗೂ ತರಗೆಲೆಗಳಿಗೆ ಹೋಲುವುದರಿಂದ ಪತ್ತೆಹಚ್ಚುವುದು ಕಷ್ಟಸಾಧ್ಯ. ಇದು ಗೂಬೆಯಂತೆ ನಿಶಾಚರಿ ಹಕ್ಕಿಯಾಗಿದ್ದು, ಮುಸ್ಸಂಜೆ ನಂತರ ಮೆಲುದನಿಯ ಕೂಗಿನಿಂದ ಇದರ ಚಟುವಟಿಕೆ ಆರಂಭ. ಇದರ ಕೂಗು ಚುಳುಕ್… ಚುಳುಕ್… ಚುಳುಕ್… ಎಂದು ನೀರಿನಲ್ಲಿ ಕಲ್ಲು ಹಾಕಿದಾಗ ಶಬ್ಧ ಬಂದಂತೆ ಇರುತ್ತದೆ. ಕುರುಚಲು ಕಾಡು, ಬಂಡೆ ಪ್ರದೇಶ, ಬಂಡೆನೆಲೆದ ಮೇಲೆ ಇದರ ವಾಸ. ಇದರ ಆಹಾರ ರಾತ್ರಿ ಸಮಯದಲ್ಲಿ ಹಾರಾಡುವ ಕೀಟಗಳು, ದುಂಬಿ, ರೆಕ್ಕೆಗೊದ್ದ, ಪತಂಗ, ಮಿಡತೆ, ಕಂಬಳಿಹುಳು, ಕೀಟಗಳು ಮತ್ತು ಕೀಟಗಳ ಮೊಟ್ಟೆಯೂ ಹೌದು. ಕೆಲವು ಸಲ ಸೊಳ್ಳೆಗಳನ್ನು ಸಹ ಭಕ್ಷಿಸುತ್ತವೆ. ಈ ಪಕ್ಷಿಯು ಗೂಡು ಕಟ್ಟದೆ  ನೆಲದ ಮೇಲೆ ಫೆಬ್ರವರಿಯಿಂದ ಸೆಪ್ಟೆಂಬರ್ ನ ಅವಧಿಯಲ್ಲಿ ಎರಡು  ಕೆನೆ ಗುಲಾಬಿಯ ಬಣ್ಣದ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಆಗಾಗ ರಸ್ತೆಯ ಮೇಲೆ ವಾಹನದ ಬೆಳಕಿಗೆ ಕಣ್ಣುಗಳು ಕೆಂಪಗೆ ಮಿನುಗಿದಾಗ ಅವುಗಳನ್ನು ಗುರುತಿಸಬಹುದು.

© ನಾಗೇಶ್ ಓ. ಎಸ್, ಕೆನ್ನೀಲಿ ಬಕ

ನೇರಳೆ ಬಣ್ಣದ ಮೈಬಣ್ಣದಿಂದ ಇದು ಕೆನ್ನೀಲಿ ಬಕ ಎಂದು ಹೆಸರು ಪಡೆದುಕೊಂಡಿದೆ. ಈ ಪಕ್ಷಿಯು ನಿಂತಾಗ ಸುಮಾರು 70 ರಿಂದ 94 ಸೆಂ. ಮೀ. ಎತ್ತರ ಹಾಗೂ ಮುಂಭಾಗದಿಂದ ಹಿಂಭಾಗಕ್ಕೆ 78 ರಿಂದ 97 ಸೆಂ. ಮೀ. ಉದ್ದ ಮತ್ತು 120 ರಿಂದ 152 ಸೆಂ.ಮೀ. ರೆಕ್ಕೆಯ ಅಗಲ ಹೊಂದಿದೆ. ಇದು ಜೌಗುಪ್ರದೇಶ, ನದಿ ತೀರಗಳು, ದ್ವೀಪಗಳು, ಹಳ್ಳಕೊಳ್ಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾರಾಟದ ವಿಶೇಷತೆ ಏನೆಂದರೆ ಕುತ್ತಿಗೆಯನ್ನು ಹಿಂತೆಗೆದುಕೊಂಡು ಕಾಲುಗಳನ್ನು ಬಾಲದ ಹಿಂದೆ ಬಹಳ ದೂರ ವಿಸ್ತರಿಸಿ ನಿಧಾನವಾಗಿ ಹಾರುತ್ತವೆ. ಕಡ್ಡಿಗಳಿಂದ ಬಹಳ ದೊಡ್ಡ ಗೂಡು ನಿರ್ಮಿಸಿ  4 ಅಥವಾ 5 ನೀಲಿ-ಹಸಿರು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ.

©ನಾಗೇಶ್ ಓ. ಎಸ್, ಕಪ್ಪು ಬಿಳಿ ಬೇಲಿಚಟಕ

ಕಪ್ಪುಬಿಳಿ ಬೇಲಿಚಟಕವು ಹಳ್ಳಿ ಪ್ರದೇಶಗಳಲ್ಲಿ, ತೆರೆದ ಹುಲ್ಲುಗಾವಲುಗಳಲ್ಲಿ ಏಷ್ಯಾದಾದ್ಯಂತ ಕಂಡುಬರುವ ಸಣ್ಣ ಪಕ್ಷಿಯಾಗಿದೆ. ಚಿಕ್ಕ ಕಲ್ಲಿನ ಕುಳಿಗಳಲ್ಲಿ, ಹುಲ್ಲಿನ ಮೆದೆಗಳಲ್ಲಿ, ಹುಲ್ಲು ಮತ್ತು ಪ್ರಾಣಿಗಳ ಕೂದಲಿನಿಂದ ಗೂಡು ಕಟ್ಟುತ್ತದೆ. ಗಂಡು ಪಕ್ಷಿಯು ಕಪ್ಪು ಬಣ್ಣ ಹೊಂದಿದ್ದು ಬಿಳಿ ಭುಜವನ್ನು ಹೊಂದಿರುತ್ತದೆ ಹಾಗೂ ಹೆಣ್ಣು ಪಕ್ಷಿಯು ಕಂದು ಬಣ್ಣದ್ದಾಗಿರುತ್ತದೆ. ಇವು 2 ಅಥವಾ 3 ತಿಳಿ ನೀಲಿ ಬಿಳಿ ಅಥವಾ ಗುಲಾಬಿ ಬಣ್ಣದ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.

© ನಾಗೇಶ್ ಓ. ಎಸ್,   ಕಪ್ಪು ಬೆನ್ನಿನ ಮರಕುಟಿಗ

ಕಪ್ಪು ಬೆನ್ನಿನ ಮರಕುಟಿಗ ಪಕ್ಷಿಗಳು ಸಾಮಾನ್ಯವಾಗಿ ಭಾರತದೆಲ್ಲೆಡೆ ಕಂಡು ಬರುತ್ತವೆ. ಇವುಗಳು ಮರಗಳಲ್ಲಿ ರಂಧ್ರ ಕೊರೆದು ಒಂದು ಅಥವಾ ಎರಡು ಬಿಳಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. 29 ಸೆಂ.ಮೀ. ಉದ್ದವಿರುವ ಈ ಪಕ್ಷಿಗಳ ಕುತ್ತಿಗೆಯ ಹಿಂಭಾಗದ ಬಿಳಿ ಬಣ್ಣವು ಹಾಗೂ ಭುಜದ ಮೇಲಿರುವ ಕಪ್ಪು ಬಣ್ಣದ ಚುಕ್ಕಿಗಳು ಸೇರಿ ’ವಿ’ ಆಕಾರವನ್ನು ಸೃಷ್ಟಿಸುತ್ತವೆ. ಬಾಲ ಕಪ್ಪಗಿದ್ದು, ಹೊಟ್ಟೆಯ ಕೆಳಭಾಗ ಚುಕ್ಕಿ ಚುಕ್ಕಿ ಗುರುತಿರುವ ಬಿಳಿ ಬಣ್ಣದಿಂದ ಕೂಡಿದ್ದರೆ, ಉಳಿದ ದೇಹದ ಭಾಗವು ಚಿನ್ನದ ಬಣ್ಣದಿಂದ ಕೂಡಿರುತ್ತದೆ. ತಲೆಯು ಬಿಳಿ ಬಣ್ಣದ ಜೊತೆಗೆ ಮೀಸೆಯಂತಹ ಅಡ್ಡ ಪಟ್ಟೆಗಳಿಂದಲೂ ಹಾಗೂ ಕಣ್ಣಿನ ಕಪ್ಪು ಗೆರೆಯೂ ಕುತ್ತಿಗೆಯವರೆಗೂ ಮುಂದುವರೆಯುತ್ತವೆ. ಉದ್ದನೆಯ ಕೊಕ್ಕಿನ ಜೊತೆಗೆ ಬಲವಾದ ಬಾಲವು ರೆಂಬೆ ಕೊಂಬೆಗಳ ಮೇಲೆ ಆಧಾರಕ್ಕಾಗಿ ಸಹಾಯ ಮಾಡುತ್ತವೆ. ಕಾಲಿನ ಎರಡು ಬೆರಳುಗಳು ಮುಂದಕ್ಕೆ ಹಾಗೂ ಎರಡು ಹಿಂದಕ್ಕೆ ಚಾಚಿಕೊಂಡಿವೆ. ಗಂಡಿಗೆ ಬಿಳಿ ತಲೆ ಮೇಲೆ ಕೆಂಪು ಕಿರೀಟವಿದ್ದರೆ ಹೆಣ್ಣಿಗೆ ಹಳದಿ ಕಿರೀಟವಿರುತ್ತದೆ. ಮರಿಗಳು ಹೆಣ್ಣು ಪಕ್ಷಿಯನ್ನು ಹೋಲುತ್ತವೆ.

ಚಿತ್ರಗಳು: ನಾಗೇಶ್ ಓ. ಎಸ್
ವಿವರಣೆ: ನವೀನ್ ಕುಮಾರ್ ನಾಯ್ಕ್

Print Friendly, PDF & Email
Spread the love

15 thoughts on “ಪ್ರಕೃತಿ ಬಿಂಬ

  1. ತುಂಬಾ ಚೆನ್ನಾಗಿದೆ. ಹಕ್ಕಿಗಳನ್ನು ಎಷ್ಟುನೋಡಿದರೂ ಸಾಕೆನಿಸದು. ದಿನವೂ ಹೊಸ ಅನುಭವ. ವಿವರಣೆ ಉಪಯುಕ್ತವಾಗಿವೆ.

    1. ಹೌದು ಪಕ್ಷಿಗಳ ಲೋಕವೇ ಹಾಗೆ ನಿಮ್ಮ ಮಾತು ಖಂಡಿತವಾಗಿಯೂ ನಿಜ. ನಿಮ್ಮ ಅನಿಸಿಕೆಯನ್ನು ಕಾನನ ಓದುಗರ ಜೊತೆ ಹಂಚಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು

  2. ವಿವರಣೆ ಹಾಗೂ ಛಾಯಾಗ್ರಹಣ ಅತ್ಯುತ್ತಮವಾಗಿದೆ.

  3. ನೀವು ಹೇಳಿದ ಕೆಲವು ಪಕ್ಷಿಗಳನ್ನು ನೋಡಿದ್ದರೂ ಕನ್ನಡದಲ್ಲಿ ಅದರ ಹೆಸರುಗಳು ಗೊತ್ತಿರ್ಲಿಲ್ಲ, ಪಕ್ಷಿಗಳನ್ನು ಸಾಮಾನ್ಯರೂ ಗುರುತಿಸುವ ಹಾಗೆ ವಿವರಣೆ ಮತ್ತು ಚಿತ್ರಗಳನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು ?

  4. Really, all are articles are very much interesting, photos of birds and nature view are awesome. All the best to all the writters and photographers. Expecting more and more articles.

Comments are closed.

error: Content is protected.