ಮೋರೆಗೆ ಕ್ಯಾರೆ ಅನ್ನದ ಶ್ವಾನಗಳು

ಮೋರೆಗೆ  ಕ್ಯಾರೆ  ಅನ್ನದ ಶ್ವಾನಗಳು

© SKYNESHER_GET TY IMAGES PLUS

ಪೂರ್ಣವಿರಾಮವೇ ಇಲ್ಲದೆ ಗೋಳಿಡುವ ನಾಯಿಯ ಕರ್ಕಶ ಧ್ವನಿ ರಾತ್ರಿಯೆಲ್ಲಾ ನಿದ್ದೆ ಇಲ್ಲದ ಹಾಗೆ ಮಾಡಿತ್ತು. ಬೆಳಿಗ್ಗೆಯಾದ ಒಡನೆಯೇ, ಸಾಕಲು ತಂದಿದ್ದ ಆ ನಾಯಿ ಮರಿಯನ್ನು ಪಕ್ಕದ ಊರಿನಲ್ಲಿದ್ದ ನಮ್ಮ ದೊಡ್ಡಪ್ಪನ ಮನೆಗೆ ನನ್ನಕ್ಕಳಿಗೆ ತಿಳಿಯದ ಹಾಗೆ ಸಾಗಿಸಲಾಯಿತು. ಅಂದಿನಿಂದ ಮತ್ತೆ ಆ ಸೊಂಪಾದ ನಿದ್ದೆಗೆ ಜಾರುವ ಅವಕಾಶ ಮರುಕಳಿಸಿತು. ಹೀಗೆಂದುಕೊಳ್ಳುತ್ತಾ ಕಳೆದ ಕೆಲವು ತಿಂಗಳುಗಳಲ್ಲೇ ಇನ್ಯಾವುದೋ ನಾಯಿಮರಿ ನಮ್ಮ ಮನೆಯ ಪಕ್ಕದಲ್ಲಿದ್ದ ನಮ್ಮ ಚಿಕ್ಕಪ್ಪನ ಹೋಟೆಲ್ ಬಳಿ ಓಡಾಡುತ್ತಿರುವ ಬಿಸಿ ಸುದ್ದಿ ಕಿವಿಗೆ ಬಿತ್ತು. ‘ಹೋದ್ಯಾ ಗವಾಕ್ಷಿ ಅಂದ್ರೆ, ಬಂದೇ ಪಿಶಾಚಿ’ ಅನ್ನೋ ಹಾಗೆ ಇದ್ಯಾವ ನಾಯಿ ನನ್ನ ನಿದ್ದೆ ಕೆಡಿಸಲು ಮತ್ತೆ ವಕ್ಕರಿಸಿತೋ ಎಂದುಕೊಂಡೆ. ಆದರೆ ಹಾಗೇನು ಆಗಲಿಲ್ಲ. ಏಕೆಂದರೆ ಈ ನಾಯಿ ತಾನಾಗಿಯೇ ಎಲ್ಲಿಂದಲೋ ಬಂದಿತ್ತು. ಆದ್ದರಿಂದ ಹಿಡಿದು ಸಾಕಲು ತಂದ ನಮ್ಮ ನಾಯಿಯ ಹಾಗೆ ಇದು ರಾತ್ರಿ ಗೋಳಿಡಲಿಲ್ಲ. ನಮ್ಮ ಚಿಕ್ಕಪ್ಪನ ಹೋಟೆಲಿನ ಹಳಸಲು ರುಚಿ ಕಂಡುಕೊಂಡದ್ದರಿಂದ ಅಲ್ಲಿಯೇ ಅಂದರೆ ನಮ್ಮ ಮತ್ತು ಚಿಕ್ಕಪ್ಪನ ಮನೆಯ ಜಾಗವನ್ನು ತನ್ನ ಸಾಮ್ರಾಜ್ಯವನ್ನಾಗಿಸಿಕೊಂಡಿತು. ಕಪ್ಪು ಕಾಡಿಗೆಯನ್ನು ಒಂದೊಂದೇ ಕೂದಲಿಗೆ ಸವರಿದ ಹಾಗೆ ಮೈಯೆಲ್ಲಾ ಕಪ್ಪು ಬಣ್ಣವಿದ್ದರಿಂದ ‘ಕರಿಯ’ ಎಂಬ  ನಾಮಧೇಯ ತಾನಾಗಿಯೇ ನಮ್ಮ ಬಾಯಿಗಳಲ್ಲಿ ರೂಢಿಯಾಯಿತು. ಹೋಟೆಲಿನ ಊಟಕ್ಕೆ ಚೆನ್ನಾಗಿ ಬೆಳೆದು ಈಗ ಕರಿಯ, ಧಡಿಯನಾಗಿದ್ದಾನೆ. ನಮ್ಮೆರೆಡು ಮನೆಯ ಯಾವ ಸದಸ್ಯರು ನಡಿಗೆಯಲ್ಲಿ ಹೊರಗೆ ಹೋದರೂ ಅವರ  ಜೊತೆ ಓಡಿಬಿಡುತ್ತಾನೆ ಈ ಕಮಂಗಿ. ಬೇರೆ ತರಹದ ನಾಯಿಯಾಗಿದ್ದರೆ ಬಂದರೆ ಬರಲಿ ತೊಂದರೆ ಇಲ್ಲ ಎನ್ನಬಹುದಿತ್ತು. ಆದರೆ ಇವನು ಬಂದರೆ ನಮಗೇ ತೊಂದರೆ. ಹೇಗೆ ಎನ್ನುತ್ತೀರಾ? ಕೇಳಿ…

ಯಾವ ನಾಯಿಯಾದರೂ ಮನೆಯವರ ಜೊತೆ ಬಂದರೆ ಅವರಿಗೆ ತಾನೆ ಧೈರ್ಯ ಹೆಚ್ಚಬೇಕು, ಕತ್ತಲಾದರೂ ಓಡಾಡಬಹುದು ಅನ್ನಿಸಬೇಕು. ಆದರೆ ಇದೆಲ್ಲಾ ಬೇರೆ ಮನೆಯ ನಾಯಿ ಕತೆ. ಈ ಕರಿಯ ನಮ್ಮ ಜೊತೆಗೆ ಬರುವುದೇ ಅವನ ಧೈರ್ಯಕ್ಕೆ ನಾವಿದ್ದೀವೆಂದು. ಹೀಗೆ ಜೊತೆಗೆ ಬಂದು ಬೇರೆ ನಾಯಿಯನ್ನು ಹೋಗಿ ಮೂಸಿ ನೋಡುವುದು, ಗುರ್ ಗುಟ್ಟುವುದು, ಬೊಗಳಿ ಅವುಗಳನ್ನು ರೊಚ್ಚಿಗೇಳಿಸುವುದೇ ಕೆಲಸ. ಇವನ ಈ ಚೇಷ್ಟೆಗೆ ಆ ನಾಯಿ ನಮ್ಮ ಮಾಂಸಖಂಡಗಳಿಗೆ ಎಲ್ಲಿ ಬಾಯಿ ಹಾಕುವುದೋ ಎಂದು ಕೆಲವೊಮ್ಮೆ ಜೀವ ಕೈಯಲ್ಲಿ ಹಿಡಿದಿಟ್ಟಿಕೊಳ್ಳಬೇಕಾಗಿರುತ್ತದೆ. ಇಂತಹ ಕುಚೇಷ್ಟೆಗಳನ್ನು ಮಾಡಿದರೂ ಅವನ ಮುಗ್ಧ ಮುಖ ನೋಡಿದೊಡನೆ ಇವನ್ನೆಲ್ಲ ಮರೆಸಿಬಿಡುತ್ತದೆ. ಆದರೆ ದುರಾದೃಷ್ಟ ಏನೆಂದರೆ, ನಾವು ನಮ್ಮ ಮುದ್ದಿನ ನಾಯಿಮರಿಗಳ ಮುಖ ಗುರುತಿಸುವಂತೆ ಅವುಗಳಿಗೆ ನಮ್ಮ ಮುಖ ಅಂದರೆ ಮನುಷ್ಯರ ಮುಖ ನೋಡಿ ಗುರುತಿಸಲು ಆಗುವುದಿಲ್ಲವಂತೆ. ಹೀಗೆನ್ನುತ್ತಿದೆ ಹೊಸ ಸಂಶೋಧನೆ. ನಂಬಲು ಸ್ವಲ್ಪ ಕಷ್ಟ ಎನಿಸಿದರೂ ವೈಯಕ್ತಿಕವಾಗಿ ನನಗೆ ನಂಬಬೇಕೆನಿಸುತ್ತದೆ. ಏಕೆಂದರೆ ವಾರಕ್ಕೊಮ್ಮೆ ಮನೆಗೆ ಹೋಗುವ ನನ್ನನ್ನು ಯಾರೋ ಹೊಸಬನಂತೆ ನೋಡುವ ನಮ್ಮ ಕರಿಯ, ಹೆಸರಿಡಿದು ’ಕರಿಯ’  ಎಂದ ತಕ್ಷಣ ಕುಣಿಯುತ್ತಾನೆ. ನಾವು ಮನುಷ್ಯರು ಇನ್ನೊಬ್ಬರ ಮುಖಭಾವದಿಂದಲೇ ಅವರು ಏನನ್ನು ಹೇಳುತ್ತಿದ್ದಾರೆಂದು ಅರಿತುಬಿಡುತ್ತೇವೆ. ಮುಖದ ಮೇಲಿನ ಒಂದೊಂದು ಸನ್ನೆಯೂ ಒಂದೊಂದು ಅರ್ಥವನ್ನು ಕೊಡುತ್ತದೆ ಅಲ್ಲವೇ? ಆದರೆ ನಾಯಿಗಳ ವಿಷಯಕ್ಕೆ ಬಂದರೆ ಹೀಗಿಲ್ಲ. ನಾಯಿಗಳಿಗೆ ಇತರ ನಾಯಿಗಳ ಮುಖವಾಗಲಿ ಅಥವಾ ಮನುಷ್ಯರ ಮುಖವಾಗಲಿ ನೋಡಿದರೆ ನೆನಪು ಬರುವುದು, ಗುರುತಿಸುವುದು ದೂರದ ಮಾತು ಎನ್ನುತ್ತಿದೆ ಈ ಸಂಶೋಧನೆ. ಮೆಕ್ಸಿಕೋದ ಕೆಲವು ವಿಜ್ಞಾನಿಗಳು ಮೆದುಳನ್ನು ಸ್ಕ್ಯಾನ್ ಮಾಡುವ ತಂತ್ರಜ್ಞಾನವನ್ನು (ಎಮ್ ಆರ್ ಐ) ಬಳಸಿಕೊಂಡು 20 ನಾಯಿಗಳ ಮೇಲೆ ಈ ಪ್ರಯೋಗ ಮಾಡಿದ್ದಾರೆ. ನಾಯಿಗಳನ್ನು ಎಮ್. ಆರ್. ಐ ಸ್ಕ್ಯಾನರ್ ಮೂಲಕ ಕಳಿಸುವಾಗ 4 ಬಗೆಯ 2 ಸೆಕೆಂಡುಗಳ ವೀಡಿಯೋವನ್ನು ತೋರಿಸುತ್ತಿದ್ದರು. ಒಂದು ಮನುಷ್ಯರ ಮುಖ, ಎರಡು ಮನುಷ್ಯರ ತಲೆಯ ಹಿಂಭಾಗ. ಹೀಗೆ ನಾಯಿಗಳ ಮುಖ ಮತ್ತು ತಲೆಯ ಹಿಂಭಾಗವನ್ನು ತೋರಿಸಲಾಯಿತು.

ಇದೇ ಪ್ರಯೋಗವನ್ನು 30 ಜನ ಸ್ವಯಂಸೇವಕರ ಮೇಲೂ ನಡೆಸಲಾಯಿತು. ಆಶ್ಚರ್ಯ ಎಂದರೆ, ಮನುಷ್ಯರು ತಮ್ಮದೇ ಪ್ರಭೇದದ ಮತ್ತು ನಾಯಿಗಳ ಮುಖದ ಚಿತ್ರ ಕಂಡಾಗ ಅವರ ಮೆದುಳಿನಲ್ಲಿ ನರಗಳ ಚಟುವಟಿಕೆ ಹೆಚ್ಚಾಗಿತ್ತು. ಮುಖದ ಹಿಂಭಾಗ ಕಂಡಾಗ ನರಗಳ ಚಟುವಟಿಕೆ ಕಡಿಮೆಯೇ ಇತ್ತು. ಅಂದರೆ ಮನುಷ್ಯರು ಮುಖವನ್ನು ಕಂಡರೆ ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ ಎಂದಾಯಿತು. ಈಗ ನಾಯಿಗಳ ವಿಷಯಕ್ಕೆ ಬಂದರೆ, ಮುಖಗಳು ಮತ್ತು ತಲೆಯ ಹಿಂಭಾಗ ನೋಡಿದ ಎರಡೂ ಸಮಯದಲ್ಲೂ ನಾಯಿಗಳ ನರಗಳ ಚಟುವಟಿಕೆ ಗಮನಾರ್ಹವಾಗಿರಲಿಲ್ಲ. ಅಂದರೆ ನಾಯಿಗಳು ಮುಖ ಕಂಡರೂ ಕ್ಯಾರೆ ಎನ್ನುತ್ತಿಲ್ಲ ಎಂದಾಯಿತು.

ಆದರೆ ಇಲ್ಲಿ ನಾವು ಗಮನಿಸಬೇಕಾದದ್ದು, ಈ ಸಂಶೋಧನೆ ನಾಯಿಗಳ ನರಗಳ ಚಟುವಟಿಕೆಯನ್ನು ಮಾತ್ರ ತೋರಿಸುತ್ತದೆ, ಅವುಗಳ ನಡವಳಿಕೆಯನ್ನಲ್ಲ. ಆದ್ದರಿಂದ ಈ ಸಂಶೋಧನೆಯ ಆಧಾರದ ಮೇಲೆ ನಾವು ಯಾವುದೇ ಕಡಾಖಂಡಿತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಜೊತೆಗೆ ಬೇರೆ ಸಂಶೋಧನೆಗಳು ನಾಯಿಗಳು ಮನುಷ್ಯರ ಮುಖ ನೋಡಿಯೇ ತಮ್ಮ ನಡವಳಿಕೆಯನ್ನು ಬದಲಾಯಿಸಿವೆ ಎಂದೂ ಹೇಳುತ್ತವೆ. ಆದ್ದರಿಂದ ಈ ಸಂಶೋಧನೆ ಶ್ವಾನಗಳು ಈ ಪ್ರಪಂಚವನ್ನು ನೋಡುವ ವಿಧಾನವನ್ನು ನಾವು ಅರಿಯುವ ದಾರಿಗೆ ಒಂದು ಸಣ್ಣ ಸಲಹೆಯಷ್ಟೇ. ಶ್ವಾನಗಳು ಈ ಪ್ರಪಂಚವನ್ನು ಹೇಗೆ ನೋಡುತ್ತವೆ ಎನ್ನುವುದು, ನಮಗೆ ಇನ್ನೂ ಉತ್ತರ ಸಿಗದ ಯಕ್ಷ ಪ್ರಶ್ನೆ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love

2 thoughts on “ಮೋರೆಗೆ ಕ್ಯಾರೆ ಅನ್ನದ ಶ್ವಾನಗಳು

  1. ಗುಡ್,, ಹೌದು ನಿಜ ರಾತ್ರಿ ವೇಳೆ ಸಾಕಿರುವ ನಾಯಿ ಮಾಡುವ ಕುಚೇಷ್ಟೆ ಒಂದೆರಡಲ್ಲ, ಹಾಗೆಯೇ ಮುಖ ನೋಡಿ ಗುರುತಿಸುತ್ತದೆ ಎನ್ನುವುದು ನಮ್ಮ ಕಲ್ಪನೆಯಷ್ಟೆ..?

    1. ಹೌದು ನಮಗೆ ತಿಳಿಯದೆ ಇರುವ ಎಷ್ಟೋ ಸೋಜಿಗಗಳು ನಮ್ಮ ಸುತ್ತಮುತ್ತಲೇ ಅಡಗಿವೆ. ತಿಳಿಯುವ ಕೌತುಕವಿದ್ದಷ್ಟು ಅದು ತೆರೆಯುತ್ತಾ ಹೋಗುತ್ತದೆ. ನಿಮ್ಮ ಅನಿಸಿಕೆಗೆ ಧನ್ಯವಾದಗಳು ಗುರುಪ್ರಸಾದ್ ಟಿ ಜಿ

Comments are closed.

error: Content is protected.