ಹಿಂಗೋಗ್ ಹಂಗ್ ಬಂದೆ..

ಹಿಂಗೋಗ್ ಹಂಗ್ ಬಂದೆ..

ನನಗೆ ಹಣ್ಣು ತರಕಾರಿಗಳೆಂದರೆ ಬಲು ಇಷ್ಟ. ನಾವು ಆರೋಗ್ಯವಾಗಿರಲು ಇವುಗಳೇ ಸರಿ ಎಂದು ತಿಳಿದ ದಿನದಿಂದ ಅಭ್ಯಾಸವಾಗಿದೆ. ಅಂದರೆ ಚಿಕ್ಕಂದಿನಿಂದಲೇ ಇವುಗಳನ್ನು ಚೆನ್ನಾಗಿ ತಿನ್ನುತ್ತಿದ್ದೆ. ಆದರೆ ಆ ವಯಸ್ಸಿನಲ್ಲಿ ನನಗಿದ್ದದ್ದು ಒಂದೇ ಚಿಂತೆ. ಈ ಹಣ್ಣುಗಳನ್ನು ತಿನ್ನುವಾಗ, ಮುಖ್ಯವಾಗಿ ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಅಪ್ಪಿ-ತಪ್ಪಿ ಬೀಜವನ್ನೇನಾದರೂ ನುಂಗಿಬಿಟ್ಟರೆ…? ಏನು ಗತಿ? ಎಂದು ನಮ್ಮ ಪರಮ ಚಿಂತೆಯಲ್ಲಿ ನಾವಿದ್ದರೆ, ಈ ದೊಡ್ಡವರು ಅದನ್ನೇ ಹಿಡಿದುಕೊಂಡು ‘ಅಯ್ಯೋ ತಿಂದ್ ಬಿಟ್ಯಾ? ಅಷ್ಟೇ ಬಿಡು ಇನ್ನು, ನಾಳೆ ಅಷ್ಟ್ರಲ್ಲಿ ಬೀಜ ಗಿಡ ಆಗಿ ಹೊರಗ್ ಬರ್ತದೆ’ ಎಂದು ತಮಾಷೆಗೆ ಹೇಳಿದ ಮಾತು ನನ್ನಂತಹ ಎಷ್ಟೋ ಬಾಲಕರ ನಿದ್ದೆಯನ್ನು ಕೆಡಿಸಿದೆ. ಇದನ್ನೆಲ್ಲಾ ಹೇಳುವುದರಿಂದ ಅವರಿಗೇನು ಸಂತಸವೋ ನಾ ಕಾಣೆ. ಅದರ ಬದಲು ನೇರವಾಗಿ, ‘ಇಲ್ಲಪ್ಪಾ ಏನಾಗಲ್ಲ, ನಮ್ಮ ಜೀರ್ಣರಸಗಳು ಅದನ್ನು ಅಲ್ಲಿಯೇ ಕರಗಿಸಿ ಜೀರ್ಣವಾಗಿಸ್ತವೆ’ ಎಂಬ ವೈಜ್ಞಾನಿಕ ಜ್ಞಾನ ನೀಡಬಹುದಿತ್ತು. ಹಾಗೆ ನಿತ್ಯಜೀವನದಲ್ಲಿ ಕಲಿತದ್ದನ್ನು ಶಾಲೆಯಲ್ಲಿಯೂ ಕೇಳಿದ್ದರೆ ಅಂತಹ ಪಾಠಗಳು ಅಚ್ಚಳಿಯದೆ ಉಳಿಯುತ್ತಿದ್ದವೇನೋ. ಅದಿರಲಿ ಬಿಡಿ, ಈ ಸನ್ನಿವೇಶದಲ್ಲಿ ಹೇಳಿರುವಂತೆ ನಮ್ಮ ಹಾಗೂ ಎಲ್ಲಾ ಜೀವಿಗಳ ಜೀರ್ಣಕ್ರಿಯೆ ಅಷ್ಟು ಬಲವಾಗಿರುತ್ತದೆ. ನಾವು ತಿನ್ನುವ ಆಹಾರವನ್ನು ಕೆಲವು ಘಂಟೆಗಳಲ್ಲಿ ಕರಗಿಸಿ ಜೀರ್ಣಿಸಿಬಿಡುತ್ತದೆ. ಆದರೆ ಇಲ್ಲೊಂದು ಕೀಟ ತನ್ನನ್ನು ಆಹಾರವಾಗಿ ಕಬಳಿಸಿದ ಕಪ್ಪೆಯ ಹೊಟ್ಟೆಯನ್ನು ಸೇರಿ ಯಾವುದೇ ಹಾನಿ ಇಲ್ಲದೇ ನಿರಾಯಾಸವಾಗಿ ಕಪ್ಪೆಯ ಹಿಂದಿನಿಂದ ಬದುಕಿ ಬರುತ್ತದಂತೆ!

ವಿಷಯ ಕೇಳಲು ವಿಚಿತ್ರವಾಗಿದ್ದರೂ ಸತ್ಯವೆನ್ನುತ್ತಿದೆ ಈ ಸಂಶೋಧನೆ. ‘ಏನಿದು ವಿಚಿತ್ರ’ ಎಂದು ಕೀಟ ಶಾಸ್ತ್ರಜ್ಞರೇ ಹೇಳುವ ಹಾಗೆ ಮಾಡಿದೆ ಈ ಕೀಟ. ಆದರೆ ಪಕೃತಿಯ ಆಟ ಬಲ್ಲವರಾರು… ಈ ವಿಷಯ ತಿಳಿದದ್ದಾದರು ಹೇಗೆ? ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ, ಸುಮ್ಮನೆ ಕೂರದ ಜಪಾನಿನ ಜೀವಶಾಸ್ತ್ರಜ್ಞರೊಬ್ಬರು ಕಪ್ಪೆಗಳಿಗೆ ಕೀಟಗಳನ್ನು ತಿನ್ನಿಸುತ್ತಾ ಅವು ಹೇಗೆ ಪ್ರತಿಕ್ರಿಯಿಸುತ್ತಿದ್ದವು ಎಂದು ಸಂಶೋಧನೆ ಮಾಡುತ್ತಿದ್ದರು. ದಿನಾಲು ಬೇರೆ ಬೇರೆ ಕೀಟಗಳನ್ನು ತರುವುದು, ಕಪ್ಪೆಗಳಿಗೆ ತಿನ್ನಲು ಬಿಡುವುದು, ಅಲ್ಲಾಗುವ ವಿಚಾರಗಳನ್ನು ದಾಖಲಿಸುವುದು. ಇದೇ ಅವರ ಕೆಲಸ. ಅವರು ಹೇಳುವ ಹಾಗೆ ಭಕ್ಷಕ ಜೀವಿಯಿಂದ ತಪ್ಪಿಸಿಕೊಳ್ಳಲು ಆಹಾರ ಜೀವಿಯು ಹಲವಾರು ವಿಭಿನ್ನ ರೀತಿಯ ಪ್ರಯತ್ನಗಳನ್ನು ಮಾಡುತ್ತವೆ. ಉದಾಹರಣೆಗೆ, ಕೆಟ್ಟವಾಸನೆಯನ್ನು ಹಿಂದಿನಿಂದ ಉಗುಳುವ ಕೀಟ/ಜೀರುಂಡೆಯನ್ನು ನೀವೂ ನೋಡಿರಬಹುದು. ಈ ಕೀಟಗಳು ಕಪ್ಪೆಯಂತಹ ಭಕ್ಷಕ ಜೀವಿಗಳೇನಾದರು ತಮ್ಮನ್ನು ತಿಂದರೆ ಈ ವಾಸನೆಯನ್ನು ಹೊರಸೂಸುತ್ತವೆ. ಆಗ ವಾಸನೆಯನ್ನು ತಾಳಲಾರದೆ ಕಪ್ಪೆಗಳು ಉಗುಳಿಬಿಡುತ್ತವೆ. ಇಂತಹ ನಿದರ್ಶನಗಳನ್ನು ಈ ವಿಜ್ಞಾನಿಯೂ ನೋಡಿದ್ದಾರೆ. ಆದರೆ ನುಂಗಲ್ಪಟ್ಟು, ಹೊಟ್ಟೆ ಸೇರಿ ಸಾಯದೇ, ಕರಳುಗಳಲ್ಲಿ ನಡೆದುಬಂದು, ಗುದದ್ವಾರದಿಂದ ಜೀವಂತವಾಗಿ ನಡೆದು ಹೊರ ಬರುವುದನ್ನು ಇಲ್ಲಿಯವರೆಗೂ ಕಂಡೇ ಇರಲಿಲ್ಲ.

ಕಪ್ಪೆಗಳಿಗೆ ಹಲ್ಲಿಲ್ಲದ ಕಾರಣ ಅಗೆಯಲಾಗುವುದಿಲ್ಲ. ಹಾಗಾಗಿ ಕೀಟ ತಪ್ಪಿಸಿಕೊಂಡು ಹೊಟ್ಟೆಯ ಒಳಗೆ ಹೋಗುತ್ತದೆ. ಆದರೆ ಅಲ್ಲಿ ಸ್ರವಿಸಲ್ಪಡುವ ಜೀರ್ಣರಸಗಳು ಇಂತಹ ಕೀಟಗಳನ್ನು ಕರಗಿಸಲು ಸಮರ್ಥ. ಆದರೂ ಸಹ R. attenuate ಎಂದು ಕರೆಯಲ್ಪಡುವ ಈ ಕೀಟ ಮಾತ್ರ ಮನೆಯಲ್ಲಿ ನಾವು ಹೇಳಿ ಬರುವ ಹಾಗೆ, ‘ಹಿಂಗೋಗ್ ಹಂಗ್ ಬಂದೆ’ ಎಂದು ಹೊರಬರುವುದನ್ನು ಕಂಡರೇ ಯಾರಿಗೆ ತಾನೆ ಆಶ್ಚರ್ಯವಾಗುವುದಿಲ್ಲ? ಮೊದಲ ಬಾರಿಗೆ ನೋಡಿದ ತಕ್ಷಣ ವಿಜ್ಞಾನಿಯೂ ನಂಬಲು ತಯಾರಿರಲಿಲ್ಲ. ಅದಕ್ಕಾಗಿಯೇ ಒಂದರ ಹಿಂದೊಂದರಂತೆ 30 ಕೀಟಗಳನ್ನು ಕಪ್ಪೆಯ ಎದುರಿಟ್ಟ. ಆ ಕೀಟಗಳನ್ನು ಗುಳುಂ ಮಾಡಿದ 10 ಕೀಟಗಳಲ್ಲಿ 9 ಕೀಟಗಳು ಈ ಮೇಲೆ ಹೇಳಿದ ಹಾಗೆ ಬದುಕಿ ರಾಜಾರೋಷವಾಗಿ ಕಪ್ಪೆಯ ಹೊಟ್ಟೆಯಿಂದ ನಡೆದು ಬರುತ್ತಿದ್ದವಂತೆ. ಆದರೆ ಕೀಟಗಳು ಜೀವಂತವಾಗಿ ಹೊರ ಬರಲು ಮಾತ್ರ ಒಂದೊಂದು ಕೀಟ ಒಂದೊಂದು ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಆ ಸಮಯ ಗರಿಷ್ಟ 6 ಘಂಟೆಗಳಿದ್ದರೆ, ಕನಿಷ್ಟ ಸಮಯಾವಧಿ ಎಷ್ಟು ಗೊತ್ತೇನು? ಕೇವಲ 6 ನಿಮಿಷಗಳು. ಏನಾಶ್ಚರ್ಯ… ಅಷ್ಟೇ ಅಲ್ಲ ಈ ಕೀಟಗಳು ಕಪ್ಪೆ ತಿಂದ ಮೇಲೆ ಹಾಗೆ ಜೀರ್ಣ ಕ್ರಿಯೆಯ ಭಾಗವಾಗಿ ಜಾರಿಕೊಂಡು ಬರುತ್ತಿರಲಿಲ್ಲ. ಬದಲಿಗೆ ಜಠರದಲ್ಲಿ ಈಜಿ, ಕರುಳುಗಳಲ್ಲಿ ನಡೆದು ಬರುತ್ತಿದ್ದವಂತೆ. ಅರೇ.. ಅದು ಹೇಗೆ ಗೊತ್ತಾಗುತ್ತದೆ ಎನ್ನುತ್ತೀರಾ? ಅದನ್ನು ತಿಳಿಯಲೆಂದೇ ಅದೇ ವಿಜ್ಞಾನಿ ಕೀಟಗಳ ಕಾಲಿಗೆ ಅಂಟುವ ಮೇಣವನ್ನು ಹಚ್ಚಿದರಂತೆ. ಅಕಸ್ಮಾತ್ ಕೀಟಗಳು ನಡೆಯದೇ ಇದ್ದರೆ ಅಲ್ಲೇ ಜೀರ್ಣವಾಗಿಬಿಡುತ್ತಿದ್ದವು. ಅಥವಾ ಹೊರಗೆ ಬಂದರೆ ಕಾಲುಗಳಲ್ಲಿ ಭಾಗಶಃ ಮೇಣ ಹಾಗೆ ಇರಬೇಕಿತ್ತು. ಆದರೆ ಈ ಕೀಟಗಳು ಕಪ್ಪೆಯ ಜೀರ್ಣವ್ಯೂಹದಲ್ಲಿ ನಡೆಯುವುದರಿಂದ ಆ ಅಡೆತಡೆಗಳನ್ನು ಎದುರಿಸಿ ಕಾಲುಗಳಲ್ಲಿ ಮೇಣಗಳು ಇಲ್ಲದೆಯೇ ಹೊರಬರುತ್ತಿದ್ದವಂತೆ!

ಹೀಗೆ ತನ್ನನ್ನು ತಿಂದ ಜೀವಿಯ ಜೀರ್ಣಕ್ರಿಯೆಯನ್ನು ಭೇದಿಸಿ ಹೊರಬರುವ ಜೀವಿ ಈ ಕೀಟ ಮಾತ್ರ, ಎಂದೇನಿಲ್ಲ. ಕೆಲವು ಬಸವನ ಹುಳುಗಳು ಮೀನು ಹಾಗೂ ಪಕ್ಷಿಗಳಿಂದ ತಿನ್ನಲ್ಪಟ್ಟರೂ ಬದುಕಿ ಹೊರಬರುತ್ತವೆ. ಆದರೆ, ಅಲ್ಲಿ ಅವುಗಳು ತಮ್ಮ ಕವಚದ ಒಳಗೆ ಸೇರಿಕೊಂಡು ರಕ್ಷಣೆ ಪಡೆದು ಬದುಕಿ ಬರುತ್ತವೆ. ಈ ಕೀಟ ಹಾಗಲ್ಲ ರಾಜಾರೋಷವಾಗಿ ನಡೆದು ಬರುತ್ತದೆ. ಈ ವಿಚಾರ ಇದೇ ಮೊದಲು ಕಂಡುಬಂದಿರುವುದು. ಇವುಗಳ ಈ ಸಾಹಸಕ್ಕೆ ಸಾಥ್ ನೀಡಿರುವುದು ಗಟ್ಟಿಯಾದ ಇವುಗಳ ಹೊರಮೈ ಹಾಗೂ ನೀರಿನಲ್ಲಿ ಬದುಕುವ ಈ ಕೀಟಗಳ ರೆಕ್ಕೆಯ ಕೆಳಗೆ ಇರುವ ಗಾಳಿಯ ಚೀಲಗಳಿಂದ ಉಸಿರಾಡಲು ಸಿಗುವ ಗಾಳಿಯಿಂದ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಏನಾದರೇನೂ ಈ ಹಿಂದೆ ಎಷ್ಟೋ ಬಾರಿ ಹೇಳಿರುವ ಹಾಗೆ ಪ್ರಕೃತಿಯಚ್ಚರಿಯ ಅರಿತವರಾರು..? ಅವಳ ನಾಟಕಾಟದ ಬರಿ ವೀಕ್ಷಕರು ನಾವು…

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ., ಬೆಂಗಳೂರು ನಗರ ಜಿಲ್ಲೆ

Print Friendly, PDF & Email
Spread the love

One thought on “ಹಿಂಗೋಗ್ ಹಂಗ್ ಬಂದೆ..

  1. Thank you Jaikumar for giving unknown information. I feel happy whenever i read your writings. i wish you to write more JAI.

Comments are closed.

error: Content is protected.