2023-24 ನೇ ಸಾಲಿನ ವನ್ಯ ವಿಜ್ಞಾನ ವಿಹಾರ

2023-24 ನೇ ಸಾಲಿನ ವನ್ಯ ವಿಜ್ಞಾನ ವಿಹಾರ

©ಧನರಾಜ್ ಎಂ.

ಪರಿಸರ ಮತ್ತು ವಿಜ್ಞಾನದ ಬಗ್ಗೆ ಮಕ್ಕಳಿಗೆ ಅರಿವು ಮತ್ತು ಆಸಕ್ತಿ ಮೂಡಿಸಬೇಕಾದರೆ ಅವರನ್ನು ನಾಲ್ಕು ಗೋಡೆಯೊಳಗೆ ಕೂರಿಸುವ ಬದಲು ಹೊರಗೆ ಕರೆದುಕೊಂಡು ಹೋಗಿ ಅನುಭವದ ಜೊತೆ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತವೆ. ಏಕೆಂದರೆ, ವಿಜ್ಞಾನವೆಂದರೆ ಪಠ್ಯಪುಸ್ತಕದಲ್ಲಿರುವ ವಿಷಯಗಳನ್ನು ಓದಿ ಮನನ ಮಾಡಿಕೊಂಡು, ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಷ್ಟೇ ಅಲ್ಲ. ನಮ್ಮೊಳಗೆ ಮತ್ತು ಈ ಪರಿಸರದಲ್ಲಿ ಎಲ್ಲೆಡೆ ಇರುವ ವಿಜ್ಞಾನವನ್ನು ಅನುಭವಿಸಿ ಕಲಿಯುವುದು. ಈ ನಿಟ್ಟಿನಲ್ಲಿ ಶುರುವಾದ ಕಾರ್ಯಕ್ರಮವೇ WCG ಯ ಈ ‘ವನ್ಯ ವಿಜ್ಞಾನ ವಿಹಾರ’.

ಈ ವಿನೂತನ ಯೋಜನೆಯು ಕಾರ್ಯರೂಪಕ್ಕೆ ಬರಲು ನೆರವು ನೀಡಿದ್ದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್. 2022-23 ರಲ್ಲಿ ಶುರುವಾದ ಈ ಕಾರ್ಯಕ್ರಮದ ಮೊದಲ ಹಂತದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ 17 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದ ಮೂಲ ಉದ್ದೇಶ ಮಕ್ಕಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು, ಸಫಾರಿಯನ್ನು, ಚಿಟ್ಟೆ ಉದ್ಯಾನವನವನ್ನು ತೋರಿಸಿ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವುದು. ಜೊತೆಜೊತೆಗೆ ಪ್ರಕೃತಿಗೆ ಸಂಬಂಧಿಸಿದ ಕೆಲವು ಚಟುವಟಿಕೆಗಳ ಮೂಲಕ ಪ್ರಕೃತಿಯ ಬಗ್ಗೆ ತಿಳಿಸಿ, ಪರಿಸರಕ್ಕೆ ಸಂಬಂಧಿಸಿದ ಅಧ್ಯಯನ ಸಾಮಗ್ರಿಗಳನ್ನು ನೀಡಿ ಪ್ರಕೃತಿ ಕಾಳಜಿಯ ಬಗ್ಗೆ ಬೀಜ ಬಿತ್ತುವುದಾಗಿದೆ.

ಈ ಶೈಕ್ಷಣಿಕ ವರ್ಷ ಅಂದರೆ 2023-24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 11 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 350 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣೀಭೂತರಾದ WCG ತಂಡದ ಸದಸ್ಯರಿಗೂ, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಗೂ, ಆನೇಕಲ್ ಕ್ಷೇತ್ರದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ, ಭಾಗವಹಿಸಿದ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕ/ ಮುಖ್ಯ ಶಿಕ್ಷಕಿಯರಿಗೂ, ಶಿಕ್ಷಕ/ಶಿಕ್ಷಕಿಯರಿಗೂ, ಬನ್ನೇರುಘಟ್ಟ ಪ್ರಕೃತಿ ಶಿಬಿರದ ಎಲ್ಲಾ ಸಿಬ್ಬಂದಿಗಳಿಗೂ ಧನ್ಯವಾದಗಳು. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಮೂಲ ಕಾರಣ ಸ್ವಯಂ ಸೇವಕರು. ಸ್ವಯಂ ಸೇವಕರಾಗಿ ಭಾಗವಹಿಸಿ ತಮ್ಮ ಅಮೂಲ್ಯವಾದ ಸಮಯವನ್ನು ನೀಡಿದ ಎಲ್ಲರಿಗೂ ಧನ್ಯವಾದಗಳು.

© ಧನರಾಜ್ ಎಂ.

ಸ್ವಯಂಸೇವಕರ ಅಭಿಪ್ರಾಯಗಳು

ಇದು ನಿಜವಾಗಿಯೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಕಾರ್ಯಕ್ರಮವಾಗಿದೆ. ಇದು ಪ್ರಕೃತಿಯೊಂದಿಗೆ ಮತ್ತು ವನ್ಯಜೀವಿಗಳೊಂದಿಗೆ ಸಂವಹನ ನಡೆಸಲು ಉತ್ತಮ ಅವಕಾಶವಾಗಿದೆ. ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಇರಬೇಕೆಂದು ನಾನು ಹೇಳಲು ಬಯಸುತ್ತೇನೆ. ಮುಂಬರುವ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಲು ನಾನು ಇಷ್ಟಪಡುತ್ತೇನೆ.

– ಶ್ರದ್ಧಾ ಎಸ್ ದೇಸಾಯಿ., ನೃಪತುಂಗ ವಿಶ್ವವಿದ್ಯಾಲಯ.

ಇದು ಒಂದು ಒಳ್ಳೆಯ ಕಾರ್ಯಕ್ರಮ, ಸರ್ಕಾರಿ ಶಾಲೆಯಲ್ಲಿನ ಎಷ್ಟೋ ಮಕ್ಕಳು ಮೃಗಾಲಯಗಳಿಗೆ ಪ್ರವೇಶ ಶುಲ್ಕ ಸಹ ಕೊಡಲು ಕಷ್ಟ. ಅಂತಹ ಮಕ್ಕಳು ಮೃಗಾಲಯಗಳಿಗೆ ಬಂದು ಅವುಗಳ ಬಗ್ಗೆ ಚಟುವಟಿಕೆಗಳ ಮೂಲಕ ಕಲಿಯುವುದು ಒಳ್ಳೆಯ ಅವಕಾಶ. ಪ್ರಕೃತಿ ಎಷ್ಟು ಮುಖ್ಯ ಅನ್ನೋದು ಚಿಕ್ಕ ವಯಸ್ಸಿನಲ್ಲೇ ಅವರಿಗೆ ಗೊತ್ತಾಗುತ್ತೆ.

        – ಮೋನಿಷಾ ಎಂ., ನೃಪತುಂಗ ವಿಶ್ವವಿದ್ಯಾಲಯ.

ಪ್ರಕೃತಿಯ ಮಡಿಲಲ್ಲಿ ಮಿಂದು, ಅಲ್ಲಿನ ವನ್ಯಜೀವಿಗಳನ್ನು ನೋಡಿ, ಅನಂದದಿ ನಲಿದು, ಮಕ್ಕಳೊಂದಿಗೆ ಮಕ್ಕಳಾಗಿದ್ದ ಸುಮಧುರ ಕ್ಷಣಗಳು ನನ್ನ ಜೀವನದಲ್ಲಿ ಎಂದಿಗೂ ಮಾಸದು.

        – ಮೇಘನಾ ಡಿ. ವೈ., ನೃಪತುಂಗ ವಿಶ್ವವಿದ್ಯಾಲಯ.

ಇದು ಒಂದು ಒಳ್ಳೆಯ ದಾರಿ, ಇದರಿಂದ ಹಲವಾರು ಮಾಹಿತಿಗಳನ್ನು ನಾವು ತಿಳಿಯಬಹುದು ಹಾಗೂ ನಮಗೆ ತಿಳಿದ ವಿಷಯವನ್ನು ಮಕ್ಕಳಿಗೂ ಸಹ ತಿಳಿಸಬಹುದು. 

ಗೋಪಿ ಸಿ., ನೃಪತುಂಗ ವಿಶ್ವವಿದ್ಯಾಲಯ

© ಧನರಾಜ್ ಎಂ.
© ಧನರಾಜ್ ಎಂ.

ಲೇಖನ: ನಾಗೇಶ್ ಒ ಎಸ್
             ಡಬ್ಲ್ಯೂ ಸಿ ಜಿ

Print Friendly, PDF & Email
Spread the love
error: Content is protected.