ಈ ಸಗಣಿ ಮಿಥೇನ್ ಗಣಿ!

ಈ ಸಗಣಿ ಮಿಥೇನ್ ಗಣಿ!

©JHVEPHOTO_ISTOCK_GETTY IMAGES PLUS

‘ಸಾರ್ಸಿ, ಗುಡ್ಸಿ, ರಂಗೋಲೆ ಹಾಕ್ಬೇಕು ಎದ್ದೇಳ್ರೇ ಬೇಗ…’ ‘ಹೊತ್ತು ಉಟ್ಟೋಷ್ಟ್ರಲ್ಲಿ ಎದ್ದು ಹಾಕೋದ್ ಬಿಟ್ಟು ಇನ್ನ ಮಲ್ಗೀದೀರಾ…’ ಎಂಬ ಅಮ್ಮನ ಸುಪ್ರಭಾತವ ಕೇಳಿಯೇ ನಾವು (ನಾನು, ನನ್ನ ಇಬ್ಬರು ಅಕ್ಕಂದಿರು) ಚಿಕ್ಕಂದಿನಲ್ಲಿ ಬೆಳಿಗ್ಗೆ ಏಳುತ್ತಿದ್ದದ್ದು. ಅದು ಹಬ್ಬದ ದಿನವಾದರೂ ಅಷ್ಟೇ ನಮಗೆ ಯಾವುದೇ ಭೇದವಿರಲಿಲ್ಲ. ತಡವಾಗಿಯೇ ಏಳುತ್ತಿದ್ದದ್ದು. ಸಮಯ ಸರಿದಂತೆ ಎಲ್ಲವೂ ಬದಲಾಯಿತು. ಸೆಗಣಿಯಿಂದ ಸಾರಿಸಿದ ಮನೆಯ ಅಂಗಳದ ಆ ಲಕ್ಷಣ ಈಗ ನೋಡಲೂ ಸಿಗುವುದಿಲ್ಲ. ಅಂಕು ಡೊಂಕು ನೆಲದ ಮೇಲೆ ಆಡುತ್ತಿದ್ದ ಗೋಲಿಯ ಆಟ ಈಗ ನೆನಪಿಗಷ್ಟೇ ಸೀಮಿತ. ಅಮ್ಮ 13 ರಿಂದ 1 ಚುಕ್ಕೆಯ ರಂಗೋಲೆಯನ್ನು ಹಾಕುವಾಗ ಮುಂದೆ ಕೂತು ಚುಕ್ಕೆ ಎಣಿಸುವ, ಅಮ್ಮನ ಕೈಚಳಕದ ಆ ಚಿತ್ತಾರ ನೋಡುವುದೇ ಆ ದಿನದ ಒಂದು ಭಾಗವಾಗಿರುತ್ತಿತ್ತು. ಆದರೆ ಈಗ ಬದಲಾದ ಜೀವನ ಶೈಲಿಯಲ್ಲಿ ರಂಗೋಲಿ ಪುಡಿಯೇ ಸಿಗುತ್ತಿಲ್ಲ; ಇನ್ನು ಸೆಗಣಿಯಿಂದ ಸಾರಿಸಿದ ನೆಲ ದೂರದ ಮಾತು. ನಮಗೆ ಸೆಗಣಿ ಎಂದರೆ ಹಸುವಿನಿಂದ ದೊರಕುವ ಹಾಲಿನಷ್ಟೇ ಪವಿತ್ರವಾದ ವಸ್ತು. ಅದನ್ನು ನಾವು ಬಳಸುವ ರೀತಿ, ಜಾಗಗಳಿಂದಲೂ ಅದನ್ನು ಅರಿಯಬಹುದು. ಈಗಿನ ಪ್ರಪಂಚದಲ್ಲಿ ಯಾವುದೂ ಮೊದಲಿನಂತಿಲ್ಲ. ಪಕ್ಕದ ಮನೆಯಿಂದಲೋ ಅಥವಾ ಹಸುಗಳು ನಡೆದ ದಾರಿಯಲ್ಲಿಯೋ ಆರಿಸಿಕೊಂಡು ತಂದ ಸೆಗಣಿಯಿಂದ ಮನೆ ಸಾರಿಸುತ್ತಿದ್ದ ದಿನಗಳಿಂದ ಈಗ ಅಮೇಜಾನ್ ನಲ್ಲಿ ದುಡ್ಡು ಕೊಟ್ಟು ಸೆಗಣಿಯನ್ನು ಆರ್ಡರ್ ಮಾಡಿ ಪಡೆದುಕೊಳ್ಳುವವರೆಗೆ ದಿನಗಳು ಬದಲಾಗಿವೆ. ಕೇವಲ ಸೆಗಣಿಯಲ್ಲ, ನಮ್ಮ ಮನೆಯ ಸದಸ್ಯರೆಂದೇ ಸಾಕುತ್ತಿದ್ದ ನಮ್ಮ ನಾಟಿ ಹಸುಗಳ ಜಾಗದಲ್ಲಿ ಈಗ ಕೇವಲ ಹಾಲಿಗಾಗಿ ಮತ್ತು ಮಾಂಸಕ್ಕಾಗಿ ಪ್ರಯೋಗಶಾಲೆಯಲ್ಲಿ ಉತ್ಪಾದಿಸಿದ ಸೀಮೆ ಹಸುಗಳನ್ನು ಈಗ ಸಾಕಲು ಪ್ರಾರಂಭಿಸಿದ್ದೇವೆ. ಇವುಗಳು ಹಾಲು ಹೆಚ್ಚಾಗಿ ಕೊಡಬಹುದೇನೋ ನಿಜ, ಆದರೆ ಅದರ ಜೊತೆಗೆ ಅವು ಕೊಡುವ ಜಾಗತಿಕ ತಾಪಮಾನವನ್ನು ಹೆಚ್ಚಿಸುವ ‘ಮೀಥೇನ್’ ಎಂಬ ಅನಿಲವನ್ನೂ ಕೊಡುತ್ತಿದೆ. ಈ ಹಸುಗಳ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ಹಸುವಿನ ಆಹಾರವನ್ನು ಜೀರ್ಣಿಸುವ ಸಮಯದಲ್ಲಿ ಮೀಥೇನ್ ಗ್ಯಾಸ್ ಅನ್ನೂ ಕೂಡ ಉತ್ಪಾದಿಸುತ್ತವೆ. ಹಸುವಿನ ತೇಗಿನಲ್ಲಿ ಹಾಗು ಸೆಗಣಿಯಿಂದ ಈ ಗ್ಯಾಸ್ ವಾತಾವರಣ ಸೇರುತ್ತದೆ. ಹೀಗೆ ವಾತಾವರಣದಲ್ಲಿ ಇಡೀ ಪ್ರಪಂಚದಲ್ಲಿ ಉತ್ಪತ್ತಿಯಾಗುವ ಒಟ್ಟು ಮೀಥೇನ್ ಗ್ಯಾಸ್ ನಲ್ಲಿ ¼ ಭಾಗ ಈ ಸೀಮೆ ಹಸುಗಳಿಂದಲೇ ಬರುತ್ತಿದೆ ಎಂಬುದು ಹಲವರಿಗೆ ತಿಳಿಯದು.

ಹಸುವಿನ ತೇಗಿನಲ್ಲಿ ಹೆಚ್ಚು ಮೀಥೇನ್ ಗ್ಯಾಸ್ ಹೊರಬರುತ್ತದಾದರೂ ಹಸುವಿನ ಸೆಗಣಿಯಲ್ಲಿ ಬರುವ ಮೀಥೇನ್ ಸ್ವಲ್ಪ ದೀರ್ಘಕಾಲದ್ದು. ಈ ಮೀಥೇನ್ ಗ್ಯಾಸ್ ಉತ್ಪಾದನೆ ಹೊರಗೆ ಹೋಗಿ ಮೇಯುವ ಹಸುಗಳಿಗಿಂತ ಒಂದೇ ಕಡೆ ಇದ್ದು ಮಣ್ಣಿನ ಸಂಪರ್ಕ ಹೆಚ್ಚು ಇಲ್ಲದ ಹಸುಗಳಲ್ಲಿ ಹೆಚ್ಚಿರುತ್ತದೆಯಂತೆ. ಏನಾದರೇನು ಹೆಚ್ಚೋ-ಕಡಿಮೆಯೋ ಉತ್ಪಾದನೆ ಆಗಿ ನಮ್ಮ ವಾತವರಣದ ಮೇಲೆ ಪ್ರಭಾವ ಬೀರುತ್ತಿರುವ ಈ ಮೀಥೇನ್ ಕಡಿಮೆ ಮಾಡುವುದಾದರು ಹೇಗೆ ಎಂಬುದೇ ನಮ್ಮ ಮುಂದಿರುವ ಸವಾಲು. ಈ ಸವಾಲನ್ನು ಮನಗಂಡ ಕೆಲವು ವಿಜ್ಞಾನಿಗಳು ಇದಕ್ಕೆ ಮಾರ್ಗ ಒಂದನ್ನು ಕಂಡುಕೊಂಡರು. ಅದೇ ಸಮುದ್ರಗಳಲ್ಲಿ ಸಿಗುವ ‘ಕೆಂಪು ಶೈವಲಗಳು(red algae)’. ಈ ಕೆಂಪು ಶೈವಲಗಳಲ್ಲಿರುವ ‘ಬ್ರೋಮೋಫಾರ್ಮ್’ ಎಂಬ ರಸಾಯನಿಕವು ಹಸುವಿನ ಜಠರದಲ್ಲಿ ಉತ್ಪತ್ತಿಯಾಗುವ ಮೀಥೇನ್ ಅನ್ನು ಸುಮಾರು 65%ರ ವರೆಗೆ ಕಡಿಮೆ ಮಾಡುತ್ತದೆಯಂತೆ. ಇದಕ್ಕೆ ಮಾಡಬೇಕಾದ ಕೆಲಸವಿಷ್ಟೇ, ಹಸು ತಿನ್ನುವ ಮೇವಿನಲ್ಲಿ ಕೇವಲ 0.5% ನಷ್ಟು ಈ ಕೆಂಪು ಶೈವಲವನ್ನು ಸೇರಿಸಿದರೆ ಸಾಕು. ಎಷ್ಟು ಸುಲಭವಲ್ಲವೇ ಪರಿಹಾರ? ನಿಜ. ಆದರೆ ಮೇಲ್ನೋಟಕ್ಕೆ ಇದೇ ಸುಲಭ ಪರಿಹಾರ ಎಂದು ಕಂಡರೂ ಹೀಗೆ ಮಾಡುವುದು ಸರಿಯಲ್ಲ. ಏಕೆಂದರೆ ಕೆಂಪುಶೈವಲಗಳಲ್ಲಿರುವ ಈ ಬ್ರೋಮೋಫಾರ್ಮ್ ಹಸುವಿನ ದೇಹವೆಲ್ಲಾ ಆವರಿಸಿ ಹಾಲಿನಲ್ಲಿಯೂ ಇದರ ಇರುವಿಕೆಯಿದೆ ಎಂದು ಗಮನಿಸಲಾಗಿದೆ. ಅರೇ.. ಇದ್ದರೇನು ಇರಲಿ ಬಿಡಿ ಎನಿಸಿದರೂ ಈ ರಸಾಯನಿಕವು ಮನುಷ್ಯರಿಗೆ ಹಾನಿಕಾರಕ. ಆದ್ದರಿಂದ ಈ ವಿಧಾನ ಸರಿಯಿಲ್ಲ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಏನು ಮಾಡುವುದು?

© JEAN-PASCAL QUOD_WIKIMEDIA COMMONS (CC BY-SA 3.0)

 ಇದಕ್ಕೆ ಉತ್ತರವಾಗಿ ಸ್ವೀಡಿಶ್ ವಿಶ್ವವಿದ್ಯಾಲಯದ ಮೊಹಮ್ಮದ್ ರಾಮಿನ್ ಹೇಳುವುದೇನೆಂದರೆ. ಈ ಕೆಂಪು ಶೈವಲಗಳನ್ನು ಹಸುಗಳಿಗೆ ತಿನ್ನಿಸುವ ಬದಲು ಹಸುವಿನ ಸೆಗಣಿಗೆ ಹಾಕಿಬಿಡೋಣ ಎಂದು. ಅದೂ ಆಗಿಬಿಡಲೆಂದು 4 ವಿವಿಧ ಡೈರಿಗಳಿಂದ ನಾಲ್ಕು ವಿಭಿನ್ನ ಸೆಗಣಿಯನ್ನು ತಂದರು. ಅದರಲ್ಲಿ ಒಂದು ಭಾಗಕ್ಕೆ ಕೆಂಪು ಶೈವಲವನ್ನು ಸೇರಿಸಿದರು ಹಾಗೂ ಸೆಗಣಿಯನ್ನು ಕೊಳೆಯಲು 9 ವಾರಗಳು ಬಿಟ್ಟರು. ಮೊದಲಿಗೆ ಮೀಥೇನ್ ಉತ್ಪತ್ತಿ ತುಂಬಾ ಕಡಿಮೆಯಿತ್ತಾದರೂ ಕ್ರಮೇಣ ಯಾವುದೇ ವ್ಯತ್ಯಾಸವಿಲ್ಲದಂತೆ ಮೀಥೇನ್ ವಾತಾವರಣ ಸೇರುತ್ತಿತ್ತು. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?

ಹಾಗೇನಿಲ್ಲ, ಹಸುವಿಗೆ ಕೆಂಪು ಶೈವಲಗಳನ್ನು ತಿನ್ನಿಸುವ ವಿಧಾನವನ್ನು ಪೂರ್ಣವಾಗಿ ತಿರಸ್ಕರಿಸಬೇಕಿಲ್ಲ. ಬದಲಿಗೆ ಮೀಥೇನ್ ಅನ್ನು ಕಡಿಮೆ ಮಾಡಲು ಸಾಮರ್ಥ್ಯವಿರುವ ನಿಖರ ರಸಾಯನಿಕವನ್ನು ಶೈವಲದಿಂದ ಬೇರ್ಪಡಿಸಿ ಕೊಡಬಹುದೇ ಎಂದು ನೋಡುವುದು ಸೂಕ್ತ ಎನ್ನುತ್ತಾರೆ ನ್ಯೂಜಿಲ್ಯಾಂಡ್ ನ ವಿಜ್ಞಾನಿ ಕ್ರಿಸ್ಟೋಫರ್

ಕ್ರಿಸ್ಟೋಫರ್ ಗಳಂತಹ ವಿಜ್ಞಾನಿಗಳು ಎಷ್ಟೇ ಪರಿಹಾರಗಳು ಹುಡುಕುವ ಪ್ರಯತ್ನದಲ್ಲಿದ್ದರೂ ಅಥವಾ ಅಕಸ್ಮಾತ್ ಕಂಡು ಹಿಡಿದರೂ, ಅದು ಕೇವಲ ನಮ್ಮ ಸ್ವಾಭಾವಿಕ ಬಾಳ್ವೆಯನ್ನು ಸುಲಭ ಮಾಡಿಕೊಳ್ಳಲು ಹೋಗಿ ಎಡವಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ತೋರಿಕೊಳ್ಳುವ ಸಮರ್ಥನೆಯಷ್ಟೇ..

“ಮನುಷ್ಯ ಆಧುನೀಕತೆ ಎಂಬ ಬಣ್ಣದ ಗಾಳಿಪಟದ ಸೂತ್ರ ಹಿಡಿದು, ಸ್ವಾಭಾವಿಕತೆ ಎಂಬ ಭೂಮಿಯ ವಿರುದ್ಧ ಎಷ್ಟೇ ಮೇಲೆ ಏರಿದರೂ, ಪ್ರಕೃತಿಯೆಂಬ ಗುರುತ್ವ ಅಷ್ಟೇ ವೇಗವಾಗಿ ಅವನನ್ನು ಕೆಳಗೆಳೆಯುತ್ತದೆ.”

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ., ಬೆಂಗಳೂರು ನಗರ ಜಿಲ್ಲೆ

Print Friendly, PDF & Email
Spread the love
error: Content is protected.