ಹರಟೆಮಲ್ಲರ ಕಾಳಗದ ಕೌತುಕ

ಹರಟೆಮಲ್ಲರ ಕಾಳಗದ ಕೌತುಕ

ಪಕ್ಷಿಮ ಹಾಗೂ ಪೂರ್ವಘಟ್ಟಗಳ ಕೊಂಡಿಯಂತೆ ಎರಡೂ ಘಟ್ಟಗಳಿಗೆ ಸಂಪರ್ಕದಂತಿದೆ ನಮ್ಮ ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ ಹುಲಿ ರಕ್ಷಿತ ಅರಣ್ಯ.ಈ ಕಾಡು ಹಲವು ರೀತಿಯ ವಿಶೇಷತೆಗಳನ್ನ ಹೊಂದಿದೆ. ಇಲ್ಲಿ ವಿಶೇಷವಾಗಿ ಹಲವು ತರಹದ ಕಾಡುಗಳನ್ನ ನೋಡಬಹುದು. ಕುರುಚಲು, ಒಣಕುರುಚಲು, ಅರೆ ನಿತ್ಯಹರಿದ್ವರ್ಣ, ನಿತ್ಯಹರಿದ್ವರ್ಣ ಹಾಗೂ ಶೋಲಾ ಕಾಡುಗಳನ್ನ ನೋಡಬಹುದು, ಗುಡ್ಡ ಪ್ರದೇಶಗಳಿಂದ ಕೂಡಿರುವ ಈ ಅರಣ್ಯದಲ್ಲಿ ಗಣತಿಯ ಪ್ರಕಾರ ಸರಿಸುಮಾರು 60ಕ್ಕೂ ಹೆಚ್ಚಿನ ಹುಲಿ, 70ಕ್ಕೂ ಹೆಚ್ಚಿನ ಚಿರತೆ ಹಾಗೂ 600 ಆನೆಗಳಿದ್ದು 4 ಜಾತಿಯ ಜಿಂಕೆಗಳನ್ನ ನೋಡಬಹುದು ಅವುಗಳೆಂದರೆ ಚುಕ್ಕೆಜಿಂಕೆ, ಸಾಂಬಾರ್ ಜಿಂಕೆ, ಕಾಡುಕುರಿ ಹಾಗೂ ಮೌಸ್ ಡೀರ್. ಇಂತಹ ವಿಶೇಷವಾದ ಕಾಡಿನ ನಡುವೆ ಈಗಲೂ ಸೋಲಿಗ ಎಂಬ ಬುಡಕಟ್ಟು ಜನಾಂಗ ವಾಸವಾಗಿದ್ದಾರೆ. ಕಾಡಿನ ಪದಾರ್ಥಗಳಾದ ಜೇನು, ನೆಲ್ಲಿಕಾಯಿ, ಕಲ್ಲುಹೂವು ಮೊದಲಾದವುಗಳನ್ನು ತಂದು ಮಾರಿ ಜೀವನ ಸಾಗಿಸುತ್ತಿರುವುದಲ್ಲದೆ ತಮ್ಮಪಾಲಿನ ಜಮೀನುಗಳಲ್ಲಿ ಕಾಫಿ, ಮೆಣಸು ಮೊದಲಾದ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದಾರೆ.

ಇಂತಹಾ ಸಮೃದ್ಧ ಕಾಡಿನ ನಡುವೆ ಇರುವ ಕೆ.ಗುಡಿಯ ಅರಣ್ಯವಸತಿ ವಿಹಾರಧಾಮದಲ್ಲಿ  ನಾನು ಕಾರ್ಯ ನಿರ್ವಹಿಸುತ್ತಿರುವಾಗ ಪ್ರತಿದಿನ ಮುಂಜಾನೆ ಸುಮಾರು 5 ರ ಸಮಯ ನನ್ನ ರೂಮಿನ ಹೊರಗಿನಿಂದ  ಬ್ರೈನ್….. ಫಿವರ್….ಬ್ರೈನ್….. ಫಿವರ್…..ಎಂದು ಕೂಗುವ ‘ಇಂಡಿಯನ್ ಹಾಕ್ ಕುಕು’ ಹಕ್ಕಿ ಹಾಗೂ ಕಾಡುಕೋಳಿಯ ತೇಕೋ…ತೆಕ್..ತೇಕೋ…ತೆಕ್.. ಕೂಗಿನೊಂದಿಗೆ ಶುರುವಾಗುತ್ತಿತ್ತು. ಮೂಡಣದಲ್ಲಿ ಸೂರ್ಯ ಮೇಲೇಳುತ್ತಿದ್ದಂತೆ  ಇಡೀ ಕಾನನವೇ ಮುಂಜಾನೆಯ ಸೂರ್ಯರಶ್ಮಿಯಲ್ಲಿ ಮಿಂದು ಎದ್ದಂತೆ ಕಂಗೊಳಿಸುತ್ತಿತ್ತು. ನಾನು ಎದ್ದು ಬಿಸಿ ಬಿಸಿ ಬ್ಲಾಕ್ ಟೀ ಸವಿದು   ಹೆಗಲಿಗೆ ಬೈನಾಕುಲರ್ ಏರಿಸಿ ಒಂದು ಸುತ್ತು ಪಕ್ಷಿವೀಕ್ಷಣೆಗೆಂದು ಹೊರಟೆ.

© ನಾಗೇಶ ಓ ಎಸ್

ಕಾಡುಗಳು ಯಾವಾಗಲೂ ವಿಸ್ಮಯಗಳ ಆಗರ. ಕಾನನವನ್ನ ಹೆಕ್ಕಿದಷ್ಟು ಹಲವಾರು ಕೌತುಕಗಳ ಅನಾವರಣವಾಗುತ್ತದೆ. ಕಾಡಿನಲ್ಲಿ ಜೀವಿಸುವ ಪ್ರತಿ ಮೃಗಪಕ್ಷಿ ಮರಗಿಡಗಳು ಅವುಗಳದ್ದೇ ಆದ ಜೀವನ ಕ್ರಮ ಅಳವಡಿಸಿಕೊಂಡಿವೆ. ಆದರೆ ಆ ಕ್ರಮಗಳನ್ನ ತಿಳಿಯುಬೇಕೆಂದರೆ ನಾವು ಕಾನನದಲ್ಲಿನ ಕೌತುಕಗಳನ್ನ ಗಮನಿಸಲೇಬೇಕು. ಹೀಗೆ ಪಕ್ಷಿವೀಕ್ಷಣೆಗೆ  ಹೊರಟ  ನನಗೆ ಎದುರಾದ ಹರಟೆಮಲ್ಲರ (jungle bablers) ಗುಂಪು ಕ್ಯಾ…ಕ್ಯಾ…ಕ್ಯಾ… ಎಂದು ಕೂಗುತ್ತ ಪೊದೆಯ ಒಳಗಿಂದ ಪುರ್ರನೆ ಹಾರಿ ಬಂದು ಪಕ್ಕದಲ್ಲಿದ್ದ ಮರದ ಮೇಲೆ ಕೂತವು, ಮೊದಮೊದಲು ಮೆಲ್ಲಗೆ ಕೂಗಲಾರಂಭಿಸಿದ ಇವು ಬರಬರುತ್ತಾ ಕಾನನದಲ್ಲಿ ತಮ್ಮ ಪ್ರತಿಧ್ವನಿ ಮಾರ್ಧನಿಸುವಂತೆ ಕೂಗಲಾರಂಭಿಸಿದವು. ಇವುಗಳ ಈ ರೀತಿಯ ನಡವಳಿಕೆ ನನಗೆ ಹೊಸದೇ ಆಗಿತ್ತು, ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಇವುಗಳ ಜೀವನ ಕ್ರಮ ನನಗೆ ವಿಶೇಷ ಹಾಗೂ ಹೊಸತೆನಿಸಿತು. ಶೋಭಾ ಹಕ್ಕಿಗಳೆಂದು ಕರೆಸಿಕೊಳ್ಳುವ ಈ ಸಪ್ತಸಹೋದರಿಯರು ಹೆಸರಿಗೆತಕ್ಕಂತೆ ಹರಟೆ ಮಲ್ಲರೆ. ಯಾವಾಗಲೂ ಕ್ಯಾ…ಕ್ಯಾ…ಕ್ಯಾ…ಕ್ಯಾ… ಎಂದು ಕೂಗುತ್ತಾ ಗುಂಪುಗಳಾಗಿ ಒಂದಲ್ಲಿ ಕೂರುವುದೇ ಇಲ್ಲ. ನನ್ನ ಮುಂದಿನ ಮರದ ಮೇಲೆ ಕುಳಿತಿದ್ದ ಅಷ್ಟು ಹಕ್ಕಿಗಳು ಒಂದೇ ಸಮನೆ ಕೂಗಲಾರಂಭಿಸಿದವು. ಅಲ್ಲೇ ಸನಿಹದಲ್ಲಿ  ಮತ್ತೊಂದು ಗುಂಪು ಈ ಗುಂಪಿನ ಕಡೆಗೆ ಜೋರಾಗಿ ಕೂಗಿಕೊಳ್ಳುತ್ತಾ ಹಾರಲಾರಂಭಿಸಿದವು. ಅಷ್ಟಕ್ಕೆ ಸುಮ್ಮನಾಗದ ಎರಡು ಗುಂಪು ನಾನಾ ನೀನ ಎನ್ನುವಂತೆ ಕೂಗಲಾರಂಭಿಸಿದವು.  ಇವುಗಳ ಕಾಳಗ, ಪ್ರಶಾಂತವಾದ ಕಾಡಿನಲ್ಲಿ ಗದ್ದಲವನ್ನೇ  ಸೃಷ್ಟಿ ಮಾಡಿತು.

ಸಾಧಾರಣ ಕಾಡು, ಹಳ್ಳಿಗಳು, ಕೃಷಿ ಭೂಮಿಯಲ್ಲಿ ಕಾಣಸಿಗುವ ಈ ಪಕ್ಷಿಗಳು ಬೂದುಬಣ್ಣ ಹೊಂದಿದ್ದು, ಹೆಚ್ಚಾಗಿ ನೆಲದಮೇಲೆ ಸಣ್ಣಸಣ್ಣ ಗಿಡಗಳ ಮೇಲೆ ನೆಗೆಯುತ್ತ ಓಡಾಡುತ್ತವೆ. ಕಣ್ಣಸುತ್ತ ಹಳದಿ ಉಂಗುರ ಇದೆ. ಇವು ಕೀಟಗಳನ್ನು, ಕಾಳುಗಳನ್ನು ಹಾಗೂ ಮಕರಂದವನ್ನು ಸೇವಿಸುತ್ತವೆ ಹಾಗೂ ಗುಂಪು ಗುಂಪುಗಳಾಗಿ ಜೀವನ ಸಾಗಿಸುತ್ತವೆ. ಹೀಗೆ ನಾನಾ..? ತಾನಾ..? ಎಂದು ಕೂಗುವುದರ ಹಿಂದೆ ಬಹುಶಃ ಎರಡು ಗುಂಪುಗಳ ಮಧ್ಯೆ ಕಾಳಗವೇ ನಡೆಯುತ್ತದೆಯೇನೋ ಎಂಬಂತೆ ಕೂಗುತ್ತ ಮುಂದೆ ಸಾಗಿದವು. ಅಷ್ಟರಲ್ಲಿ ಸಮಯ 9 ಆಗಿತ್ತು. ಮತ್ತೆ ಕ್ಯಾಂಪಿನ ಕಡೆ ಹೆಜ್ಜೆ ಹಾಕಿದೆ.

ಲೇಖನ: ಮಹದೇವ .ಕೆ .ಸಿ
       JLR, ಬಂಡೀಪುರ ರಾಷ್ಟ್ರೀಯ ಉದ್ಯಾನವನ

Spread the love
error: Content is protected.