ಮಚ್ಚೆ ಹೇಳಿದ ಅಚ್ಚರಿಗಳು

ಮಚ್ಚೆ ಹೇಳಿದ ಅಚ್ಚರಿಗಳು

ಚಿಕ್ಕ ವಯಸ್ಸಿನ ಎಲ್ಲಾ ಹಳ್ಳಿಯ ಮಕ್ಕಳಂತೆ ನಾನು ಸಹ ಹೆಚ್ಚೆಚ್ಚು ಮಣ್ಣಿನಲ್ಲಿ ಆಟವಾಡಿ, ಜಗಳವಾಡಿ ಎದ್ದು-ಬಿದ್ದು ಭೂಮಿಯ ಜೊತೆಗೆ ಹತ್ತಿರದ ಸಂಬಂಧ ಹೊಂದಿದ್ದವನು. ಹಾಗಾಗಿ ಸಹಜವಾಗಿಯೇ ಭೂಮಿತಾಯಿಗೂ ನನ್ನ ಬಿಟ್ಟಿರಲು ಕಷ್ಟವಾಗಿಯೋ ಏನೋ, ಆಟ ಮುಗಿದ ಮೇಲೂ ನನ್ನ ಕೈ ಕಾಲುಗಳಿಗೆ, ಬಟ್ಟೆಗಳಿಗೆ ಅಂಟಿಕೊಂಡು ಮನೆಯವರೆಗೆ ಬರುತ್ತಿದ್ದಳು. ಆದರೆ ನಮ್ಮ ಸಂಬಂಧ ಸರಿಯಾಗಿ ಅರಿಯದ ನನ್ನ ತಾಯಿ ಎಲ್ಲಾ ತಾಯಂದಿರಂತೆ ಯಾಕಿಷ್ಟು ಕಲೆ ಮಾಡಿಕೊಂಡು ಬಂದಿರುವೆ ಎಂದು ನನ್ನನ್ನು ಬೇರೆ ಭಾಷೆಯಲ್ಲಿ ಹೊಗಳಿದ್ದುಂಟು(ಬೈದದ್ದುಂಟು). ಹಾಗೆ ಹೊಗಳುತ್ತಾ ಸ್ನಾನಕ್ಕೆ ತಯಾರು ಮಾಡಿ ಸ್ನಾನಮಾಡು ಎನ್ನುವರು. ಇನ್ನೇನು ನೀರಿನೊಡನೆ ಯುದ್ಧಕ್ಕೆ  ಸಜ್ಜಾಗುವ ಮುನ್ನ ಅವಳೇ ಬಂದು ‘ನೀನು ಸರಿಯಾಗಿ ಕೊಳೆ ತೆಗೆಯುವುದಿಲ್ಲ’ ಎಂದು ಗೊಣಗುತ್ತಾ ಬಂದು ಸ್ನಾನ ಮಾಡಿಸುವಾಗ ನಾನು ಕೇಳಿದ ಪ್ರಶ್ನೆಯಿದು. ‘ಅಮ್ಮಾ ನಮ್ಮ ಮೈ ಮೇಲೆ ಯಾಕೆ ಹಿಂಗೆ ಕಪ್ಪು ಮಚ್ಚೆಗಳು?’ ಅದಕ್ಕೆ ಉತ್ತರವಾಗಿ ಅಮ್ಮ ಹೇಳಿದ್ದು, ನಿನ್ನ ಮೈ ಮೇಲೆ ಎಷ್ಟು ಮಚ್ಚೆಗಳಿರುತ್ತವೋ ಅಷ್ಟು ಜನ ನಿನಗೆ ಸ್ನೇಹಿತರಿರುತ್ತಾರೆ ಎಂದು. ತಕ್ಷಣ ನಾನು ಸಹ ಅವುಗಳ ಎಣಿಸಿ, ನನಗಿದ್ದ ಸ್ನೇಹಿತರ ಸಂಖ್ಯೆಗೆ ಹೋಲಿಸಿ ಪರೀಕ್ಷಿಸಿದ್ದುಂಟು. ಹಾಗೂ ಆ ವಿಷಯವನ್ನು ನಾನೇ ಕಂಡು ಹಿಡಿದ ಹೊಸ ಸಂಶೋಧನೆಯಂತೆ ಶಾಲೆಗೆ ಹೋಗಿ ನನ್ನ ಎಲ್ಲಾ ಸ್ನೇಹಿತರಿಗೆ ಈ ವಿಷಯವನ್ನು ಹೇಳಿ ಅವರೂ ಸಹ ತಮ್ಮ ತಮ್ಮ ಮಚ್ಚೆಗಳನ್ನು ಎಣಿಸಿಕೊಳ್ಳುವಂತೆ ಹೇಳಿದ್ದುಂಟು. ಎಲ್ಲರ ಚಿಕ್ಕಂದಿನ ವಿಜ್ಞಾನಿ ಅಮ್ಮಂದಿರೆ ಅಲ್ಲವೇ? ಅದಕ್ಕಾಗಿ ಅವರು ಹೇಳಿದ್ದೆಲ್ಲಾ ನಮಗೆ ವೇದವಾಕ್ಯ.

ಆದರೆ ಆ ದಿನಗಳ, ಆ ನೆನಪುಗಳ ಸೋಲಿಸುವ ಅನುಭವಗಳು ನಾವು ಬೆಳೆದಂತೆ ಜರುಗುವುದು ವಿರಳಾತಿವಿರಳ ಅಥವಾ ಇಲ್ಲವೆಂದರೆ ಅತಿಶಯವಾಗದು. ಅದಕ್ಕಾಗಿಯೇ ಯಾರೇ ಆಗಲಿ ಹಾಗೆ ಕಣ್ಮುಚ್ಚಿ ಒಮ್ಮೆ ತಮ್ಮ ಬಾಲ್ಯವ ನೆನೆದ ಕೂಡಲೇ ತಮಗರಿಯದಂತೆ ಮುಗುಳುನಗೆಯೊಂದು ಮೊಗದಲ್ಲಿ ಅರಳುತ್ತದೆ. ಬೇಕಾದರೆ ಒಮ್ಮೆ ಪರೀಕ್ಷಿಸಿ ನೋಡಿ.

ಆದರೆ ಅಮ್ಮನಿಗೆ ಈ ಮೇಲೆ ಕೇಳಿದ ಪ್ರಶ್ನೆಗೆ ಈಗ ಉತ್ತರ ಹುಡುಕಿದರೆ ಹಲವು ವೈಜ್ಞಾನಿಕ ವಿಚಾರಗಳು ತಿಳಿದು ಬರುತ್ತದೆ. ಹಿಂದಿನ ತಿಂಗಳುಗಳಲ್ಲಿ ನಡೆದ ಸಂಶೋಧನೆಯಲ್ಲಿ ವಿಜ್ಞಾನಿಗಳು ಹೇಳುತ್ತಾರೆ, ಜಿರಾಫೆಗೆ ತಮ್ಮ ಮೈ ಮೇಲಿನ ಮಚ್ಚೆಗಳು ತಮ್ಮ ತಂದೆಯಿಂದ ಅಲ್ಲದೆ ಕೇವಲ ತಾಯಿಯಿಂದ ಪಾರಂಪರಿಕ ಗುಣವಾಗಿ ಬರುತ್ತದೆ ಎಂದು ಕಂಡುಹಿಡಿದಿದ್ದಾರೆ. ಮನುಷ್ಯರಲ್ಲಿ ಹೊಸದಾಗಿ ಹುಟ್ಟಿದ ಮಗುವಿಗೆ ನಾವು ಹೇಳುವ ಹಾಗೆ ಮೂಗು ಅಪ್ಪನ ಹೋಲುತ್ತದೆ, ಕಣ್ಣು ಅಮ್ಮನನ್ನು ಹೋಲುತ್ತದೆ ಎನ್ನುತ್ತೇವೆ. ಜಿರಾಫೆ ಮರಿಗಳಿಗೆ ಹೀಗೆ ಹೇಳುವಾಗ ಎಚ್ಚರ, ಮಗುವಿನ ಮಚ್ಚೆಗಳು ಯಾವಾಗಲೂ ಅವರ ತಾಯಿಯನ್ನೇ ಹೋಲುತ್ತವೆ, ತಂದೆಯನ್ನಲ್ಲ.

ವಿಷಯ ಇಷ್ಟೇ ಆದರೆ ಮಜವೇನಿದೆ ಹೇಳಿ?

ಅರೇ… ಬೇಸರವಾಗಬೇಡಿ ಖಂಡಿತ ವಿಷಯ ಇಲ್ಲಿಗೆ ಮುಗಿದಿಲ್ಲ. ಈಗ ನಾ ಹೇಳುವ ವಿಷಯ ಅಚ್ಚರಿಯೆನಿಸಿದರು ನಿಜವಾದದ್ದು. ಜಿರಾಫೆಯ ಮರಿಗಳಿಗೆ ತನ್ನ ತಾಯಿಯಿಂದ ಬಳುವಳಿಯಾಗಿ ಬಂದ ಈ ಮಚ್ಚೆಗಳು ಆ ಮರಿಗಳ ಅಳಿವು-ಉಳಿವಿನ ಭವಿಷ್ಯವನ್ನು ಸಹ ಹೇಳುತ್ತವೆಯಂತೆ. ಜಿರಾಫೆಯನ್ನು ಕೇವಲ ಉದ್ದ ಕತ್ತಿನ ದೈತ್ಯವೆಂದು ತಿಳಿದು ಉದ್ಯಾನವನಗಳಲ್ಲಿ ಕಂಡು ಮುಂದೆ ಸಾಗುವ ನಮಗೆ ಈ ವಿಷಯ ಹೊಚ್ಚ ಹೊಸದಲ್ಲವೇ? ಒಂದು ನಿಮಿಷ. ನಾನು ಈ ಮೇಲೆ ಹೇಳಿದ ವಿಷಯ ನಿಜವೆಂದು ಹೇಗೆ ನಂಬುತ್ತೀರಿ? ನೋಡಿ ಇತ್ತೀಚೆಗೆ ನಿಮ್ಮ ಪ್ರಶ್ನೆ ಮಾಡುವ ಮನೋಭಾವ ಕಡಿಮೆಯಾಗಿಬಿಟ್ಟಿದೆ. ಆದರೂ ಪರವಾಗಿಲ್ಲ ನಾನೇ ಹೇಳುತ್ತೇನೆ ಕೇಳಿ, ವೈಲ್ಡ್ ನೇಚರ್ ಇನ್ಸ್ಟಿಟ್ಯೂಟ್ ನ ವಿಜ್ಞಾನಿ ಡೆರೆಕ್ ಲೀ ಮತ್ತು ಸಹೋದ್ಯೋಗಿಗಳು 31 ಜಿರಾಫೆ ಮತ್ತು ಅವುಗಳ ಮರಿಗಳ ಮೇಲೆ ನಡೆಸಿದ ಸಂಶೋಧನೆ ಪ್ರಕಾರ ಜಿರಾಫೆಯ ಹಾಗೂ ಅವುಗಳ ಮರಿಯ ಮಚ್ಚೆಗಳ ಫೋಟೋಗಳನ್ನು ಹೊಸ ತಂತ್ರಜ್ಞಾನದ ಪ್ರಯೋಜನದಿಂದ ಪರೀಕ್ಷಿಸಿ ವಿಶ್ಲೇಷಿಸಿದಾಗ ತಿಳಿದದ್ದು ಮರಿಗಳ ಮೈ ಮೇಲಿನ ಮಚ್ಚೆಯ ಆಕಾರ ಮತ್ತು ಮಚ್ಚೆಯ ಗಾತ್ರ ತನ್ನ ತಾಯಿಯಂತೆಯೇ ಇದೆಯೆಂದು. ಹಾಗೆಂದು ಪಕ್ಕಾ ಅಮ್ಮನ ಹಾಗೆಯೇ ಮಚ್ಚೆ ಅದೇ ಜಾಗದಲ್ಲಿ ಇತ್ತೆಂದು ಅಲ್ಲ, ಕೇವಲ ಆಕಾರಗಳು ಹಾಗೂ ಗಾತ್ರ ಹೋಲುತ್ತಿದ್ದವು ಎಂದು ಮಾತ್ರ. ಈ ಕೆಳಗಿನ ಚಿತ್ರ ನೋಡಿದರೆ ನಿಮಗೆ ತಿಳಿಯುತ್ತದೆ.

ಈ ಹಿಂದೆ ಜಿರಾಫೆ ಮತ್ತು ಇನ್ನಿತರ ಮಚ್ಚೆಗಳುಳ್ಳ ಹುಲಿ, ಜಿಂಕೆ, ಜೀಬ್ರ ಇತ್ಯಾದಿ ಪ್ರಾಣಿಗಳಿಗೆ ಈ ಮಚ್ಚೆಗಳು ತಮ್ಮ ಸುತ್ತಲಿನ ವಾತಾವರಣಕ್ಕೆ ಅನುಗುಣವಾಗಿಯೇ ಬರುತ್ತದೆ ಎಂದು ತಿಳಿದಿದ್ದರು. ಹಾಗೂ ಇವುಗಳಿಂದ ಆ ಜೀವಿಯು ತಮ್ಮ ಪ್ರಾಣ ಉಳಿಸಿಕೊಳ್ಳಲು ಅಥವಾ ಬೇಟೆಯಾಡಲು ಉಪಯೋಗವಾಗಿದೆ ಎಂದು ಮಾತ್ರ ತಿಳಿದಿದ್ದರು. ಜಿರಾಫೆಯ ಮಚ್ಚೆಯ ಬಗ್ಗೆ ಸಂಶೋಧನೆ ಶುರು ಮಾಡಿದ ಲೀ ಮತ್ತು ತಂಡಕ್ಕೆ ಇದರಲ್ಲಿ ಬೇರೆ ಏನೋ ವಿಷಯವಿದೆ ಎನಿಸಿ ಇದೆ ಸಂಶೋಧನೆಯನ್ನು ಮುಂದುವರೆಸಿದರು. ಆಗಲೇ ತಿಳಿದದ್ದು ಈ ಮಚ್ಚೆಗಳು ಮರಿಗಳ ಭವಿಷ್ಯ ನುಡಿಯಬಹುದಾದ ಆಕೃತಿಗಳೆಂದು. ಇದಕ್ಕಾಗಿ ಇವರು ಸಂಶೋಧನೆಯನ್ನು ಸ್ವಲ್ಪ ವಿಸ್ತರಿಸಿ ಸುಮಾರು 258 ಜಿರಾಫೆ ಮರಿಗಳ ಮಚ್ಚೆಯ ಫೋಟೋಗಳನ್ನು ವರುಷಕ್ಕೆ 6ರಂತೆ 2012 ರಿಂದ 2016ರ ವರೆಗೆ 4 ವರುಷಗಳ ಕಾಲ ಸಂಗ್ರಹಿಸಿ, ಮಚ್ಚೆಯ ಗಾತ್ರ, ಬಣ್ಣ, ಮಚ್ಚೆಯ ಗಡಿಯ ನುಣುಪು, ಇತ್ಯಾದಿ 11 ಗುಣಗಳನ್ನು ಗಣಕಯಂತ್ರ ಮತ್ತು ಗಣಿತದ ಸಹಾಯದಿಂದ ಅವುಗಳು ಹೇಳುವ ವಿಷಯವನ್ನು ತಿಳಿಯಲು ಸಾಹಸ ಮಾಡಿದರು. ಹೀಗೆ 4 ವರುಷಗಳ ಕಾಲ ನಡೆಸಿದ ಪ್ರಯೋಗ, ಲೆಕ್ಕಾಚಾರಗಳ ಪ್ರತಿಫಲವಾಗಿ ಅವರಿಗೆ ತಿಳಿದದ್ದು ಇದು.

ಯಾವ ಜಿರಾಫೆ ಮರಿಗೆ ಕ್ರಮವಿಲ್ಲದ, ದಪ್ಪ ಗಾತ್ರದ, ಗಾಢ ಬಣ್ಣದ ಮಚ್ಚೆಗಳಿದ್ದವೋ ಅವುಗಳು ತಮ್ಮ ಬಾಲ್ಯದ ಮೊದಲ ಹಂತದ ಜೀವನವನ್ನು ಬೇರೆ ಮರಿಗಳಿಗಿಂತ ಹೆಚ್ಚು ಯಶಸ್ವಿಯಾಗಿ ಸಾಗಿಸಿ ಪ್ರಾಯವನ್ನು ಪಡೆಯುತ್ತಿದ್ದವಂತೆ. ಹಾಗೆಂದು ಕೇವಲ ಮಚ್ಚೆಗಳ ಮೇಲೆ ಜಿರಾಫೆಗಳ ಜೀವನ ಆಧಾರಿತವಾಗಿದೆ ಎಂದು ಹೇಳಲಾಗದು. ನಾವು ಕೇವಲ ನಮ್ಮ ಸಾಮರ್ಥ್ಯದಲ್ಲಿ ಹೊರಗಿನ ಗುಣಗಳನ್ನು ವೀಕ್ಷಿಸಿ ಹೇಳಿದ ವಿಷಯವಿದು. ಇದಕ್ಕೆ ಜಿರಾಫೆಗಳ ಡಿ‌ಎನ್‌ಏ(DNA)ಯನ್ನು ಪರೀಕ್ಷಿಸಿ-ಪ್ರಯೋಗಿಸಿದ ಫಲಿತಾಂಶ ನಮ್ಮ ಸಂಶೋಧನೆಗೆ ಊರುಗೋಲಾಗಿ ನಿಲ್ಲಬೇಕು. ನಾವು ಕೇವಲ ಮೇಲ್ಮೈಯ ಧೂಳನ್ನು ಕೊಡವಿದ್ದೇವೆ ಎನ್ನುತ್ತಾರೆ ಲೀ!.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.