ಮಹಾಗನಿ

ಮಹಾಗನಿ

ದಿನವೂ ಅಂಗಳವನ್ನು ಗುಡಿಸಿ, ರಂಗೋಲಿ ಹಾಕುವುದು ಮೊದಲಿನಿಂದಲೂ ಬಂದ ಅಭ್ಯಾಸ. ಆದರೆ, ಚಳಿಗಾಲದಲ್ಲಿ ಅಂಗಳ ಗುಡಿಸುವುದೆಂದರೆ ನನಗೆ ಸ್ವಲ್ಪ ಕಿರಿಕಿರಿ ಕಾರಣ, ಮರಗಳಿಂದ ಉದುರುವ ಎಲೆಗಳು. ನಮ್ಮ ಮನೆಯ ಮುಂದಿನ ಖಾಲಿ ಜಾಗದಲ್ಲಿ ಬಹಳಷ್ಟು ಮರಗಳಿರುವುದರಿಂದ ಉದುರುವ ಎಲೆಗಳ ಪ್ರಮಾಣವೂ ಅಧಿಕ. ಹಾಗೆ ಉದುರಿದ ಎಲೆಗಳು ಗಾಳಿಗೆ ಹಾರಿಬಂದು ನಮ್ಮ ಮನೆಯ ಗೇಟಿನ ಎದುರಿಗೆ ರಾಶಿ ರಾಶಿಯಾಗಿ ಬೀಳುತ್ತಿದ್ದವು. ಆಗ ನಮ್ಮ ಮನೆಯವರೆಲ್ಲರೂ ಸೇರಿ ಗೋಣಿಚೀಲದಲ್ಲಿ ತುಂಬಿ ಗೊಬ್ಬರ ಗುಂಡಿಯಲ್ಲಿ ಹಾಕಿ ಗೊಬ್ಬರ ಮಾಡುತ್ತಿದ್ದೆವು.

ಒಂದು ವೇಳೆ ಹಾಗೆ ಮಾಡದೆ, `ಒಂದುದಿನ ಅಂಗಳ ಗುಡಿಸುವುದು ಬಿಟ್ಟರೆ ಏನಾಯಿತು ಬಿಡು’ ಎಂಬ ಧೋರಣೆಯಿಂದ ಅಂಗಳ ಗುಡಿಸುವುದು ಬಿಟ್ಟರೆ ಸಾಯಂಕಾಲ ಆಗುವ ಹೊತ್ತಿಗೆ, ಉದುರಿದ ಎಲೆಗಳ ಮೇಲೆ ಕಾಲಿಟ್ಟು ಯಾರಾದರೂ ಜಾರಿ ಬೀಳುವುದು ಗ್ಯಾರಂಟಿ. ಅಷ್ಟೇ ಏಕೆ ದ್ವಿಚಕ್ರ ವಾಹನದವರಿಗೂ ಕೂಡ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಅರ್ಧ-ಮುಕ್ಕಾಲು ಇಂಚು ಎತ್ತರಕ್ಕೆ ಉದುರಿ ಬೀಳುವ ಎಲೆಗಳ ಮೇಲೆ ಕಾಲಿಟ್ಟರೆ ಜಾರುವುದಲ್ಲದೆ ಮತ್ತೇನಾದೀತು…. ಜೊತೆಗೆ, ಆ ಎಲೆಗಳಿಂದ ಏನನ್ನೋ ಹೆಕ್ಕಿಕೊಂಡು ಆಟವಾಡುವ ಶಾಲಾಮಕ್ಕಳ ಗಲಾಟೆ ಬೇರೆ. ಅವರನ್ನು ಗದರಿಸಿ ಮನೆಗೆ ಕಳಿಸುವುದೇ ಸಾಯಂಕಾಲದ ಕೆಲಸವಾಗುತ್ತದೆ. ಹಾಗೆ ಗದರಿಸಿದ್ದೂ ಉಂಟು. ಚಳಿಗಾಲದ ಒಂದು ಸಂಜೆ ಶಾಲೆಯಿಂದ ಮನೆಗೆ ಬಂದ ಮಗಳ ಕೈಯಲ್ಲಿ, ಸ್ವಲ್ಪ ಅಂಕುಡೊಂಕಾದ ಹೂವಿನ ಒಂದು ಪಕಳೆಯಂತಿದ್ದ ವಸ್ತುವಿತ್ತು. ಆಕೆ ಅದನ್ನು ಮೇಲಕ್ಕೆ ಹಾರಿಸುತ್ತಿದ್ದಳು.

ಅದು ಕೆಳಗೆ ನೆಲದ ಮೇಲೆ ತಿರುಗುತ್ತ ಬೀಳುವುದನ್ನು ನೋಡಿ ಚಪ್ಪಾಳೆತಟ್ಟುತ್ತ ಖುಷಿಪಡುತ್ತಿದ್ದಳು. `ಏ.. ಚಿನ್ನು ಏನದು?’ ಎಂದು ಕೇಳಿದೆ ಆಶ್ಚರ್ಯದಿಂದ. ಅದಕ್ಕವಳು `ಅಮ್ಮಾ ಹೆಲಿಕಾಪ್ಟರ್ ನೋಡು’ ಅಂದಳು. `ಎಲ್ಲಿ ಸಿಕ್ಕಿತು?’ ಎಂದೆ. ಅದಕ್ಕವಳು, `ನಮ್ಮ ಮನೆ ಮುಂದಿನ ಖಾಲಿ ಜಾಗದಲ್ಲಿ ಮರ ಇದೆಯಲ್ಲಮ್ಮ ಅದರ ಕೆಳಗೆ ಬಿದ್ದಿತ್ತು’ ಅಂದಳು. `ಯಾವ ಮರ?’ ಅಂದೆ. `ಹೆಲಿಕಾಪ್ಟರ್ ಮರ’ ಎಂದಳು ಮುಗ್ಧವಾಗಿ. ಅವಳು ಹೇಳಿದ `ಹೆಲಿಕಾಪ್ಟರ್’ ಮರದ ಹತ್ತಿರ ಹೋಗಿ ನೋಡಿದೆ. ದಿನವೂ ಸಾಯಂಕಾಲ ಎಲೆಗಳ ನಡುವಿನಿಂದ ಏನನ್ನೋ ಹೆಕ್ಕಿಕೊಂಡು `ಹೆಲಿಕಾಪ್ಟರ್’ ಆಟವಾಡುತ್ತಿದ್ದ ಶಾಲಾಮಕ್ಕಳ ನೆನಪಾಯಿತು. ಏಕೆಂದರೆ ನನ್ನ ಮಗಳ ಕೈಯಲ್ಲಿ ಇದ್ದಂತಹ ಸ್ವಲ್ಪ ಡೊಂಕಾದ ಹೂವಿನ ಪಕಳೆಯಂತಹವು ನೂರಾರು ಸಂಖ್ಯೆಯಲ್ಲಿ ಆ ಮರದ ಸುತ್ತಲೂ ಬಿದ್ದಿದ್ದವು. ಈ `ಹೆಲಿಕಾಪ್ಟರ್’ ಮರದ ನಿಜವಾದ ಹೆಸರು ಏನಿರಬಹುದು ಎಂದು ಹುಡುಕುತ್ತಾ ಹೋದಾಗ ಗೊತ್ತಾಗಿದ್ದು ಇದು `ಮಹಾಗನಿ’ ಮರ ಎಂದು.

ಮಹಾಗನಿ ಮರವು ಮೂಲತಃ ಉತ್ತರ ಮತ್ತು ದಕ್ಷಿಣ ಅಮೆರಿಕಾ ಖಂಡಗಳಲ್ಲಿ ಕಂಡುಬರುತ್ತದೆ. ಇದು ವೆಸ್ಟ್ ಇಂಡೀಸ್ ದ್ವೀಪದ ಉಷ್ಣವಲಯದ ಕಾಡುಗಳಲ್ಲಿ ಬೆಳೆಯುವ ಮರವಾಗಿದೆ. ಇದು ಸುಮಾರು 60 ರಿಂದ 80 ಅಡಿ ಎತ್ತರ ಬೆಳೆಯುತ್ತದೆ. ಆದರೆ, ಇದರ ಹೂವುಗಳು ಸಣ್ಣದಾಗಿರುತ್ತವೆ. ಈ ಮರವು ಬಹಳಷ್ಟುಎಲೆಗಳನ್ನು ಉದುರಿಸುತ್ತದೆ. ಎಲೆಗಳು ಉದುರುವ ಸಮಯದಲ್ಲಿ ತಾಮ್ರದ ಬಣ್ಣಕ್ಕೆ ತಿರುಗಿರುತ್ತವೆ. ಎಲೆಗಳು ಉದುರಿ ಕೆಳಗೆ ಬಿದ್ದಾಗ ಮರದ ಸುತ್ತಲೂ ಕಾರ್ಪೆಟ್ ಹಾಸಿದಂತಿರುತ್ತದೆ. ಮಹಾಗನಿ ಮರದ ಕಾಯಿಯನ್ನು ಎರಡು ಹೋಳು ಮಾಡಿದಾಗ ಬಟ್ಟಲಿನ ಆಕಾರದಲ್ಲಿ ಕಾಣುತ್ತದೆ. ಕಾಯಿಯು ತಾನಾಗೆ ಒಡೆದು ತೆರೆದುಕೊಂಡಾಗ ಛತ್ರಿಯ ಹಾಗೆ ಗೋಚರಿಸುತ್ತದೆ.

ಆಕರ ಗ್ರಂಥಗಳು:
100 Beautiful Trees of India
Common Trees of India
Flowering trees of Bangalore,

ಲೇಖನ: ಪ್ರೇಮಾ ಶಿವಾನಂದ
          ಧಾರವಾಡ ಜಿಲ್ಲೆ.

Print Friendly, PDF & Email
Spread the love
error: Content is protected.