ಸೂಕ್ಷ್ಮಜೀವಿ ಜಗತ್ತು

ಸೂಕ್ಷ್ಮಜೀವಿ ಜಗತ್ತು

© Public

ಭಾಗ – ೨: ಸೂಕ್ಷ್ಮಜೀವಿಗಳ ಪರಿಚಯ

ಕಣ್ಣಿಗೆ ಕಾಣಿಸದ ಜೀವಿಗಳನ್ನು ಸೂಕ್ಷ್ಮಜೀವಿಗಳು ಎಂದು ಕರೆಯುತ್ತಾರೆ. ಅಂತಹ ಜೀವಿಗಳನ್ನು ಅಧ್ಯಯನ ಮಾಡಲು ಸೂಕ್ಷ್ಮದರ್ಶಕ ಯಂತ್ರದ ಅವಶ್ಯಕತೆಯಿರುತ್ತದೆ. ಆದರೆ ಕೆಲವು ಅಣಬೆಗಳು ಮತ್ತು ಪಾಚಿಗಳು ಬರೀ ಕಣ್ಣಿನಲ್ಲಿ ನೋಡಬಹುದಾದರೂ ಅವುಗಳನ್ನೂ ಸಹ ಸೂಕ್ಷ್ಮಜೀವಿಗಳ ಗುಂಪಿಗೆ ಸೇರಿಸಲಾಗಿದೆ. ಅವುಗಳ ಸರಳ ದೇಹ ರಚನೆಯೇ ಇದಕ್ಕೆ ಕಾರಣ.

ಜನಸಾಮಾನ್ಯರಿಗೆ ಪರಿಚಯವಿರುವ ಸೂಕ್ಷ್ಮಜೀವಿಗಳೆಂದರೆ ರೋಗಕಾರಕಗಳು ಮಾತ್ರ. ಆದರೆ ನಮ್ಮ ಭೂಮಿಯಲ್ಲಿರುವ ಕೋಟ್ಯಾಂತರ ಸೂಕ್ಷ್ಮಜೀವಿಗಳಲ್ಲಿ ಕೆಲವು ಮಾತ್ರ ಇತರ ಜೀವಿಗಳಲ್ಲಿ ರೋಗ ತರಿಸಿ ರೋಗಕಾರಕಗಳೆನ್ನಿಸಿಕೊಂಡಿವೆ.  ಹಲವಾರು ರೀತಿಯ ಸೂಕ್ಷ್ಮಜೀವಿಗಳು ಈ ಭೂಮಿಯಲ್ಲಿ ವಾಸಿಸುತ್ತಿವೆ. ಹೆಚ್ಚಿನ ಸೂಕ್ಷ್ಮಜೀವಿಗಳು ತುಂಬಾ ಸರಳವಾದ ಗುಣಲಕ್ಷಣಗಳ ದೇಹರಚನೆಯನ್ನು ಹೊಂದಿವೆ. ಅವುಗಳಲ್ಲಿ ಸಸ್ಯ ಮತ್ತು ಪ್ರಾಣಿಗಳಿಲ್ಲರಬಹುದಾದ ಸಂಕೀರ್ಣ ಅಂಗಾಂಗ ವ್ಯವಸ್ಥೆಯಿರುವುದಿಲ್ಲ. ಆದರೆ ಅವು ಬರಿಗಣ್ಣಿನಿಂದ ನೋಡಲು ಸಾಧ್ಯವಿರದೇಯಿದ್ದುದರಿಂದ ವಿವಿಧ ಕಾರ್ಯವಿಧಾನಗಳನ್ನು ಬಳಸಿ ಅವುಗಳ ಅಧ್ಯಯನ ನಡೆಸಲು ಸಾಧ್ಯ. ಸೂಕ್ಷ್ಮಜೀವಿಗಳು ಮಣ್ಣು, ನೀರು, ಗಾಳಿ ಅಲ್ಲದೆ ಸಸ್ಯ ಮತ್ತು ಪ್ರಾಣಿಗಳಲ್ಲಿ ಜೀವಿಸುತ್ತವೆ. ಕೆಲವು ಸೂಕ್ಷ್ಮಜೀವಿಗಳು ಪೂತಿಜೀವಿಗಳಾಗಿ (Saprophytes) ಮತ್ತೆ ಕೆಲವು ಪರಾವಲಂಬಿಗಳಾಗಿ (Parasites) ಜೀವಿಸುತ್ತವೆ. ಹಾಗಾಗಿ ಅವು ವಾಸಿಸುವ ಸ್ಥಳದಿಂದ ಅವುಗಳನ್ನು ಹೊರತೆಗೆದು ಪ್ರಯೋಗಶಾಲೆಯಲ್ಲಿ ಬೆಳೆಸಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ವೀಕ್ಷಿಸಲು ಅನುಕೂಲವಾಗುವಂತೆ ಅನೇಕ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ರೀತಿಯ ಸೂಕ್ಷ್ಮಜೀವಿಗಳ ಅಧ್ಯಯನವನ್ನು ಸೂಕ್ಷ್ಮಜೀವಿ ಶಾಸ್ತ್ರ ಅಥವಾ ಅಣುಜೀವಿ ಶಾಸ್ತ್ರ ಎಂದು ಕರೆಯುವರು.

ಸೂಕ್ಷ್ಮಜೀವಿಗಳ ವೈವಿಧ್ಯ

 ಸೂಕ್ಷ್ಮಜೀವಿಗಳಲ್ಲಿ ಅನನ್ಯ ವೈವಿಧ್ಯವಿದೆ (ಚಿತ್ರ-೧). ಕೆಲವು ಸೂಕ್ಷ್ಮಜೀವಿಗಳು ಸಸ್ಯಗಳಂತೆ ನಿರ್ದಿಷ್ಟ ಸ್ಥಳದಲ್ಲಿರಬಲ್ಲವು ಮತ್ತೆ ಕೆಲವು ಪ್ರಾಣಿಗಳಂತೆ ಓಡಾಡಬಲ್ಲವು. ಹಾಗಾಗಿ ಸೂಕ್ಷ್ಮಜೀವಿಗಳ ವರ್ಗೀಕರಣ ಒಂದು ಸಂಕೀರ್ಣ ವಿಷಯ. ಜೀವಕೋಶವಿರುವ ಎಲ್ಲಾ ಜೀವಿಗಳನ್ನು ಮೊದಲಿಗೆ ಎರಡು ಪ್ರಮುಖ ಗುಂಪುಗಳಾಗಿ ವಿಂಗಡಿಸಲಾಗಿದೆ. ಕೆಲವು ಏಕಕೋಶ ಜೀವಿಗಳಲ್ಲಿ ಸಂಪೂರ್ಣವಾಗಿ ರೂಪುಗೊಂಡ ಕೋಶಕೇಂದ್ರವಿರುವುದಿಲ್ಲ. ಅಂತಹ ಜೀವಿಗಳನ್ನು ಪ್ರೊಕ್ಯಾರಿಯೋಟ (Prokaryota) (ಪ್ರೊ ಎಂದರೆ ಪ್ರಾಚೀನ ಮತ್ತು ಕ್ಯಾರಿಯೋಟ ಎಂದರೆ ಕೋಶಕೇಂದ್ರ) ಎಂಬ ಗುಂಪಿಗೆ ಸೇರಿಸಲಾಗಿದೆ. ದಂಡಾಣುಗಳು (ಬ್ಯಾಕ್ಟಿರಿಯಾ) ಈ ಗುಂಪಿಗೆ ಸೇರುತ್ತವೆ. ಇನ್ನುಳಿದಂತೆ ಜೀವಕೋಶದಲ್ಲಿ ನಿಜವಾದ ವ್ಯವಸ್ಥಿತವಾಗಿ ರೂಪುಗೊಂಡ ಕೋಶಕೇಂದ್ರವಿರುವ ಜೀವಿಗಳನ್ನು ಯೂಕ್ಯಾರಿಯೋಟ (Eukaryota) (ಯೂ ಎಂದರೆ ನಿಜವಾದ, ಕ್ಯಾರಿಯೋಟ ಎಂದರೆ ಕೋಶಕೇಂದ್ರ) ಎಂಬ ಗುಂಪಿಗೆ ಸೇರಿಸಲಾಗಿದೆ. ಶಿಲೀಂಧ್ರಗಳು, ಶೈವಲಗಳು, ಕಲ್ಲು ಹೂಗಳು, ಸಸ್ಯಗಳು ಮತ್ತು ಪ್ರಾಣಿಗಳು ಈ ಗುಂಪಿನಲ್ಲಿವೆ. ಇವೆರಡು ಗುಂಪಿಗೂ ಸೇರದ ನಿರ್ಜೀವ ಕಣಗಳಾದ ವೈರಸ್, ವೈರಾಯ್ಡ್ ಮತ್ತು ಪ್ರಯಾನ್‌ಗಳೂ ಸಹ ರೋಗಕಾರಕಗಳಾಗಿ ಪ್ರತ್ಯೇಕ ಗುಂಪಿನಲ್ಲಿವೆ.

ಚಿತ್ರ ೧. ಸೂಕ್ಷ್ಮಜೀವಿ ಜಗತ್ತು

ಸೂಕ್ಷ್ಮಜೀವಿಗಳ ಅನ್ವೇಷಣೆ

© ಡಾ. ಎಸ್. ಶಿಶುಪಾಲ., ಚಿತ್ರ – ೨: ಸೂಕ್ಷ್ಮಜೀವಿ ಗಳ ವೈವಿಧ್ಯವನ್ನು ಲಿವಾನ್ ಹುಕ್ ಚಿತ್ರೀಕರಿಸಿದ ರೀತಿ.

 ಸೂಕ್ಷ್ಮಜೀವಿಗಳು ಬಹು ಪ್ರಾಚೀನ ಜೀವಿಗಳು. ಭೂಮಿಯಲ್ಲಿ ಮೊದಲು ವಿಕಾಸಗೊಂಡ ಜೀವಿಗಳು ಎಂದು ಈಗಾಗಲೇ ಮೊದಲ ಲೇಖನದಲ್ಲಿ ಓದಿದ್ದೀರಿ. ಆದರೆ ಅವುಗಳ ಅಧ್ಯಯನ ಮಾತ್ರ ಇತ್ತೀಚಿನದ್ದು. ಯಾಕೆಂದರೆ ಸೂಕ್ಷ್ಮಜೀವಿಗಳ ಇರುವಿಕೆಯ ಅನುಭವವಾಗಿದ್ದರೂ ಕಣ್ಣಿಗೆ ಕಾಣಿಸದೇ ಇದ್ದುದರಿಂದ ಅವುಗಳ ಅಧ್ಯಯನ ಸಾಧ್ಯವಾಗಿರಲಿಲ್ಲ. ನೆದರಲ್ಯಾಂಡ್ ದೇಶದ ಲಿವಾನ್‌ಹುಕ್ (1673) ಎಂಬ ಬಟ್ಟೆ ವ್ಯಾಪಾರಿ ತಾನು ಮಾರುತ್ತಿದ್ದ ಬಟ್ಟೆಯ ನೇಯ್ಗೆಯನ್ನು ಪರಿಶೀಲಿಸಲು ಮಸೂರಗಳನ್ನು (ಲೆನ್ಸ್ – ಭೂತಕನ್ನಡಿ) ಬಳಸುತ್ತಿದ್ದರು. ಕುತೂಹಲಕ್ಕಾಗಿ ಇವರು ಪೀನ ಮಸೂರ (Convex lens) ಗಳ ಜೋಡಣೆ ಮಾಡಿ ಸರಳ ಸೂಕ್ಷ್ಮದರ್ಶಕವನ್ನು ತಯಾರಿಸಿ, ಅದರ ಮೂಲಕ ದ್ರವ ಪದಾರ್ಥಗಳಾದ ಕೆರೆಯ ನೀರು, ಬಾಯಿಯಲ್ಲಿನ ಎಂಜಲು, ಮಲದ ದ್ರವ ಮುಂತಾದವುಗಳನ್ನು ವೀಕ್ಷಿಸಿದರು. ಆಶ್ಚರ್ಯವೆಂದರೆ ಅವರು ನೋಡಿದ ಮಾದರಿಗಳಲ್ಲಿ ಹಲವಾರು ತರಹದ ಜೀವಿಗಳು ಓಡಾಡುತ್ತಿದ್ದುದನ್ನು ಕಂಡರು. ಅವರು ತುಂಬಾ ಚಿಕ್ಕದಾಗಿದ್ದ ಈ ಜೀವಿಗಳನ್ನು ಅನಿಮಲ್‌ಕ್ಯೂಲ್ಸ್ (Animalcules – ಚಿಕ್ಕ ಪ್ರಾಣಿಗಳು) ಎಂದು ಕರೆದರು. ಒಬ್ಬ ಮಾನವನ ಬಾಯಿಯಲ್ಲಿ ಇರುವ ಇಂತಹ ಜೀವಿಗಳ ಸಂಖ್ಯೆ ಆ ದೇಶದ ಜನಸಂಖ್ಯೆಗಿಂತ ಹೆಚ್ಚು ಎಂಬುದನ್ನು ಪ್ರತಿಪಾದಿಸಿದರು. ಅವರು ತಮ್ಮ ವೀಕ್ಷಣೆಯ ಫಲಿತಾಂಶಗಳನ್ನು ರಾಯಲ್ ಸೊಸೈಟಿ ಆಫ್ ಲಂಡನ್‌ಗೆ ಪತ್ರಗಳನ್ನು ಬರೆದು ತಿಳಿಸಿದರು. ಇಂತಹ ಜೀವಿಗಳ ಚಿತ್ರಗಳನ್ನು ಸಹ ಬರೆದು ಪ್ರಕಟಪಡಿಸಿದರು (ಚಿತ್ರ-2). ಹೀಗಾಗಿ ಸೂಕ್ಷ್ಮಜೀವಿಗಳ ಅಧ್ಯಯನಕ್ಕೆ ಒಂದು ಬುನಾದಿಯನ್ನು ಹಾಕಿದರು. ನಂತರದ 200 ವರ್ಷಗಳಲ್ಲಿ ಕೆಲವೇ ಕೆಲವು ಸೂಕ್ಷ್ಮಜೀವಿಗಳನ್ನು ಸೂಕ್ಷ್ಮದರ್ಶಕದಲ್ಲಿ ನೋಡಲಾಯಿತಾದರೂ ಅನೇಕ ಸಂಶೋಧನೆಗಳು ಸೂಕ್ಷ್ಮಜೀವಿಗಳ ಜಗತ್ತನ್ನು ಎಲ್ಲರೂ ನಿಬ್ಬೆರಗಾಗಿ ನೋಡುವಂತೆ ಮಾಡಿತು. ಸೂಕ್ತ ಯಂತ್ರೋಪಕರಣಗಳಿಲ್ಲದೆ ಅವುಗಳ ಅಧ್ಯಯನ ಸಾಧ್ಯವಿರಲಿಲ್ಲ. ಮುಂದಿನ ಶತಮಾನದಲ್ಲಿ ಸೂಕ್ಷ್ಮಜೀವಿಗಳ ಇರುವಿಕೆ ಮತ್ತು ಕಾರ್ಯವನ್ನು ವಿವರವಾಗಿ ಅಧ್ಯಯನ ಮಾಡಲಾಯಿತು. ಸೂಕ್ಷ್ಮಜೀವಿಗಳ ಕೆಲವು ವಿಶೇಷತೆಗಳು.

ಸೂಕ್ಷ್ಮಜೀವಿಗಳ ಪ್ರಾಮುಖ್ಯತೆ

© Public

ಭೂಮಿಯಲ್ಲಿ ವಿಕಾಸಗೊಂಡ ಮೂಲ ಜೀವಿಗಳೇ ಸೂಕ್ಷ್ಮಜೀವಿಗಳು. ಅಂದರೆ ಅಗ್ನಿಗೋಳವಾಗಿದ್ದ ಭೂಮಿ ಜೀವಗೋಳವಾಗಿ ಬದಲಾದಾಗ ಮೊದಲು ಹುಟ್ಟಿದ ಜೀವಿಗಳಿವು. ಹಾಗಾಗಿ ಈಗಿರುವ ಎಲ್ಲಾ ಜೀವಿಗಳ ಪೂರ್ವಿಕರು ಹೌದು.

ಸಾಮಾನ್ಯವಾಗಿ ಬರೀ ಕಣ್ಣಿಗೆ ಕಾಣಿಸದ ಜೀವಿಗಳನ್ನು ಸೂಕ್ಷ್ಮಜೀವಿ ಗಳೆನ್ನುತ್ತಾರೆ. ಇವುಗಳನ್ನು ಸೂಕ್ಷ್ಮದರ್ಶಕ ಯಂತ್ರದಿಂದ ನೋಡಬಹುದು. ಗಾತ್ರದಲ್ಲಿ 0.2 ಮಿಮೀ. ಗಿಂತ ಸಣ್ಣಗಿರುವ ಜೀವಿಗಳನ್ನು ನಾವು ಬರೀ ಕಣ್ಣಿನಲ್ಲಿ ನೋಡಲಾಗುವುದಿಲ್ಲ (ಬಾಕ್ಸ್ -೧ ಮತ್ತು ಬಾಕ್ಸ್ -೨).

ಸೂಕ್ಷ್ಮಜೀವಿಗಳ ಸಮೂಹದಲ್ಲಿ ಜೀವಕೋಶವಿರುವ ದಂಡಾಣುಗಳು (ಬ್ಯಾಕ್ಟಿರಿಯಾ), ಶಿಲೀಂಧ್ರಗಳು (ಬೂಸ್ಟು), ಶೈವಲಗಳು (ಪಾಚಿ), ಆದಿಮ ಪ್ರಾಣಿ (ಪ್ರೊಟೊಜೋವ), ಕಲ್ಲು ಹೂಗಳು ಮತ್ತು ಸಣ್ಣ ಹುಳುಗಳನ್ನು ಸೇರಿಸಲಾಗಿದೆ. ಇವುಗಳಲ್ಲದೆ ಜೀವಿಗಳಲ್ಲಿ ಸೋಂಕು ಉಂಟು ಮಾಡುವ ಯಾವುದೇ ಜೀವಕೋಶವಿರದ ವೈರಸ್‌ಗಳು, ವೈರಾಯ್ಡ್ಗಳು ಮತ್ತು ಪ್ರಯಾನ್‌ಗಳನ್ನು ರೋಗಕಾರಕ ಕಣಗಳೆಂದು ವಿಂಗಡಿಸಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಅಧ್ಯಯನ ಮಾಡಲಾಗುವುದು (ಚಿತ್ರ -೧).

ಸೂಕ್ಷ್ಮಜೀವಿಗಳು ಸರ್ವಾಂತರಯಾಮಿಗಳು

ಮಣ್ಣು, ನೀರು, ಗಾಳಿ ಮಾತ್ರವಲ್ಲದೆ ಉಳಿದ ಜೀವಿಗಳಲ್ಲೂ ಸೂಕ್ಷ್ಮಜೀವಿಗಳನ್ನು ಕಾಣಬಹುದು. ಆಳ ಸಮುದ್ರದ ಬಿಸಿನೀರ ಚಿಲುಮೆಯಿಂದ ಹಿಡಿದು ಆರ್ಕ್ಟಿಕ್ ಪ್ರದೇಶದ ಮಂಜುಗಡ್ಡೆಯವರೆಗೆ, ತಿಗಣೆಯಿಂದ ಹಿಡಿದು ತಿಮಿಂಗಿಲಗಳ ತನಕ, ನಾಚಿಕೆ ಮುಳ್ಳಿನಿಂದ ಹಿಡಿದು ತೆಂಗಿನಮರದ ತನಕ ಅವುಗಳು ಜೀವಿಸುತ್ತಿವೆ. ಅವುಗಳಿಲ್ಲದ ಜಾಗವೇ ಇಲ್ಲ.

ಸಂಖ್ಯೆಯಲ್ಲಿಯೂ ಸೂಕ್ಷ್ಮಜೀವಿಗಳು ಅನನ್ಯ. ಭೂಮಿಯಲ್ಲಿರುವ ಸೂಕ್ಷ್ಮಜೀವಿಗಳ ಸಂಖ್ಯೆ ಉಳಿದ ಎಲ್ಲಾ ಜೀವಿಗಳ ಸಂಖ್ಯೆಗಿಂತ ಹೆಚ್ಚು. ಸೂಕ್ಷ್ಮಜೀವಿಗಳು ಭೂಮಿಯ ಪರಿಸರದ ಎಲ್ಲಾ ಜೀವಿಗಳಿಗೆ ಅವಶ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಹಾರ ಸರಪಳಿ ಮತ್ತು ಜೀವಜಾಲದಲ್ಲಿ ಪ್ರಮುಖವಾದವು. ಭೂಮಿಯಲ್ಲಿನ ಜೀವಿಗಳಲ್ಲಿರುವ ಶೇ.50 ರಷ್ಟು ಇಂಗಾಲವು (Carbon) ಮತ್ತು ಶೇ.90 ರಷ್ಟು ಸಾರಜನಕ (Nitrogen)ವು ಸೂಕ್ಷ್ಮಜೀವಿಗಳಲ್ಲಡಗಿವೆ. ಅವು ಪರಿಸರದ ಜೈವಿಕಭೂರಸಾಯನ ಚಕ್ರದ (Biogeochemical cycle) ಅವಿಭಾಜ್ಯ ಅಂಗವಾಗಿದ್ದು ಎಲ್ಲಾ ಜೀವಿಗಳ ಜೈವಿಕ ಕ್ರಿಯೆಗಳು ನಡೆಯುವ ರಾಸಾಯನಿಕ ಘಟಕಗಳನ್ನು ಒದಗಿಸುವಲ್ಲಿ ಬಹುಮುಖ್ಯ ಭೂಮಿಕೆ ನಿರ್ವಹಿಸುತ್ತವೆ. 

ನದಿ-ಸಮುದ್ರ, ಕೆರೆ-ತೊರೆಗಳಲ್ಲಿರುವ ಹಲವಾರು ಸೂಕ್ಷ್ಮಜೀವಿಗಳು ತಮ್ಮ ಜೀವಕೋಶಗಳಲ್ಲಿನ ಪತ್ರಹರಿತ್ತನ್ನು (Cholorophyll) ಉಪಯೋಗಿಸಿಕೊಂಡು ದ್ಯುತಿಸಂಶ್ಲೇಷಣೆ (Photosynthesis) ಕ್ರಿಯೆಯ ಮೂಲಕ ಭೂಮಿಯಲ್ಲಿನ ಇಂಗಾಲದ ಡೈ ಆಕ್ಸೈಡ್ ನ್ನು ಹೀರಿಕೊಂಡು ಆಮ್ಲಜನಕವನ್ನು ಉತ್ಪಾದಿಸಿ ವಾತಾವರಣಕ್ಕೆ ಬಿಡುಗಡೆಗೊಳಿಸುತ್ತವೆ. ವಿಶ್ವದಲ್ಲಿರುವ ಎಲ್ಲಾ ಸಸ್ಯಗಳಿಗಿಂತ ಹೆಚ್ಚು ಆಮ್ಲಜನಕ ನೀರಿನಲ್ಲಿರುವ ಸೂಕ್ಷ್ಮಜೀವಿಗಳಿಂದ ಬರುತ್ತದೆ. ಭೂಮಿಯ ಎಲ್ಲಾ ಸಸ್ಯಗಳು ಮತ್ತು ಪ್ರಾಣಿಗಳು ಆಮ್ಲಜನಕವಿಲ್ಲದೆ ಬದುಕಲಾರವು. ಸೂಕ್ಷ್ಮಜೀವಿಗಳಲ್ಲಿರುವ ವೈವಿಧ್ಯ ಉಳಿದೆಲ್ಲಾ ಜೀವಿಗಳಿಗಿಂತ ಅತೀ ಹೆಚ್ಚು. ಹಾಗಾಗಿ ಜೀವವೈವಿಧ್ಯದಲ್ಲಿ ಅಗ್ರಸ್ಥಾನ ಸೂಕ್ಷ್ಮಜೀವಿಗಳದ್ದು. ಮಾನವನಲ್ಲಿರುವ ಸೂಕ್ಷ್ಮಜೀವಿ ಸಮೂಹವು ಆತ ತಿಂದ ಆಹಾರವನ್ನು ಜೀರ್ಣಿಸಲು ಸಹಕಾರಿಯಲ್ಲದೆ, ಅವಶ್ಯವಿರುವ ವಿಟಮಿನ್-ಬಿ ಮತ್ತು ವಿಟಮಿನ್-ಕೆ ಗಳನ್ನು ಉತ್ಪಾದಿಸುತ್ತವೆ.

ಕೆಲವು ಸೂಕ್ಷ್ಮಜೀವಿಗಳು ಇತರೆ ಜೀವಿಗಳಲ್ಲಿ ಸೋಂಕನ್ನು ಉಂಟುಮಾಡಿ ರೋಗಗಳನ್ನು ತರುವುದರಿಂದ ರೋಗಕಾರಕಗಳೆನಿಸಿಕೊಳ್ಳುತ್ತವೆ. ಇವೂ ಸಹ ಭೂಮಿಯಲ್ಲಿ ಜೀವಿಗಳ ಸಂಖ್ಯೆಯನ್ನು ಹತೋಟಿಯಲ್ಲಿಡಲು ಅವಶ್ಯಕ. ಮಾನವ ಸಮಾಜ ಸೂಕ್ಷ್ಮಜೀವಿಗಳಿಂದ ಬರುವ ಉತ್ಪನ್ನಗಳ ಮೇಲೆ ಬಹುವಾಗಿ ಅವಲಂಬಿತವಾಗಿದೆ. ಸೂಕ್ಷ್ಮಜೀವಿಗಳನ್ನು ಬ್ರೆಡ್, ಚೀಸ್, ಪ್ರತಿಜೀವಕಗಳು, ಲಸಿಕೆಗಳು, ಜೀವಸತ್ವಗಳು, ಕಿಣ್ವಗಳು, ಆಲ್ಕೋಹಾಲ್-ಯುಕ್ತ ಪೇಯಗಳು, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ, ಆಹಾರ ಮುಂತಾದ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಆಧುನಿಕ ವಿಜ್ಞಾನದ ಶಾಖೆಯಾದ ಜೈವಿಕ ತಂತ್ರಜ್ಞಾನವು ಸೂಕ್ಷ್ಮಜೀವಿಗಳ ತಳಹದಿಯ ಮೇಲೆ ನಿಂತಿದೆ. ತಳಿ-ತಂತ್ರಜ್ಞಾನದಲ್ಲಿಯೂ ಸೂಕ್ಷ್ಮಜೀವಿಗಳು ಬಳಕೆಯಲ್ಲಿವೆ. ಬೇರೆ ಗ್ರಹಗಳಲ್ಲಿ ಜೀವಿಗಳು ಇರುವುದಾದರೆ ಅದು ಸೂಕ್ಷ್ಮಜೀವಿಗಳೇ ಆಗಿರುತ್ತವೆ ಎಂಬುದು ಬಾಹ್ಯಾಕಾಶ ವಿಜ್ಞಾನದಲ್ಲಿ ಜನಜನಿತವಾದ ವಿಚಾರ.

ಸೂಕ್ಷ್ಮಜೀವಿಗಳಿಲ್ಲದಿದ್ದಲ್ಲಿ ಹಾಲು ಮೊಸರಾಗುತ್ತಿರಲಿಲ್ಲ, ದೋಸೆಯಲ್ಲಿ ತೂತು ಬೀಳುತ್ತಿರಲಿಲ್ಲ, ಇಡ್ಲಿ ಮೃದುವಾಗುತ್ತಿರಲಿಲ್ಲ, ಬ್ರೆಡ್ ತಯಾರಾಗುತ್ತಿರಲಿಲ್ಲ, ಮದ್ಯಸಾರದ ಪಾನೀಯಗಳೇ ಇರದೇ ಮನುಷ್ಯರಲ್ಲಿ ಕಿಕ್ ಇರುತ್ತಿರಲಿಲ್ಲ, ಕೊಳೆಯುವಿಕೆ ಇಲ್ಲದೆ ಸಸ್ಯಗಳಿಗೆ ಬೇಕಾದ ಪೋಷಕಾಂಶಗಳು ಸಿಗುತ್ತಿರಲಿಲ್ಲ, ಸಸ್ಯಗಳನ್ನು ಅವಲಂಬಿಸಿ ಬದುಕುವ ಯಾವ ಜೀವಿಗಳು ಇರುತ್ತಿರಲಿಲ್ಲ. ಹಾಗಾಗಿ ಸಸ್ಯ ಮತ್ತು ಪ್ರಾಣಿಸಂಕುಲಗಳು ಸೂಕ್ಷ್ಮಜೀವಿಗಳಿಲ್ಲದೆ ಬದುಕಲಾರವು. ಒಟ್ಟಿನಲ್ಲಿ ಸೂಕ್ಷ್ಮಜೀವಿಗಳಿಲ್ಲದಿದ್ದರೆ ಯಾವುದೇ ಜೀವಿಯೂ ಜೀವಿಸಲಾಗದೆ ಭೂಮಿ ಜೀವಗೋಳವಾಗದೆ ಬರಡು ಭೂಮಿಯಾಗಿರುತ್ತಿತ್ತು.

ಬಾಕ್ಸ್ – ೧: ಗಾತ್ರಗಳ ಮಾಪನ

  • 1 ಮೀ. = 100 ಸೆಂಮೀ. (cm)
  • 1 ಸೆಂಮೀ. = 10 ಮಿಮೀ. (mm)
  • 1 ಮಿ.ಮೀ. = 1000 ಮೈಕ್ರೊಮೀಟರ್ (μm)
  • 1 ಮೈಕ್ರೊಮೀಟರ್ = 1000 ನ್ಯಾನೊಮೀಟರ್ (nm)
  • 1 ನ್ಯಾನೊಮೀಟರ್ = 10 ಆಂಗ್ಸ್ಟಾಮ್ (˚A)

ಬಾಕ್ಸ್ -೨: ಸೂಕ್ಷ್ಮಜೀವಿಗಳ ಗಾತ್ರ

  • ಮನುಷ್ಯ ಬರೀ ಕಣ್ಣಿನಲ್ಲಿ ಕೇವಲ 0.2 ಮಿಮೀ. ಗಿಂತ ದೊಡ್ಡ ವಸ್ತುಗಳನ್ನು ಮಾತ್ರ ನೋಡಲು ಸಾಧ್ಯ.
  • ಸೂಕ್ಷ್ಮಜೀವಿಗಳ ಗಾತ್ರವನ್ನು ಅಳೆಯುವ ಮೂಲಮಾನವೆಂದರೆ ಮೈಕ್ರೋಮೀಟರ್.
  • ಮೈಕ್ರೋಮೀಟರ್ ಅಂದರೆ ಒಂದು ಮೀಟರಿನ ದಶಲಕ್ಷ ಭಾಗಗಳಲ್ಲಿ ಒಂದು (10-6m). ದಂಡಾಣುಗಳು, ಶಿಲೀಂಧ್ರಗಳು ಮತ್ತು ಪಾಚಿಗಳು ಕೆಲವೇ ಮೈಕ್ರೋಮೀಟರ್ ಗಾತ್ರದಲ್ಲಿರುತ್ತವೆ.
  • ವೈರಸ್ಗಳನ್ನು ನ್ಯಾನೊಮೀಟರ್ (10-9m) ಗಳಲ್ಲಿ ಅಳೆಯುತ್ತಾರೆ.

ಬಾಕ್ಸ್ -೩: ಸೂಕ್ಷ್ಮಜೀವಿಗಳ ಶಕ್ತಿ

  • ಆನೆ, ಹುಲಿ, ಸಿಂಹಗಳಿಗೆ ಹೋಲಿಸಿದರೆ ಸೂಕ್ಷ್ಮಜೀವಿಗಳು ಶಕ್ತಿಯಲ್ಲಿ ಸರಿಸಾಟಿಯಲ್ಲ. ಆದರೆ ಅವು ಗುಂಪಾಗಿ ಎಂತಹ ಶಕ್ತಿಯುತ ಜೀವಿಯನ್ನಾದರೂ ಹೊಡೆದುರುಳಿಸಬಲ್ಲವು. ಇತರೆ ಎಲ್ಲಾ ಜೀವಿಗಳಿಗಿಂತ ಪ್ರಾಮುಖ್ಯತೆ ಪಡೆದಿವೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸೂಕ್ಷ್ಮಜೀವಿಗಳು ಸಾಬೀತುಪಡಿಸಿವೆ.
© Public

ಲೇಖನ: ಡಾ. ಎಸ್. ಶಿಶುಪಾಲ
                             ದಾವಣಗೆರೆ ಜಿಲ್ಲೆ

Print Friendly, PDF & Email
Spread the love
error: Content is protected.