“ಬುಲ್ ಬುಲ್” ಮಾತಾಡಕ್ಕಿಲ್ವಾ. ಹಾಡೇ ಹಾಡ್ತಾಳೆ!
© ರಘುಕುಮಾರ್ ಸಿ.
ಎಲ್ಲರ ಬೆಳಿಗ್ಗೆ ಶುರುವಾಗೋದು ಒಂದೊಂದ್ ತರ; ಅದರಲ್ಲೂ ನನ್ನದು ವಿಚಿತ್ರವೇ ಸರಿ. ಅಲಾರಾಂ ಸದ್ದಿಗೆ ಅಥವಾ ರೂಡಿಯಿಂದ ಏಳುವವರನ್ನು ನೋಡಿರ್ತೀರಿ. ಆದ್ರೆ ನಾನು ಎದ್ದೇಳೋದು ಮಾತ್ರ ನಮ್ಮ ‘ಮಿಂಚು’ ಕಿಟಕಿ ಹತ್ರ ಬಂದು ಹಾಡು ಹೇಳಿದಾಗ ಬಿಟ್ಟರೆ ನಮ್ಮ ಅಮ್ಮ ಜೋರಾಗಿ ನನ್ನ ಹೆಸ್ರು ಕೂಗಿದಾಗ ಮಾತ್ರ!
ಅಮ್ಮ ಓಕೇ ಆದ್ರೆ, ಈ ಮಿಂಚು ಯಾರು? ಅನ್ನೋದು ತಾನೇ ನಿಮ್ಮ ಡೌಟು?
ಹೇಳ್ತೀನಿ ಹೇಳ್ತೀನಿ …
ಮಿಂಚು; ಕೆಂಪು ಕಪೋಲದ ಪಿಕಳಾರ (Red whiskered bulbul) ಅಥವಾ ಇದನ್ನ ಕೆಮ್ಮೀಸೆ ಪಿಕಳಾರ ಅಂತಾನೂ ಕರೀತಾರೆ. ಇದು ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದು, ಇವುಗಳನ್ನು ಕಾಡುಗಳಲ್ಲಿ, ಉದ್ಯಾನವನಗಳಲ್ಲಿ, ಹೂದೋಟಗಳಲ್ಲಿ ಹೀಗೆ ಎಲ್ಲೆಡೆ ನೋಡಬಹುದು. ಈ ಹಕ್ಕಿಯು ಭಾರತದಾದ್ಯಂತ ಕಾಣಸಿಗುತ್ತದೆ. ಕರ್ನಾಟಕದಲ್ಲಿ ಈ ಜಾತಿಯಲ್ಲಿನ ಅನೇಕ ಪ್ರಭೇದಗಳು ಕಂಡು ಬರುತ್ತದೆ. ಕೆಂಪು ಕಪೋಲದ ಪಿಕಳಾರ/ಕೆಮ್ಮೀಸೆ ಪಿಕಳಾರ, ಕರಿ ಪಿಕಳಾರ, ಹಳದಿ ಕತ್ತಿನ ಪಿಕಳಾರ, ಬಿಳಿ ಹುಬ್ಬಿನ ಪಿಕಳಾರ ಹೀಗೆ ಇದರ ಪ್ರಭೇದಗಳು ನಗರದಲ್ಲಿನ ಹೂದೋಟಗಳಿಂದ ಹಿಡಿದು ಮಲೆನಾಡ ಕಾಡುಗಳವರೆಗೂ ವಿಸ್ತರಿಸಿವೆ.
ಈ ಕೆಂಪು ಕಪೋಲದ ಪಿಕಳಾರ 20 ಸೆಂಟಿ ಮೀಟರ್ ಗಾತ್ರವಿದ್ದು, ಕಪ್ಪು ಬಣ್ಣದ ಜುಟ್ಟು, ಬಿಳಿಯ ಎದೆ, ಕೆಂಪು ಬಣ್ಣದ ಗಲ್ಲ, ಕಂದು ಬಣ್ಣದ ಬೆನ್ನು ಮತ್ತು ಬಾಲ ಇದರ ಗುರುತಿನ ಚಿಹ್ನೆಗಳು.
ಇದು ಕೂಡ ಹೂವಿನ ಮಕರಂದ, ಹಣ್ಣು, ಕ್ರಿಮಿ-ಕೀಟಗಳನ್ನು ತನ್ನ ಆಹಾರಕ್ಕಾಗಿ ಅವಲಂಬಿಸಿದೆ. ನಾನು ಆಗ್ಲೇ ಹೇಳಿದ ಹಾಗೆ ಹೂದೋಟದಲ್ಲಿ ಹೆಚ್ಚು ಕಾಣಬಹುದು. ಹಾಗೆ ನಮ್ಮ ಮನೆಯಲ್ಲಿನ ತೋಟದಲ್ಲಿಯೂ ಇವಳದ್ದೇ ದರ್ಬಾರು! ನಮ್ಮ ಮನೆಯ ದಾಸವಾಳ, ಮಲ್ಲಿಗೆ ಗಿಡಗಳಲ್ಲಿ ಹಾಗು ಸಪೋಟ ಮರದಲ್ಲಿ ಹೆಚ್ಚು ಸಮಯ ಕಳೆಯುತ್ತಾಳೆ.
ಇವು ಪೊದೆಗಳಲ್ಲಿ ನಾರು, ಹುಲ್ಲು, ಜೇಡರ ಬಲೆಗಳಿಂದ ಬಟ್ಟಲಿನಾಕಾರದಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಇದರ ಮೊಟ್ಟೆಗಳು ನೋಡಲು ಬಹು ಆಕರ್ಷಕ; ಮೊಟ್ಟೆಯ ಹೊರಭಾಗ ಪಿಂಕ್ ಬಣ್ಣದಲ್ಲಿದ್ದು, ಅದರ ಮೇಲೆ ಗಾಢವಾದ ಕೆಂಪು ಚುಕ್ಕಿಗಳನ್ನು ಕಾಣಬಹುದು.

ಈ ಕೆಮ್ಮೀಸೆ ಪಿಕಳಾಗಳು 2-3 ಮೊಟ್ಟೆಗಳನ್ನು ಇಟ್ಟು; 14 ದಿನಗಳವರೆಗೆ ಹೆಣ್ಣಾಗಲಿ ಗಂಡಾಗಲಿ ಅಥವಾ ಇಬ್ಬರು ಸೇರಿ ಕಾವು ಕೊಟ್ಟು ಸಲಹುತ್ತವೆ. 12-14 ದಿನಗಳ ಒಳಗೆ ಈ ಮರಿಗಳು ಮೊಟ್ಟೆಯಿಂದ ಆಚೆ ಬಂದು 14 – 18 ದಿನಗಳ ನಂತರ ಹಾರಲು ಶುರು ಮಾಡುತ್ತವೆ. ಈ ಮರಿಗಳನ್ನು ಇಬ್ಬರು ಪೋಷಕರು ಸಣ್ಣ ಹುಳುಗಳನ್ನು ಕೊಟ್ಟು ಬೆಳೆಸ್ತಾರೆ. ಕಾಲ ಕ್ರಮೇಣ ಹಣ್ಣುಗಳನ್ನು ಕೊಟ್ಟು ಸಲಹುತ್ತಾರೆ.
ಪಿಕಳಾರದ ಇನ್ನೊಂದು ವಿಶೇಷತೆ ಅಂದ್ರೆ ಇದು ಯಾವುದಾದರೂ ಬೇರೆ ಜೀವಿಗಳಿಂದ ತೊಂದರೆ ಇದೆ ಎಂದು ತಿಳಿದಾಗ ಸುಸ್ತಾಗಿರೋ ತರನೋ, ಇಲ್ಲಾ ಏನೋ ಆಗೋಗಿದೆ ಅನ್ನೋ ಹಾಗೆ ನೆಪ ಮಾಡ್ಕೊಂಡು ತಪ್ಪಿಸಿಕೊಳ್ಳುತ್ತೆ. ಎಷ್ಟು ಕಿಲಾಡಿ ಅಲ್ವಾ ನಮ್ ‘ಮಿಂಚು’!
ಬೆಳಿಗ್ಗೆ ಆದ್ರೆ ಸಾಕು ಶಿಳ್ಳೆ ಹೊಡ್ಕೊಂಡು, ಹಾಡು ಹೇಳ್ಕೊಂಡು ಕಿಟಕಿ ಹತ್ರ ಬಂದ್ಲು ಅಂದ್ರೆ ಎದ್ದೇಳ್ಬೇಕು ಅಷ್ಟೇ. ಹಾಗೆ ಕಾಟ ಕೊಡ್ತಾಳೆ. ನೋಡಿ ಹೇಗಾಗಿದೆ ನನ್ ಪರಿಸ್ಥಿತಿ. ಮುಂಚೆ ನಮ್ ಅಮ್ಮಂಗೆ ಹೆದರಿಕೊಳ್ತಿದ್ದೆ ಈಗ ಇವಳಿಗೂ ಹೆದರಿಕೊಳ್ಳೋ ಹಾಗೆ ಆಗಿದೆ!


ಲೇಖನ: ಹರ್ಷಿತ ಪಿ. ಹನುಮಯ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆ




Amazing 🤩
ಬಹಳ ಚೆನ್ನಾಗಿದೆ
ಬಹಳ ಚೆನ್ನಾಗಿದೆ
ಚೆನ್ನಾಗಿ ಇದೆ
Very nice 🤗
ಒಳ್ಳೆಯ ಕಥೆ
ಕೀಪ್ ಇಟ್ ಅಪ್
ತಮ್ಮ ಪ್ರೋತ್ಸಾಹದ ಮಾತುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. 🙏
ಕಾನನ ಮಾಸಪತ್ರಿಕೆಯ ಇತರ ಲೇಖನಗಳನ್ನೂ ಓದಿ, ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಪ್ರಕೃತಿ, ವನ್ಯಜೀವಿ, ಪರಿಸರ ಅಥವಾ ವಿಜ್ಞಾನಕ್ಕೆ ಸಂಬಂಧಿಸಿದ ನಿಮ್ಮ ಸ್ವಂತ ಲೇಖನಗಳಿದ್ದರೆ ಅವನ್ನೂ ಕಾನನಕ್ಕೆ ಕಳುಹಿಸಬಹುದು.
ಈ ಲೇಖನವನ್ನು ನಿಮ್ಮ ಸ್ನೇಹಿತರು ಮತ್ತು ಪ್ರಕೃತಿ ಆಸಕ್ತರೊಂದಿಗೆ ಹಂಚಿಕೊಳ್ಳುವ ಮೂಲಕ ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡಿ. 😊