ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಆಲದ ಮರ–ಬೇರುಗಳಿಂದ ಬೆಸೆದ ಪ್ರಕೃತಿಯ ಸಾಮ್ರಾಜ್ಯ

ಆಲದ ಮರ (Ficus benghalensis) ತನ್ನ ವೈಮಾನಿಕ ಬೇರುಗಳಿಂದ ಒಂದು ಪುಟ್ಟ ಕಾಡಿನಂತೆ ಹರಡುತ್ತದೆ. ಅದರ ಹೂಗಳು ಸೈಕೋನಿಯಂ ಒಳಗೆ ಬೆಳೆಯುತ್ತವೆ ಮತ್ತು ಪರಾಗಸ್ಪರ್ಶಕ್ಕೆ ವಿಶೇಷ ಕಡಜವನ್ನು ಅವಲಂಬಿಸಿವೆ. ಪಕ್ಷಿಗಳು, ಕೀಟಗಳು ಮತ್ತು ಜನರಿಗೆ ಆಶ್ರಯ ನೀಡುವ ಈ ಮರದ ಪರಿಸರ ಮತ್ತು ಸಾಂಸ್ಕೃತಿಕ ಮಹತ್ವವನ್ನು ಲೇಖನ ತಿಳಿಸುತ್ತದೆ.

    © ಧನುಷ್ ಆರ್. ಎಸ್.

ಆಲದ ಮರ
Banyan tree

Ficus benghalensis

ಹಳ್ಳಿಯ ಬಯಲಿನಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕೊಂಬೆಗಳು ನೆಲವನ್ನು ಅಪ್ಪಿಕೊಳ್ಳುವಂತೆ ಕೆಳಗಿಳಿಯುವ ಬೇರುಗಳು ಅದರ ತಂಪಾದ ನೆರಳಿನಲ್ಲಿ  ಕುಳಿತು ವಿಶ್ರಾಂತಿ ಪಡೆಯುವ ಜನರು ಇವೆಲ್ಲವನ್ನು ನೋಡಿದಾಗ ನಮ್ಮ ನೆನಪಿಗೆ ಬರುವ ಮರವೆಂದರೆ ಅದುವೇ ಆಲದ ಮರ.

ಇದು ಕೇವಲ ಒಂದು ಮರವಲ್ಲ ಪ್ರಕೃತಿ, ಸಂಸ್ಕೃತಿ ಮತ್ತು ಜೀವ ವೈವಿಧ್ಯದೊಂದಿಗೆ ಬೆಸೆದುಕೊಂಡಿರುವ ಅದ್ಭುತ ಜೀವಂತ ಪ್ರಪಂಚ. Moraceae ಕುಟುಂಬಕ್ಕೆ ಸೇರಿದ ಈ ದೊಡ್ಡ ಗಾತ್ರದ ಮರದ ವೈಜ್ಞಾನಿಕ ಹೆಸರು Ficus benghalensis. ಭಾರತ ಉಪಖಂಡದ ಅನೇಕ ಭಾಗಗಳಲ್ಲಿ ಕಂಡು ಬರುವ ಈ ಮರವು ಉಷ್ಣವಲಯದ ಹವಾಮಾನದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ತನ್ನ ವಿಶಾಲವಾದ ಹರಡುವಿಕೆ ಮತ್ತು ವಿಶಿಷ್ಟವಾದ ವೈಮಾನಿಕ ಬೇರುಗಳಿಂದಾಗಿ ಇದನ್ನು ಇತರೆ ಮರಗಳಿಗಿಂತಾ ಸುಲಭವಾಗಿ ಗುರುತಿಸಬಹುದು. ಮರದ ಅತ್ಯಂತ ಪ್ರಮುಖ ವೈಶಿಷ್ಟ್ಯವೆಂದರೆ ವೈಮಾನಿಕ ಬೇರುಗಳು ಅಂದರೆ aerial roots ಮರದ ಬೃಹತ್ ಕೊಂಬೆಗಳಿಂದ ತೆಳುವಾದ ಬೇರುಗಳು ಕೆಳಕ್ಕೆ ನೇತಾಡುತ್ತದೆ. ಅವು ನೆಲವನ್ನು ತಲುಪಿದ ನಂತರ ಮಣ್ಣಿನಲ್ಲಿ ಬೇರೂರಿ ಕ್ರಮೇಣ ಗಟ್ಟಿಯಾದ ಕಾಂಡಗಳಾಗಿ ಬೆಳೆಯುತ್ತವೆ.

ಹೀಗೆ ಒಂದು ಆಲದ ಮರವು ಕಾಲಕ್ರಮೇಣ ಅನೇಕ ಕಾಂಡಗಳನ್ನು ಹೊಂದಿದಂತೆ ಕಾಣುತ್ತದೆ. ಮರದ ವ್ಯಾಪ್ತಿ ಹೆಚ್ಚುತ್ತಾ ಹೋಗುತ್ತದೆ. ಇದೇ ಕಾರಣದಿಂದ ದೊಡ್ಡ ಆಲದ ಮರವನ್ನು ನೋಡಿದಾಗ ಅದು ಒಂದೇ ಮರವೇ ಅಥವಾ ಒಂದು ಪುಟ್ಟ ಕಾಡೇ ಎಂಬ ಅನುಮಾನ ಮೂಡಿಸುವಷ್ಟು ವಿಶಾಲವಾಗಿ ಹರಡಿಕೊಂಡಿರುತ್ತದೆ. ಈ ಮರದ ಎಲೆಗಳು ಸಾಮಾನ್ಯವಾಗಿ ದಪ್ಪ, ಅಗಲ ಮತ್ತು ಹಸಿರು ಬಣ್ಣದ್ದಾಗಿರುತ್ತದೆ. ಎಲೆಗಳು ಮರಕ್ಕೆ ದಟ್ಟವಾದ ಹೊದಿಕೆಯನ್ನು ನೀಡುವುದರಿಂದ ಅದರ ಕೆಳಗೆ ಉತ್ತಮ ನೆರಳು ದೊರೆಯುತ್ತದೆ. ಮರದ ಹೂವುಗಳು ಸಾಮಾನ್ಯ ಹೂವುಗಳಂತೆ ಹೊರಗೆ ಕಾಣಿಸುವುದಿಲ್ಲ. ಅವು Syconium ಎಂಬ ವಿಶೇಷ ರಚನೆಯ ಒಳಭಾಗದಲ್ಲಿ ಬೆಳೆಯುತ್ತದೆ. ಹೊರಗಿನಿಂದ ನಾವು ಕಾಣುವ ಅಂಜೂರದ ಹಣ್ಣಿನೊಳಗೆ ಅನೇಕ ಸಣ್ಣ ಹೂಗಳು ಇರುತ್ತವೆ. ಇದರ ಪರಾಗಸ್ಪರ್ಶದಲ್ಲೂ ಪ್ರಕೃತಿಯ ಒಂದು ವಿಶಿಷ್ಟ ಅದ್ಭುತ ಅಡಗಿದೆ. ವಿಶೇಷವಾದ fig wasp (Eupristina masoni) ಕಡಜದೊಂದಿಗೆ ಆಲದ ಮರಕ್ಕೆ ಪರಸ್ಪರ ಅವಲಂಬಿತ ಸಂಬಂಧವಿದೆ.

ಕಡಜವು ಹೂಗಳ ಪರಾಗಸ್ಪರ್ಶಕ್ಕೆ ನೆರವಾಗುತ್ತದೆ. ಮರದ ಸೈಕೋನಿಯo ಅದರ ಜೀವನ ಚಕ್ರಕ್ಕೆ ಸೂಕ್ತ ಸ್ಥಳ ಒದಗಿಸುತ್ತದೆ.

ಸಣ್ಣ ಬೀಜಗಳು ಗೋಡೆಗಳ ಬಿರುಕುಗಳಲ್ಲಿ, ಕಟ್ಟಡಗಳ ಸಂದುಗಳಲ್ಲಿ ಅಥವಾ ಬೇರೆ ಮರಗಳ ಕೊಂಬೆಗಳ ಸಂದುಗಳಲ್ಲಿ ಬಿದ್ದು ಮೊಳಕೆಯೊಡೆಯಬಹುದು. ವಿಶೇಷವಾಗಿ, ಬೀಜವು ಬೇರೆ ಮರದ ಮೇಲೆಯೇ ಮೊಳಕೆಯೊಡೆದು ಆರಂಭದಲ್ಲಿ ‘ಎಪಿಫೈಟ್‌’ (Epiphyte) ಆಗಿ ಬೆಳೆಯುತ್ತದೆ. ನಂತರ ಗಾಳಿಯಲ್ಲಿ ನೇತಾಡುವ ಬೇರುಗಳು ಕೆಳಕ್ಕೆ ಬೆಳೆಯುತ್ತಾ ನೆಲವನ್ನು ತಲುಪಿ, ದಪ್ಪವಾಗಿ ಬಲಿಷ್ಠ ಬೇರುಗಳಾಗಿ ರೂಪುಗೊಳ್ಳುತ್ತವೆ. ಹೀಗೆ ಆರಂಭದಲ್ಲಿ ಆಶ್ರಯ ಪಡೆದ ಮರದ ಮೇಲೆ ಬೆಳೆಯುವ ಸಣ್ಣ ಗಿಡವು ಕ್ರಮೇಣ ಸ್ವತಂತ್ರವಾಗಿ ಬೆಳೆಯುವ ದೊಡ್ಡ ಆಲದ ಮರವಾಗುತ್ತದೆ.

ಆಲದ ಮರವು ಅನೇಕ ಜೀವಿಗಳಿಗೆ ಆಶ್ರಯ ಮತ್ತು ಆಹಾರ ಒದಗಿಸುತ್ತದೆ. ಇದರ ಹಣ್ಣುಗಳನ್ನು ವಿವಿಧ ಪಕ್ಷಿಗಳು ಮತ್ತು ಸಣ್ಣ ಪ್ರಾಣಿಗಳು ತಿಂದು ಬೀಜಗಳನ್ನು ಬೇರೆ ಬೇರೆ ಸ್ಥಳಗಳಿಗೆ ಹರಡುವುದರಿಂದ ಮರದ ಬೀಜ ಪ್ರಸರಣಕ್ಕೂ ಸಹಾಯವಾಗುತ್ತದೆ.

ದಟ್ಟವಾದ ಕೊಂಬೆಗಳು ಮತ್ತು ಎಲೆಗಳ ನಡುವೆ ಅನೇಕ ಪಕ್ಷಿಗಳು ಗೂಡು ಕಟ್ಟುತ್ತವೆ. ಕೀಟಗಳು, ಸಣ್ಣ ಜೀವಿಗಳು ಮತ್ತು ವಿವಿಧ ಸೂಕ್ಷ್ಮ ಜೀವಿಗಳಿಗೂ ಈ ಮರವು ಒಂದು ಪ್ರಮುಖ ವಾಸ ಸ್ಥಳವಾಗಿದೆ; ಹೀಗಾಗಿ, ಒಂದು ದೊಡ್ಡ ಆಲದ ಮರವನ್ನು ಸಣ್ಣ ಪರಿಸರ ವ್ಯವಸ್ಥೆ ಎಂದೇ ಕರೆಯಬಹುದು.

© ಧನುಷ್ ಆರ್. ಎಸ್.
© ಧನುಷ್ ಆರ್. ಎಸ್.
© ಧನುಷ್ ಆರ್. ಎಸ್.

ಹಿಂದಿನ ಕಾಲದ ಹಳ್ಳಿಗಳಲ್ಲಿ ಆಲದ ಮರದ ಕೆಳಗೆ ಕಟ್ಟೆ ನಿರ್ಮಿಸಿ ಜನರು ವಿಶ್ರಾಂತಿ ಪಡೆಯುತ್ತಿದ್ದರು. ದಾರಿಹೋಕರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಇದರ ನೆರಳನ್ನು ಆಶ್ರಯಿಸುತ್ತಿದ್ದರು. ಗ್ರಾಮೀಣ ಜೀವನದಲ್ಲಿ ಈ ಮರವು ಜನರ ಭೇಟಿಯ ಸ್ಥಳವಾಗಿಯೂ, ಮಾತುಕತೆಯ ತಾಣವಾಗಿಯೂ ಮಹತ್ವ ಪಡೆದಿತ್ತು. ಇದರ ವಿಶಾಲವಾದ ಕೊಂಬೆಗಳು ಮತ್ತು ದಟ್ಟವಾದ ಎಲೆಗಳು ಬಿಸಿಲಿನ ತಾಪವನ್ನು ಕಡಿಮೆ ಮಾಡಿ ತಂಪಾದ ವಾತಾವರಣವನ್ನು ಸೃಷ್ಟಿಸುತ್ತದೆ. ನಗರೀಕರಣ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಇಂತಹ ದೊಡ್ಡ ಮರಗಳ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಆಲದ ಮರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ: ದೀರ್ಘಾಯುಷ್ಯ, ಸ್ಥಿರತೆ, ಶಕ್ತಿ ಮತ್ತು ಆಶ್ರಯದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಈ ಮರವನ್ನು ಪವಿತ್ರವೆಂದು ಭಾವಿಸಿ ಪೂಜಿಸಲಾಗುತ್ತದೆ. ಮರದ ವಿಶಾಲವಾದ ಬೇರುಗಳು ಮತ್ತು ನಿರಂತರವಾಗಿ ಬೆಳೆಯುವ ಸ್ವಭಾವವು ಜೀವನದ ನಿರಂತರತೆ ಮತ್ತು ಬಲವನ್ನು ಪ್ರತಿಬಿಂಬಿಸುತ್ತದೆ ಎಂಬ ನಂಬಿಕೆ ಇದೆ.

ಇಂದು ಪರಿಸರ ನಾಶ, ನಗರೀಕರಣ ಮತ್ತು ಮರಗಳ ಕಡಿಯುವಿಕೆಯಿಂದ ಅನೇಕ ಜೀವಿಗಳಿಗೆ ನೈಸರ್ಗಿಕ ವಾಸ ಸ್ಥಳಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ದೊಡ್ಡ ಆಲದ ಮರಗಳು ಜೀವ ವೈವಿಧ್ಯವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

  © ಧನುಷ್ ಆರ್. ಎಸ್.

ಒಂದು ಬೀಜದಿಂದ ಆರಂಭವಾಗುವ ಜೀವನ ಕೊಂಬೆಗಳಿಂದ ಕೆಳಗಿಳಿಯುವ ನೂರಾರು ಬೇರುಗಳ ಮೂಲಕ ನೆಲದೊಂದಿಗೆ ಬೆಸೆದುಕೊಂಡು ಕಾಲಕ್ರಮೇಣ ವಿಶಾಲವಾದ ಜೀವಂತ ಪ್ರಪಂಚವಾಗಿ ರೂಪಗೊಳ್ಳುತ್ತದೆ. ಆದ್ದರಿಂದ “ಆಲದ ಮರವನ್ನು ಕೇವಲ ಒಂದು ದೊಡ್ಡ ಮರ ಎಂದು ನೋಡುವುದಕ್ಕಿಂತ ಪ್ರಕೃತಿಯೊಂದಿಗೆ ಮನುಷ್ಯನ ಸಂಬಂಧವನ್ನು ಸಾರುವ ಜೀವಂತ ಪರಂಪರೆ” ಎಂದು ನೋಡುವುದು ಸೂಕ್ತ. ಅಷ್ಟೇ ಅಲ್ಲದೆ ಈ ಮರದ ನೆರಳು ಕೇವಲ ಬಿಸಿಲಿನಿಂದ ರಕ್ಷಿಸುವುದಲ್ಲ, ಅದರ ನೆರಳಿನಲ್ಲಿ ಪ್ರಕೃತಿಯ ಅನೇಕ ಜೀವಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತವೆ.

ಮತ್ತೊಂದು ವಿಶೇಷವೆಂದರೆ ಆಲದ ಮರವು ಕೀಸ್ಟೋನ್ ಪ್ರಭೇದಕ್ಕೆ ಸೇರಿರುವುದು. ಅದಕ್ಕೆ ಕಾರಣ:  ವರ್ಷದ ಬಹುಪಾಲು ಸಮಯ ಹಣ್ಣುಗಳನ್ನು ನೀಡುತ್ತದೆ. ಆಶ್ರಯ ತಾಣವಾಗಿ ಹಾಗೂ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಸಹಕಾರಿ. ಇಂಥ ಸಾಕಷ್ಟು ವಿಶಿಷ್ಠ ಅಂಶಗಳನ್ನು ಹೊಂದಿರುವ ಈ ಆಲದ ಮರವು ನಮ್ಮ ರಾಷ್ಟ್ರದ ಮರ ಎನ್ನುವ ಹೆಮ್ಮೆ ನಮಗೆ.

ಲೇಖನ:ಹರ್ಷಿತ ಪಿ. ಹನುಮಯ್ಯ
                     ಬೆಂಗಳೂರು ಗ್ರಾಮಾಂತರ ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *