ಸ್ಮಾರ್ಟ್ ಆದ ಫೋನು! ಮತ್ತೆ ನಾವು?
© ಧನರಾಜ್ ಎಂ.
‘ಫೋನ್ ಹೆಚ್ಚು ಬಳಸಬೇಡ!’ ಎಂದು ತಾಯಿ ಹೇಳಿದ್ದಕ್ಕೇ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ವಾರ್ತೆಯಲ್ಲಿ ನೋಡಿ, ‘ಏನ್ ಸ್ವಾಮಿ…’ ಫೋನ್ ಹೆಚ್ಚು ಬಳಸಬೇಡ ಅಂದಿದ್ದೇ ತಪ್ಪಾ?’ ಎಂಬ ಚಿಂತೆ ನನ್ನ ತಲೆಯೊಳಗೆ ಕೊರೆಯತೊಡಗಿತು. ಸ್ಮಾರ್ಟ್ ಫೋನುಗಳು ಬಂದದ್ದು ಹಾಗಿರಲಿ, ನಮ್ಮವರು ಎಷ್ಟರ ಮಟ್ಟಿಗೆ ಅದರ ದಾಸರಾಗಿದ್ದಾರೆ ಎಂದರೆ, ಇದರ ಬಳಕೆ ನಮ್ಮೆಲ್ಲರ ಕೈ ಮೀರಿ ಹೋಗುತ್ತಿದೆ ಎಂದು ತಿಳಿದರೂ ಅದನ್ನು ಎಷ್ಟೋ ಜನ ನಿಯಂತ್ರಿಸಿಕೊಳ್ಳಲಾಗದೆ, ಬದಲಾಯಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ನನ್ನ ಅನಿಸಿಕೆಯಲ್ಲಿ ಸ್ಮಾರ್ಟ್ ಫೋನುಗಳ ಬಳಕೆಯಲ್ಲಿರುವ ದೊಡ್ಡ ತೊಂದರೆ ಏನೆಂದರೆ, ಅದನ್ನು ಎಷ್ಟು ಸಮಯ ಬಳಸಬೇಕು? ಯಾವ ವಿಷಯಗಳಿಗಾಗಿ ಬಳಸಬೇಕು? ಏನನ್ನು ಬಳಸುವುದು ಉತ್ತಮವಲ್ಲ? ಎನ್ನುವ ಪ್ರಶ್ನೆಗಳಿಗೆ ಯಾರ ಬಳಿಯೂ ನಿಖರವಾದ, ಸ್ಪಷ್ಟ ಉತ್ತರವಿಲ್ಲ. ಉತ್ತರಿಸುವುದು ಅಷ್ಟು ಸುಲಭವೂ ಅಲ್ಲ ಬಿಡಿ! ಸಮಾಜದಲ್ಲಿನ ಎಲ್ಲಾ ವಯಸ್ಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಕಾರ್ಮಿಕರು ಹೀಗೆ ಹತ್ತು ಹಲವು ಬಗೆಯ ಕ್ಷೇತ್ರಗಳಲ್ಲಿ ಇದರ ಬಳಕೆಯಾಗುವುದರಿಂದ, ಹೀಗೇ ಮಾಡಬೇಕು ಎಂದು ಹೇಳುವುದು ಕಷ್ಟ. ಹಾಗೆಂದು ಈ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳುವ ಹಾಗೇ ಇಲ್ಲ. ಏಕೆಂದರೆ ಫೋನುಗಳ ಅತಿಯಾದ ಬಳಕೆಯಿಂದ ನಮ್ಮಲ್ಲಿ ದೈಹಿಕ ಮತ್ತು ಮಾನಸಿಕವಾಗಿ ದುಷ್ಪರಿಣಾಮಗಳು ಆಗುತ್ತಿವೆ ಎಂದು ಹಲವು ಸಂಶೋಧನೆಗಳು ಹೇಳುತ್ತಿವೆ. ಅದರಲ್ಲಿ ಒಂದು ಈಗ ನಾನು ಹೇಳಲು ಹೊರಟಿರುವ ಸಂಶೋಧನೆ. ಈ ಸಂಶೋಧನೆ ಪ್ರಕಾರ ಇಲ್ಲಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್ ಫೋನಿನ ಮಾಲೀಕರಾದಷ್ಟು ಅವರಲ್ಲಿ ಮಾನಸಿಕ ಖಿನ್ನತೆ ಉಂಟಾಗುವಿಕೆ, ದೇಹದ ತೂಕ ಹೆಚ್ಚುವಿಕೆ ಮತ್ತು ನಿದ್ರಾಹೀನತೆಗೆ ಒಳಗಾಗುತ್ತಿದ್ದಾರೆ ಎಂದು ಈ ಹೊಸ ಸಂಶೋಧನೆಯ ಅಂಕಿ-ಅಂಶಗಳು ಸೂಚಿಸುತ್ತಿವೆ. ಏನಿದು ಎಂದು ಇನ್ನೂ ಸ್ವಲ್ಪ ವಿವರವಾಗಿ ತಿಳಿಯೋಣ.

ಅಮೇರಿಕಾದಲ್ಲಿ ABCD Study (https://abcdstudy.org/) ಎನ್ನುವ ಒಂದು ಮಾಹಿತಿ ಸಂಗ್ರಹಣಾ ಮತ್ತು ಸಮೀಕ್ಷಾ ಸಂಸ್ಥೆಯಲ್ಲಿ ಇದ್ದ, 9 ವಯಸ್ಸಿನಿಂದ ಪ್ರೌಢ ವಯಸ್ಸಿನವರೆಗಿನ ಸುಮಾರು 10,000 ಮಕ್ಕಳ ಸ್ಮಾರ್ಟ್ ಫೋನ್ ಬಳಕೆಯ ಮಾಹಿತಿಯನ್ನು 21 ವಿವಿಧ ಪ್ರದೇಶಗಳಿಂದ ಕಲೆ ಹಾಕಲಾಯಿತು. ಅದರ ಪ್ರಕಾರ, 12ನೇ ವಯಸ್ಸಿಗೇ 60% ಕ್ಕಿಂತ ಹೆಚ್ಚು ಮಕ್ಕಳು ಫೋನುಗಳನ್ನು ಹೊಂದಿದ್ದರು. ಇವರಲ್ಲಿ ಸುಮಾರು 5.7% ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುವವರಿದ್ದರು. ಈ ಮಾನಸಿಕ ಖಿನ್ನತೆ ಕಣ್ಣಿಗೆ ಕಾಣದಿದ್ದರೂ ಮನುಷ್ಯನನ್ನು ಒಳಗಿನಿಂದ ಕುಗ್ಗಿಸುತ್ತದೆ. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಮಾರಕವೂ ಆಗಬಹುದು. ಹಾಗೇ ಈ ತರಹದ ಮಕ್ಕಳಲ್ಲಿ 16% ಮಕ್ಕಳ ದೇಹದ ತೂಕ, ಅರೋಗ್ಯವಾಗಿರುವವರ ದೇಹದ ತೂಕಕ್ಕಿಂತ ಹೆಚ್ಚಿತ್ತು. ಇದರಿಂದ ಹೃದಯ ಸಂಬಂಧಿ ಖಾಯಿಲೆಗಳು, ಮಧುಮೇಹಗಳಂತಹ ಖಾಯಿಲೆಗೆ ಎಡೆ ಮಾಡಿಕೊಡಬಹುದು. ಜೊತೆಗೆ ಈ ಮಕ್ಕಳು ಬೇರೆಯ ಮಕ್ಕಳಿಗಿಂತ ಸರಾಸರಿ 17 ನಿಮಿಷಗಳು ಕಡಿಮೆ ನಿದ್ದೆ ಮಾಡುತ್ತಿದ್ದರು. ಇದು ನೋಡಲು ಸಣ್ಣ ಸಂಖ್ಯೆ ಎನಿಸಿದರೂ ದೀರ್ಘಕಾಲದಲ್ಲಿ ಹಲವು ಅನಾರೋಗ್ಯಗಳಿಗೆ ಎಡೆ ಮಾಡಿಕೊಡಬಹುದು. ಇದೆಲ್ಲವನ್ನೂ ಅದೇ ಅಮೇರಿಕಾದ ಒಂದು ವಿಶ್ವವಿದ್ಯಾಲಯದ ಮಕ್ಕಳ ಮನೋತಜ್ಞ ರಾನ್ ಬಾರ್ಝಿಲೇ ಹೇಳುತ್ತಿದ್ದಾರೆ.
ಕ್ಸಿಯೋರನ್ ಸನ್ ಎಂಬ ಮನೋತಜ್ಞರು ಇದೇ ತರಹದ ಸಮೀಕ್ಷೆಯನ್ನು ಕಡಿಮೆ ಆದಾಯವಿರುವ ಸುಮಾರು 263 ಕುಟುಂಬಗಳಲ್ಲಿ ಮಾಡಿದಾಗ ಅವರಿಗೆ ಈ ಮೇಲೆ ಹೇಳಿದ ರೀತಿಯಲ್ಲಿ ಅವರ ಮಾನಸಿಕ ಅಥವಾ ದೈಹಿಕ ಆರೋಗ್ಯಗಳಲ್ಲಿ ಗಂಭೀರವಾದ ಬದಲಾವಣೆಗಳನ್ನು ಗಮನಿಸಿಲ್ಲ ಎನ್ನುತ್ತಾರೆ.

ಹಾಗಾದರೆ ಯಾರು ಸರಿ?
ಅವರ ಸಂಶೋಧನೆಗಳನ್ನು ಗಮನಿಸಿದರೆ, ಇಬ್ಬರೂ ಅಧ್ಯಯನ ನಡೆಸಿದ ವಿಧಾನಗಳಲ್ಲಿ ವ್ಯತ್ಯಾಸಗಳಿವೆ. ಆದ್ದರಿಂದ ಇದನ್ನು ಹೀಗೇ ಸರಿ ಎಂದು ಹೇಳಲಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಇದೆಲ್ಲವನ್ನು ನೋಡಿ ಸ್ಮಾರ್ಟ್ ಫೋನನ್ನು ಬಳಸಲೇಬಾರದೇ? ಹಾಗೇನಿಲ್ಲ. ಬದಲಿಗೆ ಬಳಸುವ ಸಮಯ, ವಿಧಾನ, ವಿಚಾರಗಳ ಮೇಲೆ ನಾವೂ ಹೆಚ್ಚಿನ ಸಂಶೋಧನೆ ಮಾಡಬೇಕಿದೆ ಎನ್ನುವುದು ಇಬ್ಬರ ಒಮ್ಮತ ಅಭಿಪ್ರಾಯ.
ಹಾಗಾದರೆ ಈ ನಿಟ್ಟಿನಲ್ಲಿ ನಾವೇನು ಮಾಡಬಹುದು?
• ಫೋನಿನ ಬಳಕೆಯ ಮೇಲೆ ನಿಗಾ ಇರಬೇಕು
• ಮಲಗುವ ಜಾಗ ಅಥವಾ ಸಮಯಗಳಲ್ಲಿ ಫೋನನ್ನು ದೂರವಿರಿಸುವುದು ಲೇಸು
• ನಿದ್ದೆಗೆ ಮತ್ತು ದೈಹಿಕ ಕಸರತ್ತುಗಳಿಗೆ ಹೆಚ್ಚಿನ ಸಮಯ ಮೀಸಲಿರಿಸುವುದು
ಇದು ತಜ್ಞರ ಕೆಲವು ಸಲಹೆಗಳು.
ಸಣ್ಣ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರ ಬೆನ್ನು ಹತ್ತಿರುವ ಈ ಬೇತಾಳಕ್ಕೆ ತಾಳ ಹಾಕಿ, ನಮಗೆ ಬೇಕೆನ್ನುವ ಹಾಗೆ ಕುಣಿಸುವ ಕುಶಲತೆ ನಮ್ಮಲ್ಲಿ ಹಲವರಿಗಿಲ್ಲ. ಆದ್ದರಿಂದಲೇ ಏನೋ ಅದು, ನಮ್ಮನ್ನು ಅದರ ತಾಳಕ್ಕೆ ತಕ್ಕಂತೆ ಕುಣಿಸುವುದು. ಹಾಗಾಗಿ ತಜ್ಞರ ಸಲಹೆ ಜೊತೆ ಜೊತೆಗೆ, ನಮ್ಮ ತಲೆಯಲ್ಲಿ ಈ ವಿಚಾರದ ಬಗ್ಗೆ ತುಸು ಸಮಯ ಖರ್ಚು ಮಾಡಿ ಯೋಚಿಸಿದರೆ ಉತ್ತರಗಳು ಉರುಳಿ ಬರುವುದರಲ್ಲಿ ಸಂಶಯವಿಲ್ಲ. ಫೋನುಗಳು ಸ್ಮಾರ್ಟ್ ಆದವು. ಈಗ ನಮ್ಮ ಮುಂದಿರುವ ಪ್ರಶ್ನೆ, …ನಾವು?

Source: www.snexplores.org

ಲೇಖನ: ಜೈಕುಮಾರ್ ಆರ್
ಬೆಂಗಳೂರು ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.



