ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕಕ್ಕೆ ಹೊಕ್ಕೆ ನನ್ನ ಮನದಾಳಕೆ

ವಸಂತದಲ್ಲಿ ಚಿನ್ನದ ಮಳೆಯಂತೆ ಅರಳುವ ಕಕ್ಕೆ ಮರ (Cassia fistula) ಪ್ರಕೃತಿಯ ಅದ್ಭುತ ಕೊಡುಗೆ. ವಿಷು ಕಣಿಯಾಗಿ ಪ್ರಸಿದ್ಧಿ ಪಡೆದ ಈ ಮರದ ಸೌಂದರ್ಯ, ಔಷಧೀಯ ಮಹತ್ವ, ಸಾಂಸ್ಕೃತಿಕ ನೆಲೆ ಹಾಗೂ ಒಬ್ಬ ಪ್ರಕೃತಿ ಪ್ರೇಮಿಯ ಮನದಾಳದ ಭಾವನೆಗಳನ್ನು ಈ ಲೇಖನದಲ್ಲಿ ಆನಂದಿಸಬಹುದು.
ಚಿನ್ನದ ಹೂಗಳಿಂದ ಅರಳಿರುವ ಕಕ್ಕೆ ಮರ (Cassia fistula)

ಕಕ್ಕೆ ಮರ
Golden shower

Cassia fistula

                    © ನಾಗೇಶ್ ಒ. ಎಸ್.

ಎಂಥಹ ಸ್ನಿಗ್ಧ ಸೌಂದರ್ಯ! ಮೃದು, ಮಧುರ,
ಕಣ್ಣಿಗೆ ಹಬ್ಬವನ್ನುಂಟು ಮಾಡುವ ಸುವರ್ಣ ವರ್ಣ,
ನವಿರಾದ ಪರಿಮಳ, ಸರಳ ಸಂಭ್ರಮದ ರಾಣಿ.
ಯಾರು ಈ ರಾಗಿಣಿ?

ವಿಷು ಕಣಿಯಾಗಿ ಬಳಸುವ ಕಕ್ಕೆ ಹೂಗಳು
    © ನಾಗೇಶ್ ಒ. ಎಸ್.

ಕೇವಲ ವಿಷು ಹಬ್ಬದ ಸಂಭ್ರಮದ ಆಚರಣೆಯ ಭಾಗವೇ ಇವಳು?
ಕೇವಲ ಅಲಂಕಾರದ ರೂಪಿಣಿಯೇ?
ಕೇವಲ ಸೂರಕ್ಕಿಗಳ ಒಡನಾಡಿಯೇ?
ಯಾರು ಈ ತರಂಗಿಣಿ?


ವಿಷು ಕಣಿ ಎಂದು ಪ್ರಸಿದ್ಧಿ ಪಡೆದಿರುವ ಈ ನಯನ ಮನೋಹರ ಹೊಂಬಣ್ಣದ ಹೂ ಸಾಧಾರಣವಾಗಿ ವಸಂತ ಮಾಸದಲ್ಲಿ ಮೈತುಂಬಿ ನಿಲ್ಲುತ್ತದೆ. ಗೊಂಚಲು ಗೊಂಚಲಾಗಿ ಬಿಡುವ ಇದರ ಹೂಗಳು ಸೂರಕ್ಕಿಯಂತಹ ಹಕ್ಕಿಯನ್ನು ಆಕರ್ಷಿಸುತ್ತದೆ.

ಕನ್ನಡದಲ್ಲಿ ಇದನ್ನು ಕಕ್ಕೆ ಮರ ಎನ್ನುತ್ತಾರೆ. ಔಷಧೀಯ ಗುಣದಲ್ಲಿ ಇದು ಎತ್ತಿದ್ದ ಕೈ. ಕೇರಳ ಹಾಗೂ ಕರಾವಳಿ ಭಾಗದಲ್ಲಿ ಈ ಹೂವನ್ನು ಸಮೃದ್ಧಿಯ ಸಂಕೇತ ಎಂದೇ ಭಾವಿಸುತ್ತಾರೆ. ಹೇಗೆ ಹೊಂಗೆ ಚಂದ್ರಮಾನ ಯುಗಾದಿಗೆ ಸ್ವಾಗತ ಕೋರುತ್ತದೋ ಹಾಗೇ ಸೌರಮಾನ ಯುಗಾದಿಗೆ ಕಕ್ಕೆ ಹೂ ಸ್ವಾಗತ ಕೋರುತ್ತದೆ.

ವಿಪರ್ಯಾಸವೆಂದರೆ ಹೊಂಗೆ ಹೂವಿನ ಗೊಂಚಲಲ್ಲಿ ಭೃಂಗದ ಸಂಗೀತ ಕೇಳಿ ಬರುತಿದೆ ಎಂದು ಹಾಡುವ ಹಾಗೆ ಕಕ್ಕೆ ಹೂವ ಗೊಂಚಲಲ್ಲಿ ಸಂಗೀತ ಬರುತಿದೆ ಎಂದು ಹಾಡಲಾಗುವುದಿಲ್ಲ. ಇದರ ಹೂಗಳು ಗೊಂಚಲಾಗಿ ಪೆಂಡ್ಯೂಲಮ್ ನಂತೆ ತೋರಬರುತ್ತವೆ. ಇಂಗ್ಲಿಷ್ ನಲ್ಲಿ ಇದನ್ನು ಗೋಲ್ಡನ್ ಶವರ್ ಎನ್ನುತ್ತಾರೆ. ಇದು ನಿಜವಾಗಿಯೂ ಕಣ್ಣು ತಣಿಸುವ ಹೊಂಬಣ್ಣದ ಮಳೆಯಂತೆ ಕಾಣುತ್ತದೆ.

ವಸಂತ ಋತುವಿನಲ್ಲಿ ಅರಳಿರುವ ಕಕ್ಕೆ ಮರ
    © ನಾಗೇಶ್ ಒ. ಎಸ್.

ನಾನು ಈ ಮರವನ್ನು ಮೊದಲ ಬಾರಿ ಕಂಡಿದ್ದು ನಾನು ಕೆಲಸ ಮಾಡುವ ಪ್ರಕ್ರಿಯಾ ಶಾಲೆಯಲ್ಲಿ. ಏಪ್ರಿಲ್ ತಿಂಗಳು ವಿಷು ಹಬ್ಬದ ಮುನ್ನ, ಇದ್ದಕ್ಕಿದ್ದಂತೆ ಅರಳಿ ನಿಂತ ಈ ಮರವನ್ನು ಮಾತನಾಡಿಸದೆ ಇರಲಾಗಲಿಲ್ಲ. ಪ್ರತೀ ವರುಷವು ಇದನ್ನು ನನ್ನ ಕ್ಯಾಮೆರಾದಲ್ಲಿ ಬಂಧಿಸಲು ಕಾಯುತ್ತಿರುತ್ತೇನೆ. ನನ್ನ ಊಹೆಗೂ ಮೀರಿ ಸಂತೋಷದಿಂದ ಸೂರ್ಯ ಹಾಗೂ ಸೂರಕ್ಕಿಯನ್ನು ಆದರದಿಂದ ಸ್ವಾಗತಿಸುತ್ತಾ ತನ್ನೆಲ್ಲಾ ಚೆಲುವಿನಿಂದ ಬೀಗುತ್ತಿರುತ್ತದೆ ಈ ಮರ. ಈ ನನ್ನ ಪ್ರೀತಿಯ ಮರಕ್ಕೆ ನನ್ನ ಎದೆಯಾಳದಿಂದ ಈ ಎರಡು ಸಾಲುಗಳು.

ಬಿರಿದು ಅರಳಿದ ಚಿನ್ನದ ಖಣಿ
ಹೌದಲ್ಲವೇ ನೀನು ಕೆಲವರಿಗೆ ಕಣಿ
ಅಪಾರ ಪ್ರಕೃತಿ ಪ್ರಿಯರ ಕಣ್ಮಣಿ
ಗುಣದಲ್ಲಿ ನೀನು ಅಗಣಿತ ಭವತಾರಿಣಿ
ಆರೋಗ್ಯಕೆ ನೀನು ಅಪರಿಮಿತ ಗಣಿ
ಸಮೃದ್ದಿಯ ಇರುವಿಕೆಗೆ ನೀ ಧಣಿ
ನಿನ್ನ ಒಲವಿಗೆ ನಾ ಸದಾ ಋಣಿ

ಲೇಖನ: ಮಂಜುಳಾ ರಾವ್
                     ಬೆಂಗಳೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.