ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕಾಡು ಹಳೆಯದಾದರೇನು, ನೋವು ನವ-ನವೀನ!

ಅಭಿವೃದ್ಧಿಯ ಹೆಸರಿನಲ್ಲಿ ಮಾನವ ಸೃಷ್ಟಿಸುತ್ತಿರುವ ವಾಯು, ನೀರು ಮತ್ತು ಮಣ್ಣಿನ ಮಾಲಿನ್ಯವು ಪರಿಸರ ಹಾಗೂ ವನ್ಯಜೀವಿಗಳಿಗೆ ಹೇಗೆ ಗಂಭೀರ ಹಾನಿ ಉಂಟುಮಾಡುತ್ತಿದೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ. ವಿಶೇಷವಾಗಿ ಪಟಾಕಿಗಳ ದುಷ್ಪರಿಣಾಮ, ಜೀವವೈವಿಧ್ಯದ ಸಂರಕ್ಷಣೆ ಮತ್ತು ಪರಿಸರದ ಬಗ್ಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯನ್ನು ಚಿಂತನೆಗೆ ಆಹ್ವಾನಿಸುತ್ತದೆ.
ಕಾಡಿನ ನೈಸರ್ಗಿಕ ದೃಶ್ಯ – ಪರಿಸರ ಸಂರಕ್ಷಣೆಯ ಮಹತ್ವ (Importance of forests)

           

© ಡಾ. ಅಶ್ವಥ ಕೆ. ಎನ್.

ಕಾಡು ಕೂಗುತ್ತಿದೆ, ನಾಡು ನಡುಗಿಸುತ್ತಿದೆ. ಇದಕ್ಕೆ ಮಾನವ ಜೀವಿಯ ಕೊಡುಗೆಗಳು ಅಗಣ್ಯ. ಯಾವ ರೀತಿ ನಾಡಿನಲ್ಲಿ ಇರುವ ಮಾನವ ಚಟುವಟಿಕೆಗಳ ಪರಿಣಾಮವಾಗಿ ಕಾಡುಗಳು, ವನ್ಯಜೀವಿಗಳು ಮತ್ತು ಪರಿಸರ ವ್ಯವಸ್ಥೆಗಳು ನವೀನ ಸವಾಲುಗಳನ್ನು ಎದುರಿಸುತ್ತಿವೆ.

ಶೂನ್ಯದಿಂದ ಯಾವುದನ್ನೂ ಸೃಷ್ಟಿಸಲು ಸಾಧ್ಯವಿಲ್ಲ ಎಂಬುದು ವೈಜ್ಞಾನಿಕ ಸತ್ಯ. ಅಂತೆಯೇ, ಭೂಮಿಯ ಮೊದಲ ವಾತಾವರಣವು ಮುಖ್ಯವಾಗಿ ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳಿಂದ ಕೂಡಿತ್ತು. ಆದರೆ, ಗುರುತ್ವಾಕರ್ಷಣ ಶಕ್ತಿಯ ಕೊರತೆ ಮತ್ತು ಸೂರ್ಯನ ಇಳಿಕೆಯ ಕಾರಣವಾಗಿ ಅವು ಬಹುತೇಕ ಅಂತರಿಕ್ಷಕ್ಕೆ ಹೊರಟು ಹೋದವು. ನಂತರ, ಭೂಮಿಯ ಒಳಭಾಗದಿಂದ ಹೊರಬಂದ ಜ್ವಾಲಾಮುಖಿಗಳ ಚಟುವಟಿಕೆಯಿಂದ ನೀರಾವಿ, ಕಾರ್ಬನ್ ಡೈ ಆಕ್ಸೈಡ್, ಅಮೋನಿಯಾ ಮತ್ತು ಮೀಥೇನ್ ಅನಿಲಗಳು ವಾಯುಮಂಡಲದಲ್ಲಿ ಹೆಚ್ಚಾದವು. ಈ ಆದಿಮ ವಾತಾವರಣದಲ್ಲಿ ಆಮ್ಲಜನಕ ಇಲ್ಲದೆ ಇದ್ದುದರಿಂದ, ಪ್ರಾಣಿಗಳು ಹಾಗೂ ಸಸ್ಯಗಳು ಜೀವ ಪಡೆಯಲು ಸಾಧ್ಯವಾಗಲಿಲ್ಲ. ಮುಂದೆ, ಸೂರ್ಯನ ಅತಿನೇರಳೆ ಕಿರಣಗಳು ಹಾಗೂ ಓಜೋನ್ ಪದರದ ಕೊರತೆಯಿಂದ, ಈ ಪರಿಸ್ಥಿತಿಯಲ್ಲಿ ಮೊದಲ ಏಕಾಣುಜೀವಿಗಳು ನೀರಿನಲ್ಲಿ ಮಾತ್ರ ಅಭಿವೃದ್ಧಿಯಾಗಲು ಅವಕಾಶ ದೊರಕಿತು. ನಂತರ, ಜೀವಿಗಳ ಬೆಳವಣಿಗೆಗೆ ಸೂಕ್ತವಾದ ಪರಿಸರ ಓಜೋನ್ ಪದರದ ರಚನೆಯಿಂದ, ಯೂವಿ-ಬಿ ಕಿರಣಗಳಿಂದ ರಕ್ಷಣೆ ದೊರಕಿತು. ಹೀಗೆ, ವಾತಾವರಣ ಮಾಡಿದ್ದ ಬದಲಾವಣೆಗಳು ಜೀವ ವರ್ಧನಕ್ಕೆ ಮತ್ತು ವಿಕಾಸ ಕ್ರಮಕ್ಕೆ ಅವಶ್ಯ ಅನುಕೂಲಗಳನ್ನು ಕಲ್ಪಿಸಿದವು. ಇದೆಲ್ಲ ನೆನ್ನೆ ಮೊನ್ನೆ ನಡೆದಿದ್ದಲ್ಲ; ಈ ಪ್ರಕ್ರಿಯೆಗಳು ಕೋಟ್ಯಂತರ ವರ್ಷಗಳ ಕಾಲ ನಡೆದು ಇಂದಿನ ಜೀವಸಂಕುಲಕ್ಕೆ ಅಡಿಪಾಯ ಹಾಕಿದೆ. ಇದು ತಾಳ್ಮೆಗೆ ಇರುವ ತಾಕತ್ತು. ಮಾನವ ಜೀವಿ ಕಾಣಿಸಿಕೊಂಡಿದ್ದೇ 3.15 ಲಕ್ಷ ವರ್ಷಗಳ ಹಿಂದೆ ಎನ್ನುತ್ತಾರೆ ವಿಜ್ಞಾನಿಗಳು. ಇದಕ್ಕೂ ಮುಂಚೆ ಪರಿಸರದಲ್ಲಿ ಎಷ್ಟೋ ಜೀವಿಗಳು ಬಂದಿವೆ, ಹೋಗಿವೆ; ಉಳಿದಿರುವುದು ಪರಿಸರ ಮಾತ್ರ. ಇದರ ಮುಂದೆ ಯಾರಿಂದಲೂ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ಮಾನವರಿಗೆ ಎಷ್ಟು ಉದಾರ ಮನಸ್ಸೆಂದರೆ, ಮತ್ತೊಂದು ಹೊಸ ರೀತಿಯ ಜೀವಿಗೆ ಅನುವು ಮಾಡಲೆಂದು ತಮ್ಮ ಇರುವಿಕೆಯನ್ನು ಭೂಮಿಯ ಚರಿತ್ರೆಯಿಂದ ಅಳಿಸಿಕೊಳ್ಳಲು ಮುಂದಾಗಿರುವುದು ಆತಂಕದ ಸಂಗತಿ!

ನೀರಿನ ಮಾಲಿನ್ಯ (Water pollution)

ಪ್ರಸ್ತುತ ಕಾಲಘಟ್ಟದಲ್ಲಿ ನಿಂತು ಗಮನಿಸಿದಾಗ, ಅಭಿವೃದ್ಧಿ ಎಂಬ ಪದವನ್ನು ತಪ್ಪಾಗಿ ವ್ಯಾಖ್ಯಾನಿಸಿಕೊಂಡು ಜೊಲ್ಲು ಸುರಿಸುತ್ತಾ ಕೆಲವರು ನೋಡುತ್ತಿದ್ದಾರೆ. ಇನ್ನೂ ಕೆಲವರು ಅದರ ಹಿಂದೆ ಓಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಸಾಧನೆಗಳನ್ನು ನೋಡಿದಾಗ, ರಾಸಾಯನಿಕ ಸಸ್ಯನಾಶಕ, ಕೀಟನಾಶಕ, ರಸಗೊಬ್ಬರಗಳಾದ – ನೈಟ್ರೇಟ್, ಫಾಸ್ಫೇಟ್, ಕೈಗಾರಿಕಾ ರಾಸಾಯನಿಕ ತ್ಯಾಜ್ಯ – ಭಾರೀ ಲೋಹಗಳು ಹಾಗೂ ಸಲ್ಪರ್ ಡಯಾಕ್ಸೈಡ್, ತೈಲಗಳು, ಅಮೋನಿಯಾಗಳು, ಕಾರ್ಬನಿಕ್ ಮತ್ತು ಅಕಾರ್ಬನಿಕ್ ಸಂಯುಕ್ತಗಳು, ಪ್ಯಾರಾಸಿಟಿಕ್ ಹುಳುಗಳು ಹಾಗೂ ಬ್ಯಾಕ್ಟೀರಿಯಾಗಳು-ಇದನ್ನೆಲ್ಲ ನೀರಿಗೆ ಬಿಟ್ಟು ಅದನ್ನೇ ದೇವರೆನ್ನುವ ನಮಗೆ ತಿಳಿಯಬೇಕಿದೆ; ‘ನೀರು’ ಭೂಮಿಯ ರಚನೆಯ ಪ್ರಾರಂಭದಲ್ಲಿ ಅಂದರೆ ಸುಮಾರು 46 ಕೋಟಿ ವರ್ಷಗಳ ಹಿಂದೆಯೇ ಸಂಭವಿಸಿತು. ಆದ ಕಾರಣ ಎಲ್ಲದಕ್ಕೂ ಇದೇ ಮೂಲವೆಂದು. ನೀರಿನ ಮಾಲಿನ್ಯ ಮತ್ತು ಅಸುರಕ್ಷಿತ ಕುಡಿಯುವ ನೀರಿನಿಂದ ಪ್ರತಿವರ್ಷ ಲಕ್ಷಾಂತರ ಜನರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ ಹಾಗೂ ಸಾವಿರಾರು ಸಾವುಗಳು ಸಂಭವಿಸುತ್ತವೆ. ಜೊತೆಗೆ ಪರಿಸರದ ಜೀವ ವೈವಿಧ್ಯತೆಗೆ ಹಾಗೂ ಪ್ರಾಣಿ ಸಂಕುಲಕ್ಕೂ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತಿರುವುದನ್ನು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

ಮಣ್ಣು ಮತ್ತು ಜೀವವೈವಿಧ್ಯವನ್ನು ತೋರಿಸುವ ನೈಸರ್ಗಿಕ ಪರಿಸರ

 ‘ಗಾಳಿಯ ಕಣಕಣದಲ್ಲೂ ಟಾಕ್ಸಿಕ್ ಸೂಕ್ಷ್ಮಾಣುಗಳ ಶಕ್ತಿ’ ಯನ್ನು ತುಂಬಿಸಿರುವುದು ಮಾನವ ಕುಲದ ಮತ್ತೊಂದು ಸಾಧನೆಯೇ ಸರಿ. ಇದಕ್ಕೆ ಮುಖ್ಯವಾಗಿ ಕಾರ್ಖಾನೆ ಮತ್ತು ವಾಹನಗಳಿಂದ ಹೊರಹೊಮ್ಮುವ ಅನಿಲಗಳು, ವಿಶೇಷವಾಗಿ ಗಂಧಕದ ಡೈ ಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಗಳು, ಕಾರ್ಬನ್ ಮಾನಾಕ್ಸೈಡ್ ಗಳು, ಜ್ವಾಲಾಮುಖಿ ಸ್ಫೋಟಗಳಿಂದ ಹಾಗೂ ಕೃಷಿ ಪ್ರಕ್ರಿಯೆಗಳಿಂದ ಮೀಥೇನ್ ಮತ್ತು ಅನೇಕ ಹೈಡ್ರೋಕಾರ್ಬನ್ ಅನಿಲಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತವೆ. ಇಷ್ಟೆಲ್ಲಾ ತಿಳಿದಿದ್ದರೂ ಪದೇ-ಪದೇ ತಮ್ಮ ಅಂತ್ಯವನ್ನು ಕಾಣಲು ಮುಂದಾಗಿರುವ ಎಲ್ಲರಿಗೂ ಅಭಿನಂದನೆಗಳು!

ಪಟಾಕಿಗಳ ಹೊಗೆಯಿಂದ ಉಂಟಾಗುವ ವಾಯು ಮಾಲಿನ್ಯ - Air pollution
© ಕಾಂತರಾಜ್ ಡಿ.

ಮತ್ತೊಂದು ತಮಾಷೆಯ ಸಂಗತಿ ಎಂದರೆ ದೇಶಗಳು ಎಂಬ ಪರಿಕಲ್ಪನೆಯಲ್ಲಿ ದೇಶವನ್ನು ಬೇರ್ಪಡಿಸಿ ದೇಶದ ಜನರ ಮೇಲೆ ಯಾರೂ ಆಕ್ರಮಣ ಮಾಡಬಾರದು, ರಕ್ಷಣೆಯಿಂದ ಬದುಕಬೇಕು ಎಂದು ಗಡಿಗಳನ್ನು ಎಳೆದು ಸೈನ್ಯವನ್ನು ಇರಿಸಲಾಗಿರುವುದು ಹೌದಲ್ಲವೇ? ಹಾಗಾದರೆ ಗಡಿಯ ಒಳಗಿರುವವರು ತಮಗೆ ತಾವೇ ಹಾನಿಯುಂಟು ಮಾಡಿಕೊಳ್ಳುತ್ತಿರುವುದು ಕಾಣುತ್ತಿಲ್ಲವೇ?

ಮಣ್ಣು ಮತ್ತು ಜೀವವೈವಿಧ್ಯವನ್ನು ತೋರಿಸುವ ನೈಸರ್ಗಿಕ ಪರಿಸರ
© ಗುರುಪ್ರಸಾದ್ ಕೆ. ಆರ್.

ಉದಾಹರಣೆಗೆ ಎಲ್ಲಾ ಧರ್ಮದಲ್ಲಿಯೂ ಹಬ್ಬಗಳು ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಎಲ್ಲದಕ್ಕೂ ಅವುಗಳದ್ದೇ ಆದ ಆಚರಣೆಗಳನ್ನು ಕಾಣಬಹುದು. ನಮ್ಮ ಪೂರ್ವಿಕರು ಇದನ್ನು ಮಾಡಿದ ಸಮಯದಲ್ಲಿ ಅವರ ಪರಿಕಲ್ಪನೆ ಬೇರೆಯೇ ಇದ್ದಿರಬಹುದು ಎನ್ನುವುದು ಸತ್ಯ, ಆದರೆ ಈಗ ಅದನ್ನು ಬೇರೆ ರೀತಿಯೇ ಅರ್ಥೈಸಿಕೊಂಡು ಆಚರಿಸುತ್ತಿರುವುದೂ ಸತ್ಯ. ಆಗ ಮನುಷ್ಯನ ಹಾಗೂ ಪರಿಸರದ ಮಧ್ಯೆ ಇರುವ ಸಂಬಂಧವನ್ನು ಗಟ್ಟಿಗೊಳಿಸಲು ಮಾಡಿದ ಆಚರಣೆಗಳು, ಈಗ ಅದನ್ನು ಮೆಟ್ಟಿ ನಿಲ್ಲಲು ಮಾಡುತ್ತಿರುವುದು ವಿಷಾದನೀಯ. ನೇರ ವಿಷಯಕ್ಕೆ ಬರುವುದಾದರೆ ಪಟಾಕಿಗಳ ಮೂಲಕ ಅನೇಕ ಧರ್ಮದವರು ಸಂಭ್ರಮಾಚರಣೆ ಮಾಡುವುದನ್ನು ನೋಡಿದ್ದೇವೆ. ಇದು ಯಾವ ಕಾರಣಕ್ಕೆ?

ಪಟಾಕಿಯಿಂದ ಆಗುವ ದುಷ್ಪರಿಣಾಮಗಳನ್ನು ನೋಡೋಣ…!

ವನ್ಯಜೀವಿಗಳ ಮೇಲೆ ಶಬ್ದ ಮಾಲಿನ್ಯದ ಪರಿಣಾಮ - Sound pollution

ಪಟಾಕಿ ಸಿಡಿತದಿಂದ ಕಾರ್ಬನ್ ಡಯಾಕ್ಸೈಡ್, ಕಾರ್ಬನ್ ಮೋನೋಕ್ಸೈಡ್, ನೈಟ್ರೋಜನ್ ಆಕ್ಸೈಡ್, ಗಂಧಕ ಡೈ ಆಕ್ಸೈಡ್ ಹಾಗೂ ಸೂಕ್ಷ್ಮ ಧೂಳಿನ ಕಣಗಳು ಬಿಡುಗಡೆ ಆಗುತ್ತವೆ. ಪಿ. ಎಂ. 2.5 ಅಂದರೆ 2.5 ಮೈಕ್ರೋಮೀಟರ್ ಗಾತ್ರದ ಸೂಕ್ಷ್ಮ ಕಣಗಳು ಹೆಚ್ಚಾಗಿ ಪಟಾಕಿ ಸಿಡಿತದ ಸಮಯದಲ್ಲಿ ಗಾಳಿಗೆ ಸೇರುತ್ತವೆ. ಇವು ನಮ್ಮ ಶ್ವಾಸನಾಳಗಳಲ್ಲಿ ನುಗ್ಗಿ ಹೃದಯ ಮತ್ತು ಶ್ವಾಸಕೋಶದ ರೋಗಗಳನ್ನು ಉಂಟುಮಾಡುವಲ್ಲಿ ಉತ್ತಮ ಕೆಲಸ ಮಾಡುತ್ತವೆ. ಮಾನವನ ಆರೋಗ್ಯ ಮತ್ತು ಸಮಾಜದ ಸುರಕ್ಷತೆಯು ಪಟಾಕಿಗಳಿಂದ ತೊಂದರೆಗೀಡಾಗುತ್ತದೆ. ವೈದ್ಯಕೀಯ ದಾಖಲೆಗಳು ಹೆಚ್ಚಾಗುತ್ತವೆ. ಇದರಿಂದ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಲಾಭ ಉಂಟಾಗುತ್ತದೆ. ಇದರಲ್ಲಿ ಅತಿ ಹೆಚ್ಚು ಬಾಧಿತರು ಮಕ್ಕಳು, ಹಿರಿಯರು ಮತ್ತು ಹೃದಯ ಸಂಬಂಧೀ ರೋಗಕ್ಕೆ ಒಳಗಾದವರು.

ಇತ್ತೀಚೆಗೆ ಪ್ರಕಟವಾದ ‘ಕೌಂಟ್‌ಡೌನ್ ಆನ್ ಹೆಲ್ತ್ ಅಂಡ್ ಕ್ಲೈಮೇಟ್ ಚೇಂಜ್’ ವರದಿಯು ಎಚ್ಚರಿಸುವ ಅಂಕಿಅಂಶಗಳನ್ನು ಹೊರಹಾಕಿದೆ. 2010ರೊಂದಿಗೆ ಹೋಲಿಸಿದರೆ, 2022ರ ವೇಳೆಗೆ ಮಾಲಿನ್ಯದಿಂದ ಸಂಭವಿಸುವ ಸಾವುಗಳು 38% ಏರಿಕೆಯಾಗಿವೆ. ಭಾರತದಲ್ಲಿ ಮಾತ್ರ 2022ರಲ್ಲಿ 17 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ 44% ಸಾವುಗಳಿಗೆ ಪಳೆಯುಳಿಕೆ ಇಂಧನಗಳ ಬಳಕೆ ಪ್ರಮುಖ ಕಾರಣವಾಗಿದೆ. ರಸ್ತೆ ಸಾರಿಗೆಯಲ್ಲಿ ಪೆಟ್ರೋಲ್ ಬಳಕೆಯಿಂದಲೇ ಸುಮಾರು 2.69 ಲಕ್ಷ ಸಾವುಗಳು ಸಂಭವಿಸಿವೆ (ಮೂಲ: Lancet Countdown on Health and Climate Change Report, 2025). ಅಭಿವೃದ್ಧಿಯ ಹೆಸರಿನಲ್ಲಿ ನಾವು ನಿರ್ಮಿಸುತ್ತಿರುವ ಈ ಮಾಲಿನ್ಯ, ನಿಜವಾಗಿ ನಮ್ಮ ಮೇಲೆಯೇ ನಾವು ನಡೆಸುತ್ತಿರುವ ಮೌನದ ದಾಳಿಯಾಗಿದೆ.

ಪಟಾಕಿಯ ಶಬ್ದ ಮತ್ತು ಬೆಳಕು ಪಕ್ಷಿಗಳು, ಪ್ರಾಣಿಗಳು ಮತ್ತು ಅಳಿವಿನಂಚಿನಲ್ಲಿರುವ ಜೀವಿಗಳಿಗೂ ಗಂಭೀರ ತೊಂದರೆ ಉಂಟುಮಾಡುತ್ತದೆ. ಜೋರಾದ ಶಬ್ದದ ಪರಿಣಾಮವಾಗಿ ಪಟಾಕಿಗಳ ತೀವ್ರ ಶಬ್ದ ಮತ್ತು ಬೆಳಕಿನಿಂದ ಪಕ್ಷಿಗಳು ದಿಕ್ಕುತಪ್ಪುವುದು, ಗೂಡುಗಳನ್ನು ಬಿಟ್ಟುಹೋಗುವುದು ಹಾಗೂ ಅಸಹಜ ವರ್ತನೆ ತೋರುವುದು ದಾಖಲಾಗಿದೆ. ಸಾಕುಪ್ರಾಣಿಗಳು ಭಯದಿಂದ ವಾಸ ಸ್ಥಳ ಬಿಟ್ಟು ಓಡಿ ಹೋಗುವುದು ಸಾಮಾನ್ಯ ಘಟನೆಯಾಗಿದೆ. ವನ್ಯಜೀವಿಗಳು ಪಟಾಕಿ ಶಬ್ದದಿಂದ ಉದ್ವಿಗ್ನಗೊಂಡು ಅಸಾಧಾರಣವಾಗಿ ನಡೆದುಕೊಳ್ಳುತ್ತವೆ, ಕೆಲವೊಮ್ಮೆ ಕೆಲವು ವನ್ಯಜೀವಿಗಳಲ್ಲಿ ಆತಂಕ ಹಾಗೂ ಅಸಹಜ ವರ್ತನೆ ಕಂಡುಬರುವ ಸಾಧ್ಯತೆ ಇದೆ. ಬಹಳ ಮುಖ್ಯವಾಗಿ ಪಟಾಕಿಯ ವಿಷಕಾರಿ ಪುಡಿಯು ಮಣ್ಣಿನೊಳಗೆ ಸೇರುವುದರಿಂದ, ಸಜೀವ ಮಣ್ಣು ನಿರ್ಜೀವವಾಗಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಮಣ್ಣು, ಭೂಮಿಯ ಮೇಲ್ಮೈಯಲ್ಲಿ ಉಂಟಾಗುವ ಪೆಡೊಜೆನೆಸಿಸ್ (Pedogenesis) ಎಂಬ ಪ್ರಕ್ರಿಯೆಯಿಂದ ರೂಪುಗೊಳ್ಳುತ್ತದೆ. ಮಣ್ಣಿನ ನಿರ್ಮಾಣವು ಹವಾಮಾನಿಕ, ಭೌತಿಕ, ರಾಸಾಯನಿಕ ಮತ್ತು ಜೈವಿಕ ಕ್ರಿಯೆಗಳ ಸಂಯೋಜನೆಯಿಂದ ಆಗುತ್ತದೆ. ಮೂಲ ಬಂಡೆಯು ಮೇಲ್ಮೈಗೆ ಹೊರಹೊಮ್ಮಿದ ನಂತರ, ಹವಾಮಾನ, ಜೀವಿಗಳು, ಭೂಆಕಾರ ಹಾಗೂ ಕಾಲಾವಧಿ ಎಂಬ ಅಂಶಗಳ ಪರಿಣಾಮದಿಂದ ಅದು ನಿಧಾನವಾಗಿ ಕರಗುತ್ತಾ ಸಣ್ಣ ಕಣಗಳಾಗಿ ಮಣ್ಣು ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ 1 ಇಂಚು ಮೇಲ್ಮಣ್ಣಿನ ರಚನೆಗೆ ಸುಮಾರು 100 ರಿಂದ 500 ವರ್ಷಗಳು ಬೇಕಾಗುತ್ತದೆ. ಅಷ್ಟು ನಿಧಾನವಾಗಿ ರೂಪುಗೊಳ್ಳುವ ಮಣ್ಣಿನ ಮೌಲ್ಯವನ್ನು ಮನಗಂಡರೆ, ನಾವು ಅದನ್ನು ಎಷ್ಟು ಜಾಗ್ರತೆಯಿಂದ ಕಾಪಾಡಬೇಕು ಎಂಬುದು ಸ್ಪಷ್ಟವಾಗುತ್ತದೆ.

ಆದರೆ ಪಟಾಕಿಗಳ ಬಳಕೆಯಿಂದ ಉಂಟಾಗುವ ವಾಯು ಮಾಲಿನ್ಯ ಮತ್ತು ರಾಸಾಯನಿಕ ಕಣಗಳು ಮಣ್ಣಿನ ಗುಣಮಟ್ಟಕ್ಕೂ ಹಾನಿ ಉಂಟುಮಾಡುತ್ತವೆ. ಕ್ಷಣಿಕ ಆನಂದಕ್ಕಾಗಿ ಪ್ರಕೃತಿಗೆ ದೀರ್ಘಕಾಲದ ಗಾಯ ಮಾಡುವ ಈ ಪ್ರವೃತ್ತಿ ಆತಂಕಕಾರಿ. ಇದು ಉತ್ಸವವಲ್ಲ — ಉಪದ್ರವವಾಗಿದೆ.

ನಾವು ಹಬ್ಬಗಳಲ್ಲಿ ನಿಜವಾದ ಬೆಳಕು, ದಯೆ, ಹಿತ ಮತ್ತು ಸಹಜ ಶಾಂತಿಯ ಬದುಕನ್ನು ಬೆಳಗಿಸಬೇಕಾಗಿದೆ. ಪಟಾಕಿಗಳನ್ನು ಸಿಡಿಸುವ ಬದಲು, ಆ ಹಣವನ್ನು ಒಂದು ಗಿಡ ನೆಡುವುದು, ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿ ಹಾಗೂ ಪರಿಸರ ಕಾಳಜಿಯ ಕೆಲಸಗಳಿಗೆ ಬಳಸೋಣ. ಹಗುರವಾದ ಹೊಗೆ ಬದಲು ಹಸಿರು ಉಸಿರನ್ನು ಉಸಿರಾಡೋಣ. ಇದು ಕೇವಲ ಒಂದು ಉದಾಹರಣೆ ಮಾತ್ರ. ಸ್ವಾರ್ಥ ಮತ್ತು ವೈಯಕ್ತಿಕ ಸಾಧನೆಯ ಗೋಜಿಗೆ ಬಿದ್ದು ನಾವು ಮಾಡುತ್ತಿರುವ ಅನೇಕ ಕಾರ್ಯಗಳು ಮರುಪರಿಶೀಲನೆಗೆ ಒಳಪಡುವಂತಿವೆ. ಇವೆಲ್ಲವೂ ಚರ್ಚೆಗೆ ಬಂದು, ಪರ್ಯಾಯ ಮಾರ್ಗಗಳನ್ನು ರೂಪಿಸುವುದು ಅತ್ಯಗತ್ಯ.

ಮಣ್ಣು ಮತ್ತು ಜೀವವೈವಿಧ್ಯವನ್ನು ತೋರಿಸುವ ನೈಸರ್ಗಿಕ ಪರಿಸರ

ಮಾನವರಂತೆ ಪ್ರಾಣಿಗಳಿಗೂ ಬದುಕುವ, ರಕ್ಷಣೆ ಹೊಂದುವ ಹಕ್ಕುಗಳು ಇವೆ. ಇದನ್ನು ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಭಾರತದ ಸಂವಿಧಾನದ ಆರ್ಟಿಕಲ್ 51 ಎ(ಜಿ) ಯ ಪ್ರಕಾರ ಪರಿಸರ ಸಂರಕ್ಷಣೆ ಹಾಗೂ ಪ್ರಾಣಿ, ಪಕ್ಷಿಗಳ ಮೇಲೆ ದಯೆ ತೋರುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ಸಂವಿಧಾನದ ಅಡಿಯಲ್ಲಿ ಎಲ್ಲಾ ಮೂಲಭೂತ ಹಕ್ಕುಗಳನ್ನು ಪಡೆದುಕೊಂಡಿರುವ ನಾವುಗಳು ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ.

ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ “ಪರಿಸರ ನಮ್ಮ ಒಂದು ಭಾಗವಲ್ಲ, ನಾವು ಪರಿಸರದ ಒಂದು ಭಾಗ” ಇದನ್ನು ಅರ್ಥೈಸಿಕೊಂಡರೆ ಉತ್ತಮ.

ಇದನ್ನು ಓದಿದ ಕೆಲವರಿಗೆ ಆರ್ಥಿಕತೆ, ಅಭಿವೃದ್ಧಿ, ಕೆಲಸ ಇವುಗಳ ವಿಚಾರವಾಗಿ ಪ್ರಶ್ನೆಗಳು ಮೂಡುವುದು ಸಹಜ. ಅಭಿವೃದ್ಧಿ ವಸ್ತುವಿಗೆ ಸಂಬಂಧಿಸಿದ್ದಲ್ಲ ಅದು ವ್ಯಕ್ತಿಗೆ ಸಂಬಂಧಿಸಿದ್ದು. ಎಲ್ಲಾ ಇದ್ದೂ ಉಸಿರು ನಿಂತರೆ ಇದನ್ನು ಅನುಭವಿಸಲು ಯಾವ ಜೀವಿಯೂ ಇರುವುದಿಲ್ಲ. ಪರಿಸರ ಇದನ್ನು ಪ್ರತಿ ಬಾರಿ ನಮಗೆ ಮನದಟ್ಟು ಮಾಡುತ್ತಾ ಬರುತ್ತಿದೆ; ಇದನ್ನು ಅರ್ಥೈಸಿಕೊಂಡರೆ ಉಳಿವು, ಇಲ್ಲಾ ಎಲ್ಲರ ಅಳಿವು!

ಮಣ್ಣು ಮತ್ತು ಜೀವವೈವಿಧ್ಯವನ್ನು ತೋರಿಸುವ ನೈಸರ್ಗಿಕ ಪರಿಸರ

ಲೇಖನ: ನವೀನ್ ಕುಮಾರ್ ಬಿ.
ತುಮಕೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.