ಕಾನನ

ನಿಸರ್ಗದೆಡೆಗೆ ಪಯಣ

ಬೀಜಾವತಾರ

ಅಮ್ಮನ ಮಡಿಲಲ್ಲಿ ಬೆಚ್ಚಗೆ ಇದ್ದ ಬೀಜ, ಮಣ್ಣಿನಲ್ಲಿ ಬಿದ್ದು ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯುವ – ಪ್ರಕೃತಿ ಮತ್ತು ಜೀವನ ಚಕ್ರದ ಸಾಂಕೇತಿಕ ಚಿತ್ರಣದ ಸುಂದರ ಕನ್ನಡ ಕವನ.

© ಹಯಾತ್ ಮೊಹಮ್ಮದ್

ಅಮ್ಮನ ಮಡಿಲಲಿ ಬೆಚ್ಚಗೆ ಇದ್ದೆ
ನಾನಾರೆಂದು ಗೊತ್ತಿರಲಿಲ್ಲ!
ಸುಖದ ಕಡಲಲಿ ಸುಮ್ಮನೆ ಇದ್ದೆ
ಆಗುಹೋಗುಗಳ
ಅರಿವಿರಲಿಲ್ಲ!!


ಬೀಜವು ನೀನು – ಹೊರಬರಬೇಕು
ಹೆಮ್ಮರವಾಗಿ ಬೆಳೆಯಲು ಬೇಕು!
ನೆರಳನು ಕೊಟ್ಟು ಹಣ್ಣನು ಹೆತ್ತು
ಉಪಕರಿಸುವ ನೂರ್ಕಾಲ ಬದುಕು!!


ಅವಳ ಮಾತದು, ಜಗದ ಸೊಬಗದು
ಮುಂದಾದದ್ದು ಸೋಜಿಗವು!
ಭೂಮಿಗೆ ಬಿದ್ದೆ, ಮಣ್ಣಲಿ ಇದ್ದೆ
ಮುಂಗಾರ ಮಳೆಗೆ ಮೊದಲೊಲವು!!


ಹನಿ ಹನಿ ಚುಂಬಿಸೆ ಮೈಯನು ತೊಯಿಸೆ,
ಚಿಗುರೊಡೆದೆ ನಾ ಎಲೆಗರೆದು!
ಬೇರನು ಇಳಿಸಿ ಮೇಲಕೆ ಇಣುಕಿದೆ,
ಸೂರ್ಯನ ಬೆಳಕಿಗೆ ಹಾತೊರೆದು!!


ಮೆಲ್ಲ ಮೆಲ್ಲನೆ ತಿಂಗಳ ಜೊತೆಗೆ
ರೆಂಬೆಯ ಚಾಚುತ ನಾ ಬೆಳೆದೆ!
ಕಣ್ಣಾದೆನು ನಾ ಕಾಲದ ಕಥೆಗೆ
ಹೊಸ ತಲೆಮಾರುಗಳನ್ನು ಸೇರಿಸಿದೆ!!


ಅಮ್ಮನ ಒಡಲಲಿ ಬೆಚ್ಚಗೆ ಇದ್ದೆ,
ನಾನಾರೆಂದು ಗೊತ್ತಿರಲಿಲ್ಲ!
ಪುಟ್ಟ ಬೀಜವೆ ನಾನಾಗಿದ್ದೆ,
ಹೆಮ್ಮರ ಇಂದು- ಎದುರಿಲ್ಲ!!


ಅರಿತೆನು ನಾನು –
ಹೇಳುವುದು ನಿಮಗೆ,
ಸರಿಯೆನಿಸಿದರೆ
ಜೊತೆಬನ್ನಿ!
ತಿಳಿದಿದ್ದನ್ನು ಕಡೆಯುವ ಬನ್ನಿ,
ಪಡೆಯುವ ಅರಿವಿನ ನವನೀತ!!


ನೆನ್ನೆಯ ಹೆಜ್ಜೆಗೆ ಇಂದಿನ ಹೆಜ್ಜೆಯ,
ಸೇರಿಸೆ ಪಯಣವು ಪರಂಪರೆ!
ಇಂದು – ನಾಳೆಗಳ, ಬೆಸೆಯುತ ನೇಯ್ದರೆ,
ಹರಸಿ ನಲಿಯುವಳು ವಸುಂಧರೆ!!

ಕೆ. ಎಸ್. ಸುಮಂತ್ ಭಾರದ್ವಾಜ್
        ರಾಮನಗರ ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.