ಕಾನನ

ನಿಸರ್ಗದೆಡೆಗೆ ಪಯಣ

ಘಮ್… ಅಂತು!

ಹಲಸಿನ ಹಣ್ಣಿನ ಸುವಾಸನೆ ಮೂಗಿಗೆ ಬಡಿದಾಗ ಬಾಯಲ್ಲಿ ನೀರೂರುತ್ತದೆ – ಏಕೆ? ಸ್ವಾದ = ರುಚಿ + ಸುವಾಸನೆ ಎಂಬ ಸೂತ್ರ ಮತ್ತು ಮೆದುಳಿನ ಇನ್ಸುಲಾ ಭಾಗದ ಮಹತ್ವ ಬಿಡಿಸಿ ಹೇಳುವ ರೋಚಕ ವಿಜ್ಞಾನ ಲೇಖನ.
ಮರದಲ್ಲಿ ತೂಗಾಡುವ ಹಲಸಿನ ಹಣ್ಣು – ಘಮ ಸ್ವಾದ ವಿಜ್ಞಾನ ಕಾನನ

    © ಧನರಾಜ್ ಎಂ.

ಆ ದಿನ ಗುರುವಾರ. ನಾನು ವಾರಕ್ಕೊಮ್ಮೆ ನಡೆಯುವ ಫುಟ್ ಬಾಲ್ ಪಂದ್ಯ ಮುಗಿಸಿ ಮನೆಗೆ ಸುಮಾರು ರಾತ್ರಿ 9 ಘಂಟೆಗೆ ಬರುವ ಸಮಯ. ಎಂದಿನಂತೆ ಅಂದೂ ಸಹ ನನ್ನ ಆಟ ಮುಗಿಸಿ ಸುಸ್ತಾಗಿ, ಹಸಿದ ಹುಲಿಯಂತೆ ಮನೆಯ ಗೇಟನ್ನು ತೆಗೆದೆ. ಸುಸ್ತಾಗಿದ್ದರಿಂದ ಬೇರೆ ಕಡೆ ನೋಡಿ ಗಮನ ಹರಿಸುವ ಯಾವ ಇರಾದೆಯೂ ಇರಲಿಲ್ಲ. ಆದ್ದರಿಂದ ಚಪ್ಪಲಿ ಬಿಟ್ಟು ನನ್ನ ರೂಮಿಗೆ ಹೋಗುವ ಭರದಲ್ಲಿದ್ದೆ. ಮೆಟ್ಟಿಲುಗಳನ್ನು ಹತ್ತುವಾಗ ‘ಘಮ್… ಅಂತು’ ಯಾವುದೋ ಕಾಣದ ಸುವಾಸನೆಯ ಗಾಳಿ ‘ಹೇ ನಿಲ್ಲು’ ಎಂದಂತಾಯಿತು. ನಿಂತೆ; ಇಲ್ಲೆ ಇಲ್ಲೆ ಎಲ್ಲೋ… ಹಲಸಿನ ಹಣ್ಣು ಮಾಗಿ, ಹಣ್ಣಾಗಿ ತನ್ನ ಸುವಾಸನೆಯನ್ನು ಗಾಳಿಯೆಂಬ ಅಂಚೆಯ ಮೂಲಕ ನನ್ನ ಮೂಗಿಗೆ ಹರಿಸಿ, ನನ್ನನ್ನು ಕರೆದಂತೆ ಭಾಸವಾಯಿತು. ತಿರುಗಿ ನೋಡಿದರೆ, ಮನೆ ಬಾಗಿಲ ಮುಂದೆಯೇ ಒಂದು ಸೊಗಸಾದ ಹಲಸಿನ ಹಣ್ಣು ಮಲಗಿದೆ. ಅದನ್ನು ಕಂಡ ನಂತರ ಹಸಿದ ಆ ಹೊಟ್ಟೆಗೆ ಮೆದುಳು ಹೀಗೆ ಟೀಕಿಸುತ್ತಿದೆ, ‘ನೋಡು ಜೇ… ಎಷ್ಟು ಚೆನ್ನಾಗಿ ಘಮ್… ಅಂತಿದೆ. ನಿನ್ನ ಹಸಿವಿಗೆ ಇದೇ ರಾಮಬಾಣ. ನೆನಪಿಸಿಕೋ, ಆ ದಿನಗಳು ಅಪ್ಪ ಕುಡುಗೋಲಿನಲ್ಲಿ ಕುಯ್ಯುತ್ತಿದ್ದ ಹಲಸಿನ ಹಣ್ಣನ್ನು ಮನೆಯವರೆಲ್ಲಾ ಕೈಗೆ ಎಣ್ಣೆಯನ್ನು ತಿಕ್ಕಿ ಹಣ್ಣನ್ನು ಬಿಡಿಸುತ್ತಿರುವಾಗ ಮಧ್ಯ ಮಧ್ಯದಲ್ಲಿ ಒಂದೊಂದು ತೊಳೆ ಹಣ್ಣನ್ನು ಬಾಯಿಗೆ ಹಾಕಿಕೊಂಡು ಸವಿಯುತ್ತಿದ್ದ ಆ ದಿನಗಳು.’

ಅಷ್ಟೇ! ಆ ಹಣ್ಣನ್ನು ಈ ಹಿಂದೆ ಅನುಭವಿಸಿದ್ದ ಸ್ವಾದ ನನ್ನ ನಾಲಿಗೆಯಲ್ಲಿ ಹಾಗೆ ಈಜುತ್ತಾ ಹೋದಂತಾಯಿತು. ಅದನ್ನು ನೆನೆದ ಮರುಕ್ಷಣ ಬಾಯಲ್ಲಿನ ಗ್ರಂಥಿಗಳು ಕಾರ್ಯಗತವಾಗಿ ಲಾಲಾರಸವನ್ನು ತಯಾರಿಸಿಬಿಟ್ಟವು. ಅದನ್ನು ಹಾಗೇ ನುಂಗಿಕೊಂಡು, ಆ… ಸ್ವಲ್ಪ ಫ್ರೆಷ್ ಆಗಿ ಬಂದು ನಿನ್ನ ನೋಡಿಕೊಳ್ಳುತ್ತೇನೆ ಅಂದುಕೊಂಡು ಅಪೂರ್ಣ ಮನಸ್ಸಿಂದ ರೂಮಿಗೆ ಹೋದೆ. ನೋಡಿ ಇಂತಹ ಅನುಭವ ನಿಮಗೂ ಆಗಿರಬಹುದು. ಪಕ್ಕದ ಮನೆಯಲ್ಲಿ ಬಿರಿಯಾನಿ ಮಾಡಿದಾಗಲೋ, ನೀವು ಬೇಕರಿಯನ್ನು ದಾಟುವಾಗ ಆಗತಾನೆ ಬೇಯಿಸಿ ತಂದಿಟ್ಟ ತಿನಿಸುಗಳ ಸುವಾಸನೆ ನಿಮ್ಮ ಮೂಗಿಗೆ ಬಡಿದಾಗಲೋ. ಹೀಗೆ ಹಲವು ಸಂದರ್ಭಗಳಲ್ಲಿ ನಮಗೆ ಈ ಅನುಭವ ಆಗುತ್ತದೆ. ಆದರೆ ಇಲ್ಲಿ ನಾವು ಗಮನ ಹರಿಸಬೇಕಾದ ಇನ್ನೊಂದು ವಿಚಾರವಿದೆ. ನಾವು ಇಂತಹ ಸಂದರ್ಭಗಳಲ್ಲಿ ಕೇವಲ ಸುವಾಸನೆಯನ್ನು ಮಾತ್ರ ಸವಿಯುವುದಿಲ್ಲ, ಬದಲಿಗೆ ಆ ಸುವಾಸನೆಯ ಮೂಲವಾದ ತಿನಿಸುಗಳನ್ನು ತಿಂದ ಅನುಭವದ ಸ್ವಾದವೂ(flavor) ಕೂಡಾ ನಮಗೆ ಗೊತ್ತಿಲ್ಲದ ಹಾಗೆ ಅರಿವಾಗುತ್ತದೆ.

ಆಹ್ ಅದರಲ್ಲೇನಿದೆ ವಿಶೇಷ, ಎರೆಡೂ ಒಂದೇ ಅಲ್ಲವೇ? ಖಂಡಿತ ಅಲ್ಲ! ಸ್ವಾದಕ್ಕೂ, ಸುವಾಸನೆಗೂ ಹಾಗೂ ರುಚಿಗೂ ಸಂಬಂಧವಿದೆ. ಆದರೆ ಎಲ್ಲಾ ಒಂದೇ ಅಲ್ಲ. ನಿಮಗೆ ಸುಲಭವಾಗಿ ಹೇಳುವುದಾದರೆ,

ಸ್ವಾದ (flavor) = ರುಚಿ (taste) + ಸುವಾಸನೆ (aroma)

ಮಾವಿನ ಮರದಲ್ಲಿ ಹಣ್ಣು – ಸ್ವಾದ ಮತ್ತು ಸುವಾಸನೆ ವಿಜ್ಞಾನ
© ಧನರಾಜ್ ಎಂ.

ಈ ವಿಚಾರ ಕೆಲವರಿಗೆ ಹಾ… ಇರಬಹುದು ಎಂದು ಒಪ್ಪುತ್ತರಾದರೂ ಕೆಲವರಿಗೆ ಅದು ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ನಾವೇ ಗಮನಿಸಬಹುದಾದ ಒಂದು ಸಣ್ಣ ಪ್ರಯೋಗವಿದೆ. ಉದಾಹರಣೆಗೆ ನೀವು ಇಷ್ಟ ಪಟ್ಟು ತಿನ್ನುವ ಯಾವುದೋ ಒಂದು ತಿನಿಸನ್ನು ಉಸಿರಾಡದೆ ಕೇವಲ ಬಾಯಲ್ಲಿ ಜಗಿದು ತಿಂದು ನೋಡಿ. ನಂತರ ಹಾಗೆ ಜಗಿಯುವಾಗ ಉಸಿರಾಡುತ್ತಾ ತಿಂದು ನೋಡಿ. ಏನೋ ಒಂದು ವ್ಯತ್ಯಾಸ ಕಂಡುಬರುತ್ತದೆ. ಆ ವ್ಯತ್ಯಾಸವೇ ಸ್ವಾದ. ನಾವು ಬಾಯಲ್ಲಿ ಅಗೆಯುವಾಗ ಆಗುವ ಅನುಭವ ‘ರುಚಿ’ ಅದರಲ್ಲಿ ಉಪ್ಪು, ಹುಳಿ, ಖಾರ, ಸಿಹಿ ಮತ್ತು ಕಹಿ ಮಾತ್ರ ಅನುಭವವಾಗುತ್ತದೆ. ಜಗಿಯುವಾಗ ಉಸಿರಾಡಿದರೆ ಆ ತಿನಿಸಿನ ಸುವಾಸನೆಯನ್ನು ಮೂಗಿನ ಹಿಂಬದಿಯ ವಾಸನಾ ಗ್ರಾಹಕಗಳು ಅದನ್ನು ಗ್ರಹಿಸಿ ಮೆದುಳಿಗೆ ಕಳುಹಿಸುತ್ತವೆ. ಈ ರುಚಿಯ ಅನುಭವ ಹಾಗೂ ಸುವಾಸನೆಯ ಅನುಭವಗಳು ಮೆದುಳಿನ ಒಂದು ಭಾಗದಲ್ಲಿ ಸೇರಿ ಈ ತಿನಿಸಿಗೆ “ಇದೇ ಸ್ವಾದ” ಎಂದು ಶೇಖರಿಸಿ ನೆನಪಿಡುತ್ತದೆ. ನಂತರ ಅದೇ ತರಹದ ಸುವಾಸನೆ ಬಂದಲ್ಲಿ ಕೇವಲ ಆ ಸುವಾಸನೆಯಲ್ಲದೇ, ನಾವು ತಿಂದ ರುಚಿಯ ಅನುಭವ ಸೇರಿ ಸ್ವಾದದ ಅನುಭವ ಮೂಡುತ್ತದೆ.

ಉದಾ: ಮಾವಿನ ಹಣ್ಣು ಮತ್ತು ಪೀಚ್ ಹಣ್ಣು ಎರಡೂ ರುಚಿಯಲ್ಲಿ ಸರಿಸುಮಾರು ಒಂದೇ ಆಗಿದೆ. ಆದರೆ ಅವುಗಳ ಬೇರೆ ಬೇರೆ ಸುವಾಸನೆ. ಆ ಹಣ್ಣುಗಳಿಗೆ ಬೇರೆ ಬೇರೆ ಸ್ವಾದವನ್ನು ನೀಡಿ ಪ್ರತ್ಯೇಕಿಸುತ್ತವೆ.

© ಧನರಾಜ್ ಎಂ.

ಇದೇ ವಿಚಾರವನ್ನು ಈ ಹಿಂದೆ 2025ರಲ್ಲಿ ವಿಜ್ಞಾನಿಗಳು ಊಹಿಸಿದ್ದರಾದರೂ ನಿಖರವಾಗಿ ಈ ಸ್ವಾದ ಎಂಬ ಅನುಭವ ನಮ್ಮ ಮೆದುಳಿನಲ್ಲಿ ಎಲ್ಲಿ ಆಗುತ್ತದೆ ಎಂದು ತಿಳಿದಿರಲಿಲ್ಲ. ಇದನ್ನು ಕಂಡುಹಿಡಿಯಲೆಂದು ಕೋರಿಸಂಟನೋ ಎಂಬ ನರವಿಜ್ಞಾನಿ ಮತ್ತು ತಂಡ, 25 ವ್ಯಕ್ತಿಗಳನ್ನು ಬಳಸಿಕೊಂಡು ಪ್ರತಿಯೊಬ್ಬರಿಗೂ ವಿವಿಧ ಬಗೆಯ ತಿನಿಸುಗಳನ್ನು ಹೋಲುವ ತಾವೇ ತಯಾರಿಸಿದ ದ್ರಾವಣಗಳನ್ನು ಒಂದೊಂದಾಗಿ ಕೊಟ್ಟು ಸವಿಯಲು ಹೇಳಿದರು. ಹಾಗೆ ಸವಿಯುವಾಗ ಅವರ ಮೆದುಳಿನಲ್ಲಾಗುವ ಬದಲಾವಣೆಗಳನ್ನು ‘ಮೆದುಳಿನ ಸ್ಕಾನಿಂಗ್’ ಮೂಲಕ ಪರೀಕ್ಷಿಸತೊಡಗಿದರು. ಅವರು ಕಲೆ ಹಾಕಿದ ಈ ವಿವಿಧ ಸ್ಕಾನಿಂಗನ್ನು ‘ಮಷಿನ್ ಲರ್ನಿಂಗ್’ ಎಂಬ ಒಂದು ಬಗೆಯ A.I ಬಳಸಿ ಕಂಪ್ಯೂಟರಿನಲ್ಲಿ ಗಮನಿಸತೊಡಗಿದರು. ಇದರಿಂದ ಅವರ ಮೆದುಳಿನಲ್ಲಾಗುವ ಬದಲಾವಣೆಯನ್ನು ಗಮನಿಸುತ್ತಿದ್ದರು. ಕಂಪ್ಯೂಟರ್ ಗೆ ನೀಡುತ್ತಿದ್ದ ಮೆದುಳಿನ ಸ್ಕಾನಿಂಗ್ ಮಾಹಿತಿಯನ್ನು ಬಳಸಿಕೊಂಡು, ಮಷಿನ್ ಲರ್ನಿಂಗ್ ಸಹಕಾರದಿಂದ ಒಬ್ಬ ವ್ಯಕ್ತಿಯ ಮೆದುಳಿನಲ್ಲಾಗುವ ಬದಲಾವಣೆಯಿಂದ, ಆತ ಏನನ್ನು ತಿಂದಿರಬಹುದು ಎಂದು ಊಹಿಸುವಷ್ಟು ಬುದ್ಧಿವಂತಿಕೆ ಕಂಪ್ಯೂಟರ್ ಗೆ ಬಂತು.

ಅಡುಗೆ ಸುವಾಸನೆ – ರುಚಿ ಮತ್ತು ವಾಸನೆಯ ಮೆದುಳಿನ ಅನುಭವ
© ಧನರಾಜ್ ಎಂ.

ಇದನ್ನೇ ಬಳಸಿಕೊಂಡು, ಪ್ರತೀ ಬಾರಿ ಒಬ್ಬ ವ್ಯಕ್ತಿ ಒಂದು ತಿನಿಸನ್ನು ತಿಂದಾಗ ಮೆದುಳಿನ ಯಾವ ಭಾಗದಲ್ಲಿ ಏನು ಬದಲಾವಣೆಯಾಗುತ್ತದೆ ಎಂದು ಹುಡುಕುತ್ತಾ ಹೋದರು. ಇದರ ಸತತ ಪ್ರಯತ್ನದಿಂದಾಗಿ, “ಇನ್ಸುಲಾ” ಎಂಬ ಮೆದುಳಿನ ಭಾಗದಲ್ಲಿ ಬದಲಾವಣೆಗಳು ಕಾಣುತ್ತಿವೆ ಎಂದು ಗುರುತಿಸಿದರು. ಇನ್ಸುಲಾ ಎಂಬ ಮೆದುಳಿನ ಭಾಗದಲ್ಲಿ ರುಚಿಯ ಅನುಭವ ಆಗುತ್ತದೆ, ಎಂದು ಇಲಿಗಳ ಮೇಲೆ 2017ರಲ್ಲಿ ನಡೆಸಿದ್ದ ಪ್ರಯೋಗದಲ್ಲಿ ತಿಳಿದು ಬಂದಿತ್ತಾದರೂ, ವಾಸನೆಯ ಅನುಭವವೂ ಆ ಇನ್ಸುಲಾ ಎಂಬ ಜಾಗದಲ್ಲೇ ಆಗಿ ‘ಸ್ವಾದ’ ಎಂಬ ಅನುಭವ ಆಗುತ್ತದೆ ಎಂದು ಕೋರಿಸಂಟನೋ ಈ ಪ್ರಯೋಗದಿಂದ ಕಂಡುಹಿಡಿದರು. ಇದೊಂದು ಮುಖ್ಯ ಸಂಶೋಧನೆಯೇ ಎಂದು ಹಲವು ವಿಜ್ಞಾನಿಗಳೂ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮದೇ ದೇಹದಲ್ಲಾಗುವ ರುಚಿ, ವಾಸನೆ, ಸ್ವಾದ ಎಂಬ ಅನುಭವಗಳನ್ನು ಅದು ಸರ್ವೇ ಸಾಮಾನ್ಯವೆಂದು ಲಘುವಾಗಿ ನೋಡುವ ನಾವು, ನಮ್ಮ ದೇಹದಲ್ಲೇ ಆಗುವ ಇಂತಹ ಸಾವಿರಾರು ಕಾರ್ಯಗಳು, ಅವುಗಳಲ್ಲಿ ಒಂದಕ್ಕೊಂದು ಇರುವ ಸಂಬಂಧಗಳು, ಅದನ್ನು ನಿಖರವಾಗಿ ನಡೆಸುವ ನಮ್ಮ ದೇಹದ ವ್ಯವಸ್ಥೆ… ಇದನ್ನೆಲ್ಲಾ ನಿಯಂತ್ರಿಸುವ ಮೆದುಳಿನ ಆ ಸಾಮರ್ಥ್ಯ. ಅಬ್ಬಾ… ತಿಳಿದುಕೊಳ್ಳುತ್ತಾ ಹೋದರೆ ನಮ್ಮದೇ ದೇಹ ಎಷ್ಟು ನಿಖರ, ನಿಗೂಢ, ವಿಚಿತ್ರ, ಆಶ್ಚರ್ಯಕರ ಹಾಗೂ ಅನುಭವಾತೀತ ಎಂದು ಅನಿಸುತ್ತದೆ.

Source: www.snexplores.org

ಲೇಖನ: ಜೈಕುಮಾರ್ ಆರ್
                    ಬೆಂಗಳೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.