ಕಲ್ಲರಳಿ ಮರ

ಕಲ್ಲರಳಿ ಮರ

Soft fig
Ficus mollis

© ಡಾ ಅಶ್ವಥ ಕೆ ಎನ್

ಕಲ್ಲತ್ತಿ ಅಥವಾ ಕಲ್ಲರಳಿ ಮರವು, ಎಲೆ ಉದುರುವ ಕಾಡುಗಳಲ್ಲಿ 12 ಮೀಟರ್ ಎತ್ತರ ಬೆಳೆಯುವ ಮಧ್ಯಮ ಗಾತ್ರದ ಮರವಾಗಿದೆ. ಇದರ ಎಲೆಗಳು 5 ಸೆಂ. ಮೀ. ಉದ್ದ, 5 ಸೆಂ. ಮೀ ಅಗಲವಿದ್ದು, ಸರಳ ರಚನೆಯ ವಿನ್ಯಾಸವಿರುತ್ತದೆ. ಹೂಗಳು ಒಂದು ಸೆಂಟಿಮೀಟರ್ ಗಿಂತ ಚಿಕ್ಕದಾಗಿದ್ದು, ಕಂದು ಬಣ್ಣ ಇರುತ್ತವೆ. ಈ ಹೂಗಳಿಗೆ ಯಾವುದೇ ವಾಸನೆ ಇರುವುದಿಲ್ಲ. ಮರದ ಕಾಯಿ ಒಂದು ಮುಚ್ಚಿದ ಹೂಗೊಂಚಲು. ಚಿಕ್ಕಚೆಂಬಿನ ಆಕಾರದಲ್ಲಿರುವ ಇದರ ಕಾಯಿಯ ಒಳಭಾಗದಲ್ಲಿ ಮೃದುವಾದ (hypanthodium inflorescence) ಹೂಗೊಂಚಲುಗಳಿಂದ ತುಂಬಿರುತ್ತದೆ. ಕಾಯಿಯ ಒಳಭಾಗದಲ್ಲಿ ಬಹಳ ಸಂಖ್ಯೆಯ ಗಂಡು ಮತ್ತು ಹೆಣ್ಣು ಹೂಗಳು ಅಡಗಿಕೊಂಡಿರುತ್ತವೆ. ಚೆಂಬಿಗೆ ಒಂದು ಬಾಯಿ ಇದ್ದಂತೆ ಈ ಕಲ್ಲತ್ತಿ ಕಾಯಿಗೂ ಒಂದು ಕಿರಿದಾದ ದ್ವಾರ ಇರುತ್ತದೆ. ಇದರ ಮೂಲಕ ಸಾಗುವ ಅಂಜೂರದ ಕಡಜ (fig wasp) ಹಣ್ಣಿನ ಒಳಗೆ ಹೋಗಿ ಪರಾಗಸ್ಪರ್ಶ ಮಾಡುವ ಪ್ರಕ್ರಿಯೆಯೇ ಕಲ್ಲತ್ತಿ ಮರ ಮತ್ತು ಕಡಜಗಳ ನಡುವಿನ ಪರಸ್ಪರ ಅವಲಂಬಿತ ಸಂಬಂಧ (mutualism). ಡಿಸೆಂಬರ್ – ಜೂನ್ ತಿಂಗಳಲ್ಲಿ ಕಾಯಿಗಳು ಬಿಡುತ್ತವೆ.

ಈ ಮರದ ತೊಗಟೆ ನುಣುಪಾಗಿದ್ದು, ಬೂದು ಬಣ್ಣದಲ್ಲಿರುತ್ತದೆ. ಈ ಮರ ಸೂರ್ಯನ ಬೆಳಕು ಚೆನ್ನಾಗಿ ಬೀಳುವ ಗುಡ್ಡಗಳ ಮೇಲೆ, ಕಲ್ಲು ಬಂಡೆಗಳ ಕೊರಕಲಿನಲ್ಲಿ ಬೆಳೆದಿರುತ್ತದೆ. ಕಡಿಮೆ ನೀರಿದ್ದರೂ ಬದುಕಬಲ್ಲ ಗುಣವಿರುವ ಈ ಸಸ್ಯದ ಬೆಳವಣಿಗೆ ಮಾತ್ರ ತುಂಬಾ ನಿಧಾನ. ಈ ಮರವು ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ಸ್ಥಳೀಯವಾಗಿ ಕಾಣಸಿಗುತ್ತದೆ.

ಔಷಧೀಯ ಗುಣಗಳು:
ಕಲ್ಲತ್ತಿ ಮರದಲ್ಲಿ ಆರೋಗ್ಯಕ್ಕೆ ಉಪಯೋಗವಾಗುವ ಹಲವಾರು ಗುಣಗಳಿವೆ. ಇದರಲ್ಲಿ ಇರುವ ಕೆಲವು ನೈಸರ್ಗಿಕ ರಾಸಾಯನಿಕಗಳು (flavonoids, phenolic compounds, tannins, terpenoids) ಇದರ ಔಷಧೀಯ ಗುಣಕ್ಕೆ ಕಾರಣವಾಗುತ್ತವೆ. ಇದಕ್ಕೆ ಆಂಟಿ ಆಕ್ಸಿಡೆಂಟ್ ಗುಣ ಇದೆ. ಅಂದರೆ ಇದು ದೇಹದಲ್ಲಿರುವ ಹಾನಿಕಾರಕ ಅಂಶಗಳನ್ನು (free radicals) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮರಕ್ಕೆ ಔಷಧೀಯ ಗುಣಗಳಿವೆ ಎಂದು ತಿಳಿದುಬಂದಿದೆ. ಆದರೆ, ಇದರ ಬಗ್ಗೆ ಇನ್ನೂ ಹೆಚ್ಚು ಅಧ್ಯಯನ ಮತ್ತು ಸಂಶೋಧನೆ ಮಾಡಬೇಕಾಗಿದೆ.

ಲೇಖನ: ಶಂಕರಪ್ಪ ಕೆ ಪಿ
                      ಶಾಂತಮ್ಮ ಎಸ್

(ಬೆಂಗಳೂರು ಜಿಲ್ಲೆ)

ಎಡದಿಂದ ಬಲಕ್ಕೆ

1.ಇಲ್ಲೊಂದು ಹಿರಿದಾದ ಹಾವು ಮಲಗಿದೆ (3) 

2. ಹಕ್ಕಿಗಳು ಹಾಡುವ ಈ ನಾದ ಮುಂಜಾನೆಯಲ್ಲಿ ಕಿವಿಗಿಂಪು (4) 

3. ತಕರಾರು ಇಲ್ಲದೇ ಬೆಳೆದ ಆಹಾರ ಪದಾರ್ಥ (4) 

4.ಪರಿವಾರದೊಂದಿಗೆ ನಗರವನ್ನು ಆಳುವ ಬೂದು ಬಣ್ಣದ ಪಕ್ಷಿ (4) 

5. ಎರಡು ದಳಗಳನ್ನು ಹೀಗೂ ಕರೆಯಬಹುದು (3)

6. ಗೊರವರಿಗೂ ಈ ಹಕ್ಕಿಗೂ ಸಂಬಂಧವಿಲ್ಲ, ಆದರೂ ಬಲು ಬಿಂಕ (4) 

7.ಜೇನು ಹುಳಗಳು ಹೂವಿನಲ್ಲಿ ಅರಸುವ ಸಿಹಿ (4)       

8. ಶ್ರೀ ತೇಜಸ್ವಿ ಅವರ ಅನುವಾದದ ಕಾಡಿನ ಕಥೆಗಳು ಸರಣಿಯ ಪ್ರಮುಖ ಪಾತ್ರಧಾರಿ (5)

ಮೇಲಿನಿಂದ ಕೆಳಕ್ಕೆ

1.ತಬ್ಬಲಿಯಲ್ಲ ಆದರೆ ಭಯಾನಕವಾಗಿದೆ ಈ ವ್ಯಾಘ್ರ (3)

2. ಸಾಕಾನೆಯ ವಾರಸುದಾರ ಮಾವು ತರಲು ಹೋಗಿದ್ದಾನೆ. (3)

3. ಈ ನಗರಿಯಲ್ಲಿ ಹಕ್ಕಿಗಳ ಪುಕ್ಕವೊಂದು ಅವಿತು ಕುಳಿತಿದೆ (2)

4.ಗಾಜು ಮೂಲಭೂತವಾಗಿ ಈ ಗುಣ ಹೊಂದಿರುತ್ತದೆ (5) 

5. ಸುವಾಸನೆ ಇಲ್ಲಿ ತಲೆಕೆಳಗಾಗಿದೆ (4)

6. ದನದ ಕೊಟ್ಟಿಗೆಯಿಂದ ಬೇಸಾಯದ ಭೂಮಿಗೆ ಈ ವಸ್ತುವನ್ನು ಸಾಗಿಸಲು ಅಬ್ಬರವೇಕೆ (3)

7.ಮನೆಯ ಕದ ಮುಚ್ಚಿದ್ದರೂ ಯುದ್ದ ನಡೆಯುತ್ತಲೇ ಇದೆ (3)       

8. ಕಪ್ಪು ಬಣ್ಣದ ವಟಗುಟ್ಟುವ ಮಂಡೂಕ (2)

ಕಾನನ ವನಬಂಧ – 09 (ಫೆಬ್ರವರಿ – 2026) ಉತ್ತರಗಳು: 
ಎಡದಿಂದ ಬಲಕ್ಕೆ:

1. ಶಾಮ 2. ಟಿಟ್ಟಿಭ   3. ಮುತ್ತತ್ತಿ      4. ಗಗನ 

5. ಜೇಡ         6. ಕಾಗದ        7. ಮಹಾನದಿ       8. ಆನೆಕಲ್ಲು

ಮೇಲಿನಿಂದ ಕೆಳಕ್ಕೆ:

1.  ಮರಕುಟಿಗ         2. ಭತ್ತ           3. ಮುತ್ತುಗ           4. ಗರುಡ 

5. ಜೇನುಗೂಡು        6. ಕಾನನ        7. ಮದ್ದಾನೆ        8. ಕರಡಿ

“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ಇ-ಮೇಲ್ ವಿಳಾಸಕ್ಕಾಗಿ ನೀವೂ   ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

–  ಸುಬ್ಬು ಬಾದಲ್
                      (ಬೆಂಗಳೂರು ಜಿಲ್ಲೆ)


Spread the love

Leave a Reply

Your email address will not be published. Required fields are marked *

error: Content is protected.