ಇಳೆಯ ಸಿರಿ

ಇಳೆಯ ಸಿರಿ

ಇಳೆಯಿಂದ ಮೊಳಕೆ ಹೊಡೆದು, ಹೊರಬಂತು ಪೈರು
ಆಳ ಅಗಲದಿ ನುಗ್ಗಿ ಮಣ್ಣ ಬಂಧಿಸಿತು ಬೇರು
ಪೈರ ನೋಡಿ ಆಹಾರಕಾಗಿ ಬಂತಲ್ಲ ಕೀಟ
ಕೀಟವನು ಕಂಡ ಹಕ್ಕಿ ಕೇಳಿತು, ನೀನೇ ನನ್ನ ಊಟ!

ವಿಸ್ತಾರವಾಗಿ ಚಾಚಿಕೊಂಡ ತಾರೆಗಳ ರಾಶಿಯ ಮುಗಿಲು
ಒತ್ತೊತ್ತಾಗಿ ದಟ್ಟನೆ ನಿಂತ ಬೆಟ್ಟಗುಡ್ಡಗಳ ಸಾಲು
ಜುಳು ಜುಳು ಹರಿವ ಜಲಧಾರೆಯ ಸೊಬಗು
ಅಲ್ಲಲ್ಲಿ ಜಿಗಿದ ಕಪ್ಪೆ ಮೀನುಗಳ ಆಟವೇ ಬೆರಗು!

ಮಕರಂದವ ತನ್ನಲ್ಲಿ ಅಡಗಿ ಹೂವು ಬೀರಿತು ಕಂಪು
ಅದನರಸಿ ಬಂದ ದುಂಬಿಗಳ ಗಾಯನ ಬಲು ಇಂಪು
ಎಲ್ಲಿ ನೋಡಿದರಲ್ಲಿ ಭೂರಮೆಯ ಸಿಂಗರಿಸಿದ ಹಸಿರು
ಆ ಹಸಿರೇ, ಸಕಲ ಜೀವಿಗಳ ಜೀವದಾ ಉಸಿರು.

ಪ್ರಕೃತಿ ಹಲವು ವಿಸ್ಮಯಗಳ ಆಕರ
ಎಲೈ ಸ್ವಾರ್ಥಿ ಮಾನವ, ನಿನ್ನ ಮನಸೇಕೆ ಇಷ್ಟು ವಿಕಾರ?
ನಿನ್ನಲ್ಲಿದೆಯೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ?
ಅರಿಯೇ ನೀನು? ಪ್ರಕೃತಿಯೇ ನೀಡುವುದು ಎಲ್ಲದಕ್ಕು ಉತ್ತರ!

ದೀಪಿಕಾ ಬಾಯಿ ಎನ್., ಬೆಂಗಳೂರು ಜಿಲ್ಲೆ

Spread the love
error: Content is protected.