ಪ್ರಕೃತಿ ಬಿಂಬ
© ಸೇಪುರಿ ಸಾಯಿ ಅಖಿಲ್ ತೇಜ, ಅಂಬೋಲಿ ಪೊದೆ ಕಪ್ಪೆ
ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಮಹಾರಾಷ್ಟ್ರದ ಅಂಬೋಲಿಯಿಂದ ಹಿಡಿದು ಕ್ಯಾಸಲ್ ರಾಕ್, ಲೋಂಡಾ ಹಾಗು ಕರ್ನಾಟಕದ ಜೋಗ್ ಫಾಲ್ಸ್, ಮಾವಿನಗುಂಡಿ ಮತ್ತು ಕುದುರೆಮುಖದವರೆಗೂ ಈ ಅಪರೂಪವಾದ ಪೊದೆಗಪ್ಪೆಗಳು ಕಾಣಸಿಗುತ್ತವೆ. ಗಂಡು ಕಪ್ಪೆಗಳು ಹೆಣ್ಣಿಗಿಂತ ತುಸು ಚಿಕ್ಕದಾಗಿರುತ್ತದೆ. ಕೂಗುವಾಗ ಗಂಡು ಕಪ್ಪೆಯ ಗಾಯನ ಪದರವು ಪಾರದರ್ಶಕವಾಗಿರುತ್ತದೆ. ನಗರಗಳು ಮತ್ತು ಪ್ರವಾಸಿಗರು ಹೆಚ್ಚಾಗುತ್ತಿದ್ದಂತೆ ಇವುಗಳ ಆವಾಸಸ್ಥಾನಗಳಿಗೆ ತೊಂದರೆಯಾಗುತ್ತಿದೆ.
©ಸೇಪುರಿ ಸಾಯಿ ಅಖಿಲ್ ತೇಜ, ಮಲೆಮಂಡಲಹಾವು
ಮಲೆ ಮಂಡಲ ಹಾವುಗಳುಭಾರತದ ಪಶ್ಚಿಮ ಘಟ್ಟಗಳಿಗೆ ಸೀಮಿತವಾಗಿರುವ ವಿಷಕಾರಿ ಹಾವುಗಳು. ಹಳದಿ, ಹಸಿರು ಮತ್ತು ಕಂದು ಬಣ್ಣಗಳನ್ನು ಒಳಗೊಂಡಂತೆ ಅನೇಕ ವಿಭಿನ್ನ ಬಣ್ಣಗಳನ್ನು ಹೊಂದಿರುವ ಬಹುರೂಪಿ ಇದು. ಈ ಮೇಲಿನ ಚಿತ್ರದಲ್ಲಿ ಕಂದು ಬಣ್ಣದ ರೂಪಿಯ(ಮಾರ್ಫ್)ನ್ನು ಇಲ್ಲಿ ತೋರಿಸಲಾಗಿದೆ. ವಯಸ್ಕ ಹಾವುಗಳು ತಲೆಯಿಂದ ಬಾಲದವರೆಗು ಸುಮಾರು 105-110 ಸೆಂ.ಮೀ ವರೆಗು ಕಾಣಸಿಗುತ್ತವೆ. ಮಲಬಾರ್ ಪಿಟ್ ವೈಪರ್ ಗಳು ಹೆಚ್ಚಾಗಿ ರಾತ್ರಿಯಲ್ಲಿ ಸಕ್ರಿಯವಾಗಿದ್ದು, ಬೆಳಗಿನ ಸಮಯದಲ್ಲಿ ನಿಷ್ಕ್ರಿಯವಾಗಿರುತ್ತವೆ. ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಇವುಗಳು ಕಪ್ಪೆ, ಹಲ್ಲಿ, ಇಲಿ, ಸಣ್ಣ ಪ್ರಾಣಿಗಳು ಮತ್ತು ಪೊದೆಗಳಲ್ಲಿ ಗೂಡುಕಟ್ಟುವ ಪಕ್ಷಿಗಳನ್ನು ಬೇಟೆಯಾಡುತ್ತವೆ. ಇದರ ವಿಷವು ಮಾನವನಿಗೆ ಊತ ಹಾಗು ತೀವ್ರ ನೋವು ಉಂಟುಮಾಡುತ್ತದೆ. ಕ್ರಮೇಣ 2-3 ದಿನಗಳಲ್ಲಿ ಕಡಿಮೆಯಾಗುತ್ತದೆ. ನಿಧಾನವಾಗಿ ಚಲಿಸುವ ಇವುಗಳು ಶತ್ರುವನ್ನು ಅತೀ ವೇಗವಾಗಿ ಹೊಡೆಯುವ ಸಾಮರ್ಥ್ಯವನ್ನು ಹೊಂದಿವೆ.
©ಸೇಪುರಿ ಸಾಯಿ ಅಖಿಲ್ ತೇಜ,ಜಿಗಿಯುವ ಜೇಡಗಳು
ಸಾಲ್ಟಿಸಿಡೇ ಕುಟುಂಬಕ್ಕೆ ಸೇರಿರುವ ಈ ಜಿಗಿಯುವ (ಜಂಪಿಂಗ್) ಜೇಡಗಳಲ್ಲಿ 6000ಕ್ಕೂ ಹೆಚ್ಚು ಜಾತಿಗಳಿವೆ. ಇವುಗಳಲ್ಲಿ ಕೆಲವು ಪ್ರಭೇದಗಳು ನಿಧಾನವಾಗಿ ಚಲಿಸುತ್ತವೆ ಕೆಲವಂತೂ ತುಂಬಾ-ಚುರುಕಾಗಿ ಒಡುತ್ತವೆ ಹಾಗು ಜಿಗಿಯುತ್ತವೆ. ಇದರ ಜಿಗಿಯುವ ಗುಣವು ಬೇಟೆಯಾಡುವಾಗ, ಬೆದರಿಕೆ ಮೂಡಿಸುವಾಗ ಮತ್ತು ದೊಡ್ಡ ಅಂತರವನ್ನು ದಾಟುವಾಗ ಗಮನಿಸಬಹುದು. ಜಂಪಿಂಗ್ ಜೇಡಗಳನ್ನು ಸಾಮಾನ್ಯವಾಗಿ ಅವುಗಳ ಕಣ್ಣಿನಿಂದ ಗುರುತಿಸಲಾಗುತ್ತದೆ. ಎಲ್ಲಾ ಜಂಪಿಂಗ್ ಜೇಡಗಳು ನಾಲ್ಕು ಜೋಡಿ ಕಣ್ಣುಗಳನ್ನು ಹೊಂದಿವೆ. ಮುಂಭಾಗದಲ್ಲಿರುವ ಕಣ್ಣುಗಳು ಹಿಂಭಾಗದ ಕಣ್ಣುಗಳಿಗಿಂತ ದೊಡ್ಡದಾಗಿರುತ್ತದೆ. ಜೇಡಗಳು ಕೀಟಗಳಲ್ಲ, ಕೀಟಗಳದ್ದೇ ಬೇರೆ ಗುಂಪು, ಜೇಡಗಳದ್ದೇ ಬೇರೆ ಗುಂಪು. ಜೇಡಗಳು ಮತ್ತು ಕೀಟಗಳನ್ನು ಅವುಗಳ ದೇಹದ ವಿಂಗಡಣೆಯ ಆಧಾರದ ಮೇಲೆ ಬೇರ್ಪಡಿಸಬಹುದು. ಜೇಡಗಳ ದೇಹವು ಎರಡು ಮುಖ್ಯ ವಿಭಾಗಗಳನ್ನು ಹೊಂದಿದೆ, ಆದರೆ ಕೀಟವು ತಲೆ, ಎದೆಗೂಡು ಮತ್ತು ಹೊಟ್ಟೆಯೆಂಬಂತೆ ಮೂರು ಭಾಗಗಳನ್ನು ಹೊಂದಿರುತ್ತವೆ. ಎಲ್ಲಾ ಕೀಟಗಳು ಆರು ಕಾಲುಗಳು, ಎರಡು ಆ್ಯಂಟೆನಾಗಳನ್ನು ಹೊಂದಿರುತ್ತವೆ. ಜೇಡಗಳು ತಲೆ ಮತ್ತು ದೇಹ ಎರಡು ಭಾಗಗಳನ್ನು ಹೊಂದಿದ್ದು ಎಂಟು ಕಾಲುಗಳನ್ನು ಹೊಂದಿರುತ್ತವೆ.
©ಸೇಪುರಿ ಸಾಯಿ ಅಖಿಲ್ ತೇಜ, ಸುವ್ವಿ ಹಕ್ಕಿ
ಸುವ್ವಿ ಹಕ್ಕಿಯು ಭಾರತದೆಲ್ಲೆಡೆ ಕಾಣಸಿಗುವ ಗುಬ್ಬಚ್ಚಿಗಿಂತ ಚಿಕ್ಕದಾದ ಪಕ್ಷಿ. ನೆತ್ತಿ, ಕತ್ತಿನ ಹಿಂಭಾಗ, ರೆಕ್ಕೆ, ಬಾಲದ ಮೇಲ್ಭಾಗದಲ್ಲಿ ಕಡು ಬೂದು ಮಿಶ್ರಿತ ಪಾಚಿ ಬಣ್ಣವಿರುತ್ತದೆ. ಇದಕ್ಕೆ ಉದ್ದ ಬಾಲವಿದ್ದು ಅದರ ಅಂಚು ಕಪ್ಪು-ಬಿಳಿ ಬಣ್ಣದಲ್ಲಿರುತ್ತದೆ. ನೀಳವಾದ ಕಾಲುಗಳು ಹಾಗೂ ಚಿಕ್ಕದಾದ ಕಪ್ಪು ಕೊಕ್ಕುನ್ನು ಹೊಂದಿರುವ ಸುವ್ವಿ ಹಕ್ಕಿಯು ಮುಸಿಕ್ಯಾಪಿಡೇ ಕುಟುಂಬಕ್ಕೆ ಸೇರುತ್ತದೆ . ಪ್ರಿನಿಯಾ ಸೊಸಿಯಾಲಿಸ್ ಎಂಬುದು ಇದರ ವೈಜ್ಞಾನಿಕ ಹೆಸರು. ಇದರ ಕರೆಯ ವೈಖರಿಯಿಂದ ಸ್ಥಳೀಯವಾಗಿ ಟುವ್ವಿ ಹಕ್ಕಿ ಎಂದು ಕರೆಯಲಾಗುತ್ತದೆ. ಹೂದೋಟಗಳು, ಕಾಡಂಚಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಇವುಗಳು ಪೊದೆ, ಜೊಂಡು, ವಾಟೆಗಳಲ್ಲಿ ವಾಸಿಸುತ್ತವೆ. ದೊಡ್ಡ ಎಲೆಗಳನ್ನು ಹೆಣೆದು ಮಧ್ಯದಲ್ಲಿ ಹತ್ತಿ, ನಾರು ಇತ್ಯಾದಿಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ. ಇದು ಸುಮಾರು 3-5 ಮೊಟ್ಟೆಗಳನ್ನಿಟ್ಟು 10-12 ದಿನಗಳ ಕಾಲ ಕಾವುಕೊಟ್ಟು ಮರಿಮಾಡುತ್ತವೆ.
ಚಿತ್ರಗಳು: ಸೇಪುರಿ ಸಾಯಿ ಅಖಿಲ್ ತೇಜ
ವಿವರಣೆ: ಧನರಾಜ್ ಎಂ