ಮಾಸ ವಿಶೇಷ – ತಂಡರಸಿ ಗಿಡ
© ನಾಗೇಶ್ ಓ ಎಸ್, ತಂಡರಸಿ ಗಿಡ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು :Mountain Spike Thorn
ವೈಜ್ಞಾನಿಕ ಹೆಸರು : Gymnosporia Montana
ಇವು ಭಾರತದ ಶುಷ್ಕ ಎಲೆ ಉದುರುವ ಕಾಡು , ಹುಲ್ಲುಗಾವಲು, ನದಿದಡ ಜೌಗು ಅಂಚುಗಳಲ್ಲಿ ಕಾಣಸಿಗುತ್ತವೆ. ಆಫ್ರಿಕಾದ ಸಹಾರಾ, ದಕ್ಷಿಣಕ್ಕೆ ಸೆನೆಗಲ್‌ನಿಂದ ಎರಿಟ್ರಿಯಾ ಮೊದಲಾದ ಪ್ರದೇಶಗಳಲ್ಲಿ ಕಾಣಸಿಗುವ ಈ ಗಿಡವು ಸಾಮಾನ್ಯ 1-9 ಅಡಿ ಎತ್ತರದ ಕುರುಚಲು ಗಿಡವಾಗಿವೆ. ಗಿಡದ ಕೊಂಬೆಗಳು ಚಪ್ಪಟೆಯಾಗಿದ್ದು, ಕೆಂಪು-ನೇರಳೆ ಬಣ್ಣವನ್ನು ಹೊಂದಿರುತ್ತವೆ ಹಾಗೆಯೇ ಕಾಂಡವು ಬೂದು ಮತ್ತು ಕಂದು ಬಣ್ಣದಲ್ಲಿರುತ್ತವೆ. ಈ ಸಸ್ಯದಲ್ಲಿ ಗಡುಸಾದ ಎಲೆಗಳಿದ್ದು, ಅಂಡಾಕಾರದಲ್ಲಿರುತ್ತವೆ ಹಾಗೂ ಚೂಪಾದ ತುದಿಯನ್ನ ಹೊಂದಿರುತ್ತವೆ. ಕೊಂಬೆಯ ಎಲೆ ಹಾಗೂ ಮುಳ್ಳುಗಳ ಮಧ್ಯೆ, ವರ್ಷದ ಅಕ್ಟೋಬರ್ – ಡಿಸೆಂಬರ್ ನವರೆಗೆ ಹೂಬಿಡುತ್ತದೆ. ಈ ಸಮಯದಲ್ಲಿ ಹಲವಾರು ಕೀಟಗಳನ್ನು, ಮಕರಂಧ ಹೀರುವ ಪಕ್ಷಿಗಳನ್ನು ಈ ಗಿಡದ ಹೂಗಳು ತನ್ನೆಡೆಗೆ ಆಕರ್ಷಿಸುತ್ತವೆ. ಕೀಟಗಳಿಂದ ಆಗುವ ಪರಾಗಸ್ಪರ್ಶ ದಿಂದ ಬೆಳೆಯುವ ಹಣ್ಣಿನಲ್ಲಿರುವ ಬೀಜಗಳು ಕಂದು ಮತ್ತು ಕೆಂಪು ಬಣ್ಣದಲಿದ್ದು ಸುಮಾರು ಒಂದ ರಿಂದ ಎರಡು ಗ್ರಾಂ ತೂಕ ಹೊಂದಿರುತ್ತವೆ. ಈ ಸಸ್ಯದ ಹಲವು ಭಾಗಗಳನ್ನು ಆಯುರ್ವೇದ ಔಷಧಿಗಳನ್ನು ಮಾಡಲು ಸಹ ಬಳಸುತ್ತಾರೆ. ಜಾಂಡಿಸ್, ಕ್ಯಾನ್ಸರ್ ನಂತಹ ರೋಗಗಳಿಗೆ ಇವುಗಳು ರಾಮಬಾಣವಾಗಿದೆ.