ಭದ್ರಾದಂಡೆಯ ಅತಿಥಿಗಳು

ಭದ್ರಾದಂಡೆಯ ಅತಿಥಿಗಳು

ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಭದ್ರಾನದಿಗೆ ಕಟ್ಟಿರುವ ಅಣೆಕಟ್ಟೆಯ ಹಿನ್ನೀರಿನ ದಂಡೆಯಲ್ಲಿ ಹುಲಿಗಳ ಅಭಯಾರಣ್ಯವಿದೆ. ಈ ಕಾಡು 300ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಅಲ್ಲದೆ ಬೇಸಿಗೆ ಹಾಗು ಚಳಿಗಾಲದಲ್ಲಿ ಇಲ್ಲಿಗೆ ಹಲವಾರು ಹಕ್ಕಿಗಳು ವಲಸೆ ಬರುತ್ತವೆ. ಭದ್ರಾಕಾಡಿನಲ್ಲಿ ನಿಸರ್ಗವಾದಿಯಾಗಿ ಕೆಲಸಮಾಡುವಾಗ ಹಲವಾರು ವಲಸೆ ಹಕ್ಕಿಗಳನ್ನು ನೋಡಿದ್ದೇನೆ.

ಪಟ್ಟೆತಲೆಯ ಹೆಬ್ಬಾತುಕೋಳಿ :

ಒಂದು ಮಾಗಿಯ ಬೆಳಿಗ್ಗೆ ನಾವು ಎಂದಿನಂತೆ ಅತಿಥಿಗಳೊಂದಿಗೆ ಭದ್ರಾ ಹಿನ್ನೀರಿನಲ್ಲಿ ದೋಣಿವಿಹಾರಕ್ಕೆ ಹೋಗಿದ್ದೆವು. ನೀರಿನಲ್ಲಿದ್ದ ಸಾಕಷ್ಟು ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ನಂತರ ದಡದಲ್ಲಿ ಕುಳಿತಿದ್ದ ಕೆಲವು ಬಾತುಕೋಳಿಗಳತ್ತ ಗಮನ ಹರಿಯಿತು. ಅವುಗಳ ಮಧ್ಯೆ ಒಂದು ಕಂದು ಬಣ್ಣದ ಹಕ್ಕಿ ಕಂಡಿತು ಅದೇನೆಂದು ದುರ್ಬೀನಿನಲ್ಲಿ ನೋಡಿದಾಗ ಅದು ಬೇರಾವ ಹಕ್ಕಿಯೂ ಆಗಿರದೆ ಹಿಮಾಲಯದಾಚೆಗಿನ ಪಟ್ಟೆತಲೆಯ ಹೆಬ್ಬಾತುಕೋಳಿಯಾಗಿತ್ತು. ಭದ್ರಾ ತೀರದಲ್ಲಿ ಪಟ್ಟೆತಲೆಯ ಹೆಬ್ಬಾತನ್ನು ಮೊದಲೆಂದೂ ಕಂಡಿರಲಿಲ್ಲ.

ಪಟ್ಟೆತಲೆಯ ಹೆಬ್ಬಾತುಗಳು ತುಂಬಾ ದೂರ ಹಾರಬಲ್ಲ ಕೆಲವೇ ಹಕ್ಕಿಗಳ ಸಾಲಿಗೆ ಸೇರುತ್ತವೆ. ಟಿಬೆಟ್, ಮಂಗೋಲಿಯಾ, ಕಜ಼ಕಿಸ್ತಾನ್ ಗಳಲ್ಲಿ ವಾಸಿಸುವ ಇವು ಹಿಮಾಲಯವನ್ನು ದಾಟಿ ದಕ್ಷಿಣ ಏಷ್ಯಾದ ಭಾಗಗಳಿಗೆ ವಲಸೆ ಬರುತ್ತವೆ. ಸ್ವಲ್ಪ ಬೂದು ಬಣ್ಣದಿಂದಿರುವ ಈ ಹಕ್ಕಿಗಳಿಗೆ ಮುಖದಮೇಲೆ ಕಪ್ಪು ಪಟ್ಟೆಗಳಿರುತ್ತವೆ. ಪಟ್ಟೆತಲೆಯ ಬಾತುಕೋಳಿಗೆ ಬೇರೆ ಬಾತುಕೋಳಿಗಳಿಗಿಂತ ತುಸು ಅಗಲವಾದ ರೆಕ್ಕೆ ಇರುತ್ತದೆ. ಹುಲ್ಲು ಹಾಗೂ ಮರಗಿಡಗಳ ಬೇರನ್ನು ತಿನ್ನುವ ಈ ಪಕ್ಷಿಗಳು ಚಳಿಗಾಲದಲ್ಲಿ ಬಾರ್ಲಿ, ಗೋಧಿ, ಬತ್ತದಂತ ಬೆಳೆಗಳ ಹಾನಿಯನ್ನೂ ಮಾಡಬಲ್ಲವು.

ಕೆಂಪು ಕಾಲಿನ ಚಾಣ (Amur falcon) :

ಒಂದು ಬೇಸಿಗೆಯದಿನ ಭದ್ರಾ ದಂಡೆಗೆ ಜೀಪ್ ಸಫ಼ಾರಿ ಹೋಗಿದ್ದ ನಾವು, ಕೆಲವು ಕಾಡುಹಂದಿಗಳನ್ನು, ಪಕ್ಷಿಗಳನ್ನು ನೋಡಿ ಅತಿಥಿಗಳೊಂದಿಗೆ ಹಿಂತಿರುಗುತ್ತಿದ್ದೆವು. ಕಾಡಿನೆಡೆಗೆ ದೌಡಾಯಿಸುತ್ತಿದ್ದ ನಮ್ಮ ಜೀಪಿನ ಮೇಲೆ ಒಂದು ಹಕ್ಕಿ ಹಾರಿತು, ಶಿಕ್ರಾ ಇರಬೇಕು ಎಂದುಕೊಂಡೆ. ಆದರೆ ಅದರ ಕಾಲುಗಳು ಕಿತ್ತಳೆ ಬಣ್ಣದಾಗಿದ್ದವು. ಅಷ್ಟರಲ್ಲಿ ಹಾರುತ್ತಿದ್ದ ಆ ಪಕ್ಷಿಯು ಒಂದು ಮರದ ಕೊಂಬೆಯಮೇಲೆ ಕುಳಿತುಕೊಂಡಿತು. ನಮ್ಮ ವಾಹನದ ಚಾಲಕ ನಿಧಾನವಾಗಿ ಆ ಹಕ್ಕಿಯತ್ತ ಚಲಿಸಿದ, ನನ್ನ ಕ್ಯಾಮರಾ ಅದರ ಚಿತ್ರಗಳನ್ನು ಸೆರೆಹಿಡಿಯುತ್ತಿತ್ತು. ಅದೇನು ಎಂದು ನನಗೆ ತಕ್ಷಣ ಹೊಳೆಯಲೇ ಇಲ್ಲ. ಕಳೆದ ವರ್ಷ ಬಂದಿದ್ದ ಒಬ್ಬ ಅತಿಥಿ ದೋಣಿವಿಹಾರದಲ್ಲಿ ಕೆಂಪು ಕಾಲಿನ ಚಾಣ ನೋಡಿದ್ದು ಅದರ ಛಾಯಾಚಿತ್ರವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ನನ್ನೊಂದಿಗಿದ್ದ ಕೈಪಿಡಿಯನ್ನು ತಿರುವಿದಾಗ ಅದು ಕೆಂಪು ಕಾಲಿನ ಚಾಣ ಎಂದು ಖಾತರಿಯಾಯಿತು.


ಕೆಂಪು ಕಾಲಿನ ಚಾಣಗಳು ಆಗ್ನೇಯ ಸೈಬೀರಿಯ ಹಾಗೂ ಉತ್ತರ ಚೀನಾದಲ್ಲಿ ಸಂತಾನೋತ್ಪತಿ ನಡೆಸುತ್ತವೆ. ಚಳಿಗಾಲದಲ್ಲಿ ಈ ಹಕ್ಕಿಗಳು ಭಾರತ, ಅರಬ್ಬೀಸಮುದ್ರ ದಾಟಿ ಆಫ್ರಿಕಾದಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಇವುಗಳ ವಲಸೆಮಾರ್ಗ ಸುಮಾರು 22,000 ಕಿಲೋಮೀಟರ್ ಎಂದು ಅಂದಾಜಿಸಲಾಗಿದೆ. ಈ ಹಕ್ಕಿಯ ರೆಕ್ಕೆಗಳು ಅಗಲವಾಗಿರುತ್ತವೆ. ಇವುಗಳು ವಲಸೆ ಮಾರ್ಗದಲ್ಲಿ ಸಿಗುವ ಹುಳಗಳನ್ನು, ಸಣ್ಣ ಪಕ್ಷಿ ಹಾಗೂ ಕಪ್ಪೆಗಳನ್ನು ತಿನ್ನುತ್ತವೆ ಹಾಗೂ ಹಾರುತ್ತಿರುವಾಗ ವಲಸೆಹೋಗುತ್ತಿರುವ ಏರೋಪ್ಲೇನ್ ಚಿಟ್ಟೆಗಳನ್ನು ತಿನ್ನುತ್ತವೆ ಎಂದು ಪಕ್ಷಿ ಶಾಸ್ತ್ರಜ್ಞರು ನಂಬಿದ್ದಾರೆ.

ದೊಡ್ಡ ಚಾಣ(peregrine falcon) :


ನದಿಯ ಬಳಿ ಸಿಗುವ ಹಕ್ಕಿಗಳನ್ನು, ಬೇಟೆಯಾಡಲು ಬರುವ ಹದ್ದು, ಗಿಡುಗಗಳ ಚಿತ್ರವನ್ನು ತೆಗೆಯಲು ಉತ್ಸುಕರಾಗಿದ್ದ ಕೆಲವು ಛಾಯಾಗ್ರಾಹಕರೊಂದಿಗೆ ಒಂದು ಚಳಿಗಾಲದ ಬೆಳಿಗ್ಗೆ ದೋಣಿವಿಹಾರಕ್ಕೆ ಹೋಗಿದ್ದೆವು.ಅಲ್ಲಿ ನೀರುಕಾಗೆ, ಊನಾಹಕ್ಕಿ, ಬಕ, ಡೇಗೆ, ಮೀನುಗಿಡುಗಗಳನ್ನು ಕಂಡೆವು. ದೂರದಲ್ಲಿ ಒಂದು ಸಣ್ಣ ಹಕ್ಕಿ ಕೂತಿರುವುದು.

ಕಂಡಿತು, ಯಾವುದೆಂದು ತಿಳಿಯಲು ಅತ್ತ ದೋಣಿಯನ್ನು ನಡೆಸಿದಾಗ ಅದು ಪ್ರಪಂಚದಲ್ಲಿಯೇ ಅತಿ ವೇಗವಾಗಿ ಹಾರಬಲ್ಲ ದೊಡ್ಡ ಚಾಣ ಎಂದು ತಿಳಿಯಿತು. ಅಲ್ಲೇ ಕೆಲಹೊತ್ತು ಕೂತಿದ್ದರಿಂದ ನಮಗೆ ಹಕ್ಕಿಯ ಸುಂದರ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು. ನಂತರ ಏನನ್ನೋ ಕಂಡಂತೆ ಅದು ಅಲ್ಲಿಂದ ಹಾರಿಹೋಯಿತು.
ದೊಡ್ಡಚಾಣಗಳು ಭೂಮಿಯ ಮೇಲಿರುವ ಹಕ್ಕಿಗಳಲ್ಲಿ ಅತಿವೇಗವಾಗಿ ಹಾರುವ ಹಕ್ಕಿ, ತಮ್ಮ ಬೇಟೆಯನ್ನು ಹಿಡಿಯಲು ಸುಮಾರು 280 ರಿಂದ 300 ಕಿ.ಮೀ ವೇಗದಲ್ಲಿ ಆಗಸದಿಂದ ಧುಮುಕಿ ಬೇಟಿಯಾಡುತ್ತವೆ, ತಮ್ಮ ಪಂಜದಿಂದ ಗಾಳಿಯಲ್ಲೇ ತಮ್ಮ ಬೇಟೆಯನ್ನು ಹಿಯುತ್ತವೆ, ಹಿಡಿಯುತ್ತವೆ. ಪ್ರಬುದ್ಧ ಹಕ್ಕಿಗಳು ಬೂದುಮಿಶ್ರಿತ ನೀಲಿಬಣ್ಣದ ರೆಕ್ಕೆಯನ್ನು ಹೊಂದಿದ್ದು, ಕಡುಕಂದುಬಣ್ಣದ ಬೆನ್ನಿರುತ್ತದೆ. ಕೊಕ್ಕೆಯಂತಹ ಕೊಕ್ಕಿದ್ದು ಬಲಿಷ್ಠ ಪಂಜಗಳಿರುತ್ತದೆ. ಇವು ಸಣ್ಣಪುಟ್ಟ ಹಕ್ಕಿ, ಪ್ರಾಣಿ, ಹಾವು, ಕಪ್ಪೆಗಳನ್ನು ಹಿಡಿದು ತಿಂದು ಬದುಕುತ್ತವೆ.

ಗುಬ್ಬಿಗಿಡುಗ (Eurasian Sparrowhawk) :

ಹೀಗೆ ಮತ್ತೊಂದು ದಿನ ಭದ್ರಾನದಿಯಲ್ಲಿ ದೋಣಿ ವಿಹಾರದಲ್ಲಿದ್ದಾಗ ನಮಗೆ ಆನೆಗಳು ಕಂಡವು, ಕೆಲವು ನೀರಿನ ಬಳಿ ಇರುವ ಹಕ್ಕಿಗಳು ಹಾಗೂ ಹದ್ದಿನ ಕುಟುಂಬಕ್ಕೆ ಸೇರುವ ಕಡಲಡೇಗೆ, ಕಂದು ತಲೆಯ ಮೀನುಹದ್ದು, ಬಿಳಿ ಗರುಡಗಳು ಸಹ ಕಂಡವು. ಹಿಂತಿರುಗುವಾಗ ದಡದಲ್ಲಿ ಒಂದು ವಿಶೇಷವಾದ ಹಕ್ಕಿ ಕುಳಿತಿರುವುದನ್ನು ಕಂಡೆ. ನಾವು ಹತ್ತಿರ ಹೋಗುತ್ತಲೂ ಅದು ಹಾರಿಹೋಗಿ ಪಕ್ಕದಲ್ಲಿದ್ದ ಮರದ ಕೊಂಬೆಯಮೇಲೆ ಕುಳಿತುಕೊಂಡಿತು. ದುರ್ಬೀನಿನ ಮೂಲಕ ನೋಡಿದ ನನಗೆ, ಇದನ್ನು ಹಿಂದೆ ನೋಡಿಲ್ಲವೆಂದು ತಿಳಿಯಿತು. ಹಿಂತಿರುಗಿದ ಮೇಲೆ ನಾ ತೆಗೆದ ಛಾಯಾಚಿತ್ರಗಳ ಸಹಾಯದಿಂದ ಕೈಪಿಡಿಯಲ್ಲಿ ಹುಡುಕಿದಾಗ ಅದು ಗುಬ್ಬಿಗಿಡುಗ ಎಂದು ತಿಳಿಯಿತು. ನನ್ನ ಮಿತ್ರರ ಸಹಾಯದಿಂದ ಅದನ್ನು ಖಾತ್ರಿಪಡಿಸಿಕೊಂಡೆ.


ಗುಬ್ಬಿಗಿಡುಗಗಳು ಬೇಟೆಯಾಡುವ ಸಣ್ಣ ಹಕ್ಕಿಗಳು. ಅವು ಸೀಮಿತವಲಯದಲ್ಲಿ ಬೇಟೆಯಾಡುತ್ತವೆ. ಉದಾಹರಣೆಗೆ ದಂಡಕಾರಣ್ಯ. ಗಂಡುಹಕ್ಕಿಗಳಿಗೆ ಬೂದು ಮಿಶ್ರಿತ ನೀಲಿ ರೆಕ್ಕೆ ಹಾಗೂ ಎದೆಯಮೇಲೆ ಕಂದುಮಿಶ್ರಿತ ಕಿತ್ತಳೆ ಪಟ್ಟಿಗಳಿರುತ್ತವೆ. ಪ್ರಖರವಾದ ಹಳದಿ ಕಿತ್ತಳೆ ಬಣ್ಣದ ಕಣ್ಣುಗಳಿದ್ದು, ಹಳದಿ ಬಣ್ಣದ ಕಾಲುಗಳಿದ್ದು, ಉದ್ದನೆಯ ಪಂಜರಗಳಿರುತ್ತವೆ. ಇವು ಮುಖ್ಯವಾಗಿ ಇತರ ಹಕ್ಕಿಗಳನ್ನು ತಿಂದು ಬದುಕುತ್ತವೆ.

ಕೆಂಪು ಕತ್ತಿನ ಚಾಣ :


ಸಫ಼ಾರಿಗಾಗಿ ಬಂದಿದ್ದ ಅತಿಥಿಗಳೊಡನೆ ನಾವೆಲ್ಲ ರೆಸಾರ್ಟ್ ನಿಂದ ಆಚೆ ಬಂದೆವು, ಕಾಡಿನೊಳಗೆ ಹೋಗಲು ಉಪಯೋಗಿಸುವ ‘ಹೊಂಡದಹಾದಿ’ ಎಂದೇ ಕರೆಯಲ್ಪಡುವ ರಸ್ತೆಯಲ್ಲಿ ಹೋಗುತ್ತಿದ್ದೆವು. ಬಂದಿದ್ದ ಅತಿಥಿಗಳು ಪಕ್ಷಿವೀಕ್ಷಣೆಗೆ ಉತ್ಸುಕರಾಗಿದ್ದರು. ಅಲ್ಲೇ ಬಿದಿರಿನ ಮೇಲೆ ಮಂಗಟ್ಟೆ ಹಕ್ಕಿಗಳು ಕುಳಿತಿದ್ದವು. ಅವುಗಳನ್ನು ಕ್ಯಾಮೇರಾದಲ್ಲಿ ಸೆರೆಹಿಡಿದು ಮುಂದೆಹೋದಾಗ ಯಾವುದೋ ಹದ್ದಿನಂತಹ ಹಕ್ಕಿ ಬಿದಿರಿನ ಮೇಲೆ ಕುಳಿತಿದ್ದು ಅದರ ರೆಕ್ಕೆ ಮಾತ್ರ ನಮಗೆ ಕಾಣುತ್ತಿತ್ತು. ಅದು ನಮ್ಮತ್ತ ತಿರುಗಿದಾಗ ಅದರ ಕೆಂಪು ಬಣ್ಣದ ತಲೆ ಹಾಗು ಕತ್ತುಗಳು ಕಂಡವು, ಅದು ಕೆಂಪು ಕತ್ತಿನ ಚಾಣ.

ಕೆಂಪು ಕತ್ತಿನ ಚಾಣಗಳು ಮುಂಜಾನೆ ಹಾಗು ಸಂಜೆಯ ಗೋಧೂಳಿ ಸಮಯದಲ್ಲಿ ಜೋಡಿಯಾಗಿ ಬೇಟೆಯಾಡುತ್ತವೆ. ಬಯಲಿನಲ್ಲಿ ಸಿಗುವ ಸಣ್ಣಹಕ್ಕಿಗಳನ್ನು ಹಿಡಿದು ತಿನ್ನುತ್ತವೆ. ಇವನ್ನು ಅಳಿವಿನಂಚಿನಲ್ಲಿರುವ ಹಕ್ಕಿಗಳು ಎಂದು IUCN (INTERNATIONAL UNION FOR CONSERVATION OF NATURE) ಗುರುತಿಸಿದೆ. ಆವಾಸಸ್ಥಾನದ ನಷ್ಟದಿಂದ ಈ ಹಕ್ಕಿಗಳ ಸಂಖ್ಯೆ ಕ್ಷೀಣಿಸುತ್ತಿದೆ.

ಕಪ್ಪು ಗೃದ (Black Baza) :

ಒಂದು ಸಂಜೆಯ ಸಫ಼ಾರಿಯಲ್ಲಿ ಬಂದಿದ್ದ ಅತಿಥಿಗಳು ಹುಲಿ ಹಾಗೂ ಹದ್ದಿನಂತಹ ಹಕ್ಕಿಗಳನ್ನು ನೋಡುವುದಕ್ಕೆ ಉತ್ಸುಕರಾಗಿದ್ದರು. ತುರಾಯಿ ಪನ್ನಗಾರಿ (Crested Serpent Eagle), ಶಿಕ್ರಾ, ಹಾಗೂ ಮಲೆದಾಸ ಮಂಗಟ್ಟೆಗಳನ್ನು ಸಫ಼ಾರಿಯ ಮೊದಲ ಅರ್ಧಗಂಟೆಯಲ್ಲಿ ಕಂಡೆವು. ಹಿನ್ನೀರಿನ ಕಡೆ ಹೊರಟಾಗ ನಮಗೆ ಜಿಂಕೆಗಳ ಎಚ್ಚರಿಕೆ ಕರೆಯ ಸದ್ದುಗಳು ಕೇಳಿಬಂದಿತು. ಕೆಲ ಸಮಯ ಕಾದಿದ್ದು ಏನಾದರೂ ಕಾಣಬಹುದೆಂದು ಮತ್ತೆ ಕಾಡನ್ನು ಹೊಕ್ಕೆವು. ನಮ್ಮಲ್ಲಿದ್ದ ಒಬ್ಬ ಅತಿಥಿಯು ಮರದ ಮೇಲೆ ಕುಳಿತಿದ್ದ ಒಂದು ಕಪ್ಪು ಹಕ್ಕಿಯನ್ನು ಕಂಡರು. ಸ್ವಲ್ಪ ಸಮಯ ಕಾಯ್ದ ನಂತರ ಮರದ ಮೇಲಿನ ಕೊಂಬೆಗಳಲ್ಲಿದ್ದ ಹಕ್ಕಿ ಕೆಳಗಿನ ಕೊಂಬೆಗೆ ಬಂದು ಕುಳಿತುಕೊಂಡಿತು, ಅದೊಂದು ಕಪ್ಪು ಗೃದ! ಅದು ಹಾರಿಹೋಗುವ ಮೊದಲು ನಾನು ಕೆಲವು ಫೋಟೋಗಳನ್ನು ಸೆರೆಹಿಡಿಯಲು ಯಶಸ್ವಿಯಾದೆ.

ಕಪ್ಪು ಗೃದವು ಸಣ್ಣ ವಿಭಿನ್ನಬಣ್ಣವಿರುವ ಒಂದು ಹದ್ದಿನಂತಹ ಹಕ್ಕಿ. ಇದು ದಕ್ಷಿಣ ಏಷ್ಯಾ ಹಾಗು ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಹಾಗೂ ಶ್ರೀಲಂಕಾಗೆ ವಲಸೆ ಬರುತ್ತವೆ. ಈ ಹಕ್ಕಿಗಳಿಗೆ ಕುಬ್ಜಕಾಲು ಹಾಗೂ ಬಲಿಷ್ಠ ಪಂಜಗಳಿರುತ್ತವೆ. ಮರದ ಎತ್ತರದ ಕೊಂಬೆಗಳಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತವೆ. ಇವುಗಳ ತಲೆಭಾಗ ಪಾರಿವಾಳದಂತಿದ್ದು ಉದ್ದನೆಯ ಕಿರೀಟವಿರುತ್ತದೆ. ಇವು ಹುಳ ಹುಪ್ಪಟೆ ಕಪ್ಪೆ ಹಾವು ಸಣ್ಣಹಕ್ಕಿಗಳನ್ನು ತಿಂದು ಬದುಕುತ್ತವೆ.

ಅನುವಾದ:- ಡಾ. ದೀಪಕ್ ಬಿ., ಮೈಸೂರು
ಮೂಲ ಲೇಖನ:- ವಿಜಯ್ ಕುಮಾರ್ ಡಿ. ಎಸ್.

Print Friendly, PDF & Email
Spread the love
error: Content is protected.