ಮಾಸ ವಿಶೇಷ – ಅರಚರೆ
© ನಾಗೇಶ್ ಓ. ಎಸ್, ಅರಚರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯ ಹೆಸರು:Ironwood
ವೈಜ್ಞಾನಿಕ ಹೆಸರು : Memecylon umbellatum
ಅರಚರೆಭಾರತ, ಶ್ರೀಲಂಕಾ ಹಾಗೂ ಅಂಡಮಾನ್ ದ್ವೀಪಗಳಲ್ಲಿ ಕಾಣಸಿಗುವ ಸುಮಾರು 8 ರಿಂದ 14 ಮೀಟರ್ ಉದ್ದ ಬೆಳೆಯುವ ಚಿಕ್ಕ ಮರ. ಈ ಮರವು ಹೂ ಬಿಡುವ ಕಾಲ ಫೆಬ್ರವರಿಯಿಂದ ಮಾರ್ಚ್, ಕೆಲವೊಮ್ಮೆ ವರ್ಷಕ್ಕೆ ಎರಡು ಬಾರಿ ಹೂ ಬಿಡುತ್ತವೆ. ಈ ಹೂಗಳು ಗೊಂಚಲಿನಲ್ಲಿದ್ದು, ಪ್ರತೀ ಹೂ ಒಂದು ಸೆಂ.ಮೀ ಉದ್ದವಿರುತ್ತದೆ ಹಾಗೂ ಹೊಳೆಯುವ ನೀಲಿ ಬಣ್ಣದಿಂದ ಕೂಡಿರುತ್ತದೆ. ಇದರ ಹಸಿರು ಬಣ್ಣದ ಹಣ್ಣುಗಳೂ ಸಹ ಹೂಗಳಂತೆ ಗೊಂಚಲಿನಲ್ಲಿರುತ್ತವೆ ಹಾಗೂ ಪ್ರತೀ ಹಣ್ಣು ಒಂದು ಸೆಂ.ಮೀ ನಷ್ಟು ದಪ್ಪ ಇರುತ್ತದೆ. ಇದರ ಕಾಂಡ, ಕೊಂಬೆಗಳು ತುಂಬಾ ಗಟ್ಟಿಯಿರುವ ಕಾರಣ ಇದನ್ನು ಹಿಂದೆ ಉಕ್ಕು ತಯಾರಿಕೆಯಲ್ಲಿ ಬಳಸುತ್ತಿದ್ದರು. ಈಗ ಮನೆಯಲ್ಲಿನ ಪೀಠೋಪಕರಣಗಳನ್ನು ಮಾಡಲು, ಸೌದೆಗಾಗಿ ಬಳಸುತ್ತಾರೆ. ಇದರ ಎಲೆಗಳನ್ನು ಶುಕ್ಲಮೇಹ ರೋಗ (gonorrhea) ನಿವಾರಣೆಗೆ ಮತ್ತು ಎಲೆಯನ್ನು ಜಜ್ಜಿ ತೆಗೆಯುವ ಹಳದಿ ರಸವನ್ನು ಮೂಗೇಟುಗಳನ್ನು ವಾಸಿಮಾಡಲು ಉಪಯೋಗಿಸುತ್ತಾರೆ.